ʻವಿರಾಟ್ ಕೊಹ್ಲಿ ಅಹಂಕಾರ, ಸೊಕ್ಕಿನ ಮನುಷ್ಯʼ: ತನ್ನ ಗೆಳೆಯನ ಮೊದಲ ಭೇಟಿಯನ್ನು ನೆನೆದ ಎಬಿ ಡಿವಿಲಿಯರ್ಸ್!
ವಿರಾಟ್ ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದಾಗ ಅಹಂಕಾರಿ ಮತ್ತು ಅತಿಯಾದ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ ಎಂದು ಭಾವಿಸಿದ್ದಾಗಿ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ವಯಸ್ಸು, ಅನುಭವ ಮತ್ತು ಯಶಸ್ಸಿನೊಂದಿಗೆ ಕೊಹ್ಲಿಯ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆ ಎಂದು ಅವರು ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಮೊದಲ ಭೇಟಿಯ ಅಭಿಪ್ರಾಯ ತಿಳಿಸಿದ ಎಬಿಡಿ. -
ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (ABD) ನಡುವಿನ ಸ್ನೇಹ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾದದ್ದು. ಮೈದಾನದ ಒಳಗೆ ಮಾತ್ರವಲ್ಲದೆ, ಮೈದಾನದ ಹೊರಗೂ ಇವರಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿದೆ. ಆದರೆ, ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದಾಗ ಅವರ ಬಗ್ಗೆ ತಮಗೆ ಮೂಡಿದ್ದ ಅಭಿಪ್ರಾಯ ಬೇರೆಯೇ ಆಗಿತ್ತು ಎಂದು ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಕೊಹ್ಲಿಯನ್ನು ‘ಅಹಂಕಾರಿ’ ಮತ್ತು ‘ಅತಿಯಾದ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ’ ಎಂದು ಭಾವಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಇಬ್ಬರೂ ಒಟ್ಟಿಗೆ ಆಡಲು ಆರಂಭಿಸಿದ ಬಳಿಕ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ವರ್ಷಗಳು ಕಳೆದಂತೆ, ಆಟಗಾರನಾಗಿ ಮತ್ತು ವ್ಯಕ್ತಿಯಾಗಿ ಕೊಹ್ಲಿ ಬಗ್ಗೆ ಡಿವಿಲಿಯರ್ಸ್ ಅವರ ಗೌರವ ಹೆಚ್ಚುತ್ತಲೇ ಬಂದಿದೆ. ಆದರೂ, ಮೊದಲ ಭೇಟಿಯ ಸಂದರ್ಭದಲ್ಲಿ ಕೊಹ್ಲಿ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ಅವರು ಇತ್ತೀಚಿನ ಪಾಡ್ಕಾಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
IND vs ZI: ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಕೀ ಬೌಲರ್ ಆರಿಸಿದ ಟಿಮ್ ಸೌಥಿ!
ಪ್ರಖರ್ ಗುಪ್ತಾ ಅವರೊಂದಿಗಿನ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಡಿವಿಲಿಯರ್ಸ್ಗೆ, ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದಾಗ ಅವರ ಬಗ್ಗೆ ಏನು ಅನಿಸಿತ್ತು ಎಂದು ಪ್ರಶ್ನಿಸಲಾಯಿತು. ಆಗ ಕೊಹ್ಲಿಯನ್ನು ನಿಜವಾಗಿಯೂ ‘ಅಹಂಕಾರಿ’ ಮತ್ತು ‘ಅತಿಯಾದ ಆತ್ಮವಿಶ್ವಾಸದ ವ್ಯಕ್ತಿ’ ಎಂದು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಅವರು ಹೌದು ಎಂದು ಉತ್ತರಿಸಿದರು.
“ಹೌದು, ಮತ್ತು ನನ್ನ ಅಭಿಪ್ರಾಯವನ್ನು ವಿರಾಟ್ ಕೂಡ ಒಪ್ಪಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ,” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಕೊಹ್ಲಿಯ ಆತ್ಮವಿಶ್ವಾಸವೇ ಅಹಂಕಾರದಂತೆ ಕಾಣಿಸಿತ್ತು
ಕೊಹ್ಲಿ ಏಕೆ ಅಹಂಕಾರಿಯಂತೆ ಕಂಡರು ಎಂಬುದನ್ನು ವಿವರಿಸಿದ ಡಿವಿಲಿಯರ್ಸ್, ಅವರಲ್ಲಿ ಚಿಕ್ಕ ವಯಸ್ಸಿನಿಂದಲೇ ಅಪಾರ ಆತ್ಮವಿಶ್ವಾಸವಿತ್ತು ಎಂದು ತಿಳಿಸಿದ್ದಾರೆ. ಮೈದಾನದಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಕೊಹ್ಲಿ ಹೊಂದಿದ್ದ ನಂಬಿಕೆ ಕೆಲವೊಮ್ಮೆ ಇತರರಿಗೆ ಅಹಂಕಾರದಂತೆ ಕಾಣಿಸಿಕೊಳ್ಳುತ್ತಿತ್ತು ಎಂಬುದು ಅವರ ಅಭಿಪ್ರಾಯ.
“ಅದು ಅವರಲ್ಲಿದ್ದ ಹೆಚ್ಚಿನ ಆತ್ಮವಿಶ್ವಾಸದಿಂದ ಬಂದಿತ್ತು. ಅವರು ಯಾವಾಗಲೂ ಅದೇ ರೀತಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಕೆಲವೊಮ್ಮೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ನನ್ನ ವಿಷಯದಲ್ಲಿಯೂ ಅದೇ ಆಗಿತ್ತು. ಅವರು ತಮ್ಮ ಸಾಮರ್ಥ್ಯದ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದಿರುವಂತೆ ನನಗೆ ಕಂಡಿದ್ದರು,” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
IND vs NZ: ಭಾರತ ತಂಡದಿಂದ ಹೊರಗಿರುವ ಮೊಹಮ್ಮದ್ ಶಮಿ ಭವಿಷ್ಯದ ಬಗ್ಗೆ ಆರ್ ಅಶ್ವಿನ್ ದೊಡ್ಡ ಹೇಳಿಕೆ!
ಕೊಹ್ಲಿ 19, 20 ಅಥವಾ 21 ವರ್ಷದ ಯುವ ಆಟಗಾರನಾಗಿದ್ದಾಗಲೇ ತಮ್ಮ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
“ಅದು ಅವರನ್ನು ಮೊದಲ ಬಾರಿ ಭೇಟಿಯಾದಾಗ ನನಗೆ ಮೂಡಿದ ಅಭಿಪ್ರಾಯ. ನಾನು ಈ ಮಾತನ್ನು ಹೇಳುವಾಗಲೂ ತಮಾಷೆಯ ಧಾಟಿಯಿರುತ್ತದೆ. ಆದರೆ, ವಿರಾಟ್ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಲ್ಲೇ ಅವರು ತುಂಬಾ ಆತ್ಮವಿಶ್ವಾಸ ಹೊಂದಿದ್ದ ಯುವ ಆಟಗಾರರಾಗಿದ್ದರು,” ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಯಶಸ್ಸಿನ ಹಾದಿಯಲ್ಲಿ ಕೊಹ್ಲಿಯಲ್ಲಿ ಬದಲಾವಣೆ
ಕ್ರಿಕೆಟ್ನಲ್ಲಿ ದೊಡ್ಡ ಯಶಸ್ಸು ಸಾಧಿಸಲು ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದು ಅತ್ಯಗತ್ಯ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ವಯಸ್ಸು ಮತ್ತು ಅನುಭವ ಹೆಚ್ಚಾದಂತೆ ಆ ಆತ್ಮವಿಶ್ವಾಸವನ್ನು ಹೇಗೆ ಸಮತೋಲನದಿಂದ ನಿರ್ವಹಿಸಬೇಕು ಎಂಬುದನ್ನು ಕಲಿಯಬೇಕು ಎಂದಿದ್ದಾರೆ.
“ದೊಡ್ಡ ಯಶಸ್ಸು ಸಾಧಿಸಲು ಇಂತಹ ಆತ್ಮವಿಶ್ವಾಸವೂ ಅಗತ್ಯ. ನಿಮ್ಮ ಸಾಮರ್ಥ್ಯದ ಮೇಲೆ ನೀವು ನಂಬಿಕೆ ಇಡಬೇಕು. ಆದರೆ, ವರ್ಷಗಳು ಕಳೆದಂತೆ ಅದನ್ನು ಹೇಗೆ ಸಮತೋಲನದಿಂದ ನಿರ್ವಹಿಸಬೇಕು ಎಂಬುದನ್ನು ಕಲಿಯುತ್ತೀರಿ,” ಎಂದು ಅವರು ವಿವರಿಸಿದ್ದಾರೆ.
IND vs NZ: ಭಾರತ ಏಕದಿನ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅನ್ಯಾಯವಾಗಿದೆ ಎಂದ ಆರ್ ಅಶ್ವಿನ್!
“ಅವರು ವಯಸ್ಸಿನಲ್ಲಿ ಬೆಳೆದಂತೆ, ವ್ಯಕ್ತಿಯಾಗಿ ಮತ್ತು ಕ್ರಿಕೆಟಿಗನಾಗಿ ಹೆಚ್ಚು ಸಮತೋಲನ ಸಾಧಿಸಿದಂತೆ ಆ ಅಹಂಕಾರದ ಭಾವನೆ ಕಡಿಮೆಯಾಯಿತು. ಚಿಕ್ಕ ವಯಸ್ಸಿನಲ್ಲಿ ತಾನು ಏನೆಲ್ಲ ಸಾಧಿಸಬಲ್ಲೆ ಎಂಬುದನ್ನು ಸಾಬೀತುಪಡಿಸುವ ಅಗತ್ಯ ಅವರಿಗೆ ಹೆಚ್ಚಾಗಿತ್ತು. ನಂತರ ಆ ಭಾವನೆ ನಿಧಾನವಾಗಿ ಕಡಿಮೆಯಾಯಿತು. ಇತರರೊಂದಿಗೆ ವರ್ತಿಸುವಾಗ ಅತಿಯಾದ ಆತ್ಮವಿಶ್ವಾಸ ತೋರಿಸುವ ಪ್ರವೃತ್ತಿಯೂ ಬದಲಾಯಿತು,” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.