IND vs ENG: ʻತಂಡದಲ್ಲಿ ಸ್ಥಾನವಿಲ್ಲವೆಂದು ವೈಭವ್ ಸೂರ್ಯವಂಶಿಗೆ ಹೇಳಿʼ-ಪಾರ್ಥಿವ್ ಪಟೇಲ್!
ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಭಾರತ ತಂಡದ ಪರ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ಟೀಮ್ ಮ್ಯಾನೇಜ್‌ಮೆಂಟ್ ಯಾವ ರೀತಿಯ ಪ್ರಕ್ರಿಯೆಯನ್ನು ಅನುಸರಿಸುತ್ತಿದೆ ಹಾಗೂ ಸದ್ಯದ ಪರಿಸ್ಥಿತಿ ಏನು ಎಂಬುದನ್ನು ಸೂರ್ಯವಂಶಿಗೆ ಸ್ಪಷ್ಟವಾಗಿ ತಿಳಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ ಸೂರ್ಯವಂಶಿಗೆ ಪಾರ್ಥಿವ್ ಪಟೇಲ್ ಬೆಂಬಲ. -
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ (Parthiv Patel) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 15ರ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಿಲ್ಲವಾದರೆ, ಅವರ ಬಳಿ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿ ಸಂವಹನ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಏಕೆಂದರೆ ಅವರು ಇನ್ನೂ ಚಿಕ್ಕ ಹುಡುಗ ಮತ್ತು ಅವರ ಮೇಲೆ ಇತರೆ ಸಂಗತಿಗಳು ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಮಾರ್ಗದರ್ಶನದ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಲಿಲ್ಲ. ಈ ಸರಣಿಯಲ್ಲಿ ಭಾರತ ತಂಡ 0-2 ಅಂತರದಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿತ್ತು. ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲೂ ಅದೇ ಪ್ಲೇಯಿಂಗ್ XIಅನ್ನು ಮುಂದುವರಿಸಲಾಯಿತು. ಇದರ ಪರಿಣಾಮವಾಗಿ ಎಡಗೈ ಬ್ಯಾಟರ್ ಸೂರ್ಯವಂಶಿ ಮತ್ತೊಮ್ಮೆ ಬೆಂಚ್‌ಗೇ ಸೀಮಿತರಾದರು.
IND vs ENG: ವೈಭವ್‌ಗೆ ಚಾನ್ಸ್ ಇಲ್ಲ, ಎರಡನೇ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ!
ಸೂರ್ಯವಂಶಿಯೊಂದಿಗೆ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿ ಸಂವಹನ ನಡೆಸಬೇಕು ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ಟಿ20 ವಿಶ್ವಕಪ್ ವಿಜೇತ ಆರಂಭಿಕ ಜೋಡಿಯನ್ನೇ ಮುಂದುವರಿಸುವ ಉದ್ದೇಶವಿದ್ದರೆ, ಸದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನವಿಲ್ಲ ಎಂಬುದನ್ನು ನೇರವಾಗಿ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.
"ನೀವು ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರೆ, ಆಟಗಾರರೊಂದಿಗೆ ಸ್ಪಷ್ಟವಾಗಿ ಮಾತನಾಡುವುದು ಅತ್ಯಂತ ಮುಖ್ಯ. ಅವರನ್ನು ಆಡಿಸುವ ಉದ್ದೇಶ ಇಲ್ಲದಿದ್ದರೂ ಅದನ್ನು ಅವರಿಗೆ ನೇರವಾಗಿ ಹೇಳಬೇಕು. ಅವರು ಕೇವಲ 15 ವರ್ಷದ ಬಾಲಕ. ಆದ್ದರಿಂದ ಅವರನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು ಹಾಗೂ ತಾಳ್ಮೆಯಿಂದ ಇರಲು ಸಲಹೆ ನೀಡಬೇಕು," ಎಂದು ಪಾರ್ಥಿವ್ ಪಟೇಲ್ ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಉತ್ತಮ ಪ್ರದರ್ಶನ ನೀಡಿರುವ ಅನೇಕ ಆಟಗಾರರು ತಂಡದಲ್ಲಿದ್ದಾರೆ. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಇಶಾನ್ ಕಿಶನ್ ಐಸಿಸಿ ಟಿ20ಐ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ ನಂ.2 ಸ್ಥಾನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸದ್ಯಕ್ಕೆ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನವಿಲ್ಲ. ಈ ವಿಷಯವನ್ನು ಅವರಿಗೆ ಸ್ಪಷ್ಟವಾಗಿ ತಿಳಿಸುವುದು ಬಹಳ ಮುಖ್ಯ," ಎಂದು ಅವರು ಹೇಳಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕಲು ಇಂಗ್ಲೆಂಡ್ ರೂಪಿಸಿರುವ ಗೇಮ್ ಪ್ಲ್ಯಾನ್ ತಿಳಿಸಿದ ಸ್ಯಾಮ್ ಕರನ್!
ಆದಾಗ್ಯೂ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇರುವುದರಿಂದ, ಅವುಗಳ ಪೈಕಿ ಯಾವುದಾದರೂ ಒಂದು ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಭಾರತ ಪರ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಪಾರ್ಥಿವ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಎರಡನೇ ಟಿ20ಐ ಪಂದ್ಯವು ಶನಿವಾರ (ಜುಲೈ 4) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರೇ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.