ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ ಟ್ರೋಫಿ ಕೇವಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದ ಕೀರ್ತಿ ಆಜಾದ್‌ಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ಭಾರತ ಕ್ರಿಕೆಟ್‌ ತಂಡ ಯಾವಾಗಲೂ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ, ಮಸೀದಿ ಹಾಗೂ ಚರ್ಚ್‌ಗೆ ಏಕೆ ಭೇಟಿ ನೀಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದ 1983ರ ವಿಶ್ವಕಪ್‌ ವಿಜೇತ ಕೀರ್ತಿ ಆಜಾದ್‌ ಅವರ ಆರೋಪಕ್ಕೆ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಭಾರತ ತಂಡ ಟ್ರೋಫಿಯನ್ನು ತೆಗೆದುಕೊಂಡು ದೇವಾಸ್ಥಾನಕ್ಕೆ ತೆರಳಿತ್ತು. ಇದು ಕೀರ್ತಿ ಆಜಾದ್‌ಗೆ ಇಷ್ಟವಾಗಲಿಲ್ಲ.

ʻಧರ್ಮದ ಲೇಪನ ಬೇಡʼ: ಕೀರ್ತಿ ಆಜಾದ್‌ಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ಕೀರ್ತಿ ಆಜಾದ್‌ ಧಾರ್ಮಿಕ ಆರೋಪಕ್ಕೆ ಹರ್ಭಜನ್‌ ತಿರುಗೇಟು. -

Profile
Ramesh Kote Mar 10, 2026 10:21 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡ (India) ಟ್ರೋಫಿ ಗೆದ್ದಾಗ ಯಾವಾಗಲೂ ದೇವಸ್ಥಾನಕ್ಕೆ ಏಕೆ ಭೇಟಿ ನೀಡುತ್ತದೆ ಎಂದು ಪ್ರಶ್ನೆ ಮಾಡಿದ 1983ರ ವಿಶ್ವಕಪ್‌ ವಿಜೇತ ಆಟಗಾರ ಕೀರ್ತಿ ಆಜಾದ್‌ (Kirti Azad) ಆರೋಪಕ್ಕೆ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ (Harbhajan Singh) ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಆಟಗಾರನ ಹೇಳಿಕೆಯನ್ನು ಭಜ್ಜಿ ಖಂಡಿಸಿದ್ದಾರೆ ಹಾಗೂ ಭಾರತ ತಂಡದ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಪ್ರತಿ ಸಲ ಟ್ರೋಫಿ ಗೆದ್ದಾಗ ಕೇವಲ ದೇವಸ್ಥಾನಕ್ಕೆ ಮಾತ್ರ ಭೇಟಿ ನೀಡುತ್ತದೆ, ಅದು ಬಿಟ್ಟು ಚರ್ಚ್‌, ಮಸೀದಿ ಅಥವಾ ಗುರುದ್ವಾರಕ್ಕೆ ಏಕೆ ಭೇಟಿ ನೀಡುವುದಿಲ್ಲ ಎಂದು ಆಜಾದ್‌ ಎಕ್ಸ್‌ ಖಾತೆಯಲ್ಲಿ ಟೀಮ್‌ ಇಂಡಿಯಾವನ್ನು ಪ್ರಶ್ನೆ ಮಾಡಿದ್ದರು.

ವಿಶ್ವಕಪ್‌ ಅಥವಾ ಯಾವುದೇ ಟ್ರೋಫಿಯು ಕೇವಲ ಒಂದು ಧರ್ಮಕ್ಕೆ ಸೇರಿದ್ದಲ್ಲ, ತಂಡದಲ್ಲಿ ಕೇವಲ ಹಿಂದೂಗಳು ಮಾತ್ರ ಆಡುತ್ತಿಲ್ಲ, ಮುಸ್ಲಿಂ, ಕ್ರೈಸ್ತ, ಸಿಖ್‌ ಸೇರಿದಂತೆ ಎಲ್ಲಾ ಧರ್ಮದವರೂ ಇದ್ದಾರೆ. ಹಾಗಾಗಿ ಭಾರತ ತಂಡ ಗೆದ್ದ ಟ್ರೋಫಿ ಕೇವಲ ಒಂದು ಧರ್ಮಕ್ಕೆ ಸೇರಿದ್ದಲ್ಲ, ಅದು ಭಾರತದ 1.4 ಬಿಲಿಯನ್‌ ಜನತೆಗೆ ಸೇರಿದೆ ಎಂದು ಹೇಳಿದ ಅವರು, ಟ್ರೋಫಿಯನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸುವುದು ಒಳ್ಳೆಯದಲ್ಲ ಎಂದರು. ಆಜಾದ್‌ ಅವರ ಎಕ್ಸ್‌ ಖಾತೆಯ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಹರ್ಭಜನ್‌ ಸಿಂಗ್‌ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ನೀವು ರಾಜಕೀಯ ಮಾಡಬೇಡಿ ಎಂದ ಹರ್ಭಜನ್‌ ಸಿಂಗ್‌

“ಇದನ್ನು ರಾಜಕೀಯವಾಗಿ ಬಳಸಲು ಅವರು (ಕೀರ್ತಿ ಆಜಾದ್) ಪ್ರಯತ್ನಿಸುತ್ತಿರುವುದು ಅಸಂಬದ್ಧವಾಗಿದೆ. ಭಾರತ ತಂಡ ಟ್ರೋಫಿಯನ್ನು ದೇವಾಲಯಕ್ಕೆ, ಮಸೀದಿಗೆ, ಚರ್ಚ್‌ಗೆ — ಅವರಿಗೆ ಇಷ್ಟ ಬಂದ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು. ಅವರು ತಮ್ಮ ದೇವರಿಗೆ ಏನಾದರೂ ಪ್ರಾರ್ಥಿಸಿ, ತಮ್ಮ ಮನೋಭಿಲಾಷೆ ಈಡೇರಿದ ನಂತರ ತಮ್ಮ ನಂಬಿಕೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದರೆ, ಅದರಲ್ಲಿ ಸಮಸ್ಯೆ ಏನು?” ಎಂದು ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.



“ಸಹ ಆಟಗಾರರಿಂದ ಇಂತಹ ಮಾತುಗಳನ್ನು ಕೇಳುವುದು ದುಃಖಕರವಾಗಿದೆ. ಬಹುಶಃ ಅವರು ಕ್ರೀಡೆಗಿಂತ ರಾಜಕೀಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವಂತೆ ಕಾಣುತ್ತದೆ. ಅವರು ಒಬ್ಬ ಕ್ರೀಡಾಪಟುವಾಗಿರುವುದು ಇನ್ನೂ ಹೆಚ್ಚು ವಿಷಾದಕರವಾಗಿದೆ. ನಮ್ಮ ದೇಶ ವಿಶ್ವಕಪ್ ಗೆದ್ದಿದೆ. ಸಂತೋಷಪಡಬೇಕು, ಸಂಭ್ರಮಿಸಬೇಕು. ಆದರೆ ನೀವು ರಾಜಕೀಯ ಮಾಡುವುದರಲ್ಲಿ ತೊಡಗಿದ್ದೀರಿ. ನಮ್ಮ ನಂಬಿಕೆಯ ಪ್ರಕಾರ ಎಲ್ಲ ಧರ್ಮಗಳೂ ಒಂದೇ. ದೇವರುಗಳು ಬೇರೆ-ಬೇರೆ ಇರಬಹುದು, ಆದರೆ ಮಾರ್ಗ ಒಂದೇ. ಅವರು ದೇವಾಲಯಕ್ಕೆ ಹೋಗಿರಲಿ, ಮಸೀದಿಗೆ ಹೋಗಿರಲಿ ಅಥವಾ ಚರ್ಚ್‌ಗೆ ಹೋಗಿರಲಿ — ಅರ್ಥ ಒಂದೇ. ಅದು ಅವರ ನಂಬಿಕೆ. ಅದನ್ನು ಪ್ರಶ್ನಿಸುವ ಅಗತ್ಯವೇ ಇಲ್ಲ,” ಎಂದು ಸ್ಪಿನ್‌ ದಿಗ್ಗಜ ಕಿಡಿಕಾರಿದ್ದಾರೆ.



ಕೀರ್ತಿ ಆಜಾದ್‌ ಸ್ಪಷ್ಟವಾಗಿ ಏನು ಹೇಳಿದ್ದರು?

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಆದ ಬಳಿಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ಅಹಮದಾಬಾದ್‌ನ ಹನುಮಾನ್‌ ದೇವಾಸ್ಥಾನಕ್ಕೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿತ್ತು. ಈ ವಿಡಿಯೊಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಇದನ್ನು ಗಮನಿಸಿದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌, ಭಾರತ ತಂಡದ ನಡೆಯನ್ನು ಖಂಡಿಸಿದರು. ಭಾರತ ತಂಡ ಯಾವಾಗಲೂ ಹಿಂದೂ ದೇವಾಸ್ಥಾನಕ್ಕೆ ಏಕೆ ತೆರಳುತ್ತೆ? ಅಥವಾ ಚರ್ಚ್‌ ಅಥವಾ ಮಸೀದಿಗೆ ಏಕೆ ಭೇಟಿ ನೀಡಲ್ಲ ಎಂದು ಪ್ರಶ್ನೆ ಮಾಡಿದ್ದರು.



ʻಭಾರತ ತಂಡಕ್ಕೆ ನಾಚಿಕೆಯಾಗಬೇಕುʼ

"1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ ಚೊಚ್ಚಲ ವಿಶ್ವಕಪ್‌ ಗೆದ್ದಾಗ, ತಂಡದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಹಾಗೂ ಸಿಖ್‌ ಧರ್ಮದವರು ಇದ್ದರು. ಟ್ರೋಫಿಯೊಂದಿಗೆ ನಾವು ನಮ್ಮ ಜನ್ಮ ಸ್ಥಳ, ತವರು ನೆಲ ಭಾರತ ಹಿಂದೂಸ್ಥಾನಕ್ಕೆ ಮರಳಿದ್ದೆವು. ಆದರೆ, ಈಗಿನ ಭಾರತ ತಂಡ ಏನು ಮಾಡಲು ಹೋರಟಿದೆ? ಮಸೀದಿಗೆ ಏಕೆ ಹೋಗುತ್ತಿಲ್ಲ? ಚರ್ಚ್‌ಗೆ ಏಕೆ ಹೋಗುತ್ತಿಲ್ಲ? ಗುರುದ್ವಾರಕ್ಕೆ ಏಕೆ ತೆರಳುತ್ತಿಲ್ಲ? ಈ ತಂಡ ಭಾರತವನ್ನು ಪ್ರತಿನಿಧಿಸುತ್ತಿದೆ-ಸೂರ್ಯಕುಮಾರ್‌ ಯಾದವ್‌ ಅವರನ್ನು ಅಲ್ಲ ಅಥವಾ ಜಯ ಶಾ ಕುಟುಂಬವನ್ನು ಅಲ್ಲ."

"ಮೊಹಮ್ಮದ್‌ ಸಿರಾಜ್‌ ಮಸೀದಿಗೆ ಹೋಗಿದ್ದನ್ನು ನಾನು ನೋಡಿಲ್ಲ. ಸಂಜು ಸ್ಯಾಮ್ಸನ್‌ ಟ್ರೋಫಿಯನ್ನು ಚರ್ಚ್‌ಗೆ ತೆಗೆದುಕೊಂಡು ಹೋಗಿಲ್ಲ. ಇವರು ಭಾರತದ ಗೆಲುವಿನ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೆದ್ದಿರುವ ಈ ಟ್ರೋಫಿ ದೇಶದ 1.4 ಶತಕೋಟಿ ಜನತೆಗೆ ಸೇರಿದೆಯೇ ವಿನಹಃ, ಕೇವಲ ಒಂದು ಧರ್ಮಕ್ಕೆ ಸೇರಿಲ್ಲ," ಎಂದು ಕೀರ್ತಿ ಆಜಾದ್‌ ಎಕ್ಸ್‌ ಖಾತೆಯಲ್ಲಿ ಸಿಡಿದಿದ್ದಾರೆ.