IND vs ENG ಟಿ20ಐ ಸರಣಿಯಲ್ಲಿ ಭಾರತ ಮಾಡುತ್ತಿರುವ ದೊಡ್ಡ ತಪ್ಪನ್ನು ರಿವೀಲ್ ಮಾಡಿದ ಸಬಾ ಕರಿಮ್!
ಇಂಗ್ಲೆಂಡ್ ಎದುರು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಳಪೆ ಪ್ರದರ್ಶನವನ್ನು ತೋರುತ್ತಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವನ್ನು ಮಾಜಿ ಕ್ರಿಕೆಟಿಗ ಸಬಾ ಕರಿಮ್ ಟೀಕಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಕಂಡಿಷನ್ಸ್‌ಗೆ ಹೊಂದಿಕೊಳ್ಳುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆಂದು ಅವರು ದೂರಿದ್ದಾರೆ.
ಭಾರತ ತಂಡವನ್ನು ಟೀಕಿಸಿದ ಸಬಾ ಕರಿಮ್. -
ನವದೆಹಲಿ: ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್‌ನಲ್ಲಿ ನಡೆದಿದ್ದ ನಾಲ್ಕನೇ ಟಿ20 ಪಂದ್ಯದಲ್ಲಿ(IND vs ENG) ಹೀನಾಯ ಸೋಲು ಅನುಭವಿಸಿದ ಬಳಿಕ ಮಾಜಿ ಕ್ರಿಕೆಟಿಗ ಸಬಾ ಕರಿಮ್ (Saba Karim) ಅವರು ಶ್ರೇಯಸ್ ಅಯ್ಯರ್ (shreyas Iyer) ನಾಯಕತ್ವದ ಭಾರತ ತಂಡದ ಆಟದ ವಿಧಾನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆದರೆ ಪಿಚ್‌ನ ಹೆಚ್ಚುವರಿ ಬೌನ್ಸ್‌ಗೆ ಹೊಂದಿಕೊಳ್ಳುವಲ್ಲಿ ಮತ್ತೊಮ್ಮೆ ಪ್ರವಾಸಿ ಬ್ಯಾಟ್ಸ್‌ಮನ್‌ಗಳು ವಿಫಲರಾದರು.
ಪಂದ್ಯದ ಪವರ್‌ಪ್ಲೇ ಅವಧಿಯಲ್ಲಿ ಭಾರತ ತಂಡದ ಬ್ಯಾಟರ್‌ಗಳು ಅನುಸರಿಸಿದ ಅತಿಯಾದ ಆಕ್ರಮಣಕಾರಿ ಪ್ರವೃತ್ತಿಯನ್ನು ಸಬಾ ಕರಿಮ್ ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ, ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ತಕ್ಕಂತೆ ತಮ್ಮ ಆಟವನ್ನು ಹೊಂದಿಸಿಕೊಳ್ಳುವಲ್ಲಿ ಭಾರತ ತಂಡ ಸಂಪೂರ್ಣ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಯೊ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಬಾ ಕರಿಮ್, "ಎದುರಾಳಿ ಬೌಲರ್‌ಗಳ ಯೋಜನೆಯನ್ನು ಬ್ಯಾಟ್ಸ್‌ಮನ್‌ಗಳು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈ ರೀತಿ ಮಾಡಿಲ್ಲವಾದರೆ, ಫಲಿತಾಂಶ ನಿಮ್ಮ ಪರವಾಗಿ ಬರುವುದಿಲ್ಲ. ಭಾರತೀಯ ಬ್ಯಾಟರ್‌ಗಳ ಮಾಡಿದ್ದು ಕೂಡ ಇದೇ ತಪ್ಪು. ಜೋಫ್ರಾ ಆರ್ಚರ್ ಮತ್ತು ಜಾಶ್ ಟಂಗ್ ನಿರಂತರವಾಗಿ ಶಾರ್ಟ್-ಪಿಚ್ ಎಸೆತಗಳನ್ನು ಹಾಕಿದರು. ಆದರೆ ನಮ್ಮ ಇಬ್ಬರು ಬ್ಯಾಟರ್‌ಗಳು ಬ್ಯಾಕ್‌ಫುಟ್‌ನಲ್ಲಿ ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಅಭಿಷೇಕ್ ಶರ್ಮಾ ಕೂಡ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ವಿಕೆಟ್ ಯಾವ ಬೌಲರ್ ಪಡೆದರೂ ಅದು ವಿಕೆಟ್ ಆಗಿರುತ್ತದೆ," ಎಂದು ಹೇಳಿದರು.
ವೈಫಲ್ಯದ ಹೊರತಾಗಿಯೂ ವೈಭವ್ ಸೂರ್ಯವಂಶಿಯನ್ನು ಬೆಂಬಲಿಸಿದ ಅಭಿಷೇಕ್ ನಾಯರ್!
"ಹೊಸ ಚೆಂಡಿನ ಎದುರು ಬ್ಯಾಟ್ ಮಾಡುವಾಗ ಮೈದಾನದ ಆಯಾಮಗಳನ್ನು ಭಾರತ ತಂಡದ ಆಟಗಾರರು ಸರಿಯಾಗಿ ಅಂದಾಜಿಸಲೇ ಇಲ್ಲ. ಆ ವೇಳೆ ಅಗತ್ಯವಾಗಿದ್ದದ್ದು ಸ್ಟ್ರೈಕ್ ರೊಟೇಟ್ ಮಾಡುವುದು. ಆರ್ಚರ್ ಮತ್ತು ಟಂಗ್ ಅವರ ಆರಂಭಿಕ ಸ್ಪೆಲ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳದೆ ಉಳಿದಿದ್ದರೆ, ನಂತರದ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಬಹುದಾಗಿತ್ತು."
"ಮಧ್ಯಮ ಓವರ್‌ಗಳಲ್ಲಿ ಭಾರತ ತಂಡದ ರನ್ ಗಳಿಕೆಯ ವೇಗ ನನಗೆ ಹೆಚ್ಚು ಆತಂಕ ಮೂಡಿಸಿತು. ಮತ್ತೊಂದೆಡೆ, ಇಂಗ್ಲೆಂಡ್ ನಮ್ಮ ಸ್ಪಿನ್ನರ್‌ಗಳಿಗೆ ನಿಗದಿತ ಓವರ್‌ಗಳನ್ನು ಪೂರ್ಣಗೊಳಿಸುವ ಅವಕಾಶವನ್ನೇ ನೀಡಲಿಲ್ಲ. ಆದರೆ, ಈ ಭಾರತ ತಂಡ ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲವಾಗಿದೆ. ನಾವು ಇನ್ನೂ ಭಾರತದ ಸಣ್ಣ ಬೌಂಡರಿಗಳಿರುವ ಪಿಚ್‌ಗಳಲ್ಲಿ ಆಡುತ್ತಿರುವ ರೀತಿಯಲ್ಲೇ ಬ್ಯಾಟ್ ಮಾಡುತ್ತಿದ್ದೇವೆ. ವಿಶ್ವಕಪ್ ಗೆದ್ದ ತಂಡದಿಂದ ಇಂತಹ ಪ್ರದರ್ಶನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ.
IND vs ENG: ಭಾರತ ತಂಡದ ಹೀನಾಯ ಸೋಲಿಗೆ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್!
ಶ್ರೇಯಸ್ ನಾಯಕತ್ವದ ಬಗ್ಗೆ ಸಬಾ ಕರಿಮ್
ಈ ಪಂದ್ಯದಲ್ಲಿ ಭಾರತದ ಪರ ನಾಯಕ ಶ್ರೇಯಸ್ ಅಯ್ಯರ್ 49 ಎಸೆತಗಳಲ್ಲಿ 80 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಇದು ಅಯ್ಯರ್ ದಾಖಲಿಸಿದ ಎರಡನೇ ಅರ್ಧಶತಕವಾಗಿದೆ. ಆದರೆ, ಐಪಿಎಲ್‌ನಲ್ಲಿ ಕಂಡಂತಹ ಚಾಣಾಕ್ಷ ನಾಯಕತ್ವ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸುತ್ತಿಲ್ಲ ಎಂದು ಸಬಾ ಕರಿಮ್ ಅಭಿಪ್ರಾಯಪಟ್ಟಿದ್ದಾರೆ.
"ನಾಯಕನಾಗಿ ಶ್ರೇಯಸ್ ಅಯ್ಯರ್ ತಮ್ಮ ಪ್ರಭಾವವನ್ನು ತೋರಿಸುವ ಸಮಯ ಬಂದಿದೆ ಎಂದು ನಾನು ಭಾಚಿಸುತ್ತೇನೆ. ಐಪಿಎಲ್‌ನಲ್ಲಿ ಅವರಿಂದ ಕಂಡ ತಂತ್ರಗಾರಿಕೆಯ ನಾಯಕತ್ವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಮೂಡಿ ಬಂದಿಲ್ಲ. ಉದಾಹರಣೆಗೆ, ಅವರು ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಂ ದುಬೆ ಅವರನ್ನು ಐದನೇ ಕ್ರಮಾಂಕದಲ್ಲಿ ಕಳುಹಿಸಿದ ನಿರ್ಧಾರ ನನಗೆ ಅರ್ಥವಾಗಲಿಲ್ಲ. ಐಪಿಎಲ್ ಟೂರ್ನಿಯಲ್ಲಿ ನಾವು ನೋಡಿದ ಶ್ರೇಯಸ್ ಅಯ್ಯರ್ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ತಾರ್ಕಿಕವಾಗಿ ನೋಡಿದರೆ, ಐಪಿಎಲ್‌ನಲ್ಲಿ ಅವರು ನಾಯಕನಾಗಿದ್ದರೆ ಶಿವಂ ದುಬೆ ಬದಲು ತಿಲಕ್ ವರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು," ಎಂದು ಸಬಾ ಕರಿಮ್ ಹೇಳಿದ್ದಾರೆ.