ENG vs WI: ಶೆರ್ಫೆನ್ ಋದರ್‌ಫೋರ್ಡ್ ಫಿಫ್ಟಿ, ಇಂಗ್ಲೆಂಡ್‌ಗೆ ಶಾಕ್ ನೀಡಿದ ವೆಸ್ಟ್ ಇಂಡೀಸ್!
ENG vs WI Match Highlights: ಶೆರ್ಫೆನ್ ಋದರ್‌ಫೋರ್ಡ್ ಅರ್ಧಶತಕ ಹಾಗೂ ಗುಡಕೇಶ್ ಮೋಟಿ ಸ್ಪಿನ್ ಮೋಡಿಯ ಬಲದಿಂದ ವೆಸ್ಟ್ ಇಂಡೀಸ್ ತಂಡ, ಬಲಿಷ್ಠ ಇಂಗ್ಲೆಂಡ್ ವಿರುದ್ಧ 30 ರನ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶೇಯ್ ಹೋಪ್ ನಾಯಕತ್ವದ ವಿಂಡೀಸ್ ಸತತ ಎರಡನೇ ಗೆಲುವು ಪಡೆಯಿತು.
ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ಗೆ 30 ರನ್ ಜಯ. -
ಮುಂಬೈ: ಶೆರ್ಫೆನ್ ಋದರ್‌ಫೋರ್ಡ್ (Sherfane Rutherford) ಸ್ಪೋಟಕ ಅರ್ಧಶತಕ ಹಾಗೂ ಗುಡಕೇಶ್ ಮೋಟಿ ಸ್ಪಿನ್ (Gudakesh Motie) ಮೋಡಿಯ ಬಲದಿಂದ ವೆಸ್ಟ್ ಇಂಡೀಸ್ ತಂಡ, ಬಲಿಷ್ಠ ಇಂಗ್ಲೆಂಡ್ ವಿರುದ್ಧ 30 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಶೇಯ್ ಹೋಪ್ ನಾಯಕತ್ವದ ವಿಂಡೀಸ್ ತಂಡ,2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸಿ ಗುಂಪಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಅಗ್ರ ಕ್ರಮಾಂಕವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಸ್ಯಾಮ್ ಕರನ್ ಏಕಾಂಗಿ ಹೋರಾಟದ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಇಂಗ್ಲೆಂಡ್ ತಂಡ, ತನ್ನ ಎರಡನೇ ಪಂದ್ಯದಲ್ಲಿ ಸೋತು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.
ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್ ತಂಡ, ಶೆರ್ಫೆನ್ ಋದರ್‌ಫೋರ್ಡ್ (76 ರನ್) ಸ್ಫೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 196 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್, ಗುಡಕೇಶ್ ಮೋಟಿ (33 ಕ್ಕೆ 3) ಅವರ ಸ್ಪಿನ್ ಮೋಡಿಗೆ ನಲುಗಿ 19 ಓವರ್‌ಗೆ 166 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆಂಗ್ಲರ ತಂಡ ಮೊದಲನೇ ಸೋಲು ಅನುಭವಿಸಿತು.
T20 World Cup: ಸತತ 2 ಪಂದ್ಯ ಸೋತ ಅಫ್ಘಾನಿಸ್ತಾನ ತಂಡಕ್ಕೆ ಸೂಪರ್-8ಕ್ಕೆ ಅವಕಾಶ ಇದೆಯಾ?
ಶೆರ್ಫೆನ್ ಋದರ್‌ಫೋರ್ಡ್ ಸ್ಪೋಟಕ ಇನಿಂಗ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. 8 ರನ್ ಇದ್ದಾಗ ಎರಡು ವಿಕೆಟ್ ಹಾಗೂ 77 ರನ್ ಇದ್ದಾಗ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶೆರ್ಫೆನ್ ಋದರ್‌ಫೋರ್ಟ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ, 42 ಎಸೆತಗಳಲ್ಲಿ ಏಳು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಒಳಗೊಂಡ ಅಜೇಯ 76 ರನ್ ಗಳಿಸಿದರು. ರಾಸ್ಟನ್ ಚೇಸ್ 34 ರನ್ ಹಾಗೂ ಜೇಸನ್ ಹೋಲ್ಡರ್ 17 ಎಸೆತಗಳಲ್ಲಿ ಸ್ಪೋಟಕ 33 ರನ್‌ಗಳ ಕೊಡುಗೆಯನ್ನು ನೀಡಿದ್ದರು.
Business handled!🤝🏽
— Windies Cricket (@windiescricket) February 11, 2026
Back-to-back victories and WI move!🙌🏽#T20WorldCup | #MaroonSpirit pic.twitter.com/fiFgRRf0PM
ಇಂಗ್ಲೆಂಡ್ ತಂಡದ ಪರ ಆದಿಲ್ ರಶೀದ್ ಹಾಗೂ ಜೇಮಿ ಓವರ್ಟನ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.
ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ
ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. 14 ಎಸೆತಗಳಲ್ಲಿ 30 ರನ್ ಗಳಿಸಿ ಉತ್ತಮ ಆರಂಭ ಪಡದಿದ್ದ ಫಿಲ್ ಸಾಲ್ಟ್ ಅವರನ್ನು ರೊಮ್ಯಾರಿಯೊ ಶೆಫರ್ಡ್ ಔಟ್ ಮಾಡಿದರು. ನಂತರ 21 ರನ್ ಗಳಿಸಿ ಆಡುತ್ತಿದ್ದ ಜೋಸ್ ಬಟ್ಲರ್ ಅವರನ್ನು ರಾಸ್ಟನ್ ಚೇಸ್ ಔಟ್ ಮಾಡಿದರು.
A blazing knock of 76* from Sherfane Rutherford guided West Indies to a winning total in Mumbai 👊
— ICC (@ICC) February 11, 2026
He's the @aramco POTM 🥇 pic.twitter.com/5JakHpbwXf
23 ಎಸೆತಗಳಲ್ಲಿ 33 ರನ್ ಗಳಿಸಿ ಕ್ರೀಸ್‌ಗೆ ಗಟ್ಟಿಯಾಗಿದ್ದ ಜಾಕೋಬ್ ಬೆಥಲ್ ಅವರನ್ನು ಗುಡಕೇಶ್ ಮೋಟಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಟಾಮ್ ಬ್ಯಾಂಟನ್ ಹಾಗೂ ಹ್ಯಾರಿ ಬ್ರೂಕ್ ಅವರನ್ನೂ ಮೋಟಿ ಔಟ್ ಮಾಡಿ ಇಂಗ್ಲೆಂಡ್‌ಗೆ ಆಘಾತ ನೀಡಿದ್ದರು. ಆದರೆ, ಒಂದು ತುದಿಯಲ್ಲಿ ಸ್ಯಾಮ್ ಕರನ್ 30 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದ್ದರು. ಆದರೆ, ಇವರಿಗೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ 166 ರನ್‌ಗಳಿಗೆ ಆಲ್‌ಔಟ್ ಆಯಿತು.
ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟಿ 3 ವಿಕೆಟ್ ಕಿತ್ತರೆ, ಟಾಸ್ಟನ್ ಚೇಸ್ ಎರಡು ವಿಕೆಟ್ ಮತ್ತು ಅಕೀಲ್ ಹುಸೇನ್, ರೊಮ್ಯಾರಿಯೊ ಶೆಫರ್ಡ್ ಮತ್ತು ಶಮರ್ ಜೋಸೆಫ್ ತಲಾ ಒಂದೊಂದು ವಿಕೆಟ್ ಪಡೆದರು. ಇಂಗ್ಲೆಂಡ್ ತಂಡವನ್ನು ಬಹುಬೇಗ ಕಟ್ಟಿ ಹಾಕುವಲ್ಲಿ ನೆರವು ನೀಡಿದರು.