ಬೀದಿ ನಾಯಿಯೊಂದರ ಆಧ್ಯಾತ್ಮಿಕ ಪಯಣ
ಇದು ಕೇವಲ ಒಂದು ನಾಯಿಯ ಬದುಕಿನ ಕಥೆಯಲ್ಲ; ಬೀದಿ ನಾಯಿಯಾಗಿ ಹುಟ್ಟಿ, ನಂಬಿಕೆ, ಕರುಣೆ ಮತ್ತು ಅಧ್ಯಾತ್ಮದ ಶಕ್ತಿಯನ್ನು ಜಗತ್ತಿಗೆ ಸಾರಿ, ಶಾಂತಿಯ ಸಂದೇಶ ಸಾರುತ್ತಿರುವ ಒಂದು ಮೌನ ಯಾತ್ರಿಕನ ಪಯಣವಾಗಿದೆ. ಅಲೋಕ ಎಂಬ ಹೆಸರು ಹೊತ್ತ ಈ ನಾಯಿ ಈಗ ಅಮೆರಿಕದಲ್ಲಿದೆ!
-
ಶ್ರೀನಿವಾಸ. ನಾ. ಪಂಚಮುಖಿ
ಯುದ್ಧ ಮತ್ತು ಕ್ಷೋಭೆಗಳಿಂದ ತಲ್ಲಣಿಸುತ್ತಿರುವ ಜಗತ್ತಿಗೆ ಇಂದು ಶಾಂತಿ ಬೇಕಿದೆ. ಅಮೆರಿಕದ ಹೆದ್ದಾರಿಗಳಲ್ಲಿ ಈಗ ‘ಶಾಂತಿಗಾಗಿ ಪಾದಯಾತ್ರೆ’ಯನ್ನು ಬೌದ್ಧ ಭಿಕ್ಷುಗಳು ಕೈಗೊಂಡಿದ್ದಾರೆ. ಅವರ ಜತೆ, ಅಲೋಕ ಎಂಬ ನಾಯಿ ಸಾವಿರಾರು ಕಿ.ಮೀ. ನಡೆಯುತ್ತಿದೆ! ಜಗತ್ತಿಗೆ ಶಾಂತಿ ಮಂತ್ರ ಸಾರುತ್ತಿದೆ!
ಬೀದಿ ನಾಯಿ ಎಂದ ತಕ್ಷಣ ಕೆಲವರಿಗೆ ತಾತ್ಸಾರ, ಅಸಹನೆ, ಕೋಪ ಮತ್ತು ಸ್ವಲ್ಪ ಭಯ; ಇನ್ನು ಕೆಲವರಿಗೆ ಪ್ರೀತಿ. ಇಂದು ಶಾಂತಿ ಮತ್ತು ಅಹಿಂಸೆಯ ಬಗ್ಗೆ ಮಾತಾಡುವಾಗ, ಮನುಷ್ಯರೊಂದಿಗೆ ಮಾತ್ರವಲ್ಲದೆ ಪ್ರಾಣಿಗಳೂ ಸಹ ಈ ಮೌಲ್ಯಗಳನ್ನು ಪ್ರತಿನಿಧಿಸಬಲ್ಲವೆಂಬುದಕ್ಕೆ ಒಂದು ಅಪರೂಪದ ಉದಾಹರಣೆಯಾಗಿದೆ ಅಲೋಕ ನಾಯಿ. ನಮ್ಮ ದೇಶದ ಈ ಬೀದಿ ನಾಯಿಯು, ವಿಶ್ವಕ್ಕೆ ಶಾಂತಿಯ ಮಂತ್ರವನ್ನು ಸಾರುತ್ತಾ ಇರುವುದು ಒಂದು ರೋಚಕ ಕಥೆ.
ಇದು ಕೇವಲ ಒಂದು ನಾಯಿಯ ಬದುಕಿನ ಕಥೆಯಲ್ಲ; ಬೀದಿ ನಾಯಿಯಾಗಿ ಹುಟ್ಟಿ, ನಂಬಿಕೆ, ಕರುಣೆ ಮತ್ತು ಅಧ್ಯಾತ್ಮದ ಶಕ್ತಿಯನ್ನು ಜಗತ್ತಿಗೆ ಸಾರಿ, ಶಾಂತಿಯ ಸಂದೇಶ ಸಾರುತ್ತಿರುವ ಒಂದು ಮೌನ ಯಾತ್ರಿಕನ ಪಯಣವಾಗಿದೆ. ಅಲೋಕ ಎಂಬ ಹೆಸರು ಹೊತ್ತ ಈ ನಾಯಿ ಈಗ ಅಮೆರಿಕದಲ್ಲಿದೆ!
ಅಲೋಕನಿಗೆ ಆ ಹೆಸರನ್ನು ನೀಡಿದವರು ಬೌದ್ಧ ಭಿಕ್ಷುಗಳು. ಅವರ ದೃಷ್ಟಿಯಲ್ಲಿ, ಆಲೋಕ ಕೇವಲ ಒಂದು ನಾಯಿ ಅಲ್ಲ; ಶಾಂತಿ ಸಂದೇಶ ಸಾರುವ ಒಂದು ಜೀವಂತ ನಿದರ್ಶನ. ಅಲೋಕ ಎಂಬ ನಾಯಿಯ ಈ ಅಪೂರ್ವ, ಅನೂಹ್ಯ ಪಯಣದ ಆರಂಭವಾಗಿದ್ದು ಡಿಸೆಂಬರ್ 2022ರಿಂದ ಮಾರ್ಚ್ 2023ರ ನಡುವಿನ ಅವಧಿಯಲ್ಲಿ. ಬೌದ್ಧ ಭಿಕ್ಷುಗಳ ಒಂದು ತಂಡವು 112 ದಿನಗಳ ಶಾಂತಿ ಯಾತ್ರೆಯ ಭಾಗವಾಗಿ ಭಾರತಕ್ಕೆ ಆಗಮಿಸಿತ್ತು.
ಇದನ್ನೂ ಓದಿ: Hari Paraak Column: ಹೇಳಿದ್ದಕ್ಕೆಲ್ಲ ಸರಿ ಅನ್ನುವವನದ್ದು- ಅಗ್ರೀ ಕಲ್ಚರ್
ಈ ಯಾತ್ರೆಯ ಸಂದರ್ಭದಲ್ಲಿ ಕೊಲ್ಕತ್ತಾ ನಗರದ ಬೀದಿಗಳಲ್ಲಿ ಅಲೆದಾಡುತ್ತಿದ್ದ ಸುಮಾರು ಎರಡೂವರೆ ವರ್ಷದ ಬೀದಿ ನಾಯಿ, ಭಿಕ್ಷುಗಳನ್ನು ಕಂಡ ತಕ್ಷಣ ತನ್ನವರನ್ನು ಕಂಡಂತೆಯೇ ಭಾವಿಸಿ, ಯಾವುದೇ ಪ್ರಚೋದನೆ ಇಲ್ಲದೆ ಅವರೊಂದಿಗೆ ಸೇರಿಕೊಂಡು ಹೆಜ್ಜೆ ಹಾಕತೊಡಗಿತು!
ಭಿಕ್ಷುಗಳು ಅದನ್ನು ತಡೆಯಲು ಸಾಕಷ್ಟು ಪ್ರಯತ್ನಿಸಿದರು. ಅದನ್ನು ಯಾವುದಾದರೂ ಸುರಕ್ಷಿತ ಸ್ಥಳದಲ್ಲಿ ಬಿಟ್ಟುಬಿಡಲು ಯತ್ನಿಸಿದರು. ಆದರೆ ಆ ನಾಯಿ ಆಲೋಕ ಭಿಕ್ಷುಗಳನ್ನು ಬಿಟ್ಟು ಹೋಗಲು ಒಪ್ಪದೇ ಬಾಲ ಅಲ್ಲಾಡಿಸುತ್ತ ಬೌದ್ಧ ಭಿಕ್ಷುಗಳನ್ನು ಹಿಂಬಾಲಿಸಿತು; ಅವರು ನೀಡಿದ ಊಟವನ್ನು ಮಾಡುತ್ತಾ, ಅವರ ಜತೆಯೇ ನಮ್ಮ ದೇಶದಲ್ಲಿ ನೂರಾರು ಮೈಲು ನಡೆಯಿತು!
ಕೊನೆಗೆ ವಿಧಿ ಇಲ್ಲದೆ ಅಲೋಕನನ್ನು ಅವರು ತಮ್ಮ ಶಾಂತಿ ಮತ್ತು ಅಹಿಂಸೆಯ ಪಯಣದ ಸಂಗಾತಿಯನ್ನಾಗಿ ಮಾಡಿಕೊಂಡರು. ಈ ಪಯಣದಲ್ಲಿ ಅಲೋಕ ಭೌದ್ಧಗಯಾ, ಸಾರನಾಥ್, ಖುಶಿನಗರ, ವೈಶಾಲಿ ಮುಂತಾದ ಅನೇಕ ಪವಿತ್ರ ಬೌದ್ಧ ಕ್ಷೇತ್ರಗಳಿಗೆ ಭೇಟಿ ನೀಡಿತು. ಈ ಯಾತ್ರೆ ಬೀದಿ ನಾಯಿಯಾದ ಅಲೋಕಗೆ ಸುಲಭವಾಗಿರಲಿಲ್ಲ. ಮಾರ್ಗಮಧ್ಯೆ ಇತರ ನಾಯಿಗಳಿಂದ ಬೆದರಿಕೆ, ಅನಾರೋಗ್ಯದ ಸಂದರ್ಭ; ಒಮ್ಮೆ ಕಾರಿಗೆ ಡಿಕ್ಕಿಯಾಗಿ, ಕಾಲು ಸ್ವಲ್ಪ ನೋವಾಯಿತು!
ಆದರೂ ಅಲೋಕ ಧೃತಿಗೆಡಲಿಲ್ಲ, ನಿಲ್ಲಲಿಲ್ಲ, ಹಿಂದೆ ಸರಿಯಲಿಲ್ಲ. ಕಾಲಿನ ನೋವನ್ನು ತಾನೇ ವಾಸಿ ಮಾಡಿಕೊಂಡು, ಎದ್ದು ನಿಂತು ಮತ್ತೆ ಭಿಕ್ಷುಗಳೊಂದಿಗೆ ತನ್ನ ಸಾರ್ಥಕ ಪಯಣ ಮುಂದು ವರಿಸಿತು! ಅಲೋಕ ತನ್ನ ಹಿಂದಿನ ಜನ್ಮದ ಉತ್ತಮ ಸಂಸ್ಕಾರಗಳ ಪರಿಣಾಮವಾಗಿ ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಭಾಗಿಯಾಗಿದೆ ಎಂಬುದು ಬೌದ್ಧ ಭಿಕ್ಷುಗಳ ನಂಬಿಕೆ.
ಬೀದಿ ನಾಯಿಯಾದ ಆಲೋಕ ತೊರಿಸಿದ ನಡೆ, ಸಹನೆ ಮತ್ತು ನಿಷ್ಠೆ ಇದಕ್ಕೆ ಸಾಕ್ಷಿಯಾಗಿದೆ. ಬೌದ್ಧ ಭಿಕ್ಷುಗಳು ಅಮೆರಿಕಕ್ಕೆ ಹೋದರು; ಕೆಲವು ಕಾಲ ಅಲೋಕ ಭಾರತದಲ್ಲೇ ಇತ್ತು; ಕೆಲವು ದಾನಿಗಳು ಅದನ್ನು ಅಮೆರಿಕಕ್ಕೆ ಕಳಿಸುವ ವ್ಯವಸ್ಥೆ ಮಾಡಿ, ಬೌದ್ಧ ಭಿಕ್ಷುಗಳ ಜತೆ ಸೇರಿಸಿದರು.
ಇಂದು ಆಲೋಕ ಭಾರತವನ್ನು ದಾಟಿ ಅಮೆರಿಕದಲ್ಲಿ ಬೌದ್ಧ ಭಿಕ್ಷುಗಳೊಂದಿಗೆ “ವಾಕ್ ಫಾರ್ ಪೀಸ್" ಎಂಬ ಶಾಂತಿ ಯಾತ್ರೆಯ ಧ್ವಜಧಾರಕವಾಗಿ, ಯಾತ್ರೆಯ ಫೇಸ್ ಆಗಿ ಹೊರಹೊಮ್ಮಿದೆ. ಕಳೆದ ಎರಡು ತಿಂಗಳುಗಳಿಂದ ಅಮೆರಿಕದಲ್ಲಿ ಬೌದ್ಧ ಬಿಕ್ಷುಗಳು 3700 ಕಿ.ಮೀ. ದೂರದ ಪಾದ ಯಾತ್ರೆಯನ್ನು ಕೈಗೊಂಡರು. ಅಲೋಕನೂ ಅವರ ಜತೆ ಹೆಜ್ಜೆ ಹಾಕಿದ್ದಾನೆ!
ಕಳೆದ ತಿಂಗಳು ಅಲೋಕಗಾಗಿ ಆರಂಭಿಸಲಾದ ಸಾಮಾಜಿಕ ಮಾಧ್ಯಮ ಖಾತೆಯನ್ನು ಈಗಾಗಲೇ 73000ಕ್ಕೂ ಹೆಚ್ಚು ಜನ ಅನುಸರಿಸಿದ್ದಾರೆ. ದಿನದಿಂದ ದಿನಕ್ಕೆ ಅಲೋಕದ ಕಥೆ ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಪ್ರಸ್ತುತ, ಆಲೋಕ ಅಮೆರಿಕದಲ್ಲಿ ಟೆಕ್ಸಾಸ್‌ನಿಂದ ವೈಟ್ ಹೌಸ್ ವರೆಗೆ ಸುಮಾರು 3700 ಕಿಲೋಮೀಟರ್ ದೂರದ ಪಯಣವನ್ನು ಕೈಗೊಂಡಿದ್ದು, ಪ್ರತಿದಿನ ಬೌದ್ಧ ಭಿಕ್ಷುಗಳೊಂದಿಗೆ ಕಾಲ್ನಡಿಗೆಯಲ್ಲಿ ಸಾಗುವ ಆಲೋಕ, ಪ್ರತೀ ರಾತ್ರಿ ಅವರೊಂದಿಗೆ ಒಂದೇ ಟೆಂಟ್‌ನಲ್ಲಿ ಚಾಪೆಯ ಮೇಲೆ ವಿಶ್ರಾಂತಿ ಪಡೆಯುತ್ತದೆ.
ಬೆಳಗ್ಗೆ ಮತ್ತೆ ಅದೇ ಶಾಂತಿಯ ಸಂಕಲ್ಪದೊಂದಿಗೆ ಹೊಸ ದಿನವನ್ನು ಆರಂಭಿಸುತ್ತದೆ. ಇಂದು ಆಲೋಕ ಜಗತ್ತಿಗೆ ಶಾಂತಿಯ ಪ್ರತೀಕವಾಗಿದೆ. ಅದು ಹೋಗುವ ಎಲ್ಲೆಡೆ ಜನರು ಸೇರುತ್ತಾರೆ, ಅದನ್ನು ನೋಡಿ ಮಂದಹಾಸ ಬೀರುತ್ತಾರೆ ಮತ್ತು ಅಪಾರ ಪ್ರೀತಿಯನ್ನು ತೋರುತ್ತಾರೆ. ಕೆಲವೇ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಬೀದಿ ನಾಯಿಯೆಂದು ಕರೆಯಲ್ಪಟ್ಟು, ಇಂದು ವಿಶ್ವ ಶಾಂತಿಯ ದೂತ ಎಂಬ ಗೌರವಕ್ಕೆ ಪಾತ್ರವಾಗಿದೆ ಅಲೋಕ.ಅಲೋಕನ ಈ ಅಪರೂಪದ ಕಥೆಯು, ನಮ್ಮ ದೇಶದ ದೇಶೀ, ಅಂದರೆ ಇಂಡಿ ನಾಯಿಗಳು (ಕಂತ್ರಿ ನಾಯಿ ಎಂದೂ ಕರೆಯುವುದುಂಟು) ಕೂಡ ವಿದೇಶಿ ಮತ್ತು ದುಬಾರಿ ತಳಿಯ ನಾಯಿಗಳಿಗಿಂತ ಕಡಿಮೆಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಅವುಗಳು ಸಹ ಮನುಷ್ಯರೊಂದಿಗೆ ನಿಷ್ಠೆಯಿಂದ ನಡೆದು, ಜಗತ್ತಿಗೆ ಕರುಣೆ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಸಾರಬಲ್ಲವು. ವಿಶ್ವದೆಲ್ಲೆಡೆ ಯುದ್ಧದ ಕಾರ್ಮೋಡ ಅವರಿಸಿರುವಾಗ ಶಾಂತಿ ಬರಿ ಮಾತಿನಿಂದ ಸಾಧ್ಯವಿಲ್ಲ, ನಡೆ ಮತ್ತು ನಂಬಿಕೆಯಿಂದ ಮಾತ್ರ ಸಾಧ್ಯ ಎಂಬುದನ್ನು ಅಲೋಕ ಪ್ರತೀ ಹೆಜ್ಜೆಯೊಂದಿಗೆ ಜಗತ್ತಿಗೆ ಸಾರಿ ಹೇಳುತ್ತಿದೆ.
ಪುಟ್ಟ ವಿಶ್ರಾಂತಿ!
ಈ ಬರಹ ಪ್ರಕಟವಾಗುವ ಹೊತ್ತಿನಲ್ಲಿ, ಅಲೋಕನಿಗೆ ಕೆಲವು ವಾರಗಳ ಕಾಲ ವಿಶ್ರಾಂತಿ ನೀಡಲಾ ಗಿದೆ! ಕಾರಣ - ಒಂದು ಸಣ್ಣ ಶಸ್ತ್ರಚಿಕಿತ್ಸೆ. ಭಾರತದಲ್ಲಿ ಬೌದ್ಧ ಭಿಕ್ಷುಗಳ ಜತೆ ಹೆಜ್ಜೆ ಹಾಕುವಾಗ, ಕಾರೊಂದು ಬಡಿದು, ಅದರ ಕಾಲಿಗೆ ನೋವಾಗಿತ್ತು ಮತ್ತು ತಾನಾಗಿಯೇ ವಾಸಿಯೂ ಆಗಿತ್ತು. ಅಮೆರಿಕದಲ್ಲಿ ಸಾವಿರಾರು ಕಿ.ಮೀ. ನಡೆಯುವಾಗ, ಆ ಹಳೆಯ ನೋವು ತುಸು ಉಲ್ಬಣಿಸಿದ್ದರಿಂದ, ಅಲೋಕನಿಗೆ ಕಳೆದ ವಾರ ಶಸ ಚಿಕಿತ್ಸೆ ಮಾಡಲಾಗಿದ್ದು, ಈಗ ಅಲೋಕ ಚೇತರಿಸಿಕೊಳ್ಳುತ್ತಿದೆ. ನೋವು ಕಡಿಮೆಯಾದ ನಂತರ, ಪುನಃ ಅಮೆರಿಕದ ಹೆದ್ದಾರಿಗಳಲ್ಲಿ ಬೌದ್ಧ ಭಿಕ್ಷುಗಳ ಜತೆ ಅಲೋಕ ಹೆಜ್ಜೆಹಾಕಲಿದೆ!