ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs SA: ಸೂಪರ್‌-8ರಲ್ಲಿ ಭಾರತ ತಂಡದ ವಿಶ್ವಾಸವನ್ನು ಕುಗ್ಗಿಸಿದ ದಕ್ಷಿಣ ಆಫ್ರಿಕಾ!

IND vs SA Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ದಕ್ಷಿಣ ಆಫ್ರಿಕಾ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ ಭಾರತ ತಂಡವನ್ನು 76 ರನ್‌ಗಳಿಂದ ಮಣಿಸಿತು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ ಈ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ ಅನುಭವಿಸಿತು.

IND vs SA: ಭಾರತ ತಂಡಕ್ಕೆ ಆಘಾತ ನೀಡಿದ ದಕ್ಷಿಣ ಆಫ್ರಿಕಾ!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ ಹೀನಾಯ ಸೋಲು. -

Profile
Ramesh Kote Feb 22, 2026 11:04 PM

ಅಹಮದಾಬಾದ್‌: ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಯ ಹೊರತಾಗಿಯೂ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೂಪರ್‌-8ರ ಹಂತದ ಪಂದ್ಯದಲ್ಲಿ(IND vs SA) 76 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾಗೆ ಇದು ಮೊದಲನೇ ಸೋಲಾಗಿದೆ. ಆದರೆ, ಡೇವಿಡ್‌ ಮಿಲ್ಲರ್‌ (David Miller) ಅರ್ಧಶತಕ ಹಾಗೂ ಮಾರ್ಕೊ ಯೆನ್ಸನ್‌ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ, ಸೂಪರ್‌-8ರ ಹಂತದಲ್ಲಿ ಶುಭಾರಂಭ ಕಂಡಿದೆ ಹಾಗೂ 2024ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಮಾರ್ಕೊ ಯೆನ್ಸನ್‌ ಹಾಗೂ ಕೇಶವ್‌ ಮಹಾರಾಜ್‌ ಅವರ ಬೌಲಿಂಗ್‌ ದಾಳಿಗೆ ನಲುಗಿದ ಟೀಮ್‌ ಇಂಡಿಯಾ 18.5 ಓವರ್‌ಗಳಿಗೆ ಕೇವಲ 111 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.

ENG vs SL: ಲೋ ಸ್ಕೋರಿಂಗ್‌ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶಾಕ್‌ ನೀಡಿದ ಇಂಗ್ಲೆಂಡ್‌!

ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯ

ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೂನ್ಯ ಗಳಿಕೆಯಲ್ಲಿಯೇ ಇಶಾನ್‌ ಕಿಶನ್‌ ಔಟ್‌ ಆದರು. ತಿಲಕ್‌ ವರ್ಮ ಕೇವಲ ಒಂದು ರನ್‌ ಗಳಿಸಿ ಔಟ್‌ ಆದರು. ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಭಾರತ ಕೇವಲ 26 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತು. ಐದನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ಆಡಿದ ವಾಷಿಂಗ್ಟನ್‌ ಸುಂದರ್‌ 11 ರನ್‌ ಗಳಿಸಿ ಔಟ್‌ ಆದರು. ತಲಾ 18 ರನ್‌ ಗಳಿಸಿ ಭರವಸೆ ಮೂಡಿಸಿದ್ದ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಶಿವಂ ದುಬೆ 37 ಎಸೆತಗಳಲ್ಲಿ 42 ರನ್‌ ಗಳಿಸಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.



ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿ ಭಾರತ

ಈ ಸೋಲಿನೊಂದಿಗೆ ಭಾರತ ತಂಡದ ಮೇಲೆ ಒತ್ತಡ ಬಿದ್ದಿದೆ. ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆಯಬೇಕೆಂದರೆ ಜಿಬಾಬ್ವೆ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಅಗತ್ಯವಿದೆ. ಇದರಲ್ಲಿ ಒಂದರಲ್ಲಿ ಸೋತರೂ ಭಾರತದ ಸೆಮೀಸ್‌ನಿಂದ ಬಹುತೇಕ ಹೊರಬೀಳಲಿದೆ. ಅಂದಹಾಗೆ ಹರಿಣ ಪಡೆಯ ಪರ ಮಾರ್ಕೊ ಯೆನ್ಸನ್‌ 4 ವಿಕೆಟ್‌ ಕಿತ್ತರೆ, ಕೇಶವ್‌ ಮಹಾರಾಜ್‌ 3 ವಿಕೆಟ್‌ ಪಡೆದರು.



187 ರನ್‌ ಕಲೆ ಹಾಕಿದ್ದ ದಕ್ಷಿಣ ಆಫ್ರಿಕಾ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಡೇವಿಡ್‌ ಮಿಲ್ಲರ್‌ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 188 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಮಿಲ್ಲರ್‌ ಜೊತೆಗೆ ಡೆವಾಲ್ಡ್‌ ಬ್ರೆವಿಸ್‌ 45 ರನ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 44 ರನ್‌ಗಳ ಕೊಡುಗೆಯನ್ನು ನೀಡಿದ್ದರು.

ಹರಿಣ ಪಡೆಗೆ ಆರಂಭಿಕ ಆಘಾತ ನೀಡಿದ್ದ ಬುಮ್ರಾ

ಮೊದಲು ಬ್ಯಾಟ್‌ ಮಾಡಲು ಬಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಹೊಸ ಚೆಂಡಿನಲ್ಲಿ ಆರಂಭಿಕ ಆಘಾತ ನೀಡಿದರು. ಬುಮ್ರಾ ಎರಡನೇ ಓವರ್‌ನಲ್ಲಿ ಅಪಾಯಕಾರಿ ಕ್ವಿಂಟನ್‌ ಡಿ ಕಾಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಹಾಗೂ ನಾಲ್ಕನೇ ಓವರ್‌ನಲ್ಲಿ ರಯಾನ್‌ ರಿಕೆಲ್ಟನ್‌ ಅವರನ್ನು ಔಟ್‌ ಮಾಡಿದ್ದರು. ಅರ್ಷದೀಪ್‌, ನಾಯಕ ಏಡೆನ್‌ ಮಾರ್ಕ್ರಮ್‌ ಅವರನ್ನು ಮೂರನೇ ಓವರ್‌ನಲ್ಲಿ ಔಟ್‌ ಮಾಡಿದ್ದರು. ಆ ಮೂಲಕ ಆಫ್ರಿಕಾ ನಾಲ್ಕು ಓವರ್‌ಗಳ ಅಂತ್ಯಕ್ಕೆ 20 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತ್ತು.

T20 World Cup: ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ ಕಿತ್ತು‌ ಹಲವು ದಾಖಲೆಗಳನ್ನು ಮುರಿದ ಜಸ್‌ಪ್ರೀತ್‌ ಬುಮ್ರಾ!

ಮಿಲ್ಲರ್-ಬ್ರೆವಿಸ್‌ ಜುಗಲ್‌ಬಂದಿ

ಬಹುಬೇಗ ಮೂರು ವಿಕೆಟ್‌ ಕಳೆದುಕೊಂಡು ದಕ್ಷಿಣ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರೀಸ್‌ನಲ್ಲಿ ಜೊತೆಯಾದ ಡೇವಿಡ್‌ ಮಿಲ್ಲರ್‌ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಕೆಲಕಾಲ ಭಾರತೀಯ ಬೌಲರ್‌ಗಳನ್ನು ಎಚ್ಚರಿಕೆಯಿಂದ ಆಡಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 50 ಎಸೆತಗಳಲ್ಲಿ 97 ರನ್‌ ಗಳಿಸುವ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು ಹಾಗೂ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಭಯಮುಕ್ತವಾಗಿ ಬ್ಯಾಟ್‌ ಮಾಡಿದ ಬ್ರೆವಿಸ್‌, ಭಾರತೀಯ ಬೌಲರ್‌ಗಳನ್ನು ಕೆಲ ಕಾಲ ಬಲವಾಗಿ ದಂಡಿಸಿದರು. ಅವರು ಆಡಿದ 29 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 45 ರನ್‌ ಚಚ್ಚಿದರು, ಆದರೆ, ಅರ್ಧಶತಕದಂಚಿನಲ್ಲಿ ಶಿವಂ ದುಬೆಗೆ ವಿಕೆಟ್‌ ಒಪ್ಪಿಸಿದರು.



ಡೇವಿಡ್‌ ಮಿಲ್ಲರ್‌ ಸ್ಪೋಟಕ ಅರ್ಧಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 16ನೇ ಓವರ್‌ವರೆಗೂ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಡೇವಿಡ್‌ ಮಿಲ್ಲರ್‌, ನಿರ್ಣಾಯಕ ಇನಿಂಗ್ಸ್‌ ಆಡಿದರು. ಅವರು ಆಡಿದ 35 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 63 ರನ್‌ ಗಳಿಸಿದರು. ಆ ಮೂಲಕ ತಮ್ಮ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವು ನೀಡಿದರು. ಮಿಲ್ಲರ್‌ ಔಟ್‌ ಮಾಡಿದ ಬಳಿಕ ಭಾರತ ತಂಡದ ಬೌಲರ್‌ಗಳು ಹರಿಣ ಪಡೆಯನ್ನು ಕಟ್ಟಿ ಹಾಕುವ ಮುನ್ಸೂಚನೆ ನೀಡಿದ್ದರಾದರೂ ಡೆತ ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಸ್ಪೋಟಕ ಬ್ಯಾಟ್‌ ಮಾಡಿ ಕೇವಲ 24 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 44 ರನ್‌ ಗಳಿಸಿದರು ಹಾಗೂ ತಂಡದ ಮೊತ್ತವನ್ನು 180ರ ಗಡಿಯನ್ನು ದಾಟಿಸಿದರು.

ಭಾರತ ತಂಡದ ಪರ ಮaರಕ ಬೌಲಿಂಗ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 4 ಓವರ್‌ಗಳಿಗೆ ಕೇವಲ 15 ರನ್‌ ನೀಡಿ 3 ವಿಕೆಟ್‌ ಕಿತ್ತರು. ಅರ್ಷದೀಪ್‌ ಸಿಂಗ್‌ 28 ರನ್‌ ನೀಡಿದರೂ ಎರಡು ವಿಕೆಟ್‌ ಪಡೆದರು. ಆದರೆ, ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ವರುಣ್‌ ಚಕ್ರವರ್ತಿ ಈ ಪಂದ್ಯದಲ್ಲಿ 4 ಓವರ್‌ಗಳಿಗೆ ಒಂದು ವಿಕೆಟ್‌ ಪಡೆದರೂ 47 ರನ್‌ ನೀಡಿ ಅತ್ಯಂತ ದುಬಾರಿಯಾದರು.