ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ನನ್ನ ಪ್ರಾಕ್ಟೀಸಿನಲ್ಲಿ ದಿನಕ್ಕೊಮ್ಮೆಯಾದರೂ ಕೇಳಿ ಬರುವ ಅತಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಡೈಲಾಗ್ ಇದು: ರಕ್ತಪರೀಕ್ಷೆಯ ವರದಿಯನ್ನು ನನ್ನ ಮುಂದಿಟ್ಟು, ಮುಖದಲ್ಲಿ ಒಂದು ವಿಜಯದ ನಗೆ ಬೀರುತ್ತಾ ಹೇಳ್ತಾರೆ ‘ನೋಡಿ ಡಾಕ್ಟ್ರೇ, ನನಗೇನೂ ಶುಗರ್ ಇಲ್ಲ! ರಿಪೋರ್ಟ್‌ ನಲ್ಲಿ ಶುಗರ್ ಬರೀ ‘ಬಾರ್ಡರ್’ನಲ್ಲಿದೆ ಅಂತ ಲ್ಯಾಬ್‌ನವರು ಹೇಳಿದ್ರು

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

-

Profile
Ashok Nayak Jun 21, 2026 2:21 PM

ಡಾ.ಶಶಿಕಿರಣ್ ಉಮಾಕಾಂತ್

ಪ್ರಿ ಡಯಾಬಿಟಿಸ್ ಸ್ಥಿತಿ ಎಂದರೆ, ಉತ್ತಮ ಆಹಾರ ಮತ್ತು ವ್ಯಾಯಾಮವೆಂಬ ಸರಳ ಅಸ್ತ್ರ ಬಳಸಿ, ಡಯಾಬಿಟಿಸ್‌ನಿಂದ ಪೂರ್ತಿ ದೂರವಾಗಲು ಅವಕಾಶ ದೊರಕುವ ಒಂದು ಸ್ಥಿತಿ.

ನನ್ನ ಪ್ರಾಕ್ಟೀಸಿನಲ್ಲಿ ದಿನಕ್ಕೊಮ್ಮೆಯಾದರೂ ಕೇಳಿ ಬರುವ ಅತಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಡೈಲಾಗ್ ಇದು: ರಕ್ತಪರೀಕ್ಷೆಯ ವರದಿಯನ್ನು ನನ್ನ ಮುಂದಿಟ್ಟು, ಮುಖ ದಲ್ಲಿ ಒಂದು ವಿಜಯದ ನಗೆ ಬೀರುತ್ತಾ ಹೇಳ್ತಾರೆ ‘ನೋಡಿ ಡಾಕ್ಟ್ರೇ, ನನಗೇನೂ ಶುಗರ್ ಇಲ್ಲ! ರಿಪೋರ್ಟ್‌ನಲ್ಲಿ ಶುಗರ್ ಬರೀ ‘ಬಾರ್ಡರ್’ನಲ್ಲಿದೆ ಅಂತ ಲ್ಯಾಬ್‌ನವರು ಹೇಳಿದ್ರು. ದಿನಕ್ಕೊಂದು ಸ್ವೀಟ್ ತಿಂದ್ರೆ ಏನಾಗಲ್ಲ ಅಲ್ವಾ?’ಅವರ ಈ ಬಾರ್ಡರ್(ಗಡಿ) ಥಿಯರಿ ಕೇಳಿ ನನಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.

ಹಲವರಿಗೆ ಈ ‘ಬಾರ್ಡರ್’ ಅನ್ನೋ ಪದದಲ್ಲಿ ಎಲ್ಲಿಲ್ಲದ ಪ್ರೀತಿ ಮತ್ತು ನಿರ್ಲಕ್ಷ್ಯ ಎರಡೂ ಸಹಾ! ಆದರೆ ವೈದ್ಯಕೀಯ ವಿಜ್ಞಾನದಲ್ಲಿ ಈ ಬಾರ್ಡರ್‌ಗೆ ಒಂದು ಸ್ಪಷ್ಟವಾದ ಹೆಸರಿದೆ, ಅದೇ ‘ಪ್ರಿ- ಡಯಾಬಿಟಿಸ್’. ಸರಳವಾಗಿ ಹೇಳಬೇಕೆಂದರೆ, ಇದು ಮಧುಮೇಹದ ಹೊಸ್ತಿಲು! ಇದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಟ್ರಾಫಿಕ್ ಸಿಗ್ನಲ್‌ನ ಉದಾಹರಣೆಯನ್ನೇ ತೆಗೆದುಕೊಳ್ಳೋಣ.

ಹಸಿರು ದೀಪ: ಇದು ಉರಿಯುತ್ತಿದ್ದರೆ, ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ನಾರ್ಮಲ್, ಅಂದರೆ ಸರಿಯಿದೆ (ಉದಾಹರಣೆಗೆ: ಖಾಲಿ ಹೊಟ್ಟೆಯಲ್ಲಿ 100ಕ್ಕಿಂತ ಕಡಿಮೆ) ಎಂದರ್ಥ. ನೀವು ಟೆನ್ಷನ್ ಇಲ್ಲದೆ ಜೀವನದ ಗಾಡಿಯನ್ನು ಓಡಿಸಿಕೊಂಡು ಹೋಗಬಹುದು.

ಇದನ್ನೂ ಓದಿ: Diabetes Control Tips: ಮಧುಮೇಹ ಇದ್ದವರು ಎಷ್ಟು ಬಾರಿ ಶುಗರ್ ಲೆವೆಲ್ ಟೆಸ್ಟ್ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ಕೆಂಪು ದೀಪ: ಇದು ಪಕ್ಕಾ ಮಧುಮೇಹ (ಖಾಲಿ ಹೊಟ್ಟೆಯಲ್ಲಿ 126ಕ್ಕಿಂತ ಹೆಚ್ಚು). ಇಲ್ಲಿ ನೀವು ಕಡ್ಡಾಯವಾಗಿ ಬ್ರೇಕ್ ಹಾಕಲೇಬೇಕು, ಆಹಾರದಲ್ಲಿ ಕಟ್ಟುನಿಟ್ಟು ತರಲೇಬೇಕು, ವೈದ್ಯರ ಸಲಹೆ ಅವಶ್ಯವಾಗಿ ಪಾಲನೆ ಮಾಡಬೇಕು ಹಾಗೂ ಔಷಧಿಗಳ ಅಗತ್ಯವಿದ್ದರೆ ತೆಗೆದುಕೊಳ್ಳಬೇಕು. ಹಾಗಾದರೆ ಈ ಪ್ರಿ-ಡಯಾಬಿಟಿಸ್ ಅಂದರೇನು?

ಹಳದಿ ದೀಪ: ಅಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ ನಾರ್ಮಲ್ ಕೂಡ ಅಲ್ಲ, ಹಾಗಂತ ಪೂರ್ತಿ ಮಧುಮೇಹವೂ ಅಲ್ಲ (ಖಾಲಿ ಹೊಟ್ಟೆಯಲ್ಲಿ 100 ರಿಂದ 125ರ ನಡುವೆ).

ನಮ್ಮ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಸಿರು ಹೋಗಿ ಹಳದಿ ದೀಪ ಕಂಡ ತಕ್ಷಣ ನಮ್ಮ ಜನ ಏನು ಮಾಡ್ತಾರೆ ಯೋಚನೆ ಮಾಡಿ. ನಿಧಾನವಾಗಿ ಗಾಡಿಯ ಬ್ರೇಕ್ ಹಾಕುವ ಬದಲು, ಕೆಂಪು ದೀಪ ಬೀಳುವುದರೊಳಗೆ ಹೇಗಾದರೂ ಮಾಡಿ ಸಿಗ್ನಲ್ ಪಾಸ್ ಮಾಡಬೇಕು ಅಂತ ಆಕ್ಸಿಲರೇಟರ್ ಅನ್ನು ಇನ್ನಷ್ಟು ಜೋರಾಗಿ ಅದುಮುತ್ತಾರೆ! ಹೌದಲ್ವಾ? ಆದರೆ ನೆನಪಿರಲಿ, ಆರೋಗ್ಯದ ವಿಚಾರದಲ್ಲಿ ಈ ‘ಹಳದಿ ದೀಪ’ ಕಂಡಾಗ ನೀವು ನಿಮ್ಮ ಹಳೆಯ ಜೀವನಶೈಲಿಯ ಆಕ್ಸಿಲರೇಟರ್ ಅನ್ನೇ ಜೋರಾಗಿ ಒತ್ತಿದರೆ, ನೀವು ನೇರವಾಗಿ ಹೋಗಿ ಗುದ್ದುವುದು ‘ಕೆಂಪು ದೀಪ’ಕ್ಕೆ, ಅಂದರೆ ಪೂರ್ಣ ಮಧು ಮೇಹಕ್ಕೆ!

ಒಳಗೊಳಗೆ ನಡೆಯುವ ಯುದ್ಧ !

‘ನನಗೇನೂ ಸುಸ್ತಾಗ್ತಿಲ್ಲ, ಪದೇ ಪದೇ ಮೂತ್ರಕ್ಕೆ ಹೋಗ್ತಿಲ್ಲ, ತಲೆನೋವು ಬರ್ತಿಲ್ಲ, ಹಾಗಾಗಿ ನಾನಿನ್ನೂ ಆರೋಗ್ಯವಾಗಿದ್ದೀನಿ’ ಅನ್ನೋದು ಬಹುತೇಕರ ನಂಬಿಕೆ. ಆದರೆ ಪ್ರಿ-ಡಯಾಬಿಟಿಸ್ ಎನ್ನುವುದು ಅತ್ಯಂತ ಸೈಲೆಂಟ್ ಆಗಿ ಒಳಗೇ ತೊಂದರೆ ಕೊಡುವ ಸ್ಥಿತಿ. ಇದು ಯಾವುದೇ ಲಕ್ಷಣ ಗಳನ್ನು ಹೊರಗಡೆ ತೋರಿಸುವುದಿಲ್ಲ. ಆದರೆ ದೇಹದ ಒಳಗೆ ದೊಡ್ಡ ಯುದ್ಧವೇ ನಡೆಯು ತ್ತಿರುತ್ತದೆ. ಹಿಂದಿನ ಒಂದು ಲೇಖನದಲ್ಲಿ ನಾವು ‘ಇನ್ಸುಲಿನ್ ರೆಸಿಸ್ಟೆನ್ಸ್’ ಬಗ್ಗೆ ಮಾತನಾಡಿದೆ ವಲ್ಲವೇ? ಆ ಜೀವಕೋಶಗಳು ಇನ್ಸುಲಿನ್‌ಗೆ ಬಾಗಿಲು ಹಾಕುವ ಪ್ರಕ್ರಿಯೆ ಈ ಹಂತದಲ್ಲೇ ಶುರು ವಾಗಿರುತ್ತದೆ.

ಒಳಗೊಳಗೆ ನಡೆಯುವ ಯುದ್ಧ !

ಸಕ್ಕರೆಯನ್ನು ಹೇಗಾದರೂ ಮಾಡಿ ನಿಯಂತ್ರಿಸಲು, ಶಕ್ತಿ ಮೀರಿ ಓವರ್-ಟೈಮ್ ಕೆಲಸ ಮಾಡಿ ಇನ್ಸುಲಿನ್ ಉತ್ಪಾದಿಸುತ್ತಿರುತ್ತದೆ. ಆ ಪಾಪದ ಗ್ರಂಥಿ ದಣಿದು ಸುಸ್ತಾಗಿ ಕೈಚೆಲ್ಲುವ ಮುನ್ನವೇ ಎಚ್ಚೆತ್ತುಕೊಳ್ಳಲು ಪ್ರಕೃತಿ ನಮಗೆ ಕೊಡುವ ‘ಕೊನೆಯ ವಾನಿಂಗ್’ ಈ ಹಳದಿ ದೀಪ!

ರಿವರ್ಸ್ ಗೇರ್ ಹಾಕುವ ಅವಕಾಶ!

ಮಧುಮೇಹ ಸಂಪೂರ್ಣವಾಗಿ ಕಾಲಿಡುವ ಮೊದಲೇ, ಅದು ಪ್ರಿ-ಡಯಾಬಿಟಿಸ್ ಎಂಬ ಹೊಸ್ತಿಲಿ ನಲ್ಲಿ ಇರುವಾಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲಿ ನಿಮಗೊಂದು ವಿಚಾರವನ್ನು ಹೇಳಲೇಬೇಕು. ಒಮ್ಮೆ ‘ಕೆಂಪು ದೀಪ’ (ಮಧುಮೇಹ) ಬಿದ್ದರೆ, ಅದರಿಂದ ಸಂಪೂರ್ಣವಾಗಿ ಹೊರಬರುವುದು ಬಹುತೇಕ ಕಷ್ಟಸಾಧ್ಯ. ಆದರೆ ಈ ‘ಹಳದಿ ದೀಪ’ (ಪ್ರಿ-ಡಯಾಬಿಟಿಸ್) ಇದೆಯಲ್ಲ, ಇದನ್ನು ನಾವು ನೂರಕ್ಕೆ ನೂರು ಪ್ರತಿಶತ ರಿವರ್ಸ್ ಮಾಡಬಹುದು!

ಹೇಗೆ ರಿವರ್ಸ್ ಮಾಡೋದು?

ಇದಕ್ಕೆ ಯಾವ ಮ್ಯಾಜಿಕ್ ಮಾತ್ರೆಗಳೂ ಬೇಕಿಲ್ಲ. ಕೇವಲ ಎರಡು ಸರಳ ಸೂತ್ರಗಳು:

ಊಟದಲ್ಲಿ ಶಿಸ್ತು: ನಿಮ್ಮ ತಟ್ಟೆಯಲ್ಲಿರುವ ಸಿಹಿ, ಜ್ಯೂಸ್, ಮೈದಾ, ಮತ್ತು ಅತಿಯಾಗಿ ಸಂಸ್ಕರಿಸಿದ ಜಂಕ್-ಫುಡ್‌ಗಳಿಗೆ ಗುಡ್ ಬೈ ಹೇಳಿ. ತರಕಾರಿ, ಸೊಪ್ಪು, ನಾರಿನಂಶ ಹೆಚ್ಚಿರುವ ನೈಸರ್ಗಿಕ ಆಹಾರ ಗಳಿಗೆ ಸ್ವಾಗತ ಕೋರಿ.

ಮೈ ಬೆವರಲಿ: ದಿನಕ್ಕೆ ಕನಿಷ್ಠ 45 ನಿಮಿಷ ವೇಗವಾದ ನಡಿಗೆ (ಬ್ರಿಸ್ಕ್ ವಾಕ್) ಅಥವಾ ಬೆವರು ಸುರಿಸುವ ವ್ಯಾಯಾಮ. ನಿಮ್ಮ ಮಾಂಸಖಂಡಗಳಿಗೆ ಕೆಲಸ ಕೊಟ್ಟರೆ, ಅವು ರಕ್ತದಲ್ಲಿರುವ ಆ ಹೆಚ್ಚುವರಿ ಸಕ್ಕರೆಯನ್ನೆಲ್ಲಾ ಹೀರಿಕೊಂಡು, ಆ ಹಳದಿ ದೀಪವನ್ನು ಮತ್ತೆ ಹಸಿರಾಗಿಸುತ್ತವೆ.

ಜ್ಞಾಪಕ ಇರಲಿ: ಬಾರ್ಡರ್‌ನಲ್ಲಿ ಇದ್ದೀನಿ ಅಂತ ಖುಷಿ ಪಡಬೇಡಿ, ಆ ಬಾರ್ಡರ್ ದಾಟಿದರೆ ಇರೋದು ಕಾಯಿಲೆಗಳ ಪಾಳಯ! ಟ್ರಾಫಿಕ್ ಸಿಗ್ನಲ್‌ನಲ್ಲಿ ಹಳದಿ ದೀಪ ಕಂಡಾಗ ಗಾಡಿಯ ಸ್ಪೀಡ್ ಕಡಿಮೆ ಮಾಡಿ ಬ್ರೇಕ್ ಹಾಕುವಂತೆ, ನಿಮ್ಮ ಕೆಟ್ಟ ಜೀವನಶೈಲಿಗೆ, ಆಲಸ್ಯಕ್ಕೆ ಬ್ರೇಕ್ ಹಾಕಿ. ದೇಹ ಮತ್ತು ದೇವರು ಕೊಟ್ಟ ಈ ಎರಡನೇ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಬದುಕು ಹಸಿರಾಗಿರಲಿ!