ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಟಿಮ್‌ ಡೇವಿಡ್‌ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!

RCB vs CSK Match Highlights: ಟಿಮ್‌ ಡೇವಿಡ್‌ ಅಬ್ಬರದ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 43 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ಸತತ ಎರಡನೇ ಗೆಲುವು ದಾಖಲಿಸಿತು.

IPL 2026: ಸಿಎಸ್‌ಕೆಗೆ ಹ್ಯಾಟ್ರಿಕ್‌ ಸೋಲು, ಆರ್‌ಸಿಬಿಗೆ ಭರ್ಜರಿ ಜಯ!

ಸಿಎಸ್‌ಕೆ ಎದುರು ಆರ್‌ಸಿಬಿಗೆ ಭರ್ಜರಿ ಜಯ. -

Profile
Ramesh Kote Apr 5, 2026 11:33 PM

ಬೆಂಗಳೂರು: ಟಿಮ್‌ ಡೇವಿಡ್‌ (Tim David) ಸ್ಪೋಟಕ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ (RCB vs CSK) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 43 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಸತತ ಎರಡು ಪಂದ್ಯಗಳ ಗೆಲುವಿನ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಪ್ರವೇಶ ಮಾಡಿತು. ಇನ್ನು ಬ್ಯಾಟಿಂಗ್‌ನಲ್ಲಿ ಕಠಿಣ ಹೋರಾಟ ನಡೆಸಿದರೂ ಬೌಲಿಂಗ್‌ ವೈಫಲ್ಯದಿಂದಾಗಿ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಈ ಸೀಸನ್‌ನಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿತು.

ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 11ನೇ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 251 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆಗೆ ಜೇಕಬ್‌ ಡಫಿ ಹೊಸ ಚೆಂಡಿನಲ್ಲಿ ಆರಂಭಿಕ ಆಘಾತ ನೀಡಿದರು. ಅವರು ಋತುರಾಜ್‌ ಗಾಯಕ್ವಾಡ್‌ ಮತ್ತು ಸಂಜು ಸ್ಯಾಮ್ಸನ್‌ ಅವರನ್ನು ಔಟ್‌ ಮಾಡಿದರು ಹಾಗೂ ಆರ್‌ಸಿಬಿ ಉತ್ತಮ ಆರಂಭ ತಂದುಕೊಟ್ಟಿದ್ದರು. ನಂತರ ಭುವನೇಶ್ವರ್‌ ಕುಮಾರ್‌ ಅವರು, ಆಯುಷ್‌ ಮ್ಹಾತ್ರೆಗೆ ಪೆವಿಲಿಯನ್‌ ಹಾದಿ ತೋರಿಸಿದರು. ಆ ಮೂಲಕ ಸಿಎಸ್‌ಕೆ ಕೇವಲ 30 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು.

IPL 2026: 28 ರನ್‌ಗೆ ಔಟಾದರೂ ರೋಹಿತ್‌ ಶರ್ಮಾರ ದೊಡ್ಡ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಸರ್ಫರಾಝ್‌ ಖಾನ್‌ ಅರ್ಧಶತಕ

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸರ್ಫರಾಝ್‌ ಖಾನ್‌, ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿದರು. ಅವರು ಆಡಿದ 25 ಎಸೆತಗಳಲ್ಲಿ 200ರ ಸ್ಟ್ರೈಕ್‌ ರೇಟ್‌ನಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 50 ರನ್‌ ಸಿಡಿಸಿದರು. ಆ ಮೂಲಕ ಸಿಎಸ್‌ಕೆಗೆ ಪವರ್‌ಪ್ಲೇನಲ್ಲಿ 77 ರನ್‌ಗಳನ್ನು ತಂದುಕೊಟ್ಟಿದ್ದರು. ಆದರೆ, ಅವರನ್ನು ಕೃಣಾಲ್‌ ಪಾಂಡ್ಯ ಔಟ್‌ ಮಾಡಿದರು. ಶಿವಂ ದುಬೆ (18) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಅಭಿನಂದನ್‌ ಸಿಂಗ್‌ ಬಿಡಲಿಲ್ಲ.



ಪ್ರಶಾಂತ್‌ ವೀರ್‌ ಹಾಗೂ ಜೇಮಿ ಓವರ್ಟನ್‌ 57 ರನ್‌ ಜೊತೆಯಾಟವನ್ನು ಆಡಿದರು. ಪ್ರಶಾಂತ್‌ 29 ಎಸೆತಗಳಲ್ಲಿ 43 ರನ್‌ಗಳನ್ನು ಗಳಿಸಿ ಎಲ್ಲರ ಗಮನ ಸೆಳೆದರೆ, ಜೇಮಿ ಓವರ್ಟನ್‌ ಅವರು ಕೇವಲ 16 ಎಸೆತಗಳಲ್ಲಿ 37 ರನ್‌ ಸಿಡಿಸಿದರು. ಅ ಮೂಲಕ ಸಿಎಸ್‌ಕೆಗೆ ಗೆಲುವಿನ ಭರವಸೆ ಮೂಡಿಸಿದರೂ ಈ ಇಬ್ಬರನ್ನೂ ಭುವನೇಶ್ವರ್‌ ಹಾಗೂ ಸುಯಾಶ್‌ ಔಟ್‌ ಮಾಡಿ ಆರ್‌ಸಿಬಿಗೆ ಬ್ರೇಕ್‌ ತಂದುಕೊಟ್ಟರು. ಅಂತಿಮವಾಗಿ ಸಿಎಸ್‌ಕೆ 19.4 ಓವರ್‌ಗಳಿಗೆ 207 ರನ್‌ಗಳಿಗೆ ಆಲ್‌ಔಟ್‌ ಆಯಿತು ಹಾಗೂ 43 ರನ್‌ಗಳಿಂದ ಸೋಲು ಅನುಭವಿಸಿತು.

ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಕಿತ್ತರೆ, ಜೇಕಬ್‌ ಡಫಿ, ಅಭಿನಂದನ್‌ ಸಿಂಗ್‌ ಹಾಗೂ ಕೃಣಾಲ್‌ ಪಾಂಡ್ಯ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿರು.



250 ರನ್‌ ಸಿಡಿಸಿದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಟಿಮ್‌ ಡೇವಿಡ್‌ ಹಾಗೂ ದೇವದತ್‌ ಪಡಿಕ್ಕಲ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ 250 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 251 ರನ್‌ಗಳ ಗುರಿಯನ್ನು ನೀಡಿತು.



ದೇವದತ್‌ ಪಡಿಕ್ಕಲ್‌ ಎರಡನೇ ಅರ್ಧಶತಕ

ಆರ್‌ಸಿಬಿ ಪರ ಎಂದಿನಂತೆ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ 37 ರನ್‌ಗಳ ಜೊತೆಯಾಟಕ್ಕೆ ಸೀಮಿತರಾದರು. ಕೊಹ್ಲಿ 18 ಎಸೆತಗಳಲ್ಲಿ 28 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ದೇವದತ್‌ ಪಡಿಕ್ಕಲ್‌ ಹಾಗೂ ಫಿಲ್‌ ಸಾಲ್ಟ್‌ 56 ರನ್‌ಗಳ ಜೊತೆಯಾಟವನ್ನು ಆಡಿದರು. ಫಿಲ್‌ ಸಾಲ್ಟ್‌ 30 ಎಸೆತಗಳಲ್ಲಿ 46 ರನ್‌ ಗಳಿಸಿ ಔಟ್‌ ಆದರು. ಮೊದಲನೇ ಪಂದ್ಯದಂತೆ ಎರಡನೇ ಪಂದ್ಯದಲ್ಲಿಯೂ ಪಡಿಕ್ಕಲ್‌ ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 29 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದ ಬಳಿಕ ಜೇಮಿ ಓವರ್ಟನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ರಜತ್‌ ಪಾಟಿದಾರ್‌ ಅವರ ಜೊತೆಯೂ ಪಡಿಕ್ಕಲ್‌ 58 ರನ್‌ಗಳ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿ ಪೆವಿಲಿಯನ್‌ಗೆ ಮರಳಿದರು.



ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್‌ ಹೊಳೆ ಹರಿಸಿದ ಡೇವಿಡ್‌

ದೇವದತ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ಟಿಮ್‌ ಡೇವಿಡ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಒಂದು ತುದಿಯಲ್ಲಿ ನಾಯಕ ರಜತ್‌ ಪಾಟಿದಾರ್‌ ಸ್ಪೋಟಕ ಬ್ಯಾಟ್‌ ಮಾಡಿ ಕೇವಲ 19 ಎಸೆತಗಳಲ್ಲಿ 252.63ರ ಸ್ಟ್ರೈಕ್‌ ರೇಟ್‌ನಲ್ಲಿ 6 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 48 ರನ್‌ ಸಿಡಿಸಿದರು. ಆದರೆ, ಇವರು ಅರ್ಧಶತಕವನ್ನು ಪೂರ್ಣಗೊಳಿಸಲು ಟಿಮ್‌ ಡೇವಿಡ್‌ ಅವಕಾಶ ನೀಡಲಿಲ್ಲ. ಡೆತ್‌ ಓವರ್‌ಗಳಲ್ಲಿ ಹೆಚ್ಚು ಹೊತ್ತು ಸ್ಟ್ರೈಕ್‌ನಲ್ಲಿ ಬ್ಯಾಟ್‌ ಮಾಡಿದ ಟಿಮ್‌ ಡೇವಿಡ, ಕೇವಲ 25 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 70 ರನ್ ಸಿಡಿಸಿದರು. ಆ ಮೂಲಕ ಆರ್‌ಸಿಬಿ ಮೊತ್ತವನ್ನು 250ಕ್ಕೆ ತಲುಪಿಸಿದರು.

RCB vs CSK: ಅಬ್ಬಬ್ಬಾ... ಎಂಥಾ ಶಾಟ್‌! ಕಬ್ಬನ್‌ ಪಾರ್ಕ್‌ಗೆ ಸಿಕ್ಸರ್‌ ಬಾರಿಸಿದ ಟಿಮ್‌ ಡೇವಿಡ್‌! ವಿಡಿಯೊ

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 250-3 (ಟಿಮ್‌ ಡೇವಿಡ್‌ 70* ರನ್‌, ದೇವದತ್‌ ಪಡಿಕ್ಕಲ್‌ 50 ರನ್‌, ರಜತ್‌ ಪಾಟಿದಾರ್‌ 48* ರನ್‌, ಫಿಲ್‌ ಸಾಲ್ಟ್‌ 46; ಶಿವಂ ದುಬೆ 30 ಕ್ಕೆ 1)

ಚೆನ್ನೈ ಸೂಪರ್‌ ಕಿಂಗ್ಸ್‌: 19.4 ಓವರ್‌ಗಳಿಗೆ 207-10 (ಸರ್ಫರಾಝ್‌ ಖಾನ್‌ 50 ರನ್‌, ಜೇಮಿ ಓವರ್ಟನ್‌ 37, ಪ್ರಶಾಂತ್‌ ವೀರ್‌ 43; ಭುವನೇಶ್ವರ್‌ ಕುಮಾರ್‌ 41 ಕ್ಕೆ 3, ಅಭಿನಂದನ್‌ ಸಿಂಗ್‌ 30ಕ್ಕೆ 2, ಜೇಕಬ್‌ ಡಫಿ 58ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಟಿಮ್‌ ಡೇವಿಡ್‌