MLA Ashok Kumar Rai Interview: ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿಶ್ವವಾಣಿ ಜತೆ ಹಂಚಿಕೊಂಡಿದ್ದಾರೆ.
-
ವಿಶ್ವವಾಣಿ ವಿಶೇಷ ಸಂದರ್ಶನ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಗಳನ್ನು ವಿಶ್ವವಾಣಿ ಜತೆ ಹಂಚಿಕೊಂಡಿದ್ದಾರೆ. ಪುತ್ತೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2023ರ ವಿಧಾನಸಭಾ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಅಶೋಕ್ ಕುಮಾರ್ ರೈ, ಪಕ್ಷ ರಾಜಕೀಯ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಪುತ್ತೂರಿನ ಅಭಿವೃದ್ಧಿ ಯೋಜನೆಗಳಿಂದ ಹಿಡಿದು ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿಸುವ ಹೋರಾಟದವರೆಗೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಪ್ರಶ್ನೆ: ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಮೂರು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ನಿಮ್ಮ ಕೆಲಸದ ಬಗ್ಗೆ ತೃಪ್ತಿ ಇದೆಯೇ?
ಅಶೋಕ್ ಕುಮಾರ್ ರೈ: ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೆಲವು ಭರವಸೆಗಳನ್ನು ನೀಡಿ ದ್ದೆವು. ಕಳೆದ 30-40 ವರ್ಷಗಳಿಂದ ಪುತ್ತೂರಿನ ಜನ ನಿರೀಕ್ಷಿಸುತ್ತಿದ್ದ ಕೆಲವು ಪ್ರಮುಖ ಯೋಜನೆ ಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಆ ಭರವಸೆಗಳ ಪೈಕಿ ಹಲವು ಪ್ರಮುಖ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ. ಅವುಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: B Y Vijayendra Interview: ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ
ಪ್ರಶ್ನೆ: ಪುತ್ತೂರಿನ ಪ್ರಮುಖ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಾಗುತ್ತಿದೆ?
ಅಶೋಕ್ ಕುಮಾರ್ ರೈ: ಪುತ್ತೂರಿನಲ್ಲಿ ಮಳೆಯೂ ಇದೆ, ನದಿಗಳೂ ಇವೆ. ಆದರೂ ಬೇಸಿಗೆ ಬರುತ್ತಿದ್ದಂತೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಮಾರ್ಚ್-ಏಪ್ರಿಲ್ ವೇಳೆಗೆ ಹಲವು ಬೋರ್‌ವೆಲ್‌ಗಳು ಬತ್ತುತ್ತಿದ್ದವು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಮಾರು 1006 ಕೋಟಿ ರು. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಹಂತ ಹಂತವಾಗಿ ನೀರು ಒದಗಿಸುವ ಕೆಲಸ ನಡೆಯಲಿದೆ.
ಪ್ರಶ್ನೆ: ಪುತ್ತೂರಿನ ಬಹುದಿನಗಳ ಕನಸಾಗಿದ್ದ ವೈದ್ಯಕೀಯ ಕಾಲೇಜಿನ ಸ್ಥಿತಿ ಏನು?
ಅಶೋಕ್ ಕುಮಾರ್ ರೈ: ಈ ಭಾಗದ ಜನರ ಬಹುದಿನಗಳ ಕನಸು ವೈದ್ಯಕೀಯ ಕಾಲೇಜು. ಆದರೆ ಇದು ಸಾಧ್ಯವಾಗುವುದಿಲ್ಲ ಎಂಬ ಮನೋಭಾವವೂ ಜನರಲ್ಲಿ ಮೂಡಿತ್ತು. ಸುಮಾರು 40 ಎಕರೆ ಜಾಗ ಕಾಯ್ದಿರಿಸುವ ಕೆಲಸ ಮಾಡಲಾಗಿದೆ. 550 ಕೋಟಿ ರು. ವೆಚ್ಚದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಮುಂದಿನ ಹಂತದಲ್ಲಿ ಟೆಂಡರ್ ಸೇರಿದಂತೆ ಪ್ರಕ್ರಿಯೆಗಳು ನಡೆಯಲಿವೆ.
ಪ್ರಶ್ನೆ: ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಏನು ಹೇಳುತ್ತೀರಿ?
ಅಶೋಕ್ ಕುಮಾರ್ ರೈ: ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕೆಲಸ ಪ್ರಮುಖವಾಗಿದೆ. ಇದರ ಜತೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 18 ಎಕರೆ ಜಾಗವನ್ನು ದೇವಸ್ಥಾನಕ್ಕೆ ಮರಳಿ ನೀಡುವ ಕೆಲಸ ಮಾಡಲಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಸುಮಾರು 60 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.
ಪ್ರಶ್ನೆ: ಪುತ್ತೂರನ್ನು ದೇವಸ್ಥಾನ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡುವ ನಿಮ್ಮ ಕನಸು ಹೇಗಿದೆ?
ಅಶೋಕ್ ಕುಮಾರ್ ರೈ: ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆ ಪ್ರವಾಸಿಗರನ್ನು ಪುತ್ತೂರು ಮತ್ತು ಉಪ್ಪಿನಂಗಡಿಗೂ ಕರೆತರುವ ರೀತಿಯಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿಯಾಗಬೇಕು. ಮೂಲಸೌಕರ್ಯ ಅಭಿವೃದ್ಧಿಯಾದರೆ ಪುತ್ತೂರಿನ ದೇವಸ್ಥಾನ ಪ್ರವಾಸೋದ್ಯಮವೂ ಬೆಳೆಯಲಿದೆ.
ಪ್ರಶ್ನೆ: ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ ಕೇವಲ ಸಭೆಗಳಿಗೆ ಸೀಮಿತವಾಗಿದೆಯೇ?
ಅಶೋಕ್ ಕುಮಾರ್ ರೈ: ಕೇರಳ ಮತ್ತು ಗೋವಾಕ್ಕೆ ಹೋಲಿಸಿದರೆ ನಮ್ಮಲ್ಲಿಯೂ ಸಾಕಷ್ಟು ಸಾಮರ್ಥ್ಯ ವಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರಕಾರದ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಕುದುರು ಐಲ್ಯಾಂಡ್‌ನಂತಹ ಸ್ಥಳಗಳನ್ನು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನವಾಗಬೇಕು.
ಪ್ರಶ್ನೆ: ಪುತ್ತೂರಿಗೆ ಕೈಗಾರಿಕೆಗಳು ಮತ್ತು ಉದ್ಯೋಗಗಳನ್ನು ತರಲು ಏನು ಮಾಡಲಾಗುತ್ತಿದೆ?
ಅಶೋಕ್ ಕುಮಾರ್ ರೈ: ಪುತ್ತೂರಿಗೆ ಕೈಗಾರಿಕೆಗಳು ಬರಬೇಕು ಎಂಬುದು ನಮ್ಮ ಮತ್ತೊಂದು ಪ್ರಮುಖ ಕನಸು. ಕೆಎಂಎ-ಗೆ ಸುಮಾರು 15 ಎಕರೆ ಜಾಗ ನೀಡಲಾಗಿದೆ. ಇದರ ಜತೆಗೆ ಕೊಯಿಲ ಉಪ್ಪಿನಂಗಡಿ ಭಾಗದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸುವ ಕೆಲಸವೂ ನಡೆಯುತ್ತಿದೆ.
ಪ್ರಶ್ನೆ: ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೀರಿ. ಅದರ ಯೋಜನೆ ಏನು?
ಅಶೋಕ್ ಕುಮಾರ್ ರೈ: ಸುಮಾರು 15 ಎಕರೆ ಪ್ರದೇಶದಲ್ಲಿ ಪುತ್ತೂರಿನಲ್ಲಿ ಕ್ರೀಡಾಂಗಣ ನಿರ್ಮಿ ಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 10 ಕೋಟಿ ರು. ಅನುದಾನದಲ್ಲಿ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿದೆ. ಸಿಂಥೆಟಿಕ್ ಟ್ರ್ಯಾಕ್, ಈಜುಕೊಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲಾಗುವುದು.
ಪ್ರಶ್ನೆ: ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಅನುದಾನದಲ್ಲಿ ತಾರತಮ್ಯ ಇದೆ ಎಂಬ ಆರೋಪಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಶೋಕ್ ಕುಮಾರ್ ರೈ: ಕಳೆದ ಮೂರು ವರ್ಷಗಳಲ್ಲಿ ಸುಮಾರು 3500 ಕೋಟಿ ರು. ಅನುದಾನ ವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಅನುದಾನ ಪಡೆಯಲು ಶಾಸಕರು ಸರಕಾರದ ಮುಂದೆ ಸರಿಯಾದ ಪ್ರಸ್ತಾವನೆ ಗಳನ್ನು ಸಲ್ಲಿಸಿ, ಕಡತಗಳನ್ನು ಅನುಸರಿಸಿ, ಅಧಿಕಾರಿಗಳು ಮತ್ತು ಸಚಿವರೊಂದಿಗೆ ನಿರಂತರವಾಗಿ ಚರ್ಚಿಸಬೇಕು. ಪ್ರತಿಯೊಂದು ಕಡತದ ಹಿಂದೆ ಹೋಗಿ ಕೆಲಸ ಮಾಡಿದರೆ ಯೋಜನೆ ಗಳಿಗೆ ಅನುದಾನ ತರಬಹುದು.
ಪ್ರಶ್ನೆ: ಪಕ್ಷಾತೀತವಾಗಿ ಜನರ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಿ.
ಅಶೋಕ್ ಕುಮಾರ್ ರೈ: ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನನ್ನ ಬಳಿ ಬಂದಾಗ, ಅವರು ಯಾವ ಪಕ್ಷದವರು ಎಂಬುದನ್ನು ನಾನು ನೋಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ನ್ಯಾಯ ಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರು ವಷ್ಟು ಅಧಿಕಾರವನ್ನು ಬಳಸಿಕೊಂಡು ಕೆಲಸ ಮಾಡುತ್ತೇನೆ.
ಪ್ರಶ್ನೆ: ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಧರ್ಮಾಧಾರಿತ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಶೋಕ್ ಕುಮಾರ್ ರೈ: ಪ್ರತಿಯೊಬ್ಬರಿಗೂ ಅವರವರ ಧರ್ಮ ಮುಖ್ಯ. ಇತರ ಧರ್ಮಗಳ ಜನರಿಗೂ ಸರಕಾರದಿಂದ ಸಿಗಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂಬುದು ನಮ್ಮ ನಿಲುವು. ಇನ್ನು ಮುಂದೆ ಚುನಾವಣೆಗಳು ಕೇವಲ ಧರ್ಮದ ಆಧಾರದ ಮೇಲೆ ನಡೆಯದೆ ‘ಅಭಿವೃದ್ಧಿಯ ಆಧಾರದ ಮೇಲೆ ನಡೆಯಬೇಕು’. ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸಿಗುವಂತೆ ಮಾಡುವವರು ಯಾರು ಎಂಬುದನ್ನು ಜನರು ಗಮನಿಸಿ ಮತ ನೀಡಬೇಕು.
ಪ್ರಶ್ನೆ: ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಶೋಕ್ ಕುಮಾರ್ ರೈ: ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವುದರಲ್ಲಿ ತಪ್ಪಿಲ್ಲ. ಇದು ದಕ್ಷಿಣ ಕನ್ನಡದ ಸಾಂಸ್ಕೃತಿಕ ಕ್ರೀಡೆ. ಜನರು ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ಪರಂಪರೆಯ ಕ್ರೀಡೆಯಾಗಿದೆ. ಮೈಸೂರಿನಲ್ಲಿ ಕಂಬಳ ಆಯೋಜಿಸಿದರೆ ಕರಾವಳಿ ಯ ಸಂಸ್ಕೃತಿಯನ್ನು ರಾಜ್ಯದ ಇತರ ಭಾಗಗಳ ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ.
ಪ್ರಶ್ನೆ: ಪಕ್ಷದಲ್ಲಿರುವ ವಿವಿಧ ಬಣಗಳ ಕುರಿತು ತಮ್ಮ ಅಭಿಪ್ರಾಯ?
ಅಶೋಕ್ ಕುಮಾರ್ ರೈ: ನಾವು ಯಾವುದೇ ಬಣದಲ್ಲಿಲ್ಲ. ಕಾಂಗ್ರೆಸ್ ಪಕ್ಷದ ಜತೆ ಇದ್ದೇನೆ. ನನ್ನನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ನೀಡುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ದೊಡ್ಡದು. ಸಿದ್ದರಾಮಯ್ಯ ಅವರ ನೇರವಾದ ವ್ಯಕ್ತಿತ್ವದಿಂದ ಸಾಕಷ್ಟು ಕಲಿತಿದ್ದೇನೆ, ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಶೈಲಿ ಮತ್ತು ಸಂಘಟನಾ ಸಾಮರ್ಥ್ಯವನ್ನೂ ಮೆಚ್ಚಿದ್ದೇನೆ. ಇಬ್ಬರೂ ಒಟ್ಟಾಗಿ 2028ರ ಚುನಾವಣೆಯನ್ನು ಎದುರಿಸಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ.
ಪ್ರಶ್ನೆ: 2028ರ ಚುನಾವಣೆಯ ಬಗ್ಗೆ ನಿಮ್ಮ ವಿಶ್ವಾಸವೇನು?
ಅಶೋಕ್ ಕುಮಾರ್ ರೈ: ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಮುಂದಿನ ಎರಡು ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ರೈತರು, ಯುವಕರು ಸೇರಿದಂತೆ ವಿವಿಧ ವರ್ಗಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ಮುಖ್ಯ.
ಪ್ರಶ್ನೆ: ಪುತ್ತೂರಿನ ಮತದಾರರಿಗೆ ನಿಮ್ಮ ಸಂದೇಶವೇನು?
ಅಶೋಕ್ ಕುಮಾರ್ ರೈ: ಜನರು ನನಗೆ ಮತ ನೀಡಿ ಶಾಸಕನನ್ನಾಗಿ ಮಾಡಿದ್ದಾರೆ. ಆ ಋಣವನ್ನು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ತೀರಿಸಬೇಕು ಎಂಬುದು ನನ್ನ ಉದ್ದೇಶ. ನನ್ನಿಂದ ಸಾಧ್ಯ ವಾಗುವ ಕೆಲಸಗಳನ್ನು ಪಕ್ಷಾತೀತವಾಗಿ ಮಾಡುತ್ತೇನೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಕಲಿಸಬೇಕು ಮತ್ತು ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳು ಉತ್ತಮವಾಗಿ ಬೆಳೆದರೆ ಕುಟುಂಬವೂ, ಗ್ರಾಮವೂ, ರಾಜ್ಯವೂ ಅಭಿವೃದ್ಧಿ ಯಾಗುತ್ತದೆ. ಕ್ಷೇತ್ರದ ಜನರಿಗೆ ತಮ್ಮ ಕಚೇರಿ ಸದಾ ಲಭ್ಯವಿರುತ್ತದೆ. ಪ್ರತಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಚೇರಿಯಲ್ಲಿ ಇರುವೆ. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದು.
ಪ್ರಶ್ನೆ: ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿಸುವ ಕುರಿತು ಏನು ನಡೆದಿದೆ?
ಅಶೋಕ್ ಕುಮಾರ್ ರೈ: ಶಾಸಕನಾಗಿ ಮೊದಲ ಅಧಿವೇಶನಕ್ಕೆ ಹೋಗುವಾಗಲೇ ತುಳು ಭಾಷೆ ಯನ್ನು ಕರ್ನಾಟಕದ ಹೆಚ್ಚುವರಿ ಭಾಷೆಯನ್ನಾಗಿಸುವ ಕುರಿತು ಪ್ರಶ್ನೆ ಕೇಳುವಂತೆ ಹಿರಿಯರು ಸಲಹೆ ನೀಡಿದ್ದರು. ಅಂದಿನಿಂದ ಈ ವಿಚಾರವನ್ನು ಕೈಬಿಟ್ಟಿಲ್ಲ. ಈ ಕುರಿತು ವರದಿ ಸಿದ್ಧಪಡಿಸ ಲಾಗಿದೆ. ಮುಖ್ಯಮಂತ್ರಿ ಯವರಿಗೂ ಮನವಿ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯ ಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸುವಂತೆ ಮನವಿ ಮಾಡಲಾಗಿದೆ. ಹೋರಾಟ ಮುಂದುವರಿಸುವೆ.