IND vs WI: ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮುಂದುವರಿಯಲಿ ಎಂದ ಚೇತೇಶ್ವರ್ ಪೂಜಾರ!
ಭಾರತ ಟಿ20 ತಂಡದಲ್ಲಿ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂದಲ್ಲಿಯೇ ಮುಂದುವರಿಸಬೇಕೆಂದು ಮಾಜಿ ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಆಗ್ರಹಿಸಿದ್ದಾರೆ. ವೈಯಕ್ತಿಕವಾಗಿ ದೊಡ್ಡ ಇನಿಂಗ್ಸ್ ಆಡದೇ ಇದ್ದರೂ ಮೂರನೇ ಕ್ರಮಾಂಕದಲ್ಲಿ ಅವರ ಮೌಲ್ಯ ಏನೆಂಬುದು ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲಿ ತಿಳಿದಿದೆ ಎಂದು ಹೇಳಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಲಿ ಎಂದ ಪೂಜಾರ. -
ನವದೆಹಲಿ: ಭಾರತ ಟಿ20 ತಂಡದ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಬೇಕೆಂದು ಮಾಜಿ ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ (Cheteshwar Pujara) ಆಗ್ರಹಿಸಿದ್ದಾರೆ. ಅವರು ವೈಯಕ್ತಿಕವಾಗಿ ದೊಡ್ಡ ಮೊತ್ತವನ್ನು ಕಲೆ ಹಾಕದಿದ್ದರೂ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಲಿದ್ದಾರೆ. ಇದನ್ನು ನಾವು ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲಿ ನೋಡಿದ್ದೇವೆ ಎಂದಿದ್ದಾರೆ.
ನಾಲ್ಕನೇ ಟಿ20 ತಂಡದ ನಿಮಿತ್ತ ಜಿಯೊಸ್ಟಾರ್ ಜೊತೆ ಮಾತನಾಡಿದ ಚೇತೇಶ್ವರ್ ಪೂಜಾರ, ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವ್ಯವಸ್ಥೆಯನ್ನು ಗಮನಿಸಿದರೆ, ವೈಯಕ್ತಿಕವಾಗಿ ದೊಡ್ಡ ಮೊತ್ತ ಗಳಿಸುವುದೊಂದೇ ಯಶಸ್ಸಿನ ಮಾನದಂಡವಾಗಿರಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.
“ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಭಾರತ ತಂಡಕ್ಕೆ ಅಗತ್ಯವಿರುವ ಕೊಡುಗೆ ನೀಡುತ್ತಿದ್ದಾರೆ. ಪ್ರತಿ ಬಾರಿಯೂ ಅವರು ದೊಡ್ಡ ಮೊತ್ತ ಗಳಿಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅಗ್ರ ಕ್ರಮಾಂಕದಲ್ಲಿರುವ ಪ್ರತಿಯೊಬ್ಬ ಬ್ಯಾಟರ್ ಕೂಡ ಆಕ್ರಮಣಕಾರಿ ಆಟಗಾರರಾಗಿದ್ದಾರೆ. ತಂಡಕ್ಕೆ ಉತ್ತಮ ಆರಂಭ ಒದಗಿಸುವುದು ಮತ್ತು ಪವರ್ಪ್ಲೇ ಅನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಇಶಾನ್ ಕಿಶನ್ ಬ್ಯಾಟಿಂಗ್ಗೆ ಬಂದಾಗ ಪವರ್ಪ್ಲೇನಲ್ಲಿ ಗರಿಷ್ಠ ರನ್ ಗಳಿಸಲು ಪ್ರಯತ್ನಿಸುತ್ತಾರೆ. ನಂತರ ತಂಡಕ್ಕೆ ವೇಗದ ರನ್ಗಳ ಅಗತ್ಯವಿದ್ದಾಗ, 30ರಿಂದ 40 ರನ್ಗಳ ತ್ವರಿತ ಇನಿಂಗ್ಸ್ಗಳ ಮೂಲಕ ಕೊಡುಗೆ ನೀಡುತ್ತಾರೆ,” ಎಂದು ಪೂಜಾರ ತಿಳಿಸಿದ್ದಾರೆ.
ಪ್ರಸ್ತುತ ಭಾರತದ ಅತ್ಯುತ್ತಮ ಟಿ20 ಆಟಗಾರನನ್ನು ಹೆಸರಿಸಿದ ಚೇತೇಶ್ವರ್ ಪೂಜಾರ!
ಇಶಾನ್ ಕಿಶನ್ ಅವರ ವೇಗದ 30–40 ರನ್ಗಳು ಏಕೆ ಮುಖ್ಯ?
ಟಿ20 ಕ್ರಿಕೆಟ್ನಲ್ಲಿ ಅಗ್ರ ಕ್ರಮಾಂಕದ ಪ್ರತಿಯೊಬ್ಬ ಆಟಗಾರನೂ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ನಿರೀಕ್ಷೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಬ್ಯಾಟರ್ನ ಜವಾಬ್ದಾರಿ ಕೇವಲ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸುವುದಕ್ಕೆ ಸೀಮಿತವಾಗಿರುವುದಿಲ್ಲ ಎಂದು ಪೂಜಾರ ಹೇಳಿದ್ದಾರೆ.
ಪವರ್ಪ್ಲೇನಲ್ಲಿ ತಂಡಕ್ಕೆ ಬಲವಾದ ಅಡಿಪಾಯ ಹಾಕುವುದು ಮತ್ತು ಅಗತ್ಯವಿದ್ದಾಗ ವೇಗವಾಗಿ ರನ್ ಗಳಿಸುವುದು ಇಶಾನ್ ಅವರ ಪ್ರಮುಖ ಜವಾಬ್ದಾರಿಯಾಗಿದೆ. ಅವರು ಈ ಜವಾಬ್ದಾರಿಯನ್ನು ನಿರಂತರವಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ಅವರ ಯಶಸ್ಸನ್ನು ವೈಯಕ್ತಿಕ ರನ್ಗಳ ಆಧಾರದ ಮೇಲೆ ಮಾತ್ರ ಅಳೆಯಬಾರದು ಎಂಬುದು ಪೂಜಾರ ಅವರ ಅಭಿಪ್ರಾಯವಾಗಿದೆ.
Ranji Trophy 2026-27: ಕರುಣ್ ನಾಯರ್ ಶತಕ, ಆಂಧ್ರ vs ಕರ್ನಾಟಕ ಪಂದ್ಯ ಡ್ರಾ!
ನಮನ್ ಧೀರ್ಗೆ ಪೂಜಾರ ಮೆಚ್ಚುಗೆ
ಇದೇ ವೇಳೆ, ಟಿ20 ಸರಣಿಯಲ್ಲಿ ಬೌಲಿಂಗ್ ಆಯ್ಕೆಯಾಗಿ ಬೆಳೆಯುತ್ತಿರುವ ನಮನ್ ಧೀರ್ ಅವರ ಪ್ರದರ್ಶನವನ್ನೂ ಪೂಜಾರ ಪ್ರಶಂಸಿಸಿದ್ದಾರೆ. ಬೌಲಿಂಗ್ನಲ್ಲಿ ನಿಯಂತ್ರಣ, ವೈವಿಧ್ಯತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ತಮ್ಮ ಯೋಜನೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಅವರು ಗುರುತಿಸಿದ್ದಾರೆ.
“ಇದು ಅತ್ಯುತ್ತಮ ಆಟದ ಅರಿವನ್ನು ತೋರಿಸುತ್ತದೆ. ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗೆ ಹೋಲಿಸಿದರೆ ಅವರ ಬೌಲಿಂಗ್ ವೇಗ ತುಸು ಕಡಿಮೆಯಿದೆ. ಆದರೆ ಅವರು ವೇಗದಲ್ಲಿ ನಿರಂತರ ಬದಲಾವಣೆಗಳನ್ನು ಮಾಡುತ್ತಾ, ಲೈನ್ ಮತ್ತು ಲೆನ್ತ್ ಮೂಲಕ ಬ್ಯಾಟರ್ಗಳನ್ನು ವಂಚಿಸುತ್ತಿದ್ದಾರೆ. ಬೌಲರ್ ಆಗಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ,” ಎಂದು ಚೇತೇಶವರ್ ಪೂಜಾರ ಹೇಳಿದ್ದಾರೆ.