Dr N Bhaskar Acharya Column: ವೈದ್ಯರ ದ್ವಂದ್ವ
ಹೊಟ್ಟೆಯೊಳಗೆ ಮಗುವಿನ ಕೈಕಾಲುಗಳ ಚಲನೆ, ಹೃದಯ ಬಡಿತ ಸರಿಯಾದ ಮಿತಿಯೊಳಗೇ ಇತ್ತು. ಹದಿನೈದು ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಮಾಡಿದ ಹೊಟ್ಟೆಯ ಅಲ್ಟ್ರಾಸೌಂಡ್ ವರದಿ ಕೂಡಾ ಈತ ಕಂಡುಕೊಂಡ ಅಂಶಗಳನ್ನೇ ಪುಷ್ಟೀ ಕರಿಸುತ್ತಿತ್ತು. ಅದರ ಪ್ರಕಾರ ಮಗುವಿನ ತೂಕ ಸಾಧಾರಣ ಎರಡೂವರೆ ಕೆಜಿಯಷ್ಟಿದ್ದು, ಈ ನಂತರದ ಹತ್ತು ಹದಿನೈದು ದಿನಗಳಲ್ಲಿ ಐನೂರು ಗ್ರಾಂಗಳಷ್ಟಾದರೂ ಹೆಚ್ಚಾಗಿರಬೇಕೆಂದುಕೊಂಡನು ಡಾ. ಎಸ್. ಮಗು ಸಸೂತ್ರವಾಗಿ ಎಡಕ್ಕೆ ತಿರುಗಿ ಬಂದರೆ ಸರಿ.
-
ಡಾ.ಎನ್.ಭಾಸ್ಕರ ಆಚಾರ್ಯ
ಕ್ಲಿಷ್ಟ ಸಂದರ್ಭಗಳಲ್ಲಿ ಎಂತಹ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ರೋಗಿಗಳ ಜೀವ ಉಳಿಸುವಲ್ಲಿ ಯಾವ ಕ್ರಮ ಉತ್ತಮ ಎಂದು ನಿಶ್ಚಯಿಸುವಾಗ, ವೈದ್ಯರಿಗೆ ದ್ವಂದ್ವಗಳು ಎದುರಾಗುವುದೂ ಇದೆ! ಜತೆಗೆ, ಸರಕಾರ ವಿಧಿಸಿದ ಕಾನೂನುಗಳನ್ನು ಸಹ ಪಾಲಿಸಬೇಕು!
ಆ ವೈದ್ಯರಿಗೆ, (ಡಾ.ಎಸ್ ಎಂದಿಟ್ಟುಕೊಳ್ಳೋಣ) ಆ ದಿನ ಆಸ್ಪತ್ರೆಯಲ್ಲಿ ಅದೇಕೋ ಬಹಳ ಕಿರಿಕಿರಿಯೆನಿಸುತ್ತಿತ್ತು. ರಾತ್ರಿಯಿಂದ ಕಾರ್ಯನಿರ್ವಹಿಸುತ್ತಿದ್ದ ಅವರು ಎರಡು ಸಹಜ ಪ್ರಸವ ನಡೆಸಿ, ಸುಸ್ತಾಗಿರುವಾಗಲೇ, ಬೆಳಿಗ್ಗಿನ ಜಾವ ನಾಲ್ಕು ಗಂಟೆಗೆ ಸರಿಯಾಗಿ, ಇನ್ನೋರ್ವ ತುಂಬು ಗರ್ಭಿಣಿ ರೋಹಿಣಿ ಸಣ್ಣ ಹೊಟ್ಟೆನೋವು, ಕೆಂಪು ಮಿಶ್ರಿತ ನೋಳಿ ಸ್ರಾವವೆಂದು ಬಂದಳು. ಹಳ್ಳಿಗಾಡಿನಿಂದ ಬಂದ ಆಕೆಗೆ ರಾತ್ರಿ ಹನ್ನೆರಡು ಗಂಟೆಗೆ ಪ್ರಸವ ವೇದನೆ ಪ್ರಾರಂಭವಾಗಿತ್ತು.
ವೈದ್ಯರು ಕೊಟ್ಟ ಪ್ರಸವ ದಿನಾಂಕ ಮೀರಿ ಮೂರ‍್ನಾಲ್ಕು ದಿನಗಳಾಗಿದ್ದವು. ನೋವು ಬಾರ ದಿದ್ದುದರಿಂದ ಸುಮ್ಮನಿದ್ದ ಆಕೆ, ಹಿಂದಿನ ರಾತ್ರಿ ನೋವು ಪ್ರಾರಂಭವಾಗುತ್ತಿದ್ದಂತೆ ಗಂಡನಿಗೆ ತಿಳಿಸಿ, ಆತ ತನ್ನ ಊರಿನಿಂದ ಕಾರು ಬಾಡಿಗೆಗೆ ಹಿಡಿದು, ಸರ್ಕಾರಿ ತಾಲೂಕು ಆಸ್ಪತ್ರೆಗೆ ಬರುವಾಗ ಬೆಳಗಿನ ಜಾವ ಗಂಟೆ ಐದಾಗಿತ್ತು.
ಆಗಷ್ಟೆ ನಿದ್ದೆಗೆ ಜಾರಿದ್ದ ಡಾ.ಎಸ್, ಕೂಡಲೆ ಎದ್ದು ಬಂದು ಗರ್ಭಿಣಿಯನ್ನು ಪರೀಕ್ಷಿಸಿ ನೋಡಿದರು. ಗರ್ಭಿಣಿಯ ಸೊಂಟದ ಮೂಳೆದ್ವಾರ ಸಾಧಾರಣ ಮಟ್ಟಿಗೆ ವಿಶಾಲವಾಗಿದ್ದು, ಗರ್ಭದ್ವಾರ ಸಾಧಾರಣ ಒಂದು ಬೆರಳಿನಷ್ಟು ತೆರೆದುಕೊಂಡಿದ್ದು ಇನ್ನಷ್ಟೆ ಸಡಿಲವಾಗಿ ಮೆದುವಾಗಬೇಕಿತ್ತು.
ಮಗುವಿನ ತಲೆ ಕೆಳಗಿದ್ದು, ತಲೆಯ ಕೆಳಗಡೆ ಹಳ್ನೀರು ತುಂಬಿಕೊಂಡ ಗರ್ಭಪೊರೆ ಕೈಗೆ ಸಿಗುತ್ತಿತ್ತು. ಆದರೆ ಮಗುವಿನ ಬೆನ್ನಿನ ಭಾಗ, ಬಲಬದಿಗೆ ಕಾಣಿಸಿಕೊಂಡು ಅದು ಪ್ರಸವ ವೇದನೆ ಹೆಚ್ಚಾಗುತ್ತಿದ್ದಂತೆ, ಇನ್ನಷ್ಟು ತಿರುಗಿ ಎಡಬದಿಗೆ ಬಂದರಷ್ಟೇ ಹೆರಿಗೆ ಸುಸೂತ್ರವಾಗಿ ಜರುಗಬಹುದಿತ್ತು.
ಹೊಟ್ಟೆಯೊಳಗೆ ಮಗುವಿನ ಕೈಕಾಲುಗಳ ಚಲನೆ, ಹೃದಯ ಬಡಿತ ಸರಿಯಾದ ಮಿತಿ ಯೊಳಗೇ ಇತ್ತು. ಹದಿನೈದು ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಮಾಡಿದ ಹೊಟ್ಟೆಯ ಅಲ್ಟ್ರಾಸೌಂಡ್ ವರದಿ ಕೂಡಾ ಈತ ಕಂಡುಕೊಂಡ ಅಂಶಗಳನ್ನೇ ಪುಷ್ಟೀ ಕರಿಸುತ್ತಿತ್ತು. ಅದರ ಪ್ರಕಾರ ಮಗುವಿನ ತೂಕ ಸಾಧಾರಣ ಎರಡೂವರೆ ಕೆಜಿಯಷ್ಟಿದ್ದು, ಈ ನಂತರದ ಹತ್ತು ಹದಿನೈದು ದಿನಗಳಲ್ಲಿ ಐನೂರು ಗ್ರಾಂಗಳಷ್ಟಾದರೂ ಹೆಚ್ಚಾಗಿರಬೇಕೆಂದು ಕೊಂಡನು ಡಾ.ಎಸ್. ಮಗು ಸಸೂತ್ರವಾಗಿ ಎಡಕ್ಕೆ ತಿರುಗಿ ಬಂದರೆ ಸರಿ.
ಇದನ್ನೂ ಓದಿ: Dr Sadhanashree Column: ಬಾಧಿಸುವ ಬಾಯಿಹುಣ್ಣು: ವಿಟಮಿನ್ ಕೊರತೆಯೇ ?
ಆದರೆ ಅದರ ತೂಕವೇ ಅದಕ್ಕೆ ಅಡ್ಡಿಯಾಗುವ ಸಂಭವವೇ ಬಹಳ ಹೆಚ್ಚು ಎಂದು ಅವರಿಗೆ ಅನಿಸಿತು. ಮೂಳೆಯ ದ್ವಾರ ಪರವಾಗಿಲ್ಲ, ಮಗುವಿನ ತಲೆ ಸಾಕಷ್ಟು ಕೆಳಗಿದೆ ಎಂದು ಅನಿಸಿದರೂ, ಅದ್ಯಾಕೋ ಪ್ರಸವ ವೇದನೆ ಹೆಚ್ಚಾಗುತ್ತಿದ್ದಂತೆ, ಮಗು ಅಡ್ಡ ತಿರುಗಿ ಸಹಜ ಪ್ರಸವ ಅಸಾಧ್ಯವಾಗಬಹುದು ಎಂದು ಆತನ ಒಳ ಮನಸ್ಸು ಹೇಳುತ್ತಿತ್ತು. ಈ ಪರಿಸ್ಥಿತಿ ಯಲ್ಲಿ ಕಾಯುವುದಲ್ಲದೆ ಬೇರೇನೂ ಉಪಾಯವಿಲ್ಲ ಎಂದು ತೀರ್ಮಾನಿಸಿ ಸಿಸ್ಟರ್‌ಗೆ ತಕ್ಕ ಸಲಹೆಗಳನ್ನು ಕೊಟ್ಟು, ಹೋಗಿ ಮಲಗಿದರು. ದೇಹ, ಮನಸ್ಸು ಎರಡೂ ದಣಿದಿದ್ದರೂ ಅವರಿಗೆ ನಿದ್ದೆ ಮಾತ್ರ ಹತ್ತಿರ ಸುಳಿಯಲಿಲ್ಲ.
ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆ ತಾಲೂಕು ಆಸ್ಪತ್ರೆಯಾದ್ದರಿಂದ ಅವರು ಕೆಲಸಕ್ಕೆ ಸೇರಿದ ಮೊದಮೊದಲು ಅಂದರೆ ಸುಮಾರು ಹನ್ನೆರಡು ವರ್ಷಗಳಷ್ಟು ಹಿಂದೆ ಅಲ್ಲಿಗೆ ಬಡ ರೋಗಿಗಳೇ ಹೆಚ್ಚಾಗಿ ಬರುತ್ತಿದ್ದರು. ಅಂಥವರು ಗದ್ದೆ, ತೋಟಗಳಲ್ಲಿ ಮೈ ಬಗ್ಗಿಸಿ ದುಡಿಯುವುದನ್ನೂ ಬಿಡುತ್ತಿರಲಿಲ್ಲ. ಹಾಗಾಗಿ ಹೆಚ್ಚಿನ ಗರ್ಭಿಣಿಯರಿಗೆ ಸುಲಭ, ಸಹಜ ಪ್ರಸವವಾಗುತ್ತಿತ್ತು.
ಈ ಮಧ್ಯೆ ದೊಡ್ಡ ದಾನಿಗಳ್ಯಾರೋ ತಾಲೂಕು ಆಸ್ಪತ್ರೆಯಲ್ಲಿ ಆಗುತ್ತಿದ್ದ ಪ್ರಸವಗಳ ಸಂಖ್ಯೆಯನ್ನು ನೋಡಿ, ಅಲ್ಲಿ ಹೊಸತೊಂದು ವಾರ್ಡನ್ನು ಕಟ್ಟಿಸಿಕೊಟ್ಟರು. ಸ್ತ್ರೀರೋಗ ತಜ್ಞ ವೈದ್ಯರನ್ನೂ ಕೂಡಾ ಕಾಂಟ್ರ್ಯಾಕ್ಟ್ ಆಧಾರದಲ್ಲಿ ನೇಮಿಸಲಾಯ್ತು.
ಅದರಿಂದಾಗಿ ಕ್ರಮೇಣ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತ ಹೋಗಿ, ತಿಂಗಳೊಂದಲ್ಲಿ ಇನ್ನೂರರ ಗಡಿ ದಾಟತೊಡಗಿತ್ತು. ಹಾಗೆಯೇ ಮೇಲ್ವರ್ಗದ ಗರ್ಭಿಣಿಯರೂ ಅಧಿಕ ಸಂಖೈಯಲ್ಲಿ ದಾಖಲಾಗುತ್ತಿದ್ದರು.
ಹೆಚ್ಚಿನವರು ವಿದ್ಯಾವಂತರೂ, ವಿವಿಧ ನೌಕರಿಗಳಲ್ಲಿ ದುಡಿಯುವವರೂ ಆಗಿದ್ದು, ಅವರ ಮದುವೆ ವಯಸ್ಸು ಕೂಡಾ ಸರಾಸರಿ ಮುವತ್ತು ವರ್ಷಗಳಷ್ಟು ಇತ್ತು ಎನ್ನಬಹುದು. ಅಲ್ಲದೇ ಸ್ಥಿತಿವಂತರೂ ಆಗಿದ್ದರಿಂದ ಅವರ ಗರ್ಭಿಣಿ ಆರೈಕೆಯಲ್ಲಿ ಕೊರತೆ ಇರದ ಹಾಗೆ ನೋಡಿಕೊಳ್ಳುತ್ತಿದ್ದರು.
ಇದರಿಂದಾಗಿ ಅವರಿಗೆ ಜನಿಸುವ ಶಿಶುಗಳ ತೂಕ ಕೂಡಾ ಹೆಚ್ಚಳವಾಗಿರುತ್ತಿದ್ದು, ಮೂರು ವರೆ ಕೆಜಿಯ ಮಗುವಿನ ಜನನ ಸಾಮಾನ್ಯವಾಗತೊಡಗಿತ್ತು. ಸಹಜವಾಗಿಯೇ ಆಸ್ಪತ್ರೆ ಯಲ್ಲಿ ಜರುಗುವ ಸಿಸೇರಿಯನ್ ಶಸ್ತ್ರಚಿಕಿತ್ಸೆಗಳ ಸಂಖೈಯೂ ಏರುತ್ತಾ ಹೋಯಿತು. ಹೀಗೆ, ಸಾಧಾರಣ ಒಂದೆರಡು ವರ್ಷಗಳವರೆಗೆ ನಡೆಯುತ್ತಾ ಹೋಗಿ, ರಾಜ್ಯದಲ್ಲೇ ಹೆಚ್ಚಿನ ಶಿಶುಜನನವಾಗುವ ತಾಲೂಕು ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಆ ಆಸ್ಪತ್ರೆಯದ್ದಾಯಿತು.
ಹೀಗಿರುವಾಗ ರಾಜ್ಯದೆಲ್ಲೆಡೆ, ಸಿಸೇರಿಯನ್ ಶಸ್ತ್ರಚಿಕಿತ್ಸೆಗಳ ಸಂಖ್ಯೆ ವಿಪರೀತ ಹೆಚ್ಚಳ ವಾಗುತ್ತಿದೆ ಎಂಬ ಗುಲ್ಲೆಬ್ಬತೊಡಗಿತು. ಅಂಕೆ ಸಂಕಿಗಳೂ ಅದನ್ನು ಪುಷ್ಟೀಕರಿಸುತ್ತಿದ್ದವು. ಸರ್ಕಾರಿ ಆಸ್ಪತ್ರೆಗಳಲ್ಲೂ ಆ ಸಂಖ್ಯೆ ಹೆಚ್ಚಾಗುತ್ತಿರುವುದು ಇಲಾಖೆಯ ಹಿರಿಯ ಅಧಿಕಾರಿ ಗಳ ನಿದ್ದೆಗೆಡಿಸತೊಡಗಿತು.
ಹಾಗಾಗಿ ಎಲ್ಲಾ ತಜ್ಞವೈದ್ಯರನ್ನು ರಾಜಧಾನಿಗೆ ಕರೆಸಿ, ವಿಚಾರಮಂಥನ ಮಾಡಿ, ಆದಷ್ಟು ಸಹಜ ಪ್ರಸವಕ್ಕೆ ಒತ್ತು ಕೊಡಬೇಕೆಂದೂ, ಅನಿವಾರ್ಯ ಪ್ರಸಂಗಗಲ್ಲಿ ಮಾತ್ರ ಶಸಚಿಕಿತ್ಸೆ ನಡೆಸಬೇಕೆಂದೂ ಸುತ್ತೋಲೆ ಕಳಿಸಲಾಯ್ತು.
ಡಾ.ಎಸ್.ಕೂಡಾ, ತಮ್ಮ ಆಸ್ಪತ್ರೆಯ ಪರವಾಗಿ ಆ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ರಾಜಧಾನಿಯಿಂದ ಬಂದ ಬಳಿಕ ಸಹೋದ್ಯೋಗಿಗಳೊಂದಿಗೆ ಮಾತನಾಡಿಕೊಂಡು, ಗರ್ಭಿಣಿಯರಲ್ಲಿ ಸಿಹಿಮೂತ್ರ, ಏರಿದ ರಕ್ತದೊತ್ತಡ ಅಥವಾ ಇನ್ನಿತರ ಕಾರಣಗಳಿಂದ ಶಸ್ತ್ರಚಿಕಿತ್ಸೆ ಅವಶ್ಯಕವೆಂದು ಅಂದಾಜಿಸಿದ, ತಿಂಗಳು ತುಂಬಿದ ಗರ್ಭಿಣಿಯರನ್ನು ಮೇಲಧಿಕಾರಿಗಳು ಕೊಟ್ಟಿದ್ದ ಸೂಚನೆಯಂತೆ ಜಿಲ್ಲಾಸ್ಪತ್ರೆಗೆ ರವಾನಿಸಿ ಕೈತೊಳೆದು ಕೊಳ್ಳುತ್ತಿದ್ದರು.
ಆದರೂ ಸೂಕ್ತ ಕಾರಣಗಳಿಲ್ಲದೇ ಹಾಗೆ ಕಳುಹಿಸಲು ಅಸಾಧ್ಯವಾಗಿದ್ದರಿಂದ, ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ಅಲ್ಲೇ ನಿಭಾಯಿಸಬೇಕಾಗುತ್ತಿತ್ತು. ಗರ್ಭದ್ವಾರ ಸಂಕುಚಿತವಾಗಿದ್ದಾಗ, ಮಗುವಿನ ಕಾಲು, ಸೊಂಟ ಇತ್ಯಾದಿ ಮುಂದೆ ಬಂದಾಗ ಅಥವಾ ಎರಡನೇ ಅಥವಾ ಮೂರನೆ ಭಾರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಆಗಬೇಕಾದಾಗ- ಹೀಗೆ ಶಸ್ತ್ರಚಿಕಿತ್ಸೆಯನ್ನು ಅವಶ್ಯ ಮಾಡಲೇಬೇಕಾದ ಸಂದರ್ಭಗಳಲ್ಲಿ, ಡಾ. ಎಸ್. ಹಾಗೂ ಸಹೋದ್ಯೋಗಿಗಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಆದರೆ ತೊಂದರೆಯಾಗುವುದೇ ಆ ದಿನ ಬೆಳಿಗ್ಗಿನ ಜಾವ ಬಂದಂತಹ ಕೇಸುಗಳಿಂದ. ಮೇಲ್ನೋಟಕ್ಕೆ ಎಲ್ಲಾ ಸರಿಯಿದ್ದು, ಅಲ್ಟ್ರಾಸೌಂಡ್ ವರದಿ ಕೂಡಾ ತೊಂದರೆಯಿಲ್ಲ ಎಂದು ಸೂಚಿಸುತ್ತಿರುವಾಗ, ಶಸ್ತ್ರಚಿಕಿತ್ಸೆ ಮಾಡಲು ಸರಿಯಾದ ಕಾರಣವಿರದಾಗ ವೈದ್ಯರ ಅನುಭವ ಏನೇ ಮುನ್ಸೂಚನೆ ಕೊಟ್ಟರೂ, ಸಹಜ ಪ್ರಸವಕ್ಕೆ ಕಾಯಬೇಕಾಗುತ್ತಿತ್ತು.
ಕೆಲವೊಮ್ಮೆ ಏನೂ ತೊಂದರೆಯಾಗದೆ, ಮಗು ಸರಿಯಾದ ಮಾರ್ಗದಲ್ಲಿ ತಿರುಗಿ, ಹೆರಿಗೆ ಆಗುತ್ತಿದ್ದರೂ ಇನ್ನು ಕೆಲವೊಮ್ಮೆ ಮಗು ಕೊನೆಯ ಕ್ಷಣಗಳಲ್ಲಿ ಅಡ್ಡ ತಿರುಗಿ ಸಹಜ ಹೆರಿಗೆಯಾಗದೇ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತಿತ್ತು.
ಗರ್ಭಕೋಶದೊಳಕ್ಕೆ ಮಗು ದೀರ್ಘಾವಧಿಯ ಹೆರಿಗೆ ಬೇನೆಗೆ ತುತ್ತಾಗಿಯೋ ಅಥವಾ ಯಾವುದೋ ಕಾರಣಕ್ಕೆ ಸುಸ್ತಾಗಿ, ಭೇದಿ ಮಾಡಿಕೊಂಡು, ಹೆರಿಗೆಯ ಸಮಯದಲ್ಲಿ ಮಲ ಸೇರಿದ ಹಳ್ನೀರಿನ ಅಂಶ ಮಗುವಿನ ಶ್ವಾಸಕೋಶಕ್ಕೆ ಹೋಗಿ ಮಗುವಿಗೆ ಉಸಿರಾಡಲು ಕಷ್ಟವಾಗಿ, ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ ಕಳಿಸಬೇಕಾದ ಸಂದರ್ಭ ಗಳೂ ಬರುತ್ತಿದ್ದವು.
ಈ ಕಾರಣಗಳನ್ನೆಲ್ಲಾ ಗರ್ಭಿಣಿ ಸ್ತ್ರೀಗೆ, ಆಕೆಯ ಹತ್ತಿರದ ಸಂಬಂಧಿಕರಿಗೆ ಅರ್ಥಮಾಡಿಸಿ ಹೇಳುವುದೂ ಬಹಳ ಕ್ಲಿಷ್ಟಕರವಾಗುತ್ತಿತ್ತು. ಅಷ್ಟು ಹೇಳಿಯೂ ಕೊನೆಯ ಕ್ಷಣದವರೆಗೂ ಶಸಚಿಕಿತ್ಸೆಗೆ ಒಪ್ಪದ ಪ್ರಸಂಗಗಳೂ ಇದ್ದವು. ಆ ದಿನ ಬಂದ ಗರ್ಭಿಣಿಯ ಕಥೆಯೂ ಅದೇ ಆಗಿತ್ತು. ಬೆಳಿಗ್ಗಿನ ಜಾವಕ್ಕೆ ಬಂದ ಆಕೆ, ಆಕೆಯ ಗಂಡ, ತಾಯಿ, ಯಾರೊಬ್ಬರೂ ಆಪರೇಷನ್ ಮಾಡಲು ಸುತರಾಂ ಒಪ್ಪಲಿಲ್ಲ.
“ಏನೇ ಆಗಲಿ, ಈಗ ನನ್ನ ಕರ್ತವ್ಯದ ಸಮಯ ಮುಗಿಯುತ್ತ ಬಂತು. ಈಗ ಡ್ಯೂಟಿಗೆ ಬಂದ ಡಾ. ಕೃಷ್ಣಕಾಂತ್ʼರಿಗೆ ಒಪ್ಪಿಸಿ ಹೋಗುತ್ತೇನೆ" ಎಂದುಕೊಂಡು ನಿರಾಳರಾದರು. ಸಾಯಂ ಕಾಲ ಎಂಟು ಗಂಟೆಗೆ ಪುನಃ ಕರ್ತವ್ಯಕ್ಕೆ ಹಾಜರಾದ ಅವರಿಗೆ, ಇನ್ನೂ ಪ್ರಸವ ವೇದನೆ ಯನ್ನು ಅನುಭವಿಸುತ್ತಿದ್ದ ಆ ಗರ್ಭಿಣಿಯನ್ನು ನೋಡಿ ಆಶ್ಚರ್ಯವಾಯಿತು. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿ ನೋಡಿಸುವಾ ಎಂದರೆ, ಸ್ಕ್ಯಾನಿಂಗ್ ತಜ್ಞರು ರಜೆಯಲ್ಲಿದ್ದರು. ಹೊರಗಡೆ ಕಳಿಸುವ ಎಂದುಕೊಂಡರೆ, ಅತ್ತೆ ಮತ್ತು ಪತ್ನಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು, ಗಂಡ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಶಸ್ತ್ರಚಿಕಿತ್ಸೆ ಮಾಡಲು ಗರ್ಭಿಣಿ ಒಪ್ಪಿಗೆ ಕೊಟ್ಟಿರಲಿಲ್ಲ.
ವೈದ್ಯರಿಬ್ಬರೂ ಪ್ರಸೂತಿ ಕೋಣೆಗೆ ಬರುತ್ತಿದ್ದಂತೆ, ಅಲ್ಲಿನ ಸಿಸ್ಟರ್ “ಡಾಕ್ಟ್ರೆ ಈಗಷ್ಟೇ ಹಳ್ನೀರು ಒಡೆಯಿತು. ಮಗು ಹೊಟ್ಟೆಯಲ್ಲಿ ಮೆಕೋನಿಯಮ್ (ಮಲ) ವಿಸರ್ಜಿಸಿದಂತೆ ಕಾಣುತ್ತಿದೆ" ಎಂದಳು. “ಅಯ್ಯೋ, ಪುನಃ ನನ್ನ ಕುತ್ತಿಗೆಗೇ ಬಂತಲ್ಲ ಗೋಳು" ಎಂದುಕೊಂಡ ಡಾ.ಎಸ್. ಪರೀಕ್ಷೆ ಮಾಡಿ ನೋಡಿದಾಗ, ಹಳ್ನೀರಿನಲ್ಲಿ ಮಗುವಿನ ಮಲ ಸೇರಿಕೊಂಡಿದ್ದು ಮನದಟ್ಟಾಯ್ತು.
ಅಲ್ಲದೇ, ಅಡ್ಡ ತಿರುಗಿಕೊಂಡಿದ್ದೂ ಸಾಬೀತಾಯ್ತು. ಮಗುವಿನ ಹೃದಯ ಬಡಿತ ಸಾಮಾನ್ಯ ಮಿತಿಯೊಳಗಿದ್ದರೂ, ಸಣ್ಣ ನೋವಿಗೂ ಸ್ವಲ್ಪ ಹೆಚ್ಚಾಗಿ, ಮಗು ಸುಸ್ತಾಗಿರುವು ದನ್ನು ಸೂಚಿಸುತ್ತಿತ್ತು.
ಗರ್ಭಿಣಿಯ ಕಡೆಯವರನ್ನು ಒಳಗೆ ಕರೆಸಿ, ಪರಿಸ್ಥಿತಿಯನ್ನು ತಿಳಿಸಿ ಹೇಳಿ, “ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು, ಇಲ್ಲದಿದ್ದರೆ ಮಗುವಿನ ಜೀವಕ್ಕೆ ಅಪಾಯದ ಸಂಭವ ಇದೆ" ಎಂದು ಹೇಳಿದಾಗ ಗರ್ಭಿಣಿ ಅಳತೊಡಗಿದಳು. ಆಕೆಯ ತಾಯಿ “ಅಯ್ಯೋ ನಾನೀಗ ಒಬ್ಬಳೇ ಇದ್ದೇನೆ. ಅಳಿಯನನ್ನೇ ಕೇಳಬೇಕು. ಆತ ಇನ್ನೊಂದು ಗಂಟೆಯಲ್ಲಿ ಬರುತ್ತೇನೆ ಎಂದು ಹೇಳಿದ್ದಾನೆ" ಎಂದಳು.
ಆಗ ಡಾ. ಎಸ್. “ನೋಡಮ್ಮ, ಈಗಲೇ ಅಳಿಯನಿಗೆ ಫೋನ್ ಮಾಡಿ. 20 ಗಂಟೆಗಳಿಗೂ ಹೆಚ್ಚು ಕಾಲ ವೇದನೆ ಅನುಭವಿಸಿ ತಾಯಿ ಸೋತಿದ್ದಾಳೆ, ಮಗುವೂ ಸುಸ್ತಾಗಿ ಬೇಧಿ ಮಾಡಿಕೊಂಡಿದೆ, ಅದರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿ" ಎಂದರು. ತಾಯಿ ಅಳಿಯನಿಗೆ ಕರೆ ಮಾಡಿ ಮಾತಾಡಿ “ಡಾಕ್ಟ್ರೇ ನೀವೇ ಮಾತಾಡಿ" ಎಂದಳು.
ವೈದ್ಯರು ಪುನಃ ಎಲ್ಲ ವಿಷಯವನ್ನು ಗಂಡನಿಗೆ ತಿಳಿಸಿ ಹೇಳಿದರು. ಆ ಕಡೆಯಿಂದ ಗಂಡ “ಆಯ್ತು ಡಾಕ್ಟ್ರೆ, ನಾನಿನ್ನು ಅರ್ಧ ಗಂಟೆಯಲ್ಲಿ ಬರ್ತೇನೆ. ಬಂದವನೇ ನಿಶ್ಚಯ ಮಾಡಿ ಹೇಳುತ್ತೇನೆ" ಎಂದ.
ವೈದ್ಯರು ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡರು. ಅಂತೂ ಅರ್ಧ ಗಂಟೆಯಲ್ಲಿ ಗರ್ಭಿಣಿಯ ಗಂಡ ಬಂದು, ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಕೊಟ್ಟ. ಆ ಕೂಡಲೇ ಗರ್ಭಿಣಿಯನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕೊಂಡ್ಯೊಯ್ದ ವೈದ್ಯರು ತ್ವರಿತವಾಗಿ ಮಗುವನ್ನು ಹೊರತೆಗೆದರು. ಆದರೂ ಕೂಡಾ, ಮಗು ಹಳ್ನೀರನ್ನು ಕುಡಿದು, ಮಗುವಿನ ಶ್ವಾಸಕೋಶಕ್ಕೂ ಮಲ ಬೆರೆತ ಹಳ್ನೀರು ಹೋಗಿ ಮಗು ಸರಿಯಾಗಿ ಕೂಗದೇ ಉಸಿರಾಡಲು ಕಷ್ಟಪಡತೊಡಗಿತು.
ಮಗುವಿನಲ್ಲಿ ಆಮ್ಲಜನಕದ ಕೊರತೆ ಕಂಡುಬರುತ್ತಿದ್ದಂತೆ ಬೇಕಾದ ಚಿಕಿತ್ಸೆ ಹಾಗೂ ಮೂಗಿನ ಮೂಲಕ ನಿಧಾನವಾಗಿ ಆಮ್ಲಜನಕ ಕೊಟ್ಟಾಗ ಸ್ವಲ್ಪ ಸರಿಯಾದಂತೆ ತೋರಿದರೂ, ಮಗುವನ್ನು ಪರೀಕ್ಷಿಸಿದ ತಜ್ಞರು “ಮಗುವಿಗೆ ವೆಂಟಿಲೇಟರ್ ಬೇಕಾಗ ಬಹುದು. ತಕ್ಷಣ ಜಿಲ್ಲಾಸ್ಪತ್ರೆಯ ನವಜಾತ ಶಿಶು ಕೇಂದ್ರಕ್ಕೆ ಕಳಿಸಿ" ಎಂದರು.
ತಮ್ಮ ತಪ್ಪಿನ ಅರಿವಾದ ಗಂಡ ಬೇರೇನನ್ನೂ ಹೇಳದೆ ಆ ಕೂಡಲೇ ಅಂಬುಲೆನ್ಸ್‌ನಲ್ಲಿ ಮಗುವನ್ನು ಕೊಂಡೊಯ್ದ. ಅಲ್ಲಿ ಮಗುವಿನ ಕೃತಕ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಿದರು. ಐದಾರು ದಿನಗಳ ಬಳಿಕ, ಮಗುವಿನ ಪರಿಸ್ಥಿತಿ ಉತ್ತಮವಾದ್ದರಿಂದ, ವೆಂಟಿಲೇಟರ್‌ನಿಂದ ತೆಗೆದು, ಎದೆಹಾಲಿಗಾಗಿ ತಾಯಿಯನ್ನು ಜಿಲ್ಲಾಸ್ಪತ್ರೆಗೆ ಕರೆಸಿಕೊಂಡರು. ಹದಿನೈದು ದಿನಗಳಿಗೂ ಹೆಚ್ಚು ಕಾಲ ಅಲ್ಲಿದ್ದು, ಮಗು ಹುಶಾರಾಗಿ, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆ ಮಗುವೇನೋ ಅದೃಷ್ಟಶಾಲಿಯಾಗಿದ್ದ ರಿಂದ, ಉಳಿದುಕೊಂಡಿತು.
ಯಾವುದೇ ಕಾಯಿಲೆಯಿದ್ದರೂ ಚಿಕಿತ್ಸಕ ವೈದ್ಯನಿಗೆ, ರೋಗಿಯನ್ನು ಪರೀಕ್ಷಿಸಿದಾಕ್ಷಣ, ಕೆಲವೊಮ್ಮೆ ಏನೋ ಒಂದು ಅನಿಸಿಕೆ ಉಂಟಾಗುತ್ತದೆ. ಈ ಕೇಸಿನಲ್ಲಿ ಆದುದೂ ಹಾಗೇನೆ. ಡಾ. ಎಸ್. ಮೊದಲ ಬಾರಿ ಪರೀಕ್ಷಿಸಿದಾಗಲೇ ಇದೇನೋ ಸರಳವಾದ ಪ್ರಸಂಗವಲ್ಲ, ಸಹಜ ಪ್ರಸವಕ್ಕೆ ಬಿಟ್ಟರೆ ಬಹುಶಃ ಮಗು ಅಡ್ಡ ತಿರುಗುವ ಸಂದರ್ಭ ಉಂಟಾಗಬಹುದು, ತಾಯಿ ಗೂ, ಮಗುವಿಗೂ ತೊಂದರೆಯಾಗಬಹುದು ಎಂಬ ಭಾವನೆ ಉಂಟಾಗಿತ್ತು.
ಕೊನೆಗೆ ಅದು ನಿಜವೂ ಆಯಿತು. ಸರಿಯಾದ ಕಾರಣಗಳಿಲ್ಲದೆ ಸುಮ್ಮಸುಮ್ಮನೆ ಸಿಸೇರಿ ಯನ್ ಶಸ್ತ್ರಚಿಕಿತ್ಸೆ ಮಾಡಕೂಡದು ಎಂಬ ಮೇಲಾಧಿಕಾರಿಗಳು ಕೊಟ್ಟ ಕಟ್ಟು ನಿಟ್ಟಿನ ಆದೇಶವೂ ಆತನನ್ನು ತನ್ನ ಅನಿಸಿಕೆಯಂತೆ ಮುಂದುವರೆಯಲು, ಹಿಂಜರಿಯುವಂತೆ ಮಾಡಿತ್ತು.
ಕೊನೆಯ ಕ್ಷಣದವರೆಗೂ, ಸಂಬಂಧಿಕರು ಶಸ್ತ್ರಚಿಕಿತ್ಸೆಗೆ ಒಪ್ಪಿಗೆಯನ್ನು ಕೊಟ್ಟಿರಲಿಲ್ಲ. ಹೀಗಾಗಿ ಆ ಗರ್ಭಿಣಿ 20 ಗಂಟೆಗಳಿಗಿಂತಲೂ ಹೆಚ್ಚು ಕಾಲ ಹೆರಿಗೆ ನೋವಿನಿಂದ ನರಳ ಬೇಕಾಯಿತು. ನವಜಾತ ಶಿಶು ಕೇಂದ್ರ ಸಾಧಾರಣ ಒಂದು ಗಂಟೆಯ ದೂರದಲ್ಲಿದ್ದ ರಿಂದ, ಸೂಕ್ತ ಚಿಕಿತ್ಸೆ ದೊರೆತು, ಮಗುವಿನ ಜೀವ ಉಳಿದದ್ದು ಅದೃಷ್ಟ ಎಂದೇ ಹೇಳಬೇಕು. ಕಾಯಿಲೆ ಒಂದಾದರೂ, ಪ್ರತಿಯೊಬ್ಬ ರೋಗಿಯಲ್ಲಿ ಕೂಡಾ ಚಿಕಿತ್ಸೆ ವಿಶಿಷ್ಟ, ವಿಭಿನ್ನ ವಾಗಿದ್ದು, ಅದು ಕೆಲವೊಮ್ಮೆ ರೋಗಿಗೆ ಹಾಗೂ ಚಿಕಿತ್ಸಕ ವೈದ್ಯನಿಗೆ ಭೀಕರ ರಣರಂಗ ವಾಗುವ ಸಾಧ್ಯತೆ, ವಿಭಿನ್ನವಾಗಿದ್ದು, ಅದು ಕೆಲವೊಮ್ಮೆ ರೋಗಿಗೆ ಹಾಗೂ ಚಿಕಿತ್ಸಕ ವೈದ್ಯನಿಗೆ ಭೀಕರ ರಣರಂಗವಾಗುವ ಸಾಧ್ಯತೆ, ಸಂಭಾವ್ಯತೆಯಂತೂ ಇದ್ದೇ ಇದೆ.
ರೋಗಿಗಳ ಸಮಗ್ರ ಒಳಿತಿಗಾಗಿ ವಿಧಿಸಲ್ಪಟ್ಟ ಕೆಲವೊಂದು ಕಾನೂನುಗಳ ಕಟ್ಟುಪಾಡಿ ನಿಂದಾಗಿ, ಅಂಥಾ ಸಂಭಾವ್ಯತೆ ಇನ್ನೂ ಹೆಚ್ಚಾಗಬಹುದು.