IND vs WI: ರೊವ್ಮನ್ ಪೊವೆಲ್, ಶೆರ್ಫೆನ್ ಋದರ್‌ಫೋರ್ಡ್‌ಗೆ ಡೀಮೆರಿಟ್ ಪಾಯಿಂಟ್ ನೀಡಿದ ಐಸಿಸಿ!
ವೆಸ್ಟ್ ಇಂಡೀಸ್ ತಂಡದ ಪ್ರಮುಖ ಆಟಗಾರರಾದ ರೊವ್ಮನ್ ಪೊವೆಲ್ ಮತ್ತು ಶೆರ್ಫೇನ್ ಋದರ್‌ಫೋರ್ಡ್ ಅವರು ಭಾರತದ ವಿರುದ್ಧದ ಟಿ20ಐ ಸರಣಿಯ ಎರಡನೇ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಬ್ಬರಿಗೂ ಅಧಿಕೃತ ಎಚ್ಚರಿಕೆ ನೀಡಿದ್ದು, ತಲಾ ಒಂದು ಡಿಮೆರಿಟ್ ಅಂಕವನ್ನು ವಿಧಿಸಿದೆ.
ರೊವ್ಮನ್ ಪೊವೆಲ್, ಋದರ್‌ಫೋರ್ಡ್‌ಗೆ ಡೀಮೆರಿಟ್ ಅಂಕ ನೀಡಿದ ಐಸಿಸಿ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20ಐ ಸರಣಿಯ ಮೂರನೇ ಪಂದ್ಯದಲ್ಲಿ (IND vs WI) ಭಾರತ ತಂಡದ ವಿರುದ್ಧ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದೆ. ಅಕ್ಟೋಬರ್ 11ರಂದು ಇಂದೋರ್‌ನ ಹೋಳ್ಕರ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 14 ರನ್‌ಗಳ ಗೆಲುವು ದಾಖಲಿಸಿತು. ಈ ಸೋಲಿನ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಂಡದ ಪ್ರಮುಖ ಆಟಗಾರರಾದ ರೊವ್ಮನ್ ಪೊವೆಲ್(Rovman Powell) ಮತ್ತು ಶೆರ್ಫೇನ್ ಋದರ್‌ಫೋರ್ಡ್(Sherfane Rutherford) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ದೃಢಪಟ್ಟಿದ್ದು, ಇಬ್ಬರಿಗೂ ಐಸಿಸಿ ಎಚ್ಚರಿಕೆ ನೀಡಿದೆ.
ಈ ಇಬ್ಬರೂ ಐಸಿಸಿ ನೀತಿ ಸಂಹಿತೆಯ ಮೊದಲ ಹಂತದ (ಲೆವೆಲ್ 1) ಉಲ್ಲಂಘನೆ ಮಾಡಿದ್ದಾರೆ. ಆದರೆ, ಈ ಶಿಸ್ತು ಕ್ರಮ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರು ತೋರಿದ ವರ್ತನೆಗೆ ಸಂಬಂಧಿಸಿದೆ. ಪೊವೆಲ್, ಐಸಿಸಿ ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ರೂಪಿಸಿರುವ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಾರೆ. ಈ ನಿಯಮ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳು, ಉಡುಪುಗಳು, ಮೈದಾನದ ಉಪಕರಣಗಳು ಅಥವಾ ಇತರ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದೆ.
IND vs WI: ಭಾರತ ಟಿ 20 ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಯ ಪಾತ್ರವನ್ನು ವಹಿಸಿದ ದಿನೇಶ್ ಕಾರ್ತಿಕ್!
ಇನ್ನು, ಋದರ್‌ಫೋರ್ಡ್ ಅವರು ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ್ದಾರೆ. ಈ ನಿಯಮವು ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ಸೂಚಿಸುವ ಆಟಗಾರರ ವರ್ತನೆಗೆ ಸಂಬಂಧಿಸಿದೆ. ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಇದರಿಂದಾಗಿ ಔಪಚಾರಿಕ ವಿಚಾರಣೆ ನಡೆಸುವ ಅಗತ್ಯ ಉಂಟಾಗಲಿಲ್ಲ.
ಪೊವೆಲ್ ಮತ್ತು ಋದರ್‌ಫೋರ್ಡ್ ಯಾವ ತಪ್ಪು ಮಾಡಿದ್ದರು?
ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಭಾರತದ ವೇಗದ ಬೌಲರ್ ಮಯಾಂಕ್ ಯಾದವ್ ಬೌಲಿಂಗ್‌ನಲ್ಲಿ ರೊವ್ಮನ್ ಪೊವೆಲ್ ಔಟಾಗಿದ್ದರು. ಔಟಾದ ಬಳಿಕ ಅವರು ತಮ್ಮ ಬ್ಯಾಟ್‌ನಿಂದ ಚೆಂಡನ್ನು ಹೊಡೆದು ದೂರಕ್ಕೆ ಕಳುಹಿಸಿದ್ದರು. ಈ ವರ್ತನೆಯೇ ಐಸಿಸಿ ನಿಯಮ ಉಲ್ಲಂಘನೆಗೆ ಕಾರಣವಾಯಿತು.
IND vs WI: ಭಾರತ ಟಿ 20 ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಯ ಪಾತ್ರವನ್ನು ವಹಿಸಿದ ದಿನೇಶ್ ಕಾರ್ತಿಕ್!
ಮತ್ತೊಂದೆಡೆ, ಶೆರ್ಫೇನ್ ಋದರ್‌ಫೋರ್ಡ್ ಅವರು ತಾವು ವೈಡ್ ಎಂದು ನಿರೀಕ್ಷಿಸಿದ್ದ ಎಸೆತಕ್ಕೆ ಅಂಪೈರ್ ವೈಡ್ ನೀಡದ ಹಿನ್ನೆಲೆಯಲ್ಲಿ ಆಕ್ರಮಣಕಾರಿಯಾಗಿ ಕೂಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಯಿತು. ಈ ಇಬ್ಬರು ಆಟಗಾರರ ವಿರುದ್ಧ ಮೈದಾನದ ಅಂಪೈರ್‌ಗಳಾದ ಜಯರಾಮನ್ ಮದನಗೋಪಾಲ್ ಮತ್ತು ರೋಹನ್ ಪಂಡಿತ್, ಮೂರನೇ ಅಂಪೈರ್ ನಿತಿನ್ ಮೆನನ್ ಹಾಗೂ ನಾಲ್ಕನೇ ಅಂಪೈರ್ ವೀರೇಂದರ್ ಶರ್ಮಾ ಆರೋಪಗಳನ್ನು ದಾಖಲಿಸಿದ್ದರು.
ಅಕ್ಟೋಬರ್ 14ರಂದು ನಾಲ್ಕನೇ ಪಂದ್ಯ
ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮುಂದಿನ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿವೆ. ಅಕ್ಟೋಬರ್ 14ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಮುಂದಿನ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಗುರಿ ಹೊಂದಿದೆ. ಇತ್ತ, ಸರಣಿಯಲ್ಲಿ ಉಳಿಯಬೇಕಾದರೆ ವೆಸ್ಟ್ ಇಂಡೀಸ್ ತಂಡಕ್ಕೆ ನಾಲ್ಕನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.