IPL 2025: ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿದ ಯಶ್ ದಯಾಳ್ ತಂದೆ
ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲೇ ನಡೆದಿದ್ದ ಚೆನ್ನೈ ಮತ್ತು ಆರ್‌ಸಿಬಿ ನಡುವಣ ಪಂದ್ಯದಲ್ಲಿ ಯಶ್ ದಯಾಳ್ ಅವರು ಧೋನಿ ಮತ್ತು ಜಡೇಜಾರನ್ನು ನಿಯಂತ್ರಿಸಿ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ಅವರು ಧೋನಿ ಮತ್ತು ಜಡೇಜಾ ಮುಂದೆ ಮ್ಯಾಜಿಕ್ ಪ್ರದರ್ಶಿಸಿ ಆರ್‌ಸಿಗೆ ಗೆಲುವು ತಂದುಕೊಟ್ಟರು.


ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಧ್ಯಮ ವೇಗಿ ಯಶ್ ದಯಾಳ್(Yash Dayal) ಅವರ ತಂದೆ ಚಂದ್ರಪಾಲ್ ದಯಾಳ್(Chanderpal Dayal) ತಮ್ಮ ಮಗನ ವೃತ್ತಿಜೀವನವನ್ನು ಪರಿವರ್ತಿಸಿದ್ದಕ್ಕಾಗಿ ವಿರಾಟ್ ಕೊಹ್ಲಿ(Virat Kohli)ಗೆ ಧನ್ಯವಾದ ಅರ್ಪಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಅಂತಿಮ ಓವರ್‌ನಲ್ಲಿ 16 ರನ್‌ಗಳನ್ನು ಯಶಸ್ವಿಯಾಗಿ ತಡೆದು ನಿಲ್ಲಿಸಿ ಆರ್‌ಸಿಬಿಗೆ ಎರಡು ರನ್‌ಗಳ ರೋಚಕ ಗೆಲುವು ದಾಖಲಿಸಿಕೊಟ್ಟ ಯಶ್ ದಯಾಳ್ ಪಂದ್ಯದ ಹೀರೋ ಆಗಿ ಮೆರೆದಿದ್ದರು. ಅವರ ಈ ಸಾಧನೆಗೆ ತಂಡದ ನಾಯಕ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. ಮಗನ ಈ ಸಾಧನೆ ಕಂಡು ಭಾವುಕರಾದ ಚಂದ್ರಪಾಲ್, ಮಗನ ವೃತ್ತಿಜೀವನವನ್ನು ಪರಿವರ್ತಿಸಿದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ ಎಂದರು.
2023ರ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರನಾಗಿದ್ದ ಯಶ್ ದಯಾಳ್ ಅವರ ಒಂದೇ ಓವರ್‌ನಲ್ಲಿ ಕೆಕೆಆರ್‌ನ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಅಂದು ಸಿಕ್ಸರ್ ಬಾರಿಸಿದ ರಿಂಕು ಖ್ಯಾತಿ ವಿಶ್ವಕ್ಕೆ ಪರಿಚಯವಾಗಿ ಅವರು ಭಾರತ ತಂಡದ ಪರ ಆಡುವಂತೆ ಮಾಡಿತ್ತು.
ಸಿಕ್ಸರ್ ಹೊಡೆಸಿಕೊಂಡಿದ್ದ ದಯಾಳ್ ಅವರ ಐಪಿಎಲ್ ವೃತ್ತಿ ಜೀವನವೇ ಮುಗಿಯಿತು ಎನ್ನಲಾಗಿತ್ತು. ಗುಜರಾತ್ ಕೂಡ ಮುಂದಿನ ಆವೃತ್ತಿಗೆ ಮುನ್ನ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಆರ್‌ಸಿಬಿ ತಂಡ ಹರಾಜಿನಲ್ಲಿ ಯಶ್ ದಯಾಳ್ ಅವರನ್ನು 5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಈ ವೇಳೆ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಯಶ್ ದಯಾಳ್ ಅವರನ್ನು ಖರೀದಿಸಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಅದೇ ಯಶ್ ದಯಾಳ್ ಇದೀಗ ಆರ್‌ಸಿಬಿಯ ಮ್ಯಾಚ್ ವಿನ್ನಿಂಗ್ ಆಟಗಾರನಾಗಿ ಅಭಿಮಾನಿಗಳ ಪಾಲಿಗೆ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.
ಮಗನ ಈ ಸಾಧನೆಗೆ ವಿರಾಟ್ ಕೊಹ್ಲಿ ನೀಡಿದ ಬೆಂಬಲ ಕಾರಣ ಎಂದು ಚಂದ್ರಪಾಲ್ ದಯಾಳ್ ಹೇಳಿದ್ದಾರೆ. ಇದೇ ಕಾರಣಕ್ಕೆ ಅವರು ಕೊಹ್ಲಿಗೆ ಧನ್ಯವಾದ ತಿಳಿಸಿದರು. ಮೊಹಮ್ಮದ್ ಸಿರಾಜ್ ಎಂಬ ಬೌಲಿಂಗ್ ಪ್ರತಿಭೆ ಭಾರತ ತಂಡಕ್ಕೆ ಸಿಗುವಲ್ಲಿಯೂ ವಿರಾಟ್ ಕೊಹ್ಲಿ ಪಾತ್ರ ಮಹತ್ವದಾಗಿದೆ. ಈ ಋಣವನ್ನು ಸಿರಾಜ್ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ IPL 2025: ಮ್ಯಾಕ್ಸ್‌ವೆಲ್ ಬದಲಿಗೆ ಪಂಜಾಬ್ ಕಿಂಗ್ಸ್ ಸೇರಿದ ಮಿಚೆಲ್ ಓವನ್
ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲೇ ನಡೆದಿದ್ದ ಚೆನ್ನೈ ಮತ್ತು ಆರ್‌ಸಿಬಿ ನಡುವಣ ಪಂದ್ಯದಲ್ಲಿ ಯಶ್ ದಯಾಳ್ ಅವರು ಧೋನಿ ಮತ್ತು ಜಡೇಜಾರನ್ನು ನಿಯಂತ್ರಿಸಿ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ಅವರು ಧೋನಿ ಮತ್ತು ಜಡೇಜಾ ಮುಂದೆ ಮ್ಯಾಜಿಕ್ ಪ್ರದರ್ಶಿಸಿ ಆರ್‌ಸಿಗೆ ಗೆಲುವು ತಂದುಕೊಟ್ಟರು.