IPL 2026: ಜನಾಂಗೀಯ ನಿಂದನೆ ಮಾಡಿದ ಅರ್ಷದೀಪ್ ಸಿಂಗ್‌ಗೆ ಒಂದು ವರ್ಷ ಬ್ಯಾನ್ ಮಾಡಿ: ಶಿವರಾಮಕೃಷ್ಣನ್ ಆಗ್ರಹ!
ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರ ಬಗ್ಗೆ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಜನಾಂಗೀಯ ನಿಂದನೆ ಹೇಳಿಕೆ ಬಗ್ಗೆ ಭಾರತ ತಂಡದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಂಜಾವ್ ವೇಗಿಯನ್ನು ಒಂದು ವರ್ಷದ ಅವಧಿಗೆ ನಿಷೇಧ ಹೇರಬೇಕೆಂದು ಅವರು ಬಿಸಿಸಿಐಗೆ ಆಗ್ರಹಿಸಿದ್ದಾರೆ.
ಅರ್ಷದೀಪ್ ಸಿಂಗ್ ವಿರುದ್ಧ ಶಿವರಾಮಕೃಷ್ಣನ್ ಆಕ್ರೋಶ. -
ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma) ಅವರ ಬಗ್ಗೆ ಜನಾಂಗೀಯ ನಿಂದನೆ ಹೇಳಿಕೆ ನೀಡಿದ ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh)ವಿರುದ್ಧ ಭಾರತ ತಂಡದ ಮಾಜಿ ಸ್ಪಿನ್ನರ್ ಶಿವರಾಮಕೃಷ್ಣನ್ (Laxman Shivaramakrishnan) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಜಾವ್ ವೇಗಿಯನ್ನು ಇಂಥಾ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣದಿಂದಾಗಿ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ. ಧರ್ಮಶಾಲಾದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್ ಅವರು ತಿಲಕ್ ವರ್ಮಾ ಅವರ ಚರ್ಮದ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಮೇ 14 ರಂದು ಅರ್ಷದೀಪ್ ಸಿಂಗ್ ತಮ್ಮ ಸ್ನ್ಯಾಪ್‌ಚಾಟ್‌ನಲ್ಲಿ ಒಂದು ವಿಡಿಯೊ ಶೇರ್ ಮಾಡಿದ ಬಳಿಕ ಈ ವಿವಾದ ಉಂಟಾಗಿದೆ. ಈ ವಿಡಿಯೊದಲ್ಲಿ ಸಂಭಾಷಣೆ ಮಾಡುವ ವೇಳೆ ಅರ್ಷದೀಪ್ ಸಿಂಗ್, ತಿಲಕ್ ವರ್ಮಾಗೆ ʻಹೇ ಕಪ್ಪು ಬಣ್ಣದವನೇ, ಸನ್‌ಸ್ಕ್ರೀನ್ ಮುಖಕ್ಕೆ ಹಾಕಿಕೊಂಡಿದ್ದೀಯಾ?ʼ ಎಂದು ಹೇಳಿದ್ದರು.
ಈ ಸಂಭಾಷಣೆ ಇಲ್ಲಿಗೆ ಮುಗಿಯಲಿಲ್ಲ. ತಿಲಕ್ ಸಹ ಆಟಗಾರ ನಮನ್ ಧಿರ್ ಅವರ ತೋರಿಸುವ ಮೂಲಕ ನೋಡು, ನಮ್ಮ ಪಂಜಾಬ್ ಕಡೆಯವನು ಎಷ್ಟು ಹೊಳೆಯುತ್ತಿದ್ದಾನೆ ಎಂದು ಅರ್ಷದೀಪ್ ಸಿಂಗ್ ವ್ಯಂಗ್ಯವಾಡಿದ್ದರು. ಪಂಜಾಬ್ ಭಾಷೆಯಲ್ಲಿ ಹೇಳಿದ ಪದಗಳನ್ನು ನಮನ್, ತಿಲಕ್‌ಗೆ ವಿವರಿಸಿದರು. ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆಂದು ತಿಲಕ್ ಹೇಳಿದರು.
IPL 2026: ಮುಂಬೈ ಇಂಡಿಯನ್ಸ್ ಎದುರು ಸೋತ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ಸ್ ಲೆಕ್ಕಾಚಾರ!
ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಶುಕ್ರವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಕೆಲ ಅಭಿಮಾನಿಗಳು ನೀಡುತ್ತಿದ್ದ ‘ತಮಾಷೆ’ ಎನ್ನುವ ಸಮರ್ಥನೆಯನ್ನು ತಳ್ಳಿಹಾಕಿದರು. ವೃತ್ತಿಪರ ಕ್ರಿಕೆಟ್‌ನಲ್ಲಿ ಇರುವ ಅಧಿಕಾರದ ಅಸಮಾನತೆಯಿಂದ ಯುವ ಆಟಗಾರರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
Arshdeep Singh with this L face has the audacity to comment on Tilak Verma's skin tone & looks and the surrounding players were openly enjoying that racist remark😞💔
— Gillfied⁷ (@Gill_Iss) May 14, 2026
I don't understand why Tilak Verma didn't say a single word to that fraud overrated pacer 'Arshdeep Singh'. He… pic.twitter.com/9yVdp6f3xc
ಹಿಂದೆಯೂ ಚರ್ಮದ ಬಣ್ಣ ಆಧಾರಿತ ಭೇದಭಾವದ ಕುರಿತು ಆತಂಕ ವ್ಯಕ್ತಪಡಿಸಿದ್ದ ಮಾಜಿ ಲೆಗ್‌ಸ್ಪಿನ್ನರ್, ಇಂತಹ ಟಿಪ್ಪಣಿಗಳನ್ನು ‘ಡ್ರೆಸ್ಸಿಂಗ್ ರೂಮ್ ಹಾಸ್ಯ’ ಎಂದು ತಳ್ಳಿ ಹಾಕುವುದೇ ಈ ಸಮಸ್ಯೆಗಳು ಮುಂದುವರಿಯಲು ಕಾರಣವಾಗಿದೆ ಎಂದು ಹೇಳಿದ್ದಾರೆ. “ಇದು ಈಗ ಕೇವಲ ಆಟವಲ್ಲ, ವೃತ್ತಿಯಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.
If BCCI takes action, I will name people who racially abused me if BCCI will take action against them
— Laxman Sivaramakrishnan (@LaxmanSivarama1) May 15, 2026
ಮುಂದಿನ ಪೋಸ್ಟ್‌ನಲ್ಲಿ, ಭವಿಷ್ಯಕ್ಕೆ ಕಠಿಣ ಸಂದೇಶ ನೀಡಲು ಆರ್ಥಿಕ ಹಾಗೂ ಸ್ಪರ್ಧಾತ್ಮಕ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೂ ಮುನ್ನ ಬಿಸಿಸಿಐ ಕ್ರಮ ಕೈಗೊಂಡರೆ ತಮ್ಮ ವೃತ್ತಿಜೀವನದಲ್ಲಿ ತಾವು ಅನುಭವಿಸಿದ ಜನಾಂಗೀಯ ನಿಂದನೆಗಳ ಬಗ್ಗೆ ಬಹಿರಂಗಪಡಿಸುವುದಾಗಿ ಶಿವರಾಮಕೃಷ್ಣನ್ ಹೇಳಿದ್ದಾರೆ.
I told you guys. Tilak can’t say anything now as he is in early part of his career. But BCCI with this proof can take action
— Laxman Sivaramakrishnan (@LaxmanSivarama1) May 15, 2026
“ಬಿಸಿಸಿಐ ಕ್ರಮ ಕೈಗೊಂಡರೆ, ನನ್ನ ವಿರುದ್ಧ ಜನಾಂಗೀಯ ನಿಂದನೆ ಮಾಡಿದವರ ಹೆಸರುಗಳನ್ನು ನಾನು ಬಹಿರಂಗಪಡಿಸುತ್ತೇನೆ,” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಘಟನೆಯಿಂದ ಬಿಸಿಸಿಐಗೆ ಸಂಕಷ್ಟ
ಈ ಘಟನೆ ಬಿಸಿಸಿಐ ಅನ್ನು ಸಂಕಷ್ಟಕರ ಪರಿಸ್ಥಿತಿಗೆ ತಳ್ಳಿದೆ. ಈ ಸೀಸನ್ ಆರಂಭದಲ್ಲೇ ಐಪಿಎಲ್ ಫ್ರಾಂಚೈಸಿಗಳಿಗೆ ಆಟಗಾರರ ಮೈದಾನದ ಹೊರಗಿನ ವರ್ತನೆ ಹಾಗೂ ಸಾಮಾಜಿಕ ಜಾಲತಾಣ ಬಳಕೆಯ ಕುರಿತು ಬಿಸಿಸಿಐ ಕಠಿಣ ಏಳು ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದಕ್ಕೂ ಮುನ್ನ, ಅರ್ಷದೀಪ್ ಸಿಂಗ್ ಅವರು ತಮ್ಮ ವ್ಲಾಗ್ ಮೂಲಕ ಸಹ ಆಟಗಾರ ಯುಜ್ವೇಂದ್ರ ಚಹಲ್ ಅವರನ್ನು ವೇಪಿಂಗ್ ವಿವಾದಕ್ಕೆ ಒಳಪಡಿಸಿದ್ದರೆಂಬ ಆರೋಪಗಳಿಂದ ಸುದ್ದಿಯಾಗಿದ್ದರು.
IPL 2026: ಮುಂಬೈ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಈ ಆಟಗಾರನೇ ಕಾರಣ ಎಂದ ಶ್ರೇಯಸ್ ಅಯ್ಯರ್!
ಪ್ರಸ್ತುತ ಐಪಿಎಲ್ ನಿಯಮಾವಳಿಗಳ ಪ್ರಕಾರ, ಆಟದ ವಿರುದ್ಧವಾಗಿರುವ ಅಥವಾ ಆಟದ ಗೌರವಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ವರ್ತನೆ, ಮ್ಯಾಚ್ ರೆಫರಿ ಅಥವಾ ಬಿಸಿಸಿಐ ಶಿಸ್ತು ಸಮಿತಿಯ ಪರಿಶೀಲನೆಗೆ ಒಳಪಡಬಹುದು. ಈ ಘಟನೆ ಸ್ನೇಹಿತರ ನಡುವಿನ ಖಾಸಗಿ ತಮಾಷೆಯೇ ಅಥವಾ ವೃತ್ತಿಪರ ನಡವಳಿಕೆಯ ಉಲ್ಲಂಘನೆಯೇ ಎಂಬುದೇ ಇದೀಗ ಅಧಿಕಾರಿಗಳ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.