ಆರ್‌ಸಿಬಿಗೋಸ್ಕರ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕೇಸ್ ಹಾಕಿದ ನುವಾನ್ ತುಷಾರ!
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಅವಕಾಶ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಶ್ರೀಲಂಕಾ ವೇಗಿ ನುವಾನ್ ತುಷಾರಾ ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ 9ರಂದು ನಡೆಯಲಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ದೂರು ನೀಡಿದ ನವಾನ್ ತುಷಾರ. -
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ನುವಾನ್ ತುಷಾರ ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಸೇರುವ ಅವಕಾಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶೇಷವಾಗಿ ಜಾಶ್ ಹೇಝಲ್‌ವುಡ್ ಆರಂಭಿಕ ಹಂತದಲ್ಲಿ ಫಿಟ್ ಆಗಿರದ ಕಾರಣ, ರಜತ್ ಪಾಟಿದಾರ್ ನೇತೃತ್ವದ ತಂಡಕ್ಕೆ ಈ ಸೀಸನ್‌ನಲ್ಲಿ ತುಷಾರ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿ ‘ನಿಗದಿತ ಫಿಟ್ನೆಸ್ ಮಾನದಂಡಗಳನ್ನು ಪೂರೈಸಿಲ್ಲ’ ಎಂಬ ಕಾರಣ ನೀಡಿ ತುಷಾರಾಗೆ ಎನ್‌ಒಸಿ ನೀಡಲು ನಿರಾಕರಿಸಿದೆ. ಇದೇ ರೀತಿ ಗಾಯ ಸಮಸ್ಯೆಗಳಿಂದ ಬಳಲುತ್ತಿರುವ ಶ್ರೀಲಂಕಾದ ಹಲವು ಆಟಗಾರರಿಗೆ ಈ ವರ್ಷ ಎನ್‌ಒಸಿ ನೀಡಲಾಗಿಲ್ಲ.
ಇದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ 18 ಕೋಟಿ ಮೌಲ್ಯದ ಆಟಗಾರ ಮತೀಶ ಪತಿರಣ ಹಾಗೂ ಸ್ಟಾರ್ ಸ್ಪಿನ್ನರ್ ವಾನಿಂದು ಹಸರಂಗ ಕೂಡ ಸೇರಿದ್ದಾರೆ. ಈ ಇಬ್ಬರೂ 2026ರ ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಈ ಪರಿಸ್ಥಿತಿಯಲ್ಲಿ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಇಶಾನ್ ಮಾಲಿಂಗ ಮತ್ತು ಕಮಿಂದು ಮೆಂಡಿಸ್ ಹೊರತುಪಡಿಸಿ ಇನ್ನೂ ಯಾವುದೇ ಶ್ರೀಲಂಕಾ ಆಟಗಾರರು ತಮ್ಮ ಐಪಿಎಲ್ ತಂಡಗಳಿಗೆ ಇನ್ನೂ ಸೇರ್ಪಡೆಯಾಗಿಲ್ಲ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೋಲಿಗೆ ರಿಷಭ್ ಪಂತ್ ಪ್ರತಿಕ್ರಿಯೆ
ಶ್ರೀಲಂಕಾದ ಮಾಧ್ಯಮ ಸಂಸ್ಥೆ ನ್ಯೂಸ್‌ವೈರ್ ವರದಿ ಪ್ರಕಾರ, ನುವಾನ್ ತುಷಾರ ಅವರು NOC ನಿರಾಕರಣೆ ಕುರಿತು ಶ್ರೀಲಂಕಾ ಕ್ರಿಕೆಟ್ (SLC) ವಿರುದ್ಧ ಕೊಲಂಬೊ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಪ್ರಾಥಮಿಕ ವಿಚಾರಣೆ ಇಂದು (ಗುರುವಾರ) ನಡೆದಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 9ರಂದು ನಿಗದಿಪಡಿಸಲಾಗಿದೆ. 31ರ ವಯಸ್ಸಿನ ತುಷಾರ ಅವರು ಈ ಪ್ರಕರಣದಲ್ಲಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಕಾರ್ಯದರ್ಶಿ ಬಂಡುಲಾ ದಿಸ್ಸಾನಾಯಕೆ, ಖಜಾಂಚಿ ಸುಜೀವ ಗೋಡಲಿಯದ್ದ ಮತ್ತು ಸಿಇಒ ಅಶ್ಲೇ ಡಿ ಸಿಲ್ವಾ ಅವರನ್ನು ಪ್ರತಿವಾದಿಗಳಾಗಿ ಹೆಸರು ನೀಡಿದ್ದಾರೆ.
ತುಷಾರ ಅವರಿಗೆ ಯಾವುದೇ ಗಾಯದ ಸಮಸ್ಯೆ ಇಲ್ಲವೆಂಬುದು ಗಮನಾರ್ಹ. ಆದರೆ, ಅವರ ಫಿಟ್ನೆಸ್ ಮಾನದಂಡಗಳ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ, ತಮ್ಮ ವೃತ್ತಿಜೀವನದ ಅವಧಿಯಲ್ಲೆಲ್ಲಾ ತಮ್ಮ ಫಿಟ್ನೆಸ್ ಮಟ್ಟ ಒಂದೇ ರೀತಿಯಾಗಿ ಉಳಿದಿದೆ ಮತ್ತು ಇದುವರೆಗೆ ಎಂದಿಗೂ ಎನ್‌ಒಸಿ ನಿರಾಕರಿಸಲಿಲ್ಲ ಎಂದು ಆಟಗಾರ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.
IPL 2026: ಲಖನೌ ಸೂಪರ್ ಜಯಂಟ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!
ವರದಿ ಪ್ರಕಾರ, ತುಷಾರ ಅವರ ಕೇಂದ್ರ ಒಪ್ಪಂದವು ಮಾರ್ಚ್ 31ರಂದು ಮುಕ್ತಾಯಗೊಂಡಿದ್ದು, ಅದನ್ನು ನವೀಕರಿಸಲು ಅವರು ಆಸಕ್ತಿ ತೋರಿಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ಉದ್ದೇಶವನ್ನೂ ಅವರು ಎಸ್‌ಎಲ್‌ಸಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ತಾನು ಎನ್‌ಒಸಿ ಪಡೆಯಲು ಅರ್ಹನಾಗಿದ್ದೇನೆ ಎಂದು ನ್ಯಾಯಾಲಯ ಘೋಷಿಸಬೇಕೆಂದು ತುಷಾರ ಮನವಿ ಮಾಡಿದ್ದಾರೆ. ಆದರೆ ಎನ್‌ಒಸಿ ನಿರಾಕರಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅವರ ಒಪ್ಪಂದವನ್ನು ರದ್ದುಪಡಿಸಬಹುದು. ಇದರಿಂದ ಅವರಿಗೆ ಒಪ್ಪಂದದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.
IPL 2026: ʻಇವರಿಂದಲೇ ನಾವು ಸೋಲಬೇಕಾಯಿತುʼ-ಸಿಎಸ್‌ಕೆ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಋತುರಾಜ್ ಗಾಯಕ್ವಾಡ್!
ಶ್ರೀಲಂಕಾ ವೇಗದ ಬೌಲರ್ ಅನ್ನು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 1.60 ಕೋಟಿ ರು ಗಳಿಗೆ ಖರೀದಿಸಿತ್ತು. ಅವರು ಚಾಂಪಿಯನ್ ಪಟ್ಟ ಗೆದ್ದ ತಂಡದ ಭಾಗವಾಗಿದ್ದರೂ, ಕೇವಲ ಒಂದು ಪಂದ್ಯದಲ್ಲೇ ಆಡಲು ಅವಕಾಶ ಪಡೆದಿದ್ದರು. ಇದಕ್ಕೂ ಮುನ್ನ, ಅವರು 2024ರಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಭಾಗವಾಗಿದ್ದರು. ಐದು ಬಾರಿ ಚಾಂಪಿಯನ್ ಪರ ಅವರು ಏಳು ಪಂದ್ಯಗಳಲ್ಲಿ ಆಡಿದ್ದು, ಎಂಟು ವಿಕೆಟ್‌ಗಳನ್ನು ಪಡೆದಿದ್ದರು.