ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 9ನೇ ಟೆಸ್ಟ್‌ ಶತಕ ಬಾರಿಸಿ ಭಾರತಕ್ಕೆ ಆಸರೆಯಾದ ಕೆಎಲ್‌ ರಾಹುಲ್‌!

KL Rahul Scored 9th Test ton: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ತಮ್ಮ ಟೆಸ್ಟ್‌ ವೃತ್ತಿ ಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಆರಂಭದ ಹೊರತಾಗಿಯೂ ಶತಕ ಕಳೆದುಕೊಂಡಿದ್ದ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ ತಮ್ಮ ಕನಸುನ್ನು ನನಸು ಮಾಡಿಕೊಂಡರು.

ಇಂಗ್ಲೆಂಡ್‌ನಲ್ಲಿ ಮೂರನೇ ಟೆಸ್ಟ್‌ ಶತಕ ಸಿಡಿಸಿದ ಕೆಎಲ್‌ ರಾಹುಲ್‌!

ಇಂಗ್ಲೆಂಡ್‌ ವಿರುದ್ಧ 9ನೇ ಟೆಸ್ಟ್‌ ಶತಕವನ್ನು ಪೂರ್ಣಗೊಳಿಸಿದ ಕೆಎಲ್‌ ರಾಹುಲ್.

Profile Ramesh Kote Jun 23, 2025 7:36 PM

ಲೀಡ್ಸ್‌: ಇಂಗ್ಲೆಂಡ್‌ (England) ವಿರುದ್ಧ ಇಲ್ಲಿನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ(IND vs ENG) ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ಶತಕವನ್ನು ಬಾರಿಸಿದ್ದಾರೆ. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 42 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ರಾಹುಲ್‌, ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಬಹಳ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 9ನೇ ಶತಕ ಹಾಗೂ ಇಂಗ್ಲೆಂಡ್‌ನಲ್ಲಿ ಮೂರನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಭಾರತ ತಂಡದ ಮೊತ್ತ 250ರ ಗಡಿ ದಾಟಿಸಲು ನೆರವು ನೀಡಿದ್ದಾರೆ.

ಸೋಮವಾರ ಬೆಳಿಗ್ಗೆ ಅಜೇಯ 47 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಕೆಎಲ್‌ ರಾಹುಲ್‌, ನಾಲ್ಕನೇ ದಿನ ತಮ್ಮ ಬ್ಯಾಟಿಂಗ್‌ನಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ಮಾಡಿದ್ದ ತಪ್ಪನ್ನು ಅವರು ಈ ಇನಿಂಗ್ಸ್‌ನಲ್ಲಿ ಮಾಡಲಿಲ್ಲ. ಇಂಗ್ಲೆಂಡ್‌ನ ಎಲ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಟಿದರು. ಅವರು ಆಡಿದ 202 ಎಸೆತಗಳಲ್ಲಿ 13 ಮನಮೋಹಕ ಬೌಂಡರಿಗಳೊಂದಿಗೆ 100ರನ್‌ ಗಳಿಸಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ 9ನೇ ಶತಕ ಹಾಗೂ ಆಂಗ್ಲರ ನಾಡಿನಲ್ಲಿ ತಮ್ಮ ಮೂರನೇ ಟಸ್ಟ್‌ ಸೆಂಚುರಿಯನ್ನು ಸಿಡಿಸಿದರು.

IND vs ENG: ಕಪಿಲ್‌ ದೇವ್‌ಗಿಂತ ಜಸ್‌ಪ್ರೀತ್‌ ಬುಮ್ರಾ ಉತ್ತಮ ಎಂದ ರವಿ ಶಾಸ್ತ್ರಿ!

ಪಂತ್‌-ರಾಹುಲ್‌ ಜುಗಲ್‌ಬಂದಿ

ಕೆಎಲ್‌ ರಾಹುಲ್‌ ಜೊತೆ ಕ್ರೀಸ್‌ಗೆ ಬಂದಿದ್ದ ಶುಭಮನ್‌ ಗಿಲ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಅವರು 16 ಎಸೆತಗಳಲ್ಲಿ ಕೇವಲ 8 ರನ್‌ ಗಳಿಸಿ ಔಟ್‌ ಆದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿನ ಶತಕದ ಫಾರ್ಮ್‌ ಅನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಪೂರ್ಣಗೊಳಿಸಲು ಅವರು ವಿಫಲರಾದರು. ಆದರೆ, ಕೆಎಲ್‌ ರಾಹುಲ್‌ ಜೊತೆ ಸೇರಿದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ 69 ಓವರ್‌ಗಳ ಹೊತ್ತಿಗೆ ಮುರಿಯದ ನಾಲ್ಕನೇ ವಿಕೆಟ್‌ಗೆ 171 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 260ರ ಗಡಿ ಡಾಟಿಸುಬಲ್ಲಿ ಈ ಜೋಡಿ ಮಹತ್ವದ ಪಾತ್ರವನ್ನು ವಹಿಸಿತು.



ರಿಷಭ್‌ ಪಂತ್‌ 8ನೇ ಶತಕ

ಕೆಎಲ್‌ ರಾಹುಲ್‌ ಜೊತೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ರಿಷಭ್‌ ಪಂತ್‌ ಕೂಡ ಮೂರಂಕಿ ವೈಯಕ್ತಿಕ ಮತ್ತವನ್ನು ಪೂರ್ಣಗೊಳಿಸಿದರು. ಅವರು ಆಡಿದ 130 ಎಸೆತಗಳಲ್ಲಿ ಅವರು 2 ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ ತಮ್ಮ ಟೆಸ್ಟ್‌ ವೃತ್ತಿ ಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಇಂಗ್ಲೆಂಡ್‌ನಲ್ಲಿ ಪಂತ್‌ ಪಾಲಿಗೆ ಇದು ನಾಲ್ಕನೇ ಶತಕವಾಗಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.



ಉತ್ತಮ ಸ್ಥಿತಿಯಲ್ಲಿ ಭಾರತ ತಂಡ

ಕೆಎಲ್‌ ರಾಹುಲ್‌ ಹಾಗೂ ರಿಷಭ್‌ ಪಂತ್‌ ಅವರ ಶತಕಗಳ ಬಲದಿಂದ ಭಾರತ ತಂಡ, ಲೀಡ್ಸ್‌ ಟೆಸ್ಟ್‌ನಲ್ಲಿ ಉತ್ತಮ ಹಂತವನ್ನು ತಲುಪಿದೆ. 71 ಓವರ್‌ಗಳಿಗೆ ಭಾರತ ತಂಡ ಮೂರು ವಿಕೆಟ್‌ಗಳ ನಷ್ಟಕ್ಕೆ 285 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಟೀಮ್‌ ಇಂಡಿಯಾ ಇಂಗ್ಲೆಂಡ್‌ಗೆ ದೊಡ್ಡ ಮೊತ್ತದ ಗುರಿಯನ್ನು ನೀಡುವ ಸನಿಹದಲ್ಲಿದೆ.