Duleep Trophy Fianl: ಕಳೆದ 4 ಪಂದ್ಯಗಳಲ್ಲಿ 3 ಶತಕ, 500 ರನ್ ಗಳಿಸಿರುವ ದೇವದತ್ ಪಡಿಕ್ಕಲ್!
ತಂಡ ಬದಲಾಯಿತು, ಮೈದಾನ ಬದಲಾಯಿತು, ಟೂರ್ನಿಯೂ ಬದಲಾಯಿತು. ಆದರೆ ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ಅಬ್ಬರ ಮಾತ್ರ ಹಾಗೆಯೇ ಮುಂದುವರಿದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ ಮೂರು ಶತಕಗಳನ್ನು ಸಿಡಿಸಿರುವ ಪಡಿಕ್ಕಲ್, 500ಕ್ಕೂ ಹೆಚ್ಚು ರನ್ ಕಲೆಹಾಕಿ ಅದ್ಭುತ ಫಾರ್ಮ್‌ನಲ್ಲಿ ಮುಂದುವರಿದಿದ್ದಾರೆ.
ದುಲೀಪ್ ಟ್ರೋಫಿ ಫೈನಲ್‌ನಲ್ಲಿಯೂ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್. -
ಚೆನ್ನೈ: ದುಲೀಪ್ ಟ್ರೋಫಿ ಟೂರ್ನಿಯ (Duleep Trophy 2026) ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ಪರ ದೇವದತ್ ಪಡಿಕ್ಕಲ್ (Devdutt Padikkal) 62 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದ್ದಾರೆ. ಇದರೊಂದಿಗೆ ಅವರು ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಅಭ್ಯಾಸ ಪಂದ್ಯದ ಅಂಕಿ-ಅಂಶಗಳನ್ನೂ ಸೇರಿಸಿದರೆ, ಪಡಿಕ್ಕಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳ ನೆರವಿನಿಂದ ಒಟ್ಟು 532 ರನ್ ಗಳಿಸಿದ್ದಾರೆ. ಈ ಮೂರು ಶತಕಗಳಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಡಿಸಿದ ಎರಡು ಶತಕಗಳೂ ಸೇರಿವೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ದೇವದತ್ ಪಡಿಕ್ಕಲ್ ಪ್ರಮುಖ ಪಾತ್ರ ವಹಿಸಿದ್ದರು. ಸರಣಿಯ ಎರಡೂ ಪಂದ್ಯಗಳಲ್ಲಿ ಅವರು ಶತಕದ ಇನಿಂಗ್ಸ್ ಆಡಿದ್ದರು. ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದಲೇ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಎರಡನೇ ಟೆಸ್ಟ್‌ನಲ್ಲೂ ಭಾರತ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಶ್ರೀಲಂಕಾದ ಬ್ಯಾಟರ್‌ಗಳು ಉತ್ತಮ ಹೋರಾಟ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
IND vs JAP ಭಾರತ ವಿರುದ್ದದ ಐತಿಹಾಸಿಕ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್ ತಂಡ ಪ್ರಕಟ!
ಅಂತಿಮವಾಗಿ ಭಾರತ ತಂಡ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಇದೀಗ ದುಲೀಪ್ ಟ್ರೋಫಿ ಫೈನಲ್‌ನಲ್ಲೂ 62 ರನ್ ಗಳಿಸಿರುವ ಪಡಿಕ್ಕಲ್, ತಮ್ಮ ಬ್ಯಾಟಿಂಗ್ ಫಾರ್ಮ್ ಮುಂದುವರಿದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಅವರ ಪ್ರದರ್ಶನ
ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯ: 142 ರನ್
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್: 167, 44 ರನ್
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್: 117 ರನ್
ಪೂರ್ವ ವಲಯ ವಿರುದ್ಧದ ದುಲೀಪ್ ಟ್ರೋಫಿ ಫೈನಲ್: 62 ರನ್
ʻಇಶಾನ್ ಕಿಶನ್ ಬಳಿ ಕಲಿಯಿರಿʼ: ವೈಭವ್ ಸೂರ್ಯವಂಶಿಗೆ ವಿವೇಕ್ ರಾಝ್ದಾನ್ ಸಂದೇಶ!
ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಬಹುದೇ ಪಡಿಕ್ಕಲ್?
ಅತ್ಯುತ್ತಮ ಪ್ರದರ್ಶನದ ಮೂಲಕ ದೇವದತ್ ಪಡಿಕ್ಕಲ್ ಭಾರತೀಯ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಮುಂಬರುವ ಸರಣಿಗಳಲ್ಲೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರೆ, ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕದ ಸ್ಥಾನವನ್ನು ಶಾಶ್ವತವಾಗಿ ತಮ್ಮದಾಗಿಸಿಕೊಳ್ಳುವ ಅವಕಾಶ ಅವರ ಮುಂದಿದೆ.
ಚೇತೇಶ್ವರ್ ಪೂಜಾರ ನಿವೃತ್ತಿಯಾದ ಬಳಿಕ ಭಾರತ ತಂಡ ಮೂರನೇ ಕ್ರಮಾಂಕದಲ್ಲಿ ಹಲವು ಆಟಗಾರರನ್ನು ಪ್ರಯೋಗಿಸಿದೆ. ಆದರೆ ಈವರೆಗೆ ಯಾರೂ ಆ ಸ್ಥಾನವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಾಯಿ ಸುದರ್ಶನ್ ಅವರಿಗೆ ದೀರ್ಘಕಾಲ ಅವಕಾಶ ನೀಡಲಾಗಿದ್ದರೂ, ಅವರು 7 ಟೆಸ್ಟ್‌ಗಳ 12 ಇನಿಂಗ್ಸ್‌ಗಳಲ್ಲಿ ಕೇವಲ 383 ರನ್ ಗಳಿಸಿದ್ದಾರೆ.
Sher-E-Punjab T20 League: ಕೇವಲ 64 ಎಸೆತಗಳಲ್ಲಿ 173 ರನ್ ಸಿಡಿಸಿದ ನಮನ್ ಧೀರ್!
ಗಾಲೆಯಿಂದ ಚೆನ್ನೈವರೆಗೆ ಪಡಿಕ್ಕಲ್‌ರ ಅಬ್ಬರ ಮುಂದುವರಿಕೆ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಲೆ ಹಾಗೂ ಕೊಲಂಬೊ ಮೈದಾನಗಳಲ್ಲಿ ಪಡಿಕ್ಕಲ್ ಶತಕ ಸಿಡಿಸಿದ್ದರು. ಇದೀಗ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲೂ ಅವರು ಉತ್ತಮ ಇನಿಂಗ್ಸ್ ಆಡಿದ್ದಾರೆ. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ ತಂಡ ಬರೋಬ್ಬರಿ 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಹೀಗಾಗಿ ಸೌತ್ ಝೋನ್ ಬ್ಯಾಟರ್‌ಗಳ ಮೇಲೆ ಹೆಚ್ಚುವರಿ ಒತ್ತಡವಿತ್ತು. ಆದರೆ ಪಡಿಕ್ಕಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ, ಪಿಚ್ ಆಗಿರಲಿ, ಬೌಲರ್‌ಗಳಾಗಿರಲಿ ಅಥವಾ ಮೈದಾನವಾಗಿರಲಿ—ಯಾವುದೂ ತಮ್ಮ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.