ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ದೇವದತ್‌ ಪಡಿಕ್ಕಲ್‌ ಔಟ್‌, ಆರ್‌ಸಿಬಿಗೆ ಮರಳಿದ ಮಯಾಂಕ್‌ ಅಗರ್ವಾಲ್‌!

Mayank Agarwal joins RCB: ಗಾಯದಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ಆರ್‌ಸಿಬಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಸೇರ್ಪಡೆಯಾಗಿದ್ದಾರೆ.

IPL 2025: ಪಡಿಕ್ಕಲ್‌ ಔಟ್‌, ಆರ್‌ಸಿಬಿಗೆ ಸೇರಿದ ಮಯಾಂಕ್‌ ಅಗರ್ವಾಲ್!

ದೇವದತ್‌ ಪಡಿಕ್ಕಲ್‌-ಮಯಾಂಕ್‌ ಅಗರ್ವಾಲ್‌

Profile Ramesh Kote May 7, 2025 9:54 PM

ಬೆಂಗಳೂರು: ಗಾಯಕ್ಕೆ ತುತ್ತಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ (Devdutt Padikkal), 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಕರೆಸಿಕೊಂಡಿದೆ. ಕನ್ನಡಿಗ ಪಡಿಕ್ಕಲ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಅವರು ಆಡಿದ್ದ 10 ಇನಿಂಗ್ಸ್‌ಗಳಿಂದ ಎರಡು ಅರ್ಧಶತಕಗಳು ಸೇರಿದಂತೆ 247 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ನಡೆದಿರುವುದು ಆರ್‌ಸಿಬಿಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ.

ಕಳೆದ ವರ್ಷ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಮಯಾಂಕ್‌ ಅಗರ್ವಾಲ್‌ ಅವರು ಅನ್‌ಸೋಲ್ಡ್‌ ಆಗಿದ್ದರು. ಆದರೆ, ಇದೀಗ ದೇವದತ್‌ ಪಡಿಕ್ಕಲ್‌ ಗಾಯದಿಂದ ಟೂರ್ನಿಯಿಂದ ಹೊರ ನಡೆದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಅಂತಿಮ ಘಟ್ಟದಲ್ಲಿ ಮಯಾಂಕ್‌ ಅಗರ್ವಾಲ್‌ಗೆ ಅದೃಷ್ಟ ಬಂತು. ಬಲಗೈ ಬ್ಯಾಟ್ಸ್‌ಮನ್‌ ಅನ್ನು ಒಂದು ಕೋಟಿ ರೂ. ಗಳಿಗೆ ಆರ್‌ಸಿಬಿ ಖರೀದಿಸಿದೆ. ಮಯಾಂಕ್‌ ಅಗರ್ವಾಲ್‌ ಅವರನ್ನು ಖರೀದಿಸಿದ ಬಗ್ಗೆ ಹಾಗೂ ದೇವದತ್‌ ಪಡಿಕ್ಕಲ್‌ ಗಾಯದಿಂದ ಹೊರ ನಡೆಯುತ್ತಿರುವ ಬಗ್ಗೆ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಬೆಂಗಳೂರು ಫ್ರಾಂಚೈಸಿ ಪ್ರಕಟಿಸಿದೆ.

IPL 2025: ಭುವನೇಶ್ವರ್ ಕುಮಾರ್‌ ದಾಖಲೆ ದಾಖಲೆ ಮುರಿದ ಜಸ್‌ಪ್ರೀತ್ ಬುಮ್ರಾ!

ಪ್ರಸ್ತುತ ನಡೆಯುತ್ತಿರುವ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಸೋಲು ಅನುಭವಿಸಿದರೂ ಇನ್ನುಳಿದ 8ರಲ್ಲಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನವನ್ನುಅಲಂಕರಿಸಿದೆ.



ಪಂಜಾಬ್‌ ಕಿಂಗ್ಸ್‌ ಮಾಜಿ ನಾಯಕ ಮಯಾಂಕ್‌ ಅಗರ್ವಾಲ್‌ ಬಗ್ಗೆ ಮಾತನಾಡುವುದಾದರೆ, ಅವರು ಕಳೆದ ಎರಡು ಆವೃತ್ತಿಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡಿದ್ದರು. 2024ರ ಐಪಿಎಲ್‌ ಟೂರ್ನಿಯಲ್ಲಿ ಅವರು ಆಡಿದ್ದ ಕೇವಲ ನಾಲ್ಕು ಪಂದ್ಯಗಳಿಂದ ಕೇವಲ 64 ರನ್‌ಗಳಿಗೆ ಸೀಮಿತರಾಗಿದ್ದರು. ಆದರೆ, ಅವರು 2021ರ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದ 12 ಇನಿಂಗ್ಸ್‌ಗಳಿಂದ 441 ರನ್‌ಗಳನ್ನು ಕಲೆ ಹಾಕಿದ್ದರು.



ಆರ್‌ಸಿಬಿಗೆ ಮುಂದಿನ ಎದುರಾಳಿ ಲಖನೌ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೇ 9 ರಂದು ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಇದೀಗ ಆರ್‌ಸಿಬಿಗೆ ಬಂದಿರುವ ಮಯಾಂಕ್‌ ಅಗರ್ವಾಲ್‌ ಅವರನ್ನು ಎರಡು ಅಥವಾ ಮೂರು ಅಭ್ಯಾಸದ ಸೆಷನ್‌ನಲ್ಲಿ ಆಡಿಸಲಾಗುತ್ತದೆ. ಇದನ್ನು ನೋಡಿದ ಬಳಿಕ ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ಮಯಾಂಕ್‌ ಅಗರ್ವಾಲ್‌ಗೆ ಪ್ಲೇಯಿಂಗ್‌ XIನಲ್ಲಿ ನೇರವಾಗಿ ಅವಕಾಶ ನೀಡಬೇಕಾ? ಬೇಡವಾ? ಎಂಬುದನ್ನು ನಿರ್ಧರಿಸುತ್ತದೆ.