ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs LSG: ರೋಹಿತ್‌-ರಿಕೆಲ್ಟನ್‌ ಅಬ್ಬರ, ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!

MI vs LSG Match Highlights: ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 6 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಮುಂಬೈ ಪ್ಲೇಆಫ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.

IPL 2026: ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!

ಲಖನೌ ಎದುರು ಅರ್ಧಶತಕ ಸಿಡಿಸಿ ಸಂಭ್ರಮಿಸಿದ ರೋಹಿತ್‌ ಶರ್ಮಾ. -

Profile
Ramesh Kote May 4, 2026 11:28 PM

ಮುಂಬೈ: ರಯಾನ್‌ ರಿಕೆಟಲ್ಟನ್‌ (Ryan Rickelton) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 47ನೇ ಪಂದ್ಯದಲ್ಲಿ (MI vs SLG) ಲಖನೌ ಸೂಪರ್‌ ಜಯಂಟ್ಸ್‌ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಐದು ಬಾರಿ ಚಾಂಪಿಯನ್ಸ್‌ಗೆ ಮೂರನೇ ಗೆಲುವು ಲಭಿಸಿದರೂ ಟೂರ್ನಿಯ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ. ಏಕೆಂದರೆ ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದರೂ ನಾಕ್‌ಔಟ್‌ ಪ್ರವೇಶ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಇನ್ನು ಈ ಪಂದ್ಯವನ್ನು ಸೋತ ಎಲ್‌ಎಸ್‌ಜಿ ಪ್ಲೇಆಫ್ಸ್‌ನಿಂದ ಬಹುತೇಕ ಹೊರಬಿದ್ದಿದೆ.

ಎಲ್‌ಎಸ್‌ಜಿ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆರಂಭಿಕರಾದ ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ 143 ರನ್‌ಗಳ ಜೊತೆಯಾಟದ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ರಿಕೆಲ್ಟನ್‌ ಸ್ಪೋಟಕ ಬ್ಯಾಟ್‌ ಮಾಡಿ 32 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 83 ರನ್‌ ಚಚ್ಚಿದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ರೋಹಿತ್‌ ಶರ್ಮಾ ತಮ್ಮ ಕಮ್‌ಬ್ಯಾಕ್‌ ಇನಿಂಗ್ಸ್‌ನಲ್ಲಿ 44 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!

ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಕ್ರಮವಾಗಿ 11 ಮತ್ತು 12 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ನಮನ್‌ ಧಿರ್‌ ಅವರು ಕೊನೆಯಲ್ಲಿ ಅಜೇಯ 23 ರನ್‌ ಗಳಿಸಿದರು ಹಾಗೂ ವಿಲ್‌ ಜ್ಯಾಕ್ಸ್‌ (10*) ಸಿಕ್ಸರ್‌ ಮೂಲಕ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಮುಂಬೈ 18.4 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿತು.



ಲಖನೌಗೆ ಸ್ಪೋಟಕ ಆರಂಭ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಬ್ಯಾಟಿಂಗ್‌ ಸ್ನೇಹಿ ವಾಂಖೆಡೆ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬೇಕಾದ ಸವಾಲು ಎದುರಾಗಿತ್ತು. ಅದರಂತೆ ಆರಂಭಿಕರಾದ ಜಾಶ್‌ ಇಂಗ್ಲಿಸ್‌ ಹಾಗೂ ಮಿಚೆಲ್‌ ಮಾರ್ಷ್‌ ಆರಂಭದಲ್ಲಿ ಅಬ್ಬರಿಸಿದ್ದರು. ಹೊಸ ಆಟಗಾರ ಇಂಗ್ಲಿಸ್‌ 5 ಎಸೆತಗಳಲ್ಲಿ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಮಿಚೆಲ್‌ ಮಾರ್ಷ್‌ ಜೊತೆಗೂಡಿದ ನಿಕೂಲಸ್‌ ಪೂರನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರು ಎರಡನೇ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 94 ರನ್‌ ಚಚ್ಚಿದರು. ಆ ಮೂಲಕ ಲಖನೌ ಕೇವಲ 8 ಓವರ್‌ಗಳಿಗೆ 123 ರನ್‌ ಕಲೆ ಹಾಕಿ ಸ್ಪೋಟಕ ಆರಂಭ ಪಡೆದಿತ್ತು.



ನಿಕೋಲಸ್‌ ಪೂರನ್‌ ಅರ್ಧಶತಕ

ಸತತ ಬ್ಯಾಟಿಂಗ್‌ ವೈಫಲ್ಯದಿಂದ ಭಾರಿ ಟೀಕೆಗಳಿಗೆ ಗುರಿಯಾಗಿದ್ದ ನಿಕೋಲಸ್‌ ಪೂರನ್‌, ಈ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ ಕೇವಲ 16 ಎಸೆತಗಳಲ್ಲಿ ಲಖನೌ ಪರ ಎರಡನೇ ವೇಗದ ಅರ್ಧಶತಕ ಬಾರಿಸಿ ಈ ಋತುವಿನ ಮೊದಲ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ ಇವರು 21 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 300ರ ಸ್ಟ್ರೈಕ್‌ ರೇಟ್‌ನಲ್ಲಿ 63 ರನ್‌ ಗಳಿಸಿದ ಬಳಿಕ ಕಾರ್ಬಿನ್‌ ಬಾಷ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಜೊತೆ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಮಿಚೆಲ್‌ ಮಾರ್ಷ್‌ 25 ಎಸೆತಗಳಲ್ಲಿ 44 ರನ್‌ ಗಳಿಸಿದ ಬಳಿಕ ಕಾರ್ಬಿನ್‌ ಬಾಷ್‌ಗೆ ಔಟ್‌ ಆದರು.



228 ರನ್‌ ಕಲೆ ಹಾಕಿದ ಎಲ್‌ಎಸ್‌ಜಿ

ಕಾರ್ಬಿನ್‌ ಬಾಷ್‌ 9ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಈ ಇಬ್ಬರನ್ನು ಔಟ್‌ ಮಾಡುವ ಮೂಲಕ ಮುಂಬೈ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ನಂತರ ವಿಲ್‌ ಜ್ಯಾಕ್ಸ್‌ ನಾಯಕ ರಿಷಭ್‌ ಪಂತ್‌ ಅವರನ್ನು ಔಟ್‌ ಮಾಡಿದರು. ರಘು ಶರ್ಮಾ, ಅಕ್ಷತ್‌ ರಘುವಂಶಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆರಂಭಿಕ 11 ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಲಖನೌ, ಕೊನೆಯ 9 ಓವರ್‌ಗಳಲ್ಲಿ ರನ್‌ ವೇಗವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಆದರೆ, ಏಡೆನ್‌ ಮಾರ್ಕ್ರಮ್‌ (31*) ಹಾಗೂ ಹಿಮ್ಮತ್‌ ಸಿಂಗ್‌ (40*) ಅವರು 47 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 228 ರನ್‌ಗಳನ್ನು ಗಳಿಸಿತು.