ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಹಾರ್ದಿಕ್‌ ಪಾಂಡ್ಯ ಅಬ್ಬರ, 5ನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!

IND vs SA 5th T20I Highlights: ಹಾರ್ದಿಕ್‌ ಪಾಂಡ್ಯ ಸ್ಪೋಟಕ ಅರ್ಧಶತಕ ಹಾಗೂ ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ ಐದನೇ ಟಿ20ಐ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 3-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಐದನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!

ಐದನೇ ಟಿ20ಐ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಮಿಂಚಿದರು. -

Profile
Ramesh Kote Dec 19, 2025 11:55 PM

ಅಹಮದಾಬಾದ್‌: ಹಾರ್ದಿಕ್‌ ಪಾಂಡ್ಯ (Hardik Pandya) ಸ್ಟೋಟಕ ಬ್ಯಾಟಿಂಗ್‌ ಹಾಗೂ ವರುಣ್‌ ಚಕ್ರವರ್ತಿ (Varun Chakravarthy) ಸ್ಪಿನ್‌ ಮೋಡಿಯಿಂದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 3-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.ಇನ್ನು ಕ್ವಿಂಟನ್‌ ಡಿ ಕಾಕ್‌ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಕೊನೆಯವರೆಗೂ ಕಠಿಣ ಹೋರಾಟ ನೀಡಿದ ಹೊರತಾಗಿಯೂ ಪ್ರವಾಸಿ ದಕ್ಷಿಣ ಆಫ್ರಿಕಾ ಸೋಲು ಒಪ್ಪಿಕೊಳ್ಳಬೇಕಾಯಿತು. ಇದರೊಂದಿಗೆ ಹರಿಣ ಪಡೆಯ ಭಾರತದ ಪ್ರವಾಸ ಅಧಿಕೃತವಾಗಿ ಅಂತ್ಯವಾಯಿತು.

ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಟಾಸ್‌ ಸೋತರೂ ನಾಯಕ ಸೂರ್ಯಕುಮಾರ್‌ ಯಾದವ್‌ ಕೂಡ ಮೊದಲು ಬ್ಯಾಟ್‌ ಮಾಡಬೇಕೆಂಬ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದ್ದರು. ಅದರಂತೆ ನಾಯಕನ ಮಾತನ್ನು ಭಾರತದ ಬ್ಯಾಟ್ಸ್‌ಮನ್‌ಗಳು ಸಮರ್ಥಿಸಿಕೊಂಡರು.

IND vs SA: ರೋಹಿತ್‌ ಶರ್ಮಾರ ವಿಶೇಷ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್!

ಭಾರತಕ್ಕೆ ಭರ್ಜರಿ ಆರಂಭ ತಂದುಕೊಟ್ಟ ಅಭಿ, ಸಂಜು

ಶುಭಮನ್‌ ಗಿಲ್‌ ಅನುಪಸ್ಥಿತಿಯಲ್ಲಿ ಅಭಿಷೇಕ್‌ ಶರ್ಮಾ ಜೊತೆ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.4 ಓವರ್‌ಗಳಲ್ಲಿ63 ರನ್‌ ಗಳಿಸಿ ಉತ್ತಮ ಆರಂಭ ತಂದುಕೊಟ್ಟಿದ್ದರು. ಅಭಿಷೇಕ್‌ ಶರ್ಮಾ (34) ಹಾಗೂ ಸಂಜು ಸ್ಯಾಮ್ಸನ್‌ (37) ಉತ್ತಮ ಬ್ಯಾಟ್‌ ಮಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ವಿಕೆಟ್‌ ಒಪ್ಪಿಸಿದರು. ನಾಯಕ ಸೂರ್ಯಕುಮಾರ್‌ ಯಾದವ್‌ ವೈಯಕ್ತಿಕ ಒಂದಂಕಿಗೆ ಔಟ್‌ ಆದರು. ಆದರೆ, ನಾಲ್ಕನೇ ವಿಕೆಟ್‌ಗೆ ಅಬ್ಬರಿಸಿದ ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ 105 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.



ಸ್ಪೋಟಕ ಅರ್ಧಶತಕಗಳನ್ನು ಬಾರಿಸಿದ ಹಾರ್ದಿಕ್‌, ತಿಲಕ್‌

ಸ್ಪೋಟಕ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ 42 ಎಸೆತಗಳಲ್ಲಿ 173.81ರ ಸ್ಟ್ರೈಕ್‌ ರೇಟ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಬಾರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಹಾರ್ದಿಕ್‌ ಪಾಂಡ್ಯ ಕೇವಲ 25 ಎಸೆತಗಳಲ್ಲಿ 252ರ ಸ್ಟ್ರೈಕ್‌ ರೇಟ್‌ನಲ್ಲಿ 5 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಚಚ್ಚಿದರು. ಆ ಮೂಲಕ ಭಾರತ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತು ಹಾಗೂ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 232 ರನ್‌ಗಳ ಬೃಹತ್‌ ಗುರಿಯನ್ನು ನೀಡಿತು.



ಕ್ವಿಂಟನ್‌ ಡಿ ಕಾಕ್‌ ಸ್ಫೋಟಕ ಬ್ಯಾಟಿಂಗ್‌

ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಹಾಗೂ ರೀಝಾ ಹೆಂಡ್ರಿಕ್ಸ್‌ ಮೊದಲನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವನ್ನು ಆಡಿದ್ದರು. ರೀಝಾ ಹೆಂಡ್ರಿಕ್ಸ್‌ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ, ಕ್ವಿಂಟನ್‌ ಡಿ ಕಾಕ್‌ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಸ್ಟೋಟಕ ಬ್ಯಾಟ್‌ ಮಾಡಿದರು. ಅವರು ಆಡಿದ 35 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 65 ರನ್‌ ಸಿಡಿಸಿದರು. ಆ ಮೂಲಕ 10 ಓವರ್‌ಗಳಲ್ಲಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದ್ದರು. ಇವರನ್ನು 11ನೇ ಓವರ್‌ನಲ್ಲಿ ಜಸ್‌ಪ್ರೀತ್‌ ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.



201 ರನ್‌ ಗಳಿಸಿದ ದಕ್ಷಿಣ ಆಫ್ರಿಕಾ

ಮೂರನೇ ಕ್ರಮಾಂಕದಲ್ಲಿ ಡೆವಾಲ್ಡ್‌ ಬ್ರೆವಿಸ್‌, 17 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 31 ರನ್‌ ಸಿಡಿಸಿ ಹಾರ್ದಿಕ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅಂತಿಮವಾಗಿ 20 ಓವರ್‌ಗಳನ್ನು ಮುಗಿಸಿದರೂ ಹರಿಣ ಪಡೆ 8 ವಿಕೆಟ್‌ ನಷ್ಟಕ್ಕೆ 201 ರನ್‌ಗಳನ್ನು ಕಲೆ ಹಾಕಿತು. ಅಂತಿಮವಾಗಿ 30 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.



ವರುಣ್‌ ಚಕ್ರವರ್ತಿಗೆ ಸರಣಿ ಶ್ರೇಷ್ಠ ಪ್ರಶಸ್ತಿ

ಭಾರತದ ಪರ ವರುಣ್‌ ಚಕ್ರವರ್ತಿ 4 ಓವರ್‌ಗಳಿಗೆ 53 ರನ್‌ ಕೊಟ್ಟರೂ 4 ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಇವರಿಗೆ ಸಾಥ್‌ ನೀಡಿದ ಜಸ್‌ಪ್ರೀತ್‌ ಬುಮ್ರಾ ಎರಡು ವಿಕೆಟ್‌ ಪಡೆದರು. ಈ ಸರಣಿಯಲ್ಲಿ ವರುಣ್‌ ಚಕ್ರವರ್ತಿ 10 ವಿಕೆಟ್‌ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಐದನೇ ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್‌ ಕಿತ್ತ ಹಾರ್ದಿಕ್‌ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.