ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಗೆಂಡ್‌ ಹೆಡ್‌ ಕೋಚ್‌ ಹುದ್ದೆಯಿಂದ ಕೆಳಗಿಳಿದ ಬಗ್ಗೆ ಬ್ರೆಂಡನ್‌ ಮೆಕಲಮ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ಟೆಸ್ಟ್‌ ತಂಡದ ಹೆಡ್‌ ಕೋಚ್‌ ಹುದ್ದೆಯಿಂದ ಬ್ರೆಂಡನ್‌ ಮೆಕಲಮ್‌ ಅವರು ಜುಲೈ 12 ರಂದು ಭಾನುವಾರ ಕೆಳಗೆ ಇಳಿದಿದ್ದರು. ಒಂದು ದಿನದ ಬಳಿಕ ಮೆಕಲಮ್‌ ಅವರು, ಕೋಚ್‌ ಹುದ್ದೆಯಿಂದ ಕೆಳಗೆ ಇಳಿದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬೇಸರವಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಇಂಗ್ಲೆಂಡ್‌ ಕೋಚ್‌ ಹುದ್ದೆಯಿಂದ ಕೆಳಗಿಳಿದ ಬಗ್ಗೆ ಮೆಕಲಮ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ಟೆಸ್ಟ್‌ ಕೋಚ್‌ ಸ್ಥಾನದಿಂದ ಇಳಿದ ಬಗ್ಗೆ ಬ್ರೆಂಡನ್‌ ಮೆಕಲಮ್‌ ಪ್ರತಿಕ್ರಿಯೆ. -

Profile
Ramesh Kote Jul 13, 2026 11:17 PM

ನವದೆಹಲಿ: ಇಂಗ್ಲೆಂಡ್ ಟೆಸ್ಟ್ (England Cticket) ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ (Brendon McCullum) ಅವರ ನಾಲ್ಕು ವರ್ಷಗಳ ಅವಧಿ 2026ರ ಜುಲೈ 12ರಂದು ಅಧಿಕೃತವಾಗಿ ಅಂತ್ಯಗೊಂಡಿದೆ. ಹುದ್ದೆಯಿಂದ ನಿರ್ಗಮಿಸಿದ ಬಳಿಕ ಅಭಿಮಾನಿಗಳಿಗೆ ಕ್ಷಮೆಯಾಚಿಸಿರುವ ಮಾಜಿ ನ್ಯೂಜಿಲೆಂಡ್ ನಾಯಕ, ತಮ್ಮ ಉತ್ತರಾಧಿಕಾರಿಯೊಂದಿಗೆ ಮುಂದುವರಿದ ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ.

"ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚಿಂಗ್ ನೀಡಿದ ಅನುಭವವನ್ನು ನಾನು ಸಂಪೂರ್ಣವಾಗಿ ಆಸ್ವಾದಿಸಿದ್ದೇನೆ. ನಾವು ಒಟ್ಟಾಗಿ ಸಾಧಿಸಿದ ಯಶಸ್ಸಿನ ಬಗ್ಗೆ ಅಪಾರ ಹೆಮ್ಮೆ ಇದೆ. ಈ ಪಯಣದಲ್ಲಿ ಮರೆಯಲಾಗದ ಅದ್ಭುತ ಕ್ಷಣಗಳಿದ್ದವು. ಕೆಲ ನಿರಾಸಾಜನಕ ದಿನಗಳೂ ಬಂದವು. ಆದರೆ ಇವೆಲ್ಲವೂ ಈ ಜವಾಬ್ದಾರಿಯ ಭಾಗವೇ ಆಗಿವೆ," ಎಂದು ಮೆಕಲಮ್ ಹೇಳಿದ್ದಾರೆ.

2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಬ್ರೆಂಡನ್ ಮೆಕಲಮ್, ಆರಂಭಿಕ 11 ಟೆಸ್ಟ್ ಪಂದ್ಯಗಳಲ್ಲಿ 10 ಗೆಲುವು ಸಾಧಿಸುವ ಮೂಲಕ ತಂಡದಲ್ಲಿ ಹೊಸ ಚೈತನ್ಯ ತುಂಬಿದ್ದರು. ನಾಯಕ ಬೆನ್ ಸ್ಟೋಕ್ಸ್ ಜೊತೆಗೂಡಿ ಆಕ್ರಮಣಕಾರಿ 'ಬ್ಯಾಝ್‌ಬಾಲ್' ಶೈಲಿಯನ್ನು ಪರಿಚಯಿಸಿದ ಮೆಕಲಮ್, ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಆಟದ ಶೈಲಿಯನ್ನೇ ಬದಲಿಸಿದ್ದರು. ಆದರೆ ಬಳಿಕ ತಂಡದ ಪ್ರದರ್ಶನ ಕುಸಿಯತೊಡಗಿತು. ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ 4-1 ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನೂ 2-1 ಅಂತರದಿಂದ ಕಳೆದುಕೊಂಡಿತು.

IND vs ENG: ಕೊಹ್ಲಿ ಕಮ್‌ಬ್ಯಾಕ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಮೆಕಲಮ್ ತಮ್ಮ ನಾಲ್ಕು ವರ್ಷಗಳ ಕೋಚಿಂಗ್ ಅವಧಿಯಲ್ಲಿ ಒಟ್ಟು 49 ಟೆಸ್ಟ್ ಪಂದ್ಯಗಳಿಗೆ ಮಾರ್ಗದರ್ಶನ ನೀಡಿದ್ದು, ಅದರಲ್ಲಿ 27 ಗೆಲುವು, 2 ಡ್ರಾ ಹಾಗೂ 20 ಸೋಲು ದಾಖಲಿಸಿದ್ದಾರೆ. ವಿಶೇಷವಾಗಿ ಕೊನೆಯ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಏಳು ಪಂದ್ಯಗಳನ್ನು ಸೋತಿರುವುದು ಅವರ ಅವಧಿಯ ನಿರಾಸಾದಾಯಕ ಅಂತ್ಯಕ್ಕೆ ಕಾರಣವಾಯಿತು.

"ಆರಂಭದಲ್ಲಿ ನಿರಾಸೆಯಾಯಿತು. ಆದರೆ ಇದೇ ವೃತ್ತಿಪರ ಕ್ರೀಡೆಯ ಸ್ವಭಾವ. ನಮಗೆ ಬೇಕಿದ್ದ ಫಲಿತಾಂಶಗಳು ಸಿಗಲಿಲ್ಲ. ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಮೂಲತಃ ಇದು ನನಗೆ ಹುದ್ದೆಯಿಂದ ಹಿಂದೆ ಸರಿಯುವ ಸೂಚನೆಯಾಗಿತ್ತು. ಅದನ್ನು ಸ್ವೀಕರಿಸಿ ಮುಂದೆ ಸಾಗುವುದೇ ಸರಿಯಾದ ಮಾರ್ಗ," ಎಂದು ಮೆಕಲಮ್ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರೋಹಿತ್‌, ಕೊಹ್ಲಿಯ ವಿಶ್ವಕಪ್‌ ಭವಿಷ್ಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಶುಭಮನ್‌ ಗಿಲ್‌!

ಮೆಕಲಮ್, ಕಳೆದ ನಾಲ್ಕು ವರ್ಷಗಳ ತಮ್ಮ ಕೋಚಿಂಗ್ ಅವಧಿಯನ್ನು ತಾವು ಸಂಪೂರ್ಣವಾಗಿ ಆನಂದಿಸಿದ್ದಾಗಿ ಹೇಳಿದರು. ಆದರೆ ತಂಡಕ್ಕೆ ಎಲ್ಲರೂ ನಿರೀಕ್ಷಿಸಿದ್ದ ಫಲಿತಾಂಶಗಳನ್ನು ತಂದುಕೊಡಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ, ತಮ್ಮ ತಂಡವು ಯಾವಾಗಲೂ ಆಕ್ರಮಣಕಾರಿ ಕ್ರಿಕೆಟ್ ಆಡುವ ಬದ್ಧತೆಯನ್ನು ತೋರಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಆ ಆಟದ ತತ್ವ ಮತ್ತು ಮನೋಭಾವ ಪ್ರಮುಖ ಸರಣಿಗಳಲ್ಲಿ ನಿರೀಕ್ಷಿತ ಯಶಸ್ಸಾಗಿ ಪರಿವರ್ತನೆಯಾಗಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.

"ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ಸಾಧ್ಯವಾಗದಿರುವುದು ಸಹಜವಾಗಿಯೇ ನನಗೆ ತುಂಬಾ ಬೇಸರ ತಂದಿದೆ. ಆದರೆ ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇನ್ನು ಮುಂದೆ ನನ್ನ ಸಂಪೂರ್ಣ ಗಮನ ಸೀಮಿತ ಓವರ್‌ಗಳ ತಂಡಗಳ ಮೇಲಿರಲಿದೆ. ಅವರಿಗೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಿ, ಇಂಗ್ಲೆಂಡ್ ಕ್ರಿಕೆಟ್ ಮತ್ತಷ್ಟು ಮುನ್ನಡೆಯಲು ನೆರವಾಗಲು ಬಯಸುತ್ತೇನೆ. ಟೆಸ್ಟ್ ತಂಡಕ್ಕೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ," ಎಂದು ಮೆಕಲಮ್ ಹೇಳಿದ್ದಾರೆ.