ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಾಕಿಂಗ್‌; ರೋಗಿಯ ಕತ್ತರಿಸಿದ ಕಾಲನ್ನು ಹೊತ್ತು ಬೀದಿಗಳಲ್ಲಿ ಅಲೆದಾಡಿದ ನಾಯಿ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಚಮಿಯಾನಾದಲ್ಲಿರುವ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್ ಆಸ್ಪತ್ರೆಯಲ್ಲಿ ನಡೆದ ಭಾರಿನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಕತ್ತರಿಸಲಾದ 61 ವರ್ಷದ ರೋಗಿಯ ಕಾಲನ್ನು ನಿಯಮಾನುಸಾರ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾಗಿದ್ದರೂ, ಅದನ್ನು ಸರಿಯಾಗಿ ಸಂಗ್ರಹಿಸದೆ ಸ್ಟೋರ್ ರೂಂನಲ್ಲಿ ಇಡಲಾಗಿತ್ತು. ಸ್ಟೋರ್ ರೂಂ ಬಾಗಿಲು ಲಾಕ್ ಮಾಡದ ಕಾರಣ ಬೀದಿ ನಾಯಿಯೊಂದು ಒಳನುಗ್ಗಿ, ಕತ್ತರಿಸಿದ ಕಾಲನ್ನು ಕಚ್ಚಿಕೊಂಡು ಆಸ್ಪತ್ರೆ ಹೊರಭಾಗದಲ್ಲಿ ಓಡಾಡಿದ ದೃಶ್ಯ ವೈರಲ್ ಆಗಿದೆ.

ಆಸ್ಪತ್ರೆಗೆ ನುಗ್ಗಿ ರೋಗಿಯ ಕಾಲು ಹೊತ್ತೊಯ್ದ ನಾಯಿ!

ಕಾಲು ಹೊತ್ತೊಯ್ದ ನಾಯಿ -

Profile
Sushmitha Jain Feb 25, 2026 6:46 PM

ಶಿಮ್ಲಾ, ಫೆ. 25: ಹಿಮಾಚಲ ಪ್ರದೇಶದ (Himachal Pradesh) ರಾಜಧಾನಿ ಶಿಮ್ಲಾದಲ್ಲಿ (Shimla) ಮಾನವೀಯತೆ ಮತ್ತು ವೈದ್ಯಕೀಯ ಶಿಷ್ಟಾಚಾರವನ್ನೇ ನಾಚಿಸುವಂತಹ ಘಟನೆ ನಡೆದಿದೆ. ಇಲ್ಲಿನ ಪ್ರಖ್ಯಾತ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬೀದಿ ನಾಯಿಯೊಂದು ಮನುಷ್ಯನ ಕತ್ತರಿಸಿದ ಕಾಲನ್ನು ಬಾಯಲ್ಲಿ ಕಚ್ಚಿಕೊಂಡು ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ಇದು ಆಸ್ಪತ್ರೆಯ ಆಡಳಿತ ಮಂಡಳಿಯ ಅಕ್ಷಮ್ಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.

ಶಿಮ್ಲಾದ ಚಮಿಯಾನಾ (Chamiyana)ದಲ್ಲಿರುವ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್ ಆಸ್ಪತ್ರೆಯಲ್ಲಿ (Atal Institute of Medical Super Specialities Hospital) ಈ ಘಟನೆ ನಡೆದಿದೆ. ತನಿಖೆಯ ಪ್ರಕಾರ 61 ವರ್ಷದ ರೋಗಿ ಅತ್ತರ್ ಸಿಂಗ್ (Attar Singh) ಎಂಬವವರು ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಗುರುವಾರ (ಫೆಬ್ರವರಿ 19) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಅವರ ಒಂದು ಕಾಲನ್ನು ಕತ್ತರಿಸಿ (Amputation) ತೆಗೆದಿದ್ದರು. ನಿಯಮದ ಪ್ರಕಾರ, ಇಂತಹ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ವಿಲೇವಾರಿ ಮಾಡಬೇಕಿತ್ತು.

ಜಾರ್ಖಂಡ್ ಮಾಜಿ ಸಿಎಂ ಮೊಮ್ಮಗ ಮನಾಲಿಯಲ್ಲಿ ನಿಗೂಢ ಸಾವು! ಸೊರೆನ್ ಕುಟುಂಬದಲ್ಲಿ ಮಡುಗಟ್ಟಿದ ದುಃಖ

ನಿರ್ಲಕ್ಷ್ಯದ ಪರಾಕಾಷ್ಠೆ

ಕತ್ತರಿಸಿದ ಅತ್ತರ್ ಸಿಂಗ್ ಅವರ ಕಾಲನ್ನು ಕೇವಲ ಒಂದು ಕಾಗದದ ಲಕೋಟೆಯಲ್ಲಿ ಸುತ್ತಿ ಆಸ್ಪತ್ರೆಯ ಸ್ಟೋರ್ ರೂಂನಲ್ಲಿ ಇರಿಸಲಾಗಿತ್ತು. ಫೆಬ್ರವರಿ 22ರಂದು ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಸ್ಟೋರ್ ರೂಂನ ಬಾಗಿಲನ್ನು ಲಾಕ್ ಮಾಡಲು ಮರೆತಿದ್ದಾನೆ. ಬಾಗಿಲು ತೆರೆದಿರುವುದನ್ನು ಗಮನಿಸಿದ ಬೀದಿ ನಾಯಿಯೊಂದು ಸುಲಭವಾಗಿ ಸ್ಟೋರ್ ರೂಂ ಒಳಗೆ ನುಗ್ಗಿ, ಅಲ್ಲಿಟ್ಟಿದ್ದ ಕಾಲನ್ನು ಕಚ್ಚಿಕೊಂಡು ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಓಡಾಡಿದೆ.

ವೈರಲ್ ವಿಡಿಯೊ, ಕ್ರಮ

ಆಸ್ಪತ್ರೆಯ ಹೊರಗೆ ನಾಯಿ ಈ ರೀತಿ ಕಾಲನ್ನು ಹೊತ್ತೊಯ್ಯುವುದನ್ನು ಕಂಡು ದಾರಿಹೋಕರು ಆಘಾತಕ್ಕೊಳಗಾಗಿದ್ದಾರೆ. ಈ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆಯೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಇಷ್ಟು ದೊಡ್ಡ ಮಟ್ಟದ ಭದ್ರತಾ ಲೋಪ ಮತ್ತು ನೈರ್ಮಲ್ಯದ ಕೊರತೆ ಇರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯು ನೈರ್ಮಲ್ಯದ ಜವಾಬ್ದಾರಿ ಹೊತ್ತಿದ್ದ ಸೂಪರ್‌ವೈಸರ್ ಮತ್ತು ಪೌರಕಾರ್ಮಿಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವ ಏಜೆನ್ಸಿಯ ವಿರುದ್ಧವೂ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.