ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ; ಆತನ ಛಲಕ್ಕೆ ಮನಸೋತು ಶೂ ಉಡುಗೊರೆ ನೀಡಿದ ಎಸ್‌ಪಿ

Viral Video: ಬಡತನವನ್ನೇ ಹಾಸು ಹೊದ್ದ ಯುವಕನೊಬ್ಬ ಸ್ಟೇಟ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಮೈದಾನಕ್ಕೆ ಚಪ್ಪಲಿ ಧರಿಸಿ ಬಂದಿದ್ದಾನೆ. ಬ್ರ್ಯಾಂಡೆಡ್‌ ಶೂ ಖರೀದಿಸಲು ಹಣವಿಲ್ಲದ ಕಾರಣ ಚಪ್ಪಲಿ ಧರಿಸಿ ಬಂದಿದ್ದಾಗಿ ಅವನು ತಿಳಿಸಿದ್ದಾನೆ. ಆತನ ಮನಮಿಡಿಯುವ ಕಥೆ ಕೇಳಿ ಎಸ್‌ಆರ್‌ಪಿಎಫ್‌ನ ಎಸ್‌ಪಿ ಶೂ ಉಡುಗೊರೆಯಾಗಿ ನೀಡಿದರು.

ಚಪ್ಪಲಿ ಧರಿಸಿ ಪೊಲೀಸ್ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವಕ

ತಿನ್‌ ಚೌರೆಗೆ ಶೂ ಉಡುಗೊರೆಯಾಗಿ ನೀಡಿದ ಎಸ್‌ಆರ್‌ಪಿಎಫ್‌ನ ಎಸ್‌ಪಿ ವಿಕ್ರಮ್ ಸಾಲಿ -

Ramesh Ballamoole
Ramesh Ballamoole Apr 19, 2026 10:11 PM

ಮುಂಬೈ, ಏ. 19: ಸಾಧಿಸುವ ಛಲ ಇದ್ದರೆ, ಕಂಡ ಕನಸು ನನಸಾಗಿಸಬೇಕು ಎನ್ನುವ ಹಠ ಇದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಅದೃಷ್ಟಕ್ಕಿಂತ ಪರಿಶ್ರಮದಲ್ಲಿ ನಂಬಿಕೆ ಇಟ್ಟ ಯುವಕೊಬ್ಬನ ಸಾಹಸಗಾಥೆ ಇದು. ಹೇಗಾದರೂ ಸರಿ ಪೊಲೀಸ್‌ ಆಗಲೇ ಬೇಕು ಎನ್ನುವ ದೃಢ ಸಂಕಲ್ಪ ತೊಟ್ಟ, ಬಡತನವನ್ನೇ ಹಾಸು ಹೊದ್ದ ಯುವಕನೊಬ್ಬ ಸ್ಟೇಟ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (SRPF) ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಮೈದಾನಕ್ಕೆ ಚಪ್ಪಲಿ ಧರಿಸಿ ಬಂದಿದ್ದಾನೆ. ಬ್ರ್ಯಾಂಡೆಡ್‌ ಶೂ ಖರೀದಿಸಲು ಹಣವಿಲ್ಲದ ಕಾರಣ ಚಪ್ಪಲಿ ಧರಿಸಿ ಬಂದಿದ್ದಾಗಿ ಅವನು ತಿಳಿಸಿದ್ದಾನೆ. ಅಷ್ಟೇ ಅಲ್ಲದೆ ಅಭ್ಯಾಸದ ವೇಳೆ 5 ಕಿ.ಮೀ. ದೂರವನ್ನು ಕೇವಲ 18 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾನೆ. ಆತನ ಸಾಹಸ ಮೆಚ್ಚಿ ಎಸ್‌ಆರ್‌ಪಿಎಫ್‌ನ ಎಸ್‌ಪಿ ವಿಕ್ರಮ್ ಸಾಲಿ ಹೊಸ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ದೇಶ ಗಮನ ಸೆಳೆದ ಯುವಕನೇ ಮಹಾರಾಷ್ಟ್ರದ ಅಕೋಲಾದ ಯುವಕ ನಿತಿನ್‌ ಚೌರೆ (Nitin Chaure). ಆತನ ಸಾಹಸಗಾಥೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಎಸ್‌ಆರ್‌ಪಿಎಫ್‌ ಪೊಲೀಸ್ ನೇಮಕಾತಿ ಮೈದಾನ ಈ ವಿಶಿಷ್ಟ ಘಟನೆಗೆ ಸಾಕ್ಷಿಯಾಯಿತು.

ಘಟನೆಯ ವಿಡಿಯೊ:

ಘಟನೆ ವಿವರ

ಖಾಕಿ ಸಮವಸ್ತ್ರದ ಕನಸನ್ನು ಕಣ್ಣಲ್ಲಿ ಇಟ್ಟುಕೊಂಡು ನೂರಾರು ಯುವಕರು ನೇಮಕಾತಿಗಾಗಿ ಛತ್ರಪತಿ ಸಂಭಾಜಿನಗರದ ಮೈದಾನಕ್ಕೆ ಆಗಮಿಸಿದ್ದರು. ನೇಮಕಾತಿ ಪರೀಕ್ಷೆಗೆ ಬಂದ ಬಹುತೇಕರು ಬ್ರ್ಯಾಂಡೆಡ್‌ ದುಬಾರಿ ಶೂಗಳನ್ನು ಧರಿಸಿದ್ದರು. ಈ ಪೈಕಿ ನಿತಿನ್‌ ಕಾಲಲ್ಲಿ ಮಾತ್ರ ಹಳೆಯ ಚಪ್ಪಲಿ ಇತ್ತು. ನೇಮಕಾತಿ ವೇಳೆ ಓಟಕ್ಕೆ ಶೂ ಅತ್ಯಗತ್ಯವಾಗಿದ್ದರೂ ನಿತಿನ್‌ ಬಳಿ ಖರೀದಿಸುವಷ್ಟು ಹಣ ಇರಲಿಲ್ಲ. ಆದರೆ ತಾನು ಖಾಕಿ ಧರಿಸಬೇಕು ಎನ್ನುವ ಆತನ ಕನಸು ಮಾತ್ರ ಇದರಿಂದೆಲ್ಲ ವಿಚಲಿತವಾಗಲೇ ಇಲ್ಲ. ಆತನ ಗುರಿ ಇದ್ದಿದ್ದು ಪೊಲೀಸ್‌ ಆಗಬೇಕು ಎನ್ನುವುದು ಮಾತ್ರವಾಗಿತ್ತು.

ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಲು ಬಂದ ಎಸ್‌ಆರ್‌ಪಿಎಫ್‌ನ ಎಸ್‌ಪಿ ವಿಕ್ರಮ್ ಸಾಲಿ ನಿತಿನ್‌ನನ್ನು ಗಮನಿಸಿದರು. ಅವನನ್ನು ಹತ್ತಿರ ಕರೆದ “ನೀವು ಶೂ ಧರಿಸದೆ ಏಕೆ ಬಂದಿದ್ದೀರಿ. ಚಪ್ಪಲಿ ಧರಿಸಿ 5 ಕಿಲೋ ಮೀಟರ್ ಓಡುವುದು ಸಾಧ್ಯವಾ?" ಎಂದು ಕೇಳಿದರು.

ಈ ವೇಳೆ ನಿತಿನ್‌ ತನ್ನ ಮನೆಯ ಪರಿಸ್ಥಿತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ. ಎರಡು ಬಾರಿ ಊಟ ಮಾಡುವುದೇ ಕಷ್ಟವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಅಭ್ಯಾಸಕ್ಕಾಗಿ ಶೂಗಳನ್ನು ಖರೀದಿಸುವುದು ದೂರದ ಮಾತಾಗಿತ್ತು ಎಂದು ವಿವರಿಸಿದ. ಇದು ಎಸ್‌ಪಿ ವಿಕ್ರಮ್ ಸಾಲಿ ಅವರ ಮನಸ್ಸಿಗೆ ನಾಟಿತು. ಕೂಡಲೇ ಹೊಸ ಶೂ ತರಿಸಿ ಅವನಿಗೆ ನೀಡಿದರು. ಆಗ ನಿತಿನ್‌ನ ಕಣ್ಣಲ್ಲಿ ಹೊಳೆದ ಬೆಳಕು, ಸಂತಸ ಸ್ವತಃ ವಿಕ್ರಮ್‌ ಅವರನ್ನೇ ಭಾವಕರನ್ನಾಗಿಸಿತು.

ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡಿದ್ದರೂ ಛಲ ಬಿಡದೆ ಕಾಲಿನಲ್ಲೇ 10ನೇ ತರಗತಿ ಪರೀಕ್ಷೆ ಬರೆದ ದಿಟ್ಟೆ

ನಿತಿನ್‌ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ನಿತಿನ್‌, ʼʼನನ್ನ ಬಳಿ ಶೂ ಇರಲಿಲ್ಲ. ಹೀಗಾಗಿ ನಾನು ಚಪ್ಪಲಿ ಧರಿಸಿ ಓಡುತ್ತಿದ್ದೆ. ವಿಕ್ರಮ್ ಸಾಲಿ ನನ್ನ ಪರಿಶ್ರಮ ಗುರುತಿಸಿದರು. ಹೀಗಾಗಿ ಹೊಸ ಶೂ ನೀಡಿದರು. ಅವರಿಗೆ ಚಿರಋಣಿ. ಪೊಲೀಸ್‌ ಆಗಬೇಕು ಎನ್ನುವ ನನ್ನ ಕನಸನ್ನು ಒಂದಲ್ಲ ಒಂದು ನನಸಾಗಿಸುತ್ತೇನೆʼʼ ಎಂದು ತಿಳಿಸಿದ್ದಾರೆ. ಸದ್ಯ ಈ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಇನ್ನಷ್ಟು ವೈರಲ್‌ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.