MI vs RR: ಯಶಸ್ವಿ ಜೈಸ್ವಾಲ್ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಶಾಕ್ ನೀಡಿದ ರಾಜಸ್ಥಾನ್ ರಾಯಲ್ಸ್!
MI vs RR Match Highlights: ಯಶಸ್ವಿ ಜೈಸ್ವಾಲ್ ಸ್ಫೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಗೆಲುವು ಪಡೆಯಿತು. ಸತತ ಮೂರನೇ ಗೆಲುವಿನ ಮೂಲಕ ಆರ್‌ಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.
ಮುಂಬೈಗೆ ಶಾಕ್ ನೀಡಿದ ರಾಜಸ್ಥಾನ್. -
ಗುವಾಹಟಿ: ಯಶಸ್ವಿ ಜೈಸ್ವಾಲ್ (Yashasvi Jaiswal) ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ, ಮಳೆಭಾದಿತ 11 ಓವರ್‌ಗಳ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಗೆಲುವು ಸಾಧಿಸಿತು. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳ ಗೆಲುವಿನ ಬಳಿಕ ರಿಯಾನ್ ಪರಾಗ್ ನಾಯಕತ್ವದ ಆರ್‌ಆರ್, ಪಾಯಿಂಟ್ಸ್ ಟೇಬಲ್‌ನಲ್ಲಿ ಪುನಃ ಅಗ್ರ ಸ್ಥಾನಕ್ಕೆ ಮರಳಿತು. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ (MI) ಸತತ ಎರಡನೇ ಪಂದ್ಯದಲ್ಲಿಯೂ ಸೋಲು ಒಪ್ಪಿಕೊಂಡಿತು.
ಮಂಗಳವಾರ ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 13ನೇ ಪಂದ್ಯಕ್ಕೆ ಮಳೆ ಕಾಟ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು 11 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಜಸ್ಥಾನ್ ರಾಯಲ್ಸ್ ತಂಡ, ಜೈಸ್ವಾಲ್ (77 ರನ್) ಹಾಗೂ ವೈಭವ್ ಸೂರ್ಯವಂಶಿ (39 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 11 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 150 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್, ತನ್ನ ಬ್ಯಾಟಿಂಗ್ ವೈಫಲ್ಯದಿಂದಾಗಿ 11 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 123 ರನ್‌ಗಳಿಗೆ ಸೀಮಿತವಾಯಿತು.
ʻಯಾರು ಗುರು ಇವನು?ʼ: ಜಸ್‌ಪ್ರೀತ್ ಬುಮ್ರಾಗೆ ಮೊದಲ ಎಸೆತದಲ್ಲಿಯೇ ಸಿಕ್ಸ್ ಹೊಡೆದ ವೈಭವ್ ಸೂರ್ಯವಂಶಿ!
ಜೈಸ್ವಾಲ್-ವೈಭವ್ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆರ್‌ಆರ್ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಮುಂಬೈ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತರು. ಈ ಜೋಡಿ ಮೊದಲನೇ ವಿಕೆಟ್‌ಗೆ ಕೇವಲ 30 ಎಸೆತಗಳಲ್ಲಿ 80 ರನ್‌ಗಳನ್ನು ಕಲೆ ಹಾಕಿತು. ಇದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಯಿತು. ಜಸ್‌ಪ್ರೀತ್ ಬುಮ್ರಾಗೆ 15ರ ವಯಸ್ಸಿನ ವೈಭವ್ ಸೂರ್ಯವಂಶಿ ಹೇಗೆ ಬ್ಯಾಟ್ ಮಾಡಬಹುದೆಂದು ಸಾಕಷ್ಟು ಕುತೂಹಲವಿತ್ತು. ಅದರಂತೆ ವೈಭವ್, ಬುಮ್ರಾ ಅವರ ಮೊದಲನೇ ಎಸೆತದಲ್ಲಿ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು, ಇದೇ ಓವರ್‌ನಲ್ಲಿ ಬುಮ್ರಾಗೆ ವೈಭವ್ ಮತ್ತೊಂದು ಸಿಕ್ಸರ್ ಸಿಡಿಸಿದ್ದು ವಿಶೇಷ. ಒಟ್ಟು 14 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ ಸೂರ್ಯವಂಶಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
A hat-trick of wins and yet to be beaten! 🩷#RR light up Guwahati with a phenomenal 2️⃣7️⃣ run win over #MI to take the top spot on the points table 👏
— IndianPremierLeague (@IPL) April 7, 2026
Scorecard ▶️ https://t.co/BCCaxRwjYg#TATAIPL | #KhelBindaas | #RRvMI | @rajasthanroyals pic.twitter.com/lLoKuuOZV4
ಯಶಸ್ವಿ ಜೈಸ್ವಾಲ್ ಸ್ಪೋಟಕ ಅರ್ಧಶತಕ
ಯಶಸ್ವಿ ಜೈಸ್ವಾಲ್ ಮೊದಲನೇ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿರು. ದೀಪಕ್ ಚಹರ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿಯೇ ಜೈಸ್ವಾಲ್, ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 22 ರನ್‌ಗಳನ್ನು ಚಚ್ಚಿದ್ದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದರು. ಅವರು ಆಡಿದ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 77 ರನ್ ಸಿಡಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನಾಯಕ ರಿಯಾನ್ ಪರಾಗ್ 10 ಎಸೆತಗಳಲ್ಲಿ20 ರನ್ ಕೊಡುಗೆಯನ್ನು ನೀಡಿದ್ದರು.
Yashasvi Jaiswal shines again vs #MI 💎
— IndianPremierLeague (@IPL) April 7, 2026
The @rajasthanroyals opener is adjudged the Player of the Match for his stunning knock 👊
WATCH HIS INNINGS ▶️ https://t.co/H8rr3mtjvx#TATAIPL | #KhelBindaas | #RRvMI | @rajasthanroyals | @ybj_19 pic.twitter.com/V8yL5vSxG0
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯ
151 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಆರ್‌ಆರ್ ಬೌಲಿಂಗ್‌ಗೆ ಶರಣಾದರು. ಆದರೆ, ನಮ್ ಧೀರ್ ಹಾಗೂ ಶರ್ಫೆನ್ ಋದರ್‌ಫೋರ್ಟ್ ತಲಾ 25 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ.
ಆರ್‌ಆರ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ನಾಂಡ್ರೆ ಬರ್ಗರ್, ಸಂದೀಪ್ ಶರ್ಮಾ ಹಾಗೂ ರವಿ ಬಿಷ್ಣೋಯ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಜೋಫ್ರಾ ಆರ್ಚರ್ ಹಾಗೂ ತುಷಾರ್ ದೇಶ್‌ಪಾಂಡೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.