ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಅನಂತನಾಗ್‌ ಪಠಿಸಿದ ಆದಿಶಂಕರರ ಸಾಧನಾಪಂಚಕ

ಅನಂತನಾಗ್ ಮಾತು ವಸ್ತುನಿಷ್ಠ. ಅಹಂಕಾರದ್ದಲ್ಲ. ಒಣಪಾಂಡಿತ್ಯ ಪ್ರದರ್ಶನದ್ದಲ್ಲ. ವೇದಿಕೆಯ ಮೇಲಿರುವವರನ್ನೇ ಇಂದ್ರಚಂದ್ರ ಎಂದು ಮತ್ತೆಮತ್ತೆ ಹೊಗಳಿ ಅವರಿಗೇ ಮುಜುಗರವಾಗುವಂಥ ಮುಖಸ್ತುತಿ ಇಲ್ಲ. ಆದ್ದರಿಂದಲೇ ನಾನವರ ಭಾಷಣವನ್ನು ಐದಾರು ಸರ್ತಿ ಕೇಳಿಸಿಕೊಂಡೆ. ತನ್ನ ಬಾಲ್ಯ, ಕಾಸರಗೋಡಿನ ಆನಂ ದಾಶ್ರಮದಲ್ಲಿ ಮತ್ತು ಶಿರಾಲಿ ಮಠದಲ್ಲಿ ವಾಸ್ತವ್ಯ, ಪ್ರಾಥಮಿಕ ಶಾಲಾದಿನಗಳಲ್ಲೇ ಗಣಪತ್ಯಥರ್ವಶೀರ್ಷ, ರುದ್ರ, ಮಂತ್ರ ಪುಷ್ಪಾಂಜಲಿ ಇತ್ಯಾದಿಯ ಪಠನ, ತಂದೆಯವರ ಒತ್ತಾಸೆಯಿಂದ ಭಗವದ್ಗೀತೆಯ ಎಲ್ಲ 700 ಶ್ಲೋಕಗಳ ಕಂಠಪಾಠ ಕಲಿಕೆಗಳನ್ನೆಲ್ಲ ಅನಂತನಾಗ್ ಹೃದಯಂಗಮವಾಗಿ ನೆನಪಿಸಿಕೊಂಡರು.

ಅನಂತನಾಗ್‌ ಪಠಿಸಿದ ಆದಿಶಂಕರರ ಸಾಧನಾಪಂಚಕ

-

ತಿಳಿರುತೋರಣ

ಅನಂತನಾಗ್ ಎಲ್ಲರಿಗೂ ಇಷ್ಟವಾಗುವ ಪ್ರತಿಭಾನ್ವಿತ ಕಲಾವಿದ. ಅಷ್ಟೇ ಅತ್ಯುತ್ತಮ ಅವರ ವ್ಯಕ್ತಿತ್ವ ಕೂಡ. ಡಿವಿಜಿಯವರು ಕಗ್ಗ ಪದ್ಯವೊಂದರಲ್ಲಿ ವಿವರಿಸಿರುವ, ಮನದಾಲಯದ ಎರಡು ಕೋಣೆಗಳು- ಲೋಗರಾಟಗಳನಾಡುವ ಹೊರಕೋಣೆ ಮತ್ತು ಶಾಂತಿಯಲಿ ಒಬ್ಬನೇ ವಿರಮಿಸುವ ಮೌನದೊಳಮನೆ- ಅನಂತನಾಗ್ ವಿಷಯದಲ್ಲಿ ಈ ಎರಡೂ ಕೋಣೆಗಳು ಯಾವೊಂದು ಕಸ-ಕೊಳೆ ಇಲ್ಲದೆ ಸ್ವಚ್ಛವಾಗಿದ್ದು ಲಕಲಕ ಹೊಳೆಯುತ್ತಿರುತ್ತವೆಂದು ಧಾರಾಳವಾಗಿ ಹೇಳಬಹುದು.

ಇದು ಇನ್ನೊಮ್ಮೆ ಸಾಬೀತಾದದ್ದು ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ವಿಶ್ವವಾಣಿ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ, ಅನಂತನಾಗ್ ಅವರ ಚಿಕ್ಕ-ಚೊಕ್ಕ ಭಾಷಣದಲ್ಲಿ. ಮುಗ್ಧತೆ ಮತ್ತು ಪ್ರಬುದ್ಧತೆಗಳ ಹಿತಮಿತ ಮಿಶ್ರಣವಾಗಿದ್ದ ಆ ರಸಪಾಕದಲ್ಲಿ. ನಾನು ಆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಭಾಗಿಯಾದವನೇನಲ್ಲ; ಅಂದಿನ ಭಾಷಣಗಳ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿದ್ದಷ್ಟೇ. ಆದರೆ ರಸಾಸ್ವಾದನೆಗೆ, ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕೆ, ಅದೇನೂ ಮಿತಿಯಾಗಲಿಲ್ಲ.

ಅನಂತನಾಗ್ ಮಾತು ವಸ್ತುನಿಷ್ಠ. ಅಹಂಕಾರದ್ದಲ್ಲ. ಒಣಪಾಂಡಿತ್ಯ ಪ್ರದರ್ಶನದ್ದಲ್ಲ. ವೇದಿಕೆಯ ಮೇಲಿರುವವರನ್ನೇ ಇಂದ್ರಚಂದ್ರ ಎಂದು ಮತ್ತೆಮತ್ತೆ ಹೊಗಳಿ ಅವರಿಗೇ ಮುಜುಗರವಾಗುವಂಥ ಮುಖಸ್ತುತಿ ಇಲ್ಲ. ಆದ್ದರಿಂದಲೇ ನಾನವರ ಭಾಷಣವನ್ನು ಐದಾರು ಸರ್ತಿ ಕೇಳಿಸಿಕೊಂಡೆ. ತನ್ನ ಬಾಲ್ಯ, ಕಾಸರಗೋಡಿನ ಆನಂ ದಾಶ್ರಮದಲ್ಲಿ ಮತ್ತು ಶಿರಾಲಿ ಮಠದಲ್ಲಿ ವಾಸ್ತವ್ಯ, ಪ್ರಾಥಮಿಕ ಶಾಲಾದಿನಗಳಲ್ಲೇ ಗಣಪತ್ಯಥರ್ವಶೀರ್ಷ, ರುದ್ರ, ಮಂತ್ರ ಪುಷ್ಪಾಂಜಲಿ ಇತ್ಯಾದಿಯ ಪಠನ, ತಂದೆಯವರ ಒತ್ತಾಸೆಯಿಂದ ಭಗವದ್ಗೀತೆಯ ಎಲ್ಲ 700 ಶ್ಲೋಕಗಳ ಕಂಠಪಾಠ ಕಲಿಕೆಗಳನ್ನೆಲ್ಲ ಅನಂತನಾಗ್ ಹೃದಯಂಗಮವಾಗಿ ನೆನಪಿಸಿಕೊಂಡರು.

ಇದನ್ನೂ ಓದಿ: Srivathsa Joshi Column: ಶಿಖಿಧ್ವಜನಿಗೆ ಪತ್ನಿ, ರಾಣಿ, ಗುರುವೂ ಆಗಿದ್ದ ಚೂಡಾಲೆ

ಉತ್ಕೃಷ್ಟ ಅಚ್ಚಕನ್ನಡದಲ್ಲಿ ಗುರುಸ್ತುತಿ ಕಲಿತಿದ್ದನ್ನು ಅದರ ನಾಲ್ಕಾರು ಸಾಲುಗಳನ್ನು ಭಾವಪೂರ್ಣವಾಗಿ ಹೇಳಿಯೇ ಪುಳಕಗೊಂಡರು. ಮುಂಬೈ ಮಹಾನಗರಿಯಲ್ಲಿ ಕಾಲೇಜಿಗೆ ಸೇರಿದಮೇಲೆ ಅವುಗಳನ್ನೆಲ್ಲ ಬಿಟ್ಟುಬಿಟ್ಟೆ ಎಂದು ಕೂಡ ಪ್ರಾಮಾಣಿಕವಾಗಿ ಹೇಳಿದರು. ಹಾಗೆ ಅವರು ಆ ಭಾಷಣದಲ್ಲಿ ಸಂದರ್ಭೋಚಿತವಾಗಿ ನೆನಪಿಸಿಕೊಂಡ ಇನ್ನೊಂದು ಸ್ತೋತ್ರರತ್ನವೇ ಶಂಕರಾಚಾರ್ಯವಿರಚಿತ ಸಾಧನಾಪಂಚಕ. ಅದೂ ಒಂದು ಸ್ವಾರಸ್ಯಕರ ಸಂಗತಿಯ ಬಣ್ಣನೆ ಯೊಂದಿಗೆ. ಏನೆಂದರೆ ಅವರಿಗೆ ಆವತ್ತು ಬೆಳಗ್ಗೆ ಮೂರು ಗಂಟೆಗೇ ಎಚ್ಚರವಾಯ್ತಂತೆ. ಅಯ್ಯೋ ಈದಿನ ವಿಶ್ವೇಶ್ವರ ಭಟ್ಟರು ಆಯೋಜಿಸಿರುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗ್ಲಿಕ್ಕಿದೆಯಲ್ಲ, ಅಲ್ಲಿ ವೇದಿಕೆ ಮೇಲೆ ಭಾಷಣ ಬಿಗಿಯಲಿಕ್ಕಿದೆಯಲ್ಲ, ದೊಡ್ಡದೊಡ್ಡ ಲೇಖಕರು ವಿದ್ವಾಂಸರೆಲ್ಲ ಬಂದಿರ್ತಾರೆ ಅವರ ಮುಂದೆ ತಾನು ಏನೆಂದು ಮಾತಾಡಲಿ ಎಂದು ಒಂಥರ ನಡುಕವಾದಾಗ ಹಠಾತ್ತನೆ ಆ ಸ್ತೋತ್ರ ನೆನಪಾಯ್ತಂತೆ.

ಹೇಗೂ ಸಂಸ್ಕೃತದ್ದಾದ್ದರಿಂದ ಭಾಷಣಕ್ಕೆ ತೂಕವೂ ಬರುತದೆ ಅದನ್ನೇ ಹೇಳೋಣ ಎಂದು ತೀರ್ಮಾನಿಸಿದರಂತೆ. ಸ್ತೋತ್ರವೇನೋ ಕಂಠಪಾಠ ಬರುತ್ತದೆ, ಯಾರಾದ್ರೂ ಅರ್ಥ ಕೇಳಿದ್ರೆ ಇರಲಿ ಅಂತ ಗೂಗಲ್‌ನಲ್ಲಿ ಹುಡುಕಿಟ್ಟರಂತೆ. ಅವರ ಮಾತಿನಲ್ಲಿ ಕೃತ್ರಿಮತೆಯಿರಲಿಲ್ಲ. ಮಗುವಿನ ಮನಸ್ಸು. ಸಭೆಯಲ್ಲಿ ನಗುವಿನ ಅಲೆಗಳು. ನೋಡನೋಡುತ್ತಿದ್ದಂತೆಯೇ ಅನಂತನಾಗ್ ಸಾಧನಾ ಪಂಚಕ ಸ್ತೋತ್ರವನ್ನು ನಿರರ್ಗಳವಾಗಿ ಬಾಯಿಪಾಠ ಒಪ್ಪಿಸಿಯೇಬಿಟ್ಟರು!

ಅದೂ ಮಧ್ಯದಿಂದ ಆರಂಭಿಸಿ ಕೊನೆಯ ಎರಡು ಶ್ಲೋಕಗಳು ಮತ್ತು ಫಲಶ್ರುತಿ. ಮಧ್ಯದಿಂದ ಆರಂಭಿಸಿ ಅಂತ ವಿಶೇಷ ಅಚ್ಚರಿ ಏಕೆಂದು ಮಗ್ಗಿ ಬಾಯಿಪಾಠ ಒಪ್ಪಿಸುವವರಿಗೆ ಗೊತ್ತಿರುತ್ತದೆ. ಹದಿಮೂರ ಒಂದ್ಲೆ ಹದಿಮೂರು...ದಿಂದ ಶುರು ಮಾಡಿದರೆ ಸಲೀಸಾಗಿ ಸಾಗುವ ಬಂಡಿ ಹದಿಮೂರ ಏಳ್ಲೆಯಿಂದ ಶುರು ಮಾಡು ಅಂತಂದರೆ ಎಡವುವುದೇ. ಹಾಗಿರುವಾಗ ಚೀಟಿ ನೋಡದೆ ತಡವರಿಸದೆ ಸಂಸ್ಕೃತ ಶ್ಲೋಕಗಳ ಪಠನ. ಶುದ್ಧ ಸ್ಪಷ್ಟ ಉಚ್ಚಾರ. ಅನುಸ್ವಾರ ವಿಸರ್ಗಗಳೆಲ್ಲ ಠಾಕುಠೀಕು. ಹಸಿಗೋಡೆಯಲ್ಲಿ ನೆಟ್ಟ ಹರಳು ಫಳಫಳ ಹೊಳೆಯುತ್ತಿರುತ್ತದೆ ಎನ್ನುವುದಕ್ಕೆ ನಿದರ್ಶನ.

ಅನಂತನಾಗ್ ಅವರ ಪ್ರತಿಭೆ-ಸಾಧನೆಗಳ ಭದ್ರ ಬುನಾದಿಯ ಮೇಲೊಂದು ಕ್ಷಕಿರಣ. ಆಶ್ಚರ್ಯ ವಷ್ಟೇ ಅಲ್ಲ ಅತ್ಯಂತ ಅಭಿಮಾನದ ಸಂಗತಿ. ನಿಜವಾಗ್ಲೂ ಗ್ರೇಟ್. ಅವರು ಪಠಿಸಿದ ಆ ಸಾಧನಾಪಂಚಕ ಸ್ತೋತ್ರ ಇನ್ನೂ ಗ್ರೇಟ್. ಶಂಕರಾಚಾರ್ಯರು ರಚಿಸಿದ್ದೆಂದ ಮೇಲೆ ಕೇಳಬೇಕೇ! ಪಂಚಕ ಎಂದರೆ ಐದರ ಗುಂಪು. ಐದೇಐದು ಶ್ಲೋಕಗಳ ಮೂಲಕ ಘನತತ್ತ್ವವೊಂದರ ಬೋಧನೆ. ಅಂತಹ ಪಂಚಕ ಸ್ತೋತ್ರಗಳು ಸಂಸ್ಕೃತವ್ಮಾಯದಲ್ಲಿ ತುಂಬ ಇವೆ. ಶಂಕರಾಚಾರ್ಯರಿಂದ ರಚಿತವೆಂದು ಪ್ರಸಿದ್ಧವಾಗಿರುವಂಥವೂ ಹತ್ತಾರು ಇವೆ. ಕೌಪೀನ ಪಂಚಕ, ಅದ್ವೈತ ಪಂಚಕ, ಮನೀಷಾ ಪಂಚಕ, ಮಾಯಾ ಪಂಚಕ ಇತ್ಯಾದಿ. ಗಣೇಶ ಪಂಚರತ್ನ, ಲಲಿತಾ ಪಂಚರತ್ನ, ಹನೂಮತ್ ಪಂಚರತ್ನ ಮುಂತಾದುವೂ ಐದರ ಗುಚ್ಛಗಳೇ.

62

ಪ್ರಸ್ತುತ ಸಾಧನಾ ಪಂಚಕದಲ್ಲಿರುವುದು ಜೀವನದಲ್ಲಿ ಮುಕ್ತಿ ಮತ್ತು ಜ್ಞಾನವನ್ನು ಪಡೆಯಲು ಬೇಕಾದ ನಲ್ವತ್ತು ಸಾಧನಾ ಮಾರ್ಗಗಳ ಬೋಧನೆ. ಬೈಬಲ್‌ನಲ್ಲಿ ಟೆನ್ ಕಮಾಂಡ್‌ಮೆಂಟ್ಸ್ ಇದ್ದಂತೆ. ಬಸವಣ್ಣನವರು ಅಂತರಂಗಶುದ್ಧಿ ಬಹಿರಂಗಶುದ್ಧಿಗಾಗಿ ಹೇಳಿದ ಏಳು ‘ಬೇಡಗಳು’ ಇದ್ದಂತೆ. ಆ ಕಾರಣದಿಂದಲೇ ಇದಕ್ಕೆ ಉಪದೇಶಪಂಚಕ ಎಂಬ ಹೆಸರೂ ಇದೆ. ಯಾವುವು ಆ ನಲ್ವತ್ತು ಸಾಧನಾ ಮಾರ್ಗಗಳು? ಒಂದೊಂದೇ ಶ್ಲೋಕವನ್ನು, ಅದರ ಒಂದೊಂದೇ ಚರಣವನ್ನು ತಲಾ ಎರಡು ಭಾಗಗಳನ್ನಾಗಿಸಿ ಓದುತ್ತ ಹೋದರೆ... ಮೊದಲನೆಯ ಶ್ಲೋಕ (ಸಾಧನೆಯ ಆರಂಭ): ‘ವೇದೋ ನಿತ್ಯಮಧಿಯತಾಂ’ ಪ್ರತಿದಿನ ವೇದಗಳನ್ನು ಅಥವಾ ಸದ್ಗ್ರಂಥಗಳನ್ನು ಅಧ್ಯಯನ ಮಾಡಬೇಕು. ‘ತದುದಿತಂ ಕರ್ಮ ಸ್ವನುಷ್ಠೀಯತಾಂ’ ವೇದಗಳಲ್ಲಿ ಹೇಳಿರುವ ಒಳ್ಳೆಯ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸಬೇಕು.

‘ತೇನೇಶಸ್ಯ ವಿಽಯತಾಮಪಚಿತಿಃ’ ಮಾಡುವ ಎಲ್ಲ ಕೆಲಸಗಳನ್ನು ದೇವರಿಗೆ ಅರ್ಪಣೆ ಮಾಡಬೇಕು. ‘ಕಾಮ್ಯೇ ಮತಿಸ್ತ್ಯಜ್ಯತಾಮ್’ ಸ್ವಾರ್ಥ ಆಸೆಗಳಿಗಾಗಿ ಕರ್ಮ ಮಾಡುವುದನ್ನು ಬಿಟ್ಟುಬಿಡಬೇಕು. ‘ಪಾಪೌಘಃ ಪರಿಧೂಯತಾಂ’ ಪಾಪಕೃತ್ಯಗಳ ಯೋಚನೆ ಮತ್ತು ನಡವಳಿಕೆಗಳಿಂದ ದೂರವಿರಬೇಕು.

‘ಭವಸುಖೇ ದೋಷೋನುಸನ್ಧೀಯತಾಮ್’ ಲೌಕಿಕ ಸುಖಗಳು ಶಾಶ್ವತವಲ್ಲ, ಅವುಗಳಲ್ಲಿ ದುಃಖವೇ ಅಡಗಿರುವುದು ಎಂದು ತಿಳಿಯಬೇಕು. ‘ಆತ್ಮೇಚ್ಛಾ ವ್ಯವಸೀಯತಾಂ’ ಆತ್ಮಜ್ಞಾನವನ್ನು ಪಡೆಯಬೇಕೆಂಬ ತೀವ್ರ ಆಸೆಯನ್ನು ಬೆಳೆಸಿಕೊಳ್ಳಬೇಕು. ‘ನಿಜಗೃಹಾತ್ತೂರ್ಣಂ ವಿನಿರ್ಗಮ್ಯತಾಮ್’ ಮೋಹದ ಬಂಧನಗಳಿಂದ ಮತ್ತು ಪ್ರಾಪಂಚಿಕ ಜಂಜಡಗಳ ಅತಿಯಾದ ಅಂಟಿನಿಂದ ಶೀಘ್ರವಾಗಿ ಹೊರಬರಬೇಕು. ಎರಡನೆಯ ಶ್ಲೋಕ (ಗುರುವಿನ ಆಶ್ರಯ): ‘ಸಂಗಃ ಸತ್ಸು ವಿಧಿಯತಾಂ’ ಯಾವಾಗಲೂ ಸತ್ಪುರುಷರ ಮತ್ತು ಜ್ಞಾನಿಗಳ ಸಹವಾಸ ಮಾಡಬೇಕು. ‘ಭಗವತೋ ಭಕ್ತಿರ್ದೃಢಾಧಿಯತಾಂ’ ಭಗವಂತನಲ್ಲಿ ಅಚಲವಾದ ಭಕ್ತಿಯನ್ನು ಹೊಂದಬೇಕು.

‘ಶಾನ್ತ್ಯಾದಿಃ ಪರಿಚೀಯತಾಂ’ ಶಮ, ದಮ, ತಿತಿಕ್ಷೆಯಂತಹ ಮನಸ್ಸಿನ ಶಾಂತಿ ಮತ್ತು ಇಂದ್ರಿಯನಿಗ್ರಹವನ್ನು ರೂಢಿಸಿಕೊಳ್ಳಬೇಕು. ‘ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್’ ಅಹಂಕಾರವನ್ನು ಹೆಚ್ಚಿಸುವ ಕಾಮ್ಯ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ‘ಸದ್ವಿದ್ವಾನು ಪಸೃಪ್ಯತಾಂ’ ಬ್ರಹ್ಮಜ್ಞಾನಿಯಾದ ಸದ್ಗುರುಗಳನ್ನು ಹುಡುಕಿ ಅವರ ಆಶ್ರಯ ಪಡೆಯಬೇಕು.

‘ಪ್ರತಿದಿನಂ ತತ್ಪಾದುಕಾ ಸೇವ್ಯತಾಂ’ ಪ್ರತಿದಿನ ಆ ಗುರುವಿನ ಪಾದಗಳನ್ನು ಶ್ರದ್ಧೆಯಿಂದ ಸೇವೆ ಮಾಡಬೇಕು. ‘ಬ್ರಹ್ಮೈಕಾಕ್ಷರಮರ್ಥ್ಯತಾಂ’ ಓಂಕಾರದ ಮತ್ತು ಬ್ರಹ್ಮನ ಸತ್ಯವನ್ನು ತಿಳಿಸಿಕೊಡುವಂತೆ ಗುರುವಿನಲ್ಲಿ ಪ್ರಾರ್ಥಿಸಬೇಕು. ‘ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್’ ಗುರುಗಳು ಉಪದೇಶಿಸುವ ಉಪನಿಷತ್ತಿನ ಮಹಾವಾಕ್ಯ ಗಳನ್ನು ಎಚ್ಚರದಿಂದ ಆಲಿಸಬೇಕು. ಮೂರನೆಯ ಶ್ಲೋಕ (ವಿಚಾರಣೆ ಮತ್ತು ಮನನ): ‘ವಾಕ್ಯಾರ್ಥಶ್ಚ ವಿಚಾರ್ಯತಾಂ’ ಗುರುಗಳು ಹೇಳಿದ ತತ್ತ್ವಮಸಿ ಮುಂತಾದ ಮಹಾವಾಕ್ಯಗಳ ಆಳ ಅರ್ಥವನ್ನು ಮಥಿಸಬೇಕು.

‘ಶ್ರುತಿಶಿರಃಪಕ್ಷಃ ಸಮಾಶ್ರೀ ಯತಾಂ’ ವೇದಾಂತದ ಸಿದ್ಧಾಂತವನ್ನೇ ಪರಮಸತ್ಯ ವೆಂದು ನಂಬಿ ಅದನ್ನು ಆಶ್ರಯಿಸಬೇಕು. ‘ದುಸ್ತರ್ಕಾತ್ಸು ವಿರಮ್ಯತಾಂ’ ಅನಗತ್ಯವಾದ ಮತ್ತು ಕುತರ್ಕದ ವಾದಗಳಿಂದ ದೂರವಿರಬೇಕು. ‘ಶ್ರುತಿಮತಸ್ತರ್ಕೋನುಸನ್ಧೀಯತಾಮ್’ ವೇದಗಳಿಗೆ ಪೂರಕವಾದ ಸತ್ತ್ವಯುತ ತರ್ಕಗಳನ್ನು ಮಾತ್ರ ನಡೆಸಬೇಕು. ‘ಬ್ರಹ್ಮಾಸ್ಮೀತಿ ವಿಭಾವ್ಯತಾಮಹರಹಃ’ ನಾನೆಂದರೆ ಬರೀ ದೇಹವಲ್ಲ, ಆ ಪರಬ್ರಹ್ಮನೇ ಆಗಿದ್ದೇನೆ ಎಂದು ಪ್ರತಿದಿನವೂ ಭಾವಿಸಬೇಕು. ‘ಗರ್ವಃ ಪರಿತ್ಯಜ್ಯತಾಂ’ ನಾನು ಎಂಬ ಗರ್ವ ಅಥವಾ ಅಹಂಕಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು.

‘ದೇಹೇ ಹಮ್ಮತಿರುಜ್ಝ್ಯತಾಂ’ ನಾನೇ ಈ ದೇಹ ಎಂಬ ತಪ್ಪು ಕಲ್ಪನೆಯನ್ನು ತ್ಯಜಿಸಬೇಕು. ‘ಬುಧ ಜನೈರ್ವಾದಃ ಪರಿತ್ಯಜ್ಯತಾಮ್’ ಜ್ಞಾನಿಗಳೊಂದಿಗೆ ಅಹಂಕಾರದಿಂದ ವಾದ ಮಾಡುವುದನ್ನು ನಿಲ್ಲಿಸಬೇಕು. ನಾಲ್ಕನೆಯ ಶ್ಲೋಕ (ಜೀವನಶೈಲಿ ಮತ್ತು ನಿಗ್ರಹ): ‘ಕ್ಷುಧ್ವ್ಯಾಧಿಶ್ಚ ಚಿಕಿತ್ಸ್ಯತಾಂ’ ಹಸಿವನ್ನು ಒಂದು ಕಾಯಿಲೆ ಎಂದೇ ಭಾವಿಸಿ ಅದಕ್ಕೆ ಮದ್ದಿನಂತೆ ಆಹಾರವನ್ನು ಸೇವಿಸಬೇಕು. ‘ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ’ ಸಿಕ್ಕ ಆಹಾರವನ್ನು ಭಿಕ್ಷಾರೂಪದ ಔಷಧಿಯಂತೆ ಸ್ವೀಕರಿಸಬೇಕು. ‘ಸ್ವಾದ್ವನ್ನಂ ನ ತು ಯಾಚ್ಯತಾಂ’ ರುಚಿಕರ ಆಹಾರವೇ ಬೇಕೆಂಬ ಹಠ ಸಲ್ಲದು. ‘ವಿಧಿವಶಾತ್ ಪ್ರಾಪ್ತೇನ ಸನ್ತುಷ್ಯತಾಮ್’ ತಾನಾಗಿಯೇ ಒದಗಿಬಂದ ಪರಿಸ್ಥಿತಿಯಲ್ಲಿ ತೃಪ್ತಿಯನ್ನು ಕಂಡುಕೊಳ್ಳಬೇಕು.

‘ಶೀತೋಷ್ಣಾದಿ ವಿಷಹ್ಯತಾಂ’ ಚಳಿ, ಬಿಸಿ, ಸುಖ, ದುಃಖ, ಮಾನ, ಅಪಮಾನ ಎಲ್ಲವನ್ನೂ ಸಮಾನವಾಗಿ ಸಹಿಸಿಕೊಳ್ಳಬೇಕು. ‘ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಮ್’ ಅನಗತ್ಯವಾದ ಮಾತುಗಳನ್ನು ಆಡಬಾರದು, ಸಾಧ್ಯವಿದ್ದಷ್ಟೂ ಮೌನವನ್ನು ಪಾಲಿಸಬೇಕು.

‘ಔದಾಸೀನ್ಯಮಭೀಪ್ಸ್ಯತಾಂ’ ಲೌಕಿಕ ವಿಷಯಗಳ ಬಗ್ಗೆ ಉದಾಸೀನತೆ(ವೈರಾಗ್ಯ) ಹೊಂದಬೇಕು. ‘ಜ ಕೃಪಾನೈಷ್ಠುರ್ಯಮುತ್ಸೃಜ್ಯತಾಮ್’ ಜನರ ದಯೆ ಅಥವಾ ಕ್ರೌರ್ಯಕ್ಕೆ ಅತಿಯಾಗಿ ಸ್ಪಂದಿಸದೆ ತಟಸ್ಥನಾಗಿರುವುದನ್ನು ರೂಢಿಸಿಕೊಳ್ಳಬೇಕು. ಐದನೆಯ ಶ್ಲೋಕ(ಪರಮಾವಽ ಮುಕ್ತಿ): ‘ಏಕಾನ್ತೇ ಸುಖಮಾಸ್ಯತಾಂ’ ಏಕಾಂತದಲ್ಲಿ ಕುಳಿತು ಆತ್ಮಸುಖವನ್ನು ಅನುಭವಿಸಬೇಕು. ‘ಪರತರೇ ಚೇತಃ ಸಮಾಽಯತಾಂ’ ಮನಸ್ಸನ್ನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಲೀನಗೊಳಿಸಿ ಸಮಾಽಸ್ಥಿತಿ ತಲುಪಬೇಕು. ‘ಪೂರ್ಣಾತ್ಮಾ ಸುಸಮೀಕ್ಷ್ಯತಾಂ’ ಎಲ್ಲೆಡೆ ತುಂಬಿರುವ ಪೂರ್ಣಾತ್ಮನನ್ನು ಕಣ್ಣಾರೆ ಕಾಣಬೇಕು.

‘ಜಗದಿದಂ ತದ್ಬಾಧಿತಂ ದೃಶ್ಯತಾಮ್’ ಜಗತ್ತು ಆತ್ಮನ ಮೇಲೆ ಕಾಣಿಸುವ ಕೇವಲ ಮಾಯೆ ಎಂದು ತಿಳಿಯಬೇಕು. ‘ಪ್ರಾಕ್ಕರ್ಮ ಪ್ರವಿಲಾಪ್ಯತಾಂ’ ಜ್ಞಾನಾಗ್ನಿಯಿಂದ ಹಳೆಯ ಕರ್ಮಗಳನ್ನೆಲ್ಲ ಕರಗಿಸಿಕೊಳ್ಳಬೇಕು. ‘ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ’ ಆತ್ಮಬಲದಿಂದ ಭವಿಷ್ಯದ ಕರ್ಮಗಳು ಅಂಟದಂತೆ ನೋಡಿಕೊಳ್ಳಬೇಕು. ‘ಪ್ರಾರಬ್ಧಂ ತ್ವಿಹ ಭುಜ್ಯತಾಮ್’ ದೇಹಕ್ಕೆ ಒದಗಿಬಂದ ಪ್ರಾರಬ್ಧಕರ್ಮವನ್ನು ಶಾಂತವಾಗಿ ಅನುಭವಿಸಬೇಕು.

‘ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್’ ಕೊನೆಗೆ ಆ ಪರಬ್ರಹ್ಮಸ್ವರೂಪವೇ ಆಗಿ ನೆಲೆಸಬೇಕು. ಇದೇನಿದು ಸಂಸ್ಕೃತ ವಾಕ್ಯಗಳಷ್ಟೇ ಅಲ್ಲ, ಅವುಗಳ ಕನ್ನಡ ಅನುವಾದವೂ ತಲೆಯ ಮೇಲಿಂದ ಹಾರಿಹೊ ಗುವಂತೆ ಇದೆಯಲ್ಲ ಅಂತನಿಸ ಬಹುದು ಒಮ್ಮೆ ಓದಿದಾಗ. ಯೋಗಿಗಳಿಗೆ, ಸಂನ್ಯಾಸಿ ಗಳಿಗೆ, ಮುಮುಕ್ಷುಗಳಿಗೆ ಹೇಳಿಮಾಡಿಸಿದಂತಿರುವ ಈ ಘನಬೋಧನೆಗಳೆಲ್ಲ ನಮ್ಮಂಥ ಜನಸಾಮಾನ್ಯರಿಗೆ, ಪರಮಪಾಮರರಿಗೆ ಹೇಗೆ ತಾನೆ ಅನ್ವಯವಾಗಬಲ್ಲವು? ಆದರೆ ಈ ವಿಚಾರವನ್ನೇ ಮೆಲುಕುಹಾಕುತ್ತಿದ್ದರೆ ಒತ್ತಡಗಳಿಂದ ತುಂಬಿದ ನಮ್ಮ ಈಗಿನ ಭೌತಿಕ ಜಗತ್ತಿನಲ್ಲೂ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಇಂತಹ ಸಾಧನೆಗಳ ಸ್ವಲ್ಪಾಂಶವನ್ನಾದರೂ ಅಳವಡಿಸಿಕೊಳ್ಳಬಹುದೆಂಬ ಅರಿವು ಮೂಡುತ್ತದೆ.

ಪ್ರತಿದಿನ ಕನಿಷ್ಠ 15-20 ನಿಮಿಷಗಳಾದರೂ ಯಾವುದೋ ಒಂದು ಒಳ್ಳೆಯ ಪ್ರೇರಣಾದಾಯಕ ಪುಸ್ತಕ ಓದುವ ಅಭ್ಯಾಸವಿಟ್ಟುಕೊಂಡರೆ ಅದೇ ‘ವೇದೋ ನಿತ್ಯಮಧಿಯತಾಂ’ಗೆ ಸಮ. ನಮ್ಮ ಉದ್ಯೋಗ, ಕುಟುಂಬ, ಅಥವಾ ವಿದ್ಯಾರ್ಥಿಜೀವನದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಕೆಲಸದ ಫಲಿತಾಂಶಕ್ಕೆ ಅತಿಯಾಗಿ ಅಂಟಿಕೊಳ್ಳದೆ, ಪ್ರತಿಯೊಂದು ಕೆಲಸವನ್ನೂ ಭಗವಂತನ ಸೇವೆ ಅಥವಾ ಸಮಾಜದ ಒಳಿತಿಗಾಗಿ ಮಾಡುತ್ತಿದ್ದೇನೆ ಎಂದುಕೊಂಡರೆ ಮೊದಲ ಶ್ಲೋಕವನ್ನು ಅಳವಡಿಸಿಕೊಂಡಂತೆಯೇ.

ನಕಾರಾತ್ಮಕ ಆಲೋಚನೆಗಳನ್ನು ಹರಡುವವರಿಂದ ದೂರವಿದ್ದು, ನಮಗೆ ಸೂರ್ತಿ ನೀಡುವ ಮತ್ತು ಜ್ಞಾನವಂತರಾದ ಜನರೊಂದಿಗೆ ಒಡನಾಟ ಇಟ್ಟುಕೊಂಡರೆ, ಅತಿಯಾದ ಶಾಪಿಂಗ್, ಗ್ಯಾಜೆಟ್‌ಗಳ ಬಳಕೆ ತಾತ್ಕಾಲಿಕ ಆನಂದ ನೀಡುತ್ತವೆಯೇ ಹೊರತು ಶಾಶ್ವತ ನೆಮ್ಮದಿಯನ್ನಲ್ಲ ಎಂಬ ಸತ್ಯವನ್ನು ಮನಗಂಡು ಅದರಂತೆ ವರ್ತಿಸಿದರೆ, ಸ್ವಾರ್ಥಿ ಮತ್ತು ಬೇರೆಯವರಿಗೆ ತೊಂದರೆ ಕೊಡುವ ಆಸೆಗಳನ್ನು ನಿಯಂತ್ರಿಸಲು ಕಲಿತರೆ ಎರಡನೆಯ ಶ್ಲೋಕ ನಮ್ಮದಾಗುತ್ತದೆ. ಪದವಿ, ಹಣ ಅಥವಾ ರೂಪದ ಅಹಂಕಾರವನ್ನು ಬಿಟ್ಟು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತ, ಸಾಮಾಜಿಕ ಜಾಲತಾಣಗಳಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಯಾವುದೇ ಪ್ರಯೋಜನವಿಲ್ಲದ ಮತ್ತು ಸಂಬಂಧಗಳನ್ನು ಹಾಳುಮಾಡುವ ವ್ಯರ್ಥ ವಾದಗಳಿಂದ ದೂರವಿದ್ದರೆ, “ನಾನು ಕೇವಲ ಈ ಶರೀರವಲ್ಲ, ನನ್ನಲ್ಲಿರುವ ಚೇತನವೇ ಸತ್ಯ" ಎಂಬ ವಿಶಾಲ ಮನೋಭಾವ ರೂಢಿಸಿಕೊಂಡರೆ ಮೂರನೆಯ ಶ್ಲೋಕಕ್ಕೂ ಪಳಗಿರುತ್ತೇವೆ.

ಆಹಾರವನ್ನು ಕೇವಲ ನಾಲಗೆಯ ರುಚಿಗಾಗಿ ಅಲ್ಲದೆ, ಹಸಿವೆಂಬ ರೋಗವನ್ನು ಗುಣಪಡಿಸುವ ಔಷಽ ಎಂದು ಭಾವಿಸಿ ಮಿತವಾಗಿ ಸೇವಿಸಿದರೆ, ಜಂಕ್ ಫುಡ್ ಸಂಸ್ಕೃತಿಯಿಂದ ದೂರವಿದ್ದರೆ, ಜೀವನದಲ್ಲಿ ಸಿಗುವ ಸೌಕರ್ಯಗಳ ಬಗ್ಗೆ ದೂರುವುದನ್ನು ನಿಲ್ಲಿಸಿ, ಇರುವುದರಲ್ಲೇ ತೃಪ್ತಿಪಡುವುದನ್ನು ಕಲಿತರೆ, ಸುಖ-ದುಃಖ, ಸೋಲು-ಗೆಲುವು, ಲಾಭ-ನಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮಾನಸಿಕತೆಯನ್ನು ಬೆಳೆಸಿಕೊಂಡರೆ ನಾಲ್ಕನೆಯ ಶ್ಲೋಕಕ್ಕೂ ಸೈ.

ದಿನದಲ್ಲಿ ಸ್ವಲ್ಪ ಸಮಯವಾದರೂ ಒಂಟಿಯಾಗಿ ಕುಳಿತು ಪ್ರಶಾಂತವಾಗಿರಲು ಕಲಿತರೆ, ಇಷ್ಟದೈವದ ಅಥವಾ ಓಂಕಾರದ ಜಪ ಮಾಡಿ ಮನಸ್ಸನ್ನು ಕೇಂದ್ರಿಕರಿಸಿದರೆ, ದಿನದ ಕೊನೆಯಲ್ಲಿ ಡೈರಿ ಬರೆದು ನಮ್ಮ ತಪ್ಪುಒಪ್ಪುಗಳನ್ನು ನಾವೇ ವಿಮರ್ಶಿಸಿಕೊಂಡು, ಕೃತಜ್ಞತಾ ಭಾವದಿಂದ ಬದುಕುವುದನ್ನು ರೂಢಿಸಿಕೊಂಡರೆ ಐದನೆಯ ಶ್ಲೋಕವನ್ನೂ ಜೀರ್ಣಿಸಿಕೊಂಡಂತಾಗುತ್ತದೆ! ಮನಸ್ಸಿದ್ದಲ್ಲಿ ಮಾರ್ಗ ಎಂಬ ನಾಣ್ಣುಡಿಯೇ ಇದೆಯಲ್ಲ? ಸೂರ್ಯೋದಯಕ್ಕೂ ಮುನ್ನ ಎದ್ದು, ಈ ಹೊಸ ದಿನವನ್ನು ನೀಡಿದ ಭಗವಂತನಿಗೆ ಕೃತಜ್ಞತೆ ಸಲ್ಲಿಸಿ ಇಂದಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ ಕನಿಷ್ಠ15 ನಿಮಿಷಗಳ ಕಾಲ ಮೊಬೈಲ್ ನೋಡದೆ ಪ್ರಶಾಂತವಾಗಿ ಕುಳಿತು ಓಂಕಾರ ಅಥವಾ ಇಷ್ಟದೈವದ ಜಪ ಮಾಡಿದರೆ ದಿನವಿಡೀ ಮನಸ್ಸು ಶಾಂತ, ಪ್ರಫುಲ್ಲ.

ರುಚಿಗಾಗಿ ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಸತ್ತ್ವಯುತ ಮತ್ತು ತಾಜಾ ಆಹಾರವನ್ನು ನಿಗದಿತ ಸಮಯಕ್ಕೆ ಸೇವಿಸಿದರೆ ಊಟದಲ್ಲಿ ಶಿಸ್ತು. ಮಾಡುವ ಕೆಲಸ ದೇವರಿಗೆ ಸಮರ್ಪಣೆ ಎಂದುಕೊಂಡರೆ ಕೆಲಸದ ಮೇಲಿನ ಬೇಸರವೂ ದೂರ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಗಾಸಿಪ್, ರಾಜಕೀಯ ಮತ್ತು ಯಾವುದೇ ಪ್ರಯೋಜನವಿಲ್ಲದ ವಾದ-ವಿವಾದಗಳಲ್ಲಿ ತೊಡಗದಿದ್ದರೆ ಸಮಯದ ಉಳಿತಾಯ.

ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದಮೇಲೆ ಅಥವಾ ಮಲಗುವ ಮುನ್ನ ಕನಿಷ್ಠ 20 ನಿಮಿಷಗಳ ಕಾಲ ಭಗವದ್ಗೀತೆ, ವಿವೇಕಚೂಡಾಮಣಿ ಅಥವಾ ಯಾವುದೇ ಪ್ರೇರಣಾದಾಯಕ ಗ್ರಂಥಪಠನ. ಸಾಮಾಜಿಕ ಜಾಲತಾಣಗಳಲ್ಲಿ ಬರೀ ರೀಲುಗಳನ್ನು ನೋಡುವ ಬದಲಿಗೆ, ಡಿಜಿಟಲ್ ಸತ್ಸಂಗ ಎಂಬಂತೆ ಉತ್ತಮ ಪ್ರವಚನ ಅಥವಾ ಆಧ್ಯಾತ್ಮಿಕ ಪಾಡ್‌ಕಾಸ್ಟ್‌ಗಳ ಶ್ರವಣ. ಮಲಗುವ ಮುನ್ನ ಐದು ನಿಮಿಷ ಕಣ್ಣು ಮುಚ್ಚಿ ದಿನದ ಘಟನೆಗಳನ್ನು ನೆನಪಿಸಿಕೊಂಡು ಇಂದು ನಾನು ಯಾರಿಗಾದರೂ ನೋವು ಉಂಟುಮಾಡಿದ್ದೇನೆಯೇ? ಯಾರಿಗಾದರೂ ಸಹಾಯ ಮಾಡಿದ್ದೇನೆಯೇ? ಎಂದು ಆತ್ಮಾವಲೋಕನ.

ಯಾವುದೇ ಹೊಸ ಹವ್ಯಾಸ ಮನಸ್ಸಿಗೆ ಒಗ್ಗಿಕೊಳ್ಳಲು ಕನಿಷ್ಠ 21 ದಿನಗಳು ಬೇಕು. ಒಂದು ದಿನ ನಿಯಮ ತಪ್ಪಿದರೆ ನಿರಾಶರಾಗಬೇಕಿಲ್ಲ, ಮರುದಿನ ಮತ್ತೆ ಪ್ರಯತ್ನಿಸಿದರಾಯಿತು. ಸಾಧನೆ ಎಂಬು ದು ಒಂದೇ ದಿನದಲ್ಲಿ ಸಿದ್ಧಿಸುವುದಿಲ್ಲ, ಅದು ನಿರಂತರ ಪಯಣ. ಅಲ್ಲದೇ ಸಾಧನೆಗೆ ಚಿಕ್ಕದು ದೊಡ್ಡದು ಎಂಬ ವ್ಯತ್ಯಾಸವಿಲ್ಲ. ನಾರದ ಮಹರ್ಷಿ ಧ್ರುವನಿಗೆ ಹೇಳಿದ್ದಂತೆ ‘ಸಾಧನೆಗೆ ಅಸಾಧ್ಯ ವಾದುದು ಯಾವುದೂ ಇಲ್ಲ, ಸಾಧಿಸುವ ಛಲ ಮನುಷ್ಯನಲ್ಲಿರಬೇಕು’.

ಅಂತಹ ಯಾವುದೇ ಸಾಧನೆಯನ್ನು ಮಾಡಿದಾಗ, ‘ಸಾಧನೆ ತೋರಿದ ನಮಗೆಲ್ಲ ಸಾವಿರ ಸಾವಿರ ಚಪ್ಪಾಳೆ’ ಬಂದೇ ಬರುತ್ತವೆ, ಚಪ್ಪಾಳೆಗೋಸ್ಕರವೇ ನಮ್ಮ ಸಾಧನೆ ಇರಬಾರದಾದರೂ. ಅನಂತನಾಗ್ ಅವರ ಭಾಷಣದಿಂದ ಹೀಗೊಂದು ಸಾಧನಾಮಾರ್ಗದ ಸ್ಪೂರ್ತಿ ಪಡೆದದ್ದೇ ಒಂದು ಸಾಧನೆ ಆಗಬಾರದೇಕೆ?