Thimmanna Bhagwat Column: ದತ್ತಕ ಸ್ವೀಕಾರ ಮತ್ತು ಪ್ರದಾನ- ನಂಬಿಕೆಗಳು ಮತ್ತು ನಿಬಂಧನೆಗಳು
ಮಗಳ ಮಗನಿಗೂ ಪಿಂಡಪ್ರದಾನದ ಅರ್ಹತೆ ಬರುವುದರಿಂದ ಪುತ್ರಿಯನ್ನು ದತ್ತಕ ಪಡೆಯುವುದು ಶಾಸ್ತ್ರ ಸಮ್ಮತ (ದತ್ತಕ ಮೀಮಾಂಸ- ನಂದ ಪಂಡಿತ). ಹಿಂದೂ ಪುರಾಣಗಳಲ್ಲಿನ ಸೀತೆ, ಕರ್ಣ ಮುಂತಾ ದವರು ದತ್ತಕ ಪಡೆದವರಾಗಿದ್ದರು ಎಂಬುದು ಗಮನಾರ್ಹ. ಹಾಗೆ ನೋಡಿದರೆ ನಮ್ಮ ಗಣಪತಿ ಕೂಡಾ ಈಶ್ವರನ ಜೈವಿಕ ಪುತ್ರನೆನ್ನಲು ಸಾಧ್ಯವಿಲ್ಲ.


ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
Doctrine of Lapse- ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯ ಹುನ್ನಾರದೊಂದಿಗೆ, ಅಂದಿನ ವೈಸರಾಯ್ ಆಗಿದ್ದ ಲಾರ್ಡ್ ಡಾಲ್‌ಹೌಸಿ ಜಾರಿ ಮಾಡಿದ ಈ ನಿಯಮ, ಪರಂಪರಾಗತ ದತ್ತಕ ಸ್ವೀಕಾರ ಪದ್ಧತಿಯನ್ನು ಅಸಿಂಧುಗೊಳಿಸಿದ್ದನ್ನು ಇತಿಹಾಸದಲ್ಲಿ ಓದಿದ್ದೇವೆ.
ದತ್ತಕವನ್ನು ಮಾನ್ಯ ಮಾಡದ ಬ್ರಿಟಿಷರ ವಿರುದ್ಧ ಕಿತ್ತೂರಿನ ವೀರರಾಣಿ ಚನ್ನಮ್ಮ 1857ರ ಸಂಗ್ರಾಮಕ್ಕಿಂತ ಮೊದಲೇ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ. ಹಿಂದೂ ಧರ್ಮದಲ್ಲಿ ದತ್ತಕಕ್ಕೆ ದೀರ್ಘ ಹಿನ್ನೆಲೆಯಿದೆ.
ಮನುಸ್ಮೃತಿ ಹಾಗೂ ವಾಸಿಷ್ಠ ಧರ್ಮಸೂತ್ರಗಳಲ್ಲಿ ಈ ಕುರಿತು ಅನೇಕ ನಿಬಂಧನೆಗಳಿವೆ. ಮನು ಮತ್ತು ವಾಸಿಷ್ಠ ಇಬ್ಬರೂ ಹೆಣ್ಣು ಮಗುವನ್ನು ದತ್ತಕ ಪಡೆಯುವ ಬಗ್ಗೆ ಯಾವುದೇ ಪ್ರತಿಬಂಧ ಹೇಳದಿದ್ದರೂ, ಪುತ್ರನ ದತ್ತಕ ಸ್ವೀಕಾರದ ಕುರಿತೇ ಶ್ಲೋಕಗಳು ಹೇಳಲ್ಪಟ್ಟಿವೆ. ಆದರೆ ಪುರಾತನ ಹಿಂದೂ ಸಂಸ್ಕೃತಿಯಲ್ಲಿ ಮಗಳನ್ನು ದತ್ತಕ ಪಡೆಯುವುದು ರೂಢಿಯಲ್ಲಿ ಇತ್ತು ಎನ್ನುವುದಕ್ಕೆ ಸೀತೆಯನ್ನು ಜನಕರಾಜ ದತ್ತಕ ಪಡೆದದ್ದು ಸಾಕ್ಷಿ.
ಮಗಳ ಮಗನಿಗೂ ಪಿಂಡಪ್ರದಾನದ ಅರ್ಹತೆ ಬರುವುದರಿಂದ ಪುತ್ರಿಯನ್ನು ದತ್ತಕ ಪಡೆಯುವುದು ಶಾಸ್ತ್ರ ಸಮ್ಮತ (ದತ್ತಕ ಮೀಮಾಂಸ- ನಂದ ಪಂಡಿತ). ಹಿಂದೂ ಪುರಾಣಗಳಲ್ಲಿನ ಸೀತೆ, ಕರ್ಣ ಮುಂತಾದವರು ದತ್ತಕ ಪಡೆದವರಾಗಿದ್ದರು ಎಂಬುದು ಗಮನಾರ್ಹ. ಹಾಗೆ ನೋಡಿದರೆ ನಮ್ಮ ಗಣಪತಿ ಕೂಡಾ ಈಶ್ವರನ ಜೈವಿಕ ಪುತ್ರನೆನ್ನಲು ಸಾಧ್ಯವಿಲ್ಲ.
ಇದನ್ನೂ ಓದಿ: Thimmanna Bhagwat Column: ಪವರ್ ಆಫ್ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ
ರಾಮನ ಮಗ ಕುಶನ ಕುರಿತು ಕೂಡಾ ‘ದರ್ಭೆಯಿಂದ ಹುಟ್ಟಿದವ’ ಎಂಬ ಕಥೆಯಿದೆ. ಶ್ಯುನಶ್ಯೇಪ ಎಂಬುವನನ್ನು ಬಲಿ ಕೊಡುವ ಸಲುವಾಗಿ ರಾಜಾ ಹರಿಶ್ಚಂದ್ರ ಕ್ರಯ ಕೊಟ್ಟು ದತ್ತು ಪಡೆದಿದ್ದ ನಂತೆ. ಅದು ದತ್ತಕ ಪದ್ಧತಿಯ ಘೋರ ದುರುಪಯೋಗ. ಇಸ್ಲಾಂ, ಯಹೂದಿಯಂಥ ಪಾಶ್ಚಾತ್ಯ ಧರ್ಮಗಳಲ್ಲಿ ದತ್ತಕ ಪಡೆಯುವ ಕ್ರಮ ಇರಲಿಲ್ಲ. ಆದರೆ ಪುರಾತನ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಯಲ್ಲಿ ದತ್ತಕ ಪಡೆಯುವ ಪದ್ಧತಿ ಇದ್ದುದಕ್ಕೆ ಉಲ್ಲೇಖಗಳಿವೆ.
ಕ್ರೈಸ್ತರಲ್ಲಿ ದತ್ತಕದ ಕುರಿತು ಯಾವುದೇ ಧಾರ್ಮಿಕ ಕ್ರಮ ಇಲ್ಲ. ಅವರು 1890ರ Guardian and Wards Act ಪ್ರಕಾರ ತಮ್ಮನ್ನು ಮಗುವಿನ ಪಾಲಕರೆಂದು ನೇಮಿಸಿಕೊಳ್ಳಬಹುದು. ಆದರೆ ಅಂಥ ಮಗುವಿಗೆ ವಾರಸುದಾರಿಕೆ ಹಕ್ಕು ತಾನೇತಾನಾಗಿ ಬರುವುದಿಲ್ಲ. ವಿಲ್ ಮಾಡಬಹುದಷ್ಟೆ. ದತ್ತಕ ಪಡೆಯುವುದೆಂದರೆ ಬೇರೆ ತಂದೆ-ತಾಯಿಯರಿಗೆ ಹುಟ್ಟಿದ ಮಗುವೊಂದನ್ನು ತಮ್ಮ ಮಗುವನ್ನಾಗಿ ಸ್ವೀಕರಿಸಿ ತಂದೆ/ತಾಯಿ ಮತ್ತು ಮಗುವಿನ ಸಂಬಂಧ ಕಲ್ಪಿಸಿ ಆ ಸಂಬಂಧವನ್ನು ಕಾನೂನುಬದ್ಧ ಗೊಳಿಸುವ ಪ್ರಕ್ರಿಯೆ.
ಹಿಂದೂಗಳಲ್ಲಿ ದತ್ತಕದ ಮುಖ್ಯ ಉದ್ದೇಶ ಸಂತಾನವಿಲ್ಲದ ಸಂದರ್ಭದಲ್ಲಿ ಧಾರ್ಮಿಕ ಕ್ರಿಯೆಯ ಮೂಲಕ ದತ್ತುಪುತ್ರನನ್ನು ಪಡೆದು ಆತ ನೀಡುವ ತರ್ಪಣವೇ ಮುಂತಾದವುಗಳಿಂದ ಸದ್ಗತಿ ಪಡೆಯುವುದಾಗಿದೆ. ವಾರಸುದಾರರನ್ನು ಪಡೆಯುವುದು ಹಾಗೂ ವೃದ್ಧಾಪ್ಯದಲ್ಲಿ ತಮ್ಮ ಆರೈಕೆಯ ಉದ್ದೇಶ ಕೂಡಾ ಅಲ್ಲಿರುವುದು ಸಹಜ.
ದತ್ತಕ ಪಡೆದ ಮಗ ತನ್ನ ಜೈವಿಕ ತಂದೆಯ ಕುಟುಂಬದ ಹೆಸರು (ಅಡ್ಡ ಹೆಸರು) ಮತ್ತು ಗೋತ್ರ ವನ್ನಲ್ಲದೆ ಆಸ್ತಿಯ ಹಕ್ಕನ್ನೂ ಕಳೆದುಕೊಳ್ಳುತ್ತಾನೆ ಮತ್ತು ದತ್ತಕ ತಂದೆಯ ಗೋತ್ರ, ಆಸ್ತಿಯ ಹಕ್ಕು ಮತ್ತು ದತ್ತಕ ತಂದೆ, ತಾಯಿ ಹಾಗೂ ಆತನ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಅರ್ಹತೆ ಪಡೆಯುತ್ತಾನೆ. ಭಾರತವು ಸ್ವಾತಂತ್ರ್ಯ ಪಡೆದ ನಂತರ ವಿವಿಧ ಪದ್ಧತಿಗಳನ್ನು ಕ್ರೋಡೀಕರಿಸಿ 1956ರ ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯನ್ನು ಜಾರಿಗೆ ತರಲಾಯಿತು.
ಆನಂತರ ಕಾನೂನುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಮಕ್ಕಳ ರಕ್ಷಣೆ, ಕಾಳಜಿ ಮತ್ತು ಪುನರ್ವ ಸತಿಯ ಜತೆಗೆ ಅನಾಥ ಮಕ್ಕಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಬಾಲಾಪರಾಧಿ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯಿದೆ (Juvenile Justice Act) 2015 ನ್ನು ಜಾರಿಗೆ ತರಲಾಯಿತು.
ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ 2ನೇ ಅಧ್ಯಾಯವು ದತ್ತಕದ ನಿಯಮಗಳ ಕುರಿತಾಗಿದೆ. ದತ್ತಕ ನೀಡುವ ಅಥವಾ ಪಡೆಯುವ ಪುರುಷ ಅಥವಾ ಮಹಿಳೆ ಕಾನೂನಿನ ಪ್ರಕಾರ ವಯಸ್ಕರಾಗಿರಬೇಕು, ಮಾನಸಿಕ ಅಸ್ವಸ್ಥತೆಯಂಥ ಅನರ್ಹತೆ ಇರಬಾರದು. ದತ್ತಕ ನೀಡಲ್ಪಡುವ ಮಗ ಅಥವಾ ಮಗಳಿಗೆ 15 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು. ಮದುವೆಯಾಗಿರಬಾರದು.
ಯಾವುದೇ ಪುರುಷನು ಮಗಳನ್ನು ದತ್ತಕ ಪಡೆಯುವುದಾದರೆ ಅಂಥ ಹೆಣ್ಣುಮಗು ಆತನಿಗಿಂತ ಕನಿಷ್ಠ 21ವರ್ಷ ಚಿಕ್ಕವಳಾಗಿರಬೇಕು ಮತ್ತು ಮಹಿಳೆಯು ದತ್ತಕ ಪಡೆಯುವ ಮಗನು ಅವಳಿಗಿಂತ ಕನಿಷ್ಠ 21ವರ್ಷ ಚಿಕ್ಕವನಾಗಿರಬೇಕು. ದತ್ತಕ ಹೋಮ ಕಡ್ಡಾಯವಲ್ಲದಿದ್ದರೂ, ಹಡೆದ ಪಾಲಕರು ಮಗುವನ್ನು ದತ್ತಕವಾಗಿ ನೀಡುವ ಭೌತಿಕ ಪ್ರಕ್ರಿಯೆ ಕಡ್ಢಾಯ.
ಕಾಯಿದೆಯ 11ನೇ ಕಲಮಿನ ಪ್ರಕಾರ ಯಾವುದೇ ಹಿಂದೂ ಪುರುಷ ಅಥವಾ ಮಹಿಳೆ ಒಬ್ಬ ಮಗನನ್ನು ದತ್ತಕ ಪಡೆಯುವುದಾದಲ್ಲಿ ಅವರಿಗೆ ಇನ್ನೊಬ್ಬ ಜೈವಿಕ ಅಥವಾ ದತ್ತಕ ಮಗ ಅಥವಾ ಮೊಮ್ಮಗ/ಮರಿಮಗ (ಮಗನ ಮಗ/ಅವನ ಮಗ) ಜೀವಿತ ಇರಬಾರದು. ಅಂತೆಯೇ ಮಗಳನ್ನು ದತ್ತಕ ಪಡೆಯುವುದಾದಲ್ಲಿ ಇನ್ನೊಬ್ಬಳು ಜೈವಿಕ ಅಥವಾ ದತ್ತಕ ಮಗಳು ಅಥವಾ ಮೊಮ್ಮಗಳು/ಮರಿಮಗಳು (ಮಗನ ಸಂತತಿಯಿಂದ) ಇರಬಾರದು.
ದತ್ತಕ ಪಡೆಯುವ ಗಂಡ ಅಥವಾ ಹೆಂಡತಿಯರ ಪೈಕಿ ಯಾರೊಬ್ಬರೂ ದತ್ತಕ ಪಡೆಯುವು ದಿದ್ದರೂ ಇನ್ನೊಬ್ಬರ ಒಪ್ಪಿಗೆ ಕಡ್ಡಾಯ. ಮಗ ಅಥವಾ ಮಗಳನ್ನು ದತ್ತಕಕ್ಕೆ ಕೊಡಲು ತಾಯಿ ಮತ್ತು ತಂದೆ ಇಬ್ಬರೂ ಒಪ್ಪಬೇಕು. ತಾಯಿ-ತಂದೆ ಇಬ್ಬರೂ ಜೀವಂತ ಇಲ್ಲದಿದ್ದರೆ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಅಥವಾ ತಂದೆ-ತಾಯಿಯರು ಮಗುವನ್ನು ಪರಿತ್ಯಜಿಸಿದ್ದರೆ ಅಥವಾ ತಂದೆ-ತಾಯಿ ಯಾರೆಂದು ತಿಳಿದಿರದಿದ್ದರೆ ಕೋರ್ಟಿನ ಪೂರ್ವಾನುಮತಿಯ ಮೇರೆಗೆ ಅಧಿಕೃತ ಪಾಲಕರು ( Guardian) ದತ್ತಕ ನೀಡಬಹುದು ಅಥವಾ ತಾವೇ ದತ್ತಕ ಪಡೆಯಬಹುದು.
ಮಲತಾಯಿ/ತಂದೆಗೆ ಅಥವಾ ದತ್ತಕ ಪಾಲಕರಿಗೆ ಮಗುವನ್ನು ದತ್ತಕ ಕೊಡುವ ಅDiಕಾರವಿಲ್ಲ (ಧನರಾಜ ವರ್ಸಸ್ ಸೂರಜ್ ಬಾಯಿ ಪ್ರಕರಣ- ಸುಪ್ರೀಂ ಕೋರ್ಟ್). ದತ್ತಕ ಪಡೆದ ಮಗು ಎಲ್ಲಾ ಉದ್ದೇಶಗಳಿಗೆ ದತ್ತಕ ತಂದೆ-ತಾಯಿಯರ ಮಗ ಅಥವಾ ಮಗಳೆಂದು ಪರಿಗಣಿಸಲ್ಪಡುತ್ತಾನೆ/ಳೆ ಮತ್ತು ತನ್ನನ್ನು ಹಡೆದ ತಂದೆ-ತಾಯಿಯರ ಹಾಗೂ ಆ ಕುಟುಂಬದ ಸಂಬಂಧಗಳನ್ನು ಹಾಗೂ ಆಸ್ತಿ ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ/ಳೆ.
ಆದರೂ ಆ ಕುಟುಂಬಕ್ಕೆ ಸಂಬಂಧಿಸಿ ನಿಷೇಧಿತ ಸಂಬಂಧಗಳಲ್ಲಿ ವಿವಾಹವಾಗಲು ಇರುವ ನಿಷೇಧ ಮುಂದುವರಿಯುತ್ತದೆ. ದತ್ತಕ ತಂದೆಯ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ದತ್ತಕ ಪಡೆದ ಮಗು ವಿಗೆ ದತ್ತಕದ ತಾರೀಕಿನಿಂದ ಹಿಸ್ಸೆದಾರ ಹಕ್ಕು ಪ್ರಾಪ್ತವಾಗುತ್ತದೆ ಮತ್ತು ಆತನು ಜೈವಿಕ ಮಗನಂತೆ ಎಲ್ಲ ಹಕ್ಕುಗಳನ್ನೂ ಪಡೆಯುತ್ತಾನೆ. ಕಾಯಿದೆಬದ್ಧವಾಗಿ ನಡೆದ ದತ್ತಕವನ್ನು ಯಾವುದೇ ಕಾರಣಕ್ಕೆ ರದ್ದುಪಡಿಸಲಾಗುವುದಿಲ್ಲ. ಈ ಕಾಯಿದೆಯ 17ನೇ ಕಲಮಿನ ಪ್ರಕಾರ ದತ್ತಕದ ಕುರಿತಂತೆ ಯಾರಿಗೂ ಯಾವುದೇ ರೀತಿಯ ಹಣ ಅಥವಾ ಪ್ರತಿಫಲ ನೀಡುವುದು ನಿಷಿದ್ಧ ಮತ್ತು ಅದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ದತ್ತಕ ಪತ್ರ (Adoption Deed): ಜೈವಿಕ ಮತ್ತು ದತ್ತಕ ತಂದೆ-ತಾಯಿಯರ ನಡುವೆ ನಡೆಯುವ ದತ್ತಕ ಪ್ರಕ್ರಿಯೆಯ ದಾಖಲೆಯನ್ನು ದತ್ತಕ ಪತ್ರವೆನ್ನಬಹುದು. ಅದನ್ನು ಸೂಕ್ತ ಸ್ಟಾಂಪ್ ಶುಲ್ಕ ಭರಿಸಿ ನೋಂದಾಯಿಸಬೇಕು. ಅದು ಕಡ್ಡಾಯವಲ್ಲದಿದ್ದರೂ ಆಪೇಕ್ಷಣಿಯ. ಅಂತೆಯೇ ನ್ಯಾಯಾ ಲಯದಿಂದ ದತ್ತಕ ಆದೇಶ ಪಡೆಯುವುದೂ ಸೂಕ್ತ.
Juvenile Justice Act 2015: ಈ ಕಾಯಿದೆಯು ಮುಖ್ಯವಾಗಿ ಬಾಲಾಪರಾಧಿಗಳು ಮತ್ತು ಇತರ ಪರಿತ್ಯಕ್ತ ಮಕ್ಕಳ ಪಾಲನೆ ಮತ್ತು ರಕ್ಷಣೆಗೆ ಸಂಬಂಧಿದ್ದಾದರೂ ದತ್ತಕದ ಕುರಿತೂ ನಿಬಂಧನೆ ಗಳನ್ನು ವಿಧಿಸುತ್ತದೆ. 8ನೇ ಅಧ್ಯಾಯದ 56(3 ) ಕಲಮಿನ ಪ್ರಕಾರ ಈ ಕಾಯಿದೆಯು 1956ರ ಹಿಂದೂ ದತ್ತಕ ಕಾಯಿದೆಯನ್ವಯ ನಡೆದ ದತ್ತಕಗಳಿಗೆ ಅನ್ವಯವಾಗುವುದಿಲ್ಲ. ಆದರೆ ಹಿಂದೂ ಗಳೂ ಸೇರಿ ಎಲ್ಲರೂ ಈ ಕಾಯಿದೆಯನ್ವಯ ದತ್ತಕ ಪಡೆಯಬಹುದು.
CARA ಅಂದರೆ “ಕೇಂದ್ರೀಯ ದತ್ತಕ ಸಂಪನ್ಮೂಲ ಪ್ರಾಧಿಕಾರ" ಜಾರಿ ಮಾಡಿದ ನಿಯಮಾವಳಿಗಳ ಪ್ರಕಾರ ಈ ಕಾಯಿದೆಯನ್ವಯ ನಡೆಯುವ ದತ್ತಕಗಳಲ್ಲಿ CARINGS ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಸರದಿ ಬರುವವರೆಗೆ ಕಾಯಬೇಕು. ಇದು ಸಂಬಂಧಿಕರಿಂದ ಅಥವಾ ವೈಯಕ್ತಿಕ ಮೂಲಗಳಿಂದ ದತ್ತಕ ಪಡೆಯಲೂ ಅನ್ವಯವಾಗುತ್ತದೆ. ಸೂಕ್ತ ಮಗುವಿನ ಆಯ್ಕೆಗಾಗಿ ಶಿಶು ಹೊಂದಾಣಿಕೆ ಎಂಬ ವ್ಯವಸ್ಥೆ ಕೂಡಾ ಇದೆ.
ಅಂಥ ಅರ್ಜಿ ಬಂದಾಗ ಸರಕಾರದಿಂದ ನಿಯುಕ್ತವಾದ ವಿಶೇಷ ದತ್ತಕ ಸಂಸ್ಥೆಗಳಿಂದ ಕುಟುಂಬ ಸರ್ವೇಕ್ಷಣೆ ಹಾಗೂ ಶಿಶುವಿನ ಅಧ್ಯಯನ ನಡೆಸಿ ಸೂಕ್ತವೆಂದು ಕಂಡುಬಂದ ನಂತರ, ಮಗುವನ್ನು ದತ್ತಕ ಪೂರ್ವ ಕಾಳಜಿ ಸಲುವಾಗಿ ಉದ್ದೇಶಿತ ದತ್ತಕ ಪಾಲಕರಿಗೆ ನೀಡಲಾಗುವುದು. ಪಾಲಕರ ಒಪ್ಪಿಗೆ ಪಡೆದು ದತ್ತಕದ ಕುರಿತು ಆದೇಶ ಪಡೆಯಲು ಅಧಿಕೃತ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗು ವುದು.
ನ್ಯಾಯಾಲಯಗಳು ದತ್ತಕ ಆದೇಶ ( Adoption Order ) ನೀಡುವಾಗ ಮುಖ್ಯವಾಗಿ ಶಿಶುವಿನ ಹಿತಾಸಕ್ತಿ, ಉದ್ದೇಶಿತ ಪಾಲಕರಿಗೆ ದತ್ತಕ ಪಡೆಯಲು ಇರುವ ಅರ್ಹತೆ, ನಿಜವಾದ ಆಸಕ್ತಿ, ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆಗಳನ್ನು ಗಮನಿಸುತ್ತವೆ. ಕೋರ್ಟಿನ ಆದೇಶ ಬಂದ ನಂತರ ಅವಶ್ಯಕ ಕಾಗದ ಪತ್ರಗಳ ಪ್ರಕ್ರಿಯೆ ಮುಗಿಸಿ ಮಗುವನ್ನು ದತ್ತಕ ನೀಡಲಾಗುತ್ತದೆ. ಕೋರ್ಟಿನ ಆದೇಶದ ಮೂಲಕ ನಡೆಯುವ ದತ್ತಕಗಳು ಸುರಕ್ಷಿತ ಮತ್ತು ಯಾವುದೇ ಕಾನೂನು ಸಮಸ್ಯೆ ಗಳುಂಟಾಗುವು ದಿಲ್ಲ.
ವಿದೇಶದಲ್ಲಿರುವ ದಂಪತಿಗಳು ಅಥವಾ ವ್ಯಕ್ತಿಗಳು ಭಾರತದಿಂದ ದತ್ತಕ ಪಡೆಯಲು ಈ ಕಾಯಿದೆ ಯಲ್ಲಿಯೇ ಪ್ರತ್ಯೇಕ ಕಾನೂನು ವ್ಯವಸ್ಥೆ ಇದೆ. ಅದರ ವಿವರCARINGS ವೆಬ್ ಸೈಟ್‌ನಲ್ಲಿ ಲಭ್ಯವಿದೆ.
ವಿಚ್ಛೇದಿತ ಪ್ರಕರಣಗಳಲ್ಲಿ ದತ್ತಕದ ನಿಯಮಗಳು: 1956ರ ದತ್ತಕ ಕಾಯಿದೆ ಮತ್ತು 2015ರ Juvenile Justice Act ಎರಡರಲ್ಲಿಯೂ ವಿಚ್ಛೇದಿತ ಮಹಿಳೆ ಅಥವಾ ಪುರುಷರಿಗೆ ದತ್ತಕ ಪಡೆಯುವ ಅಧಿಕಾರವಿದೆ.
ಆದರೆ ವಿಚ್ಛೇದಿತ ದಂಪತಿಗಳಿಗೆ ಮಗುವಿದ್ದಲ್ಲಿ ಆ ಮಗುವಿನ ಸುರಕ್ಷೆಯ ವಿಷಯ ಕೋರ್ಟಿನಲ್ಲಿ ತೀರ್ಮಾನವಾಗದೆ ದತ್ತಕ ನೀಡುವುದು ಸಾಧ್ಯವಿಲ್ಲ. ಸುರಕ್ಷೆಯ (Custody) ವಿಷಯ ತೀರ್ಮಾನ ವಾದರೂ ದತ್ತಕ ಕೊಡಲು ಇಬ್ಬರ ಒಪ್ಪಿಗೆಯೂ ಅಗತ್ಯ. ಉದಾಹರಣೆಗೆ, ವಿಚ್ಛೇದಿತ ಮಹಿಳೆ ಯೊಬ್ಬಳಿಗೆ ವಿಚ್ಛೇದಿತ ಗಂಡನಿಂದ ಹುಟ್ಟಿದ ಮಗುವಿದ್ದ ಸಂದರ್ಭದಲ್ಲಿ ಅವಳು ಪುನರ್ವಿವಾಹ ವಾದ ಪತಿಯು ಅಂಥ ಮಗುವಿನ ದತ್ತಕ ತಂದೆಯೆಂದು ಪರಿಗಣಿಸಲು ವಿಚ್ಛೇದಿತ ಪತಿಯ ಒಪ್ಪಿಗೆ ಯೂ ಅಗತ್ಯ (ಅಮ್ಮು ಅಜಿತ್ ವರ್ಸಸ್ ಇಅಅ ಪ್ರಕರಣ- ಕೇರಳ ಹೈಕೋರ್ಟ್). ಇದು ಮಗುವಿನ ಸುರಕ್ಷೆಯನ್ನು ಕೋರ್ಟು ತಾಯಿಗೆ ಒದಗಿಸಿದ್ದರೂ ಅಗತ್ಯ.
ಒಂದು ವೇಳೆ ವಿಧವೆಯೊಬ್ಬಳಿಗೆ ಮಗುವಿದ್ದು ಆಕೆ ಪುನರ್ವಿವಾಹವಾದಾಗ ಅಂಥ ಮಗುವಿಗೆ ಪುನರ್ವಿವಾಹದ ಪತಿ ದತ್ತಕ ತಂದೆಯಾಗಲು ಆಕೆಯ ಒಪ್ಪಿಗೆ ಪಡೆದು ಆತ ಮಗುವನ್ನು ದತ್ತಕ ಪಡೆಯಬೇಕು ಮತ್ತು ಜನ್ಮ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿಸಬೇಕು. ಹೀಗೆ ಮಾಡಿದಾಗ ಮಾತ್ರ ಆ ಮಗುವಿಗೆ ದತ್ತಕ ತಂದೆಯ ಆಸ್ತಿ ಹಕ್ಕು ದೊರೆಯುತ್ತದೆ. ಅಂಥ ಪ್ರಕರಣಗಳಲ್ಲಿ ನ್ಯಾಯಾ ಲಯದಿಂದ ದತ್ತಕ ಆದೇಶ ಪಡೆಯುವುದು ಅಗತ್ಯ.
ಮಕ್ಕಳಿಲ್ಲ ಎಂಬುದು ಭಾವನಾತ್ಮಕ ವಿಷಯವಾದರೂ ಮಗುವನ್ನು ದತ್ತಕವಾಗಿ ಪಡೆಯುವಾಗ ಸೂಕ್ತ ಆಯ್ಕೆ ಮತ್ತು ಕಾನೂನಿನ ಅಂಶಗಳನ್ನು ಜಾಗರೂಕತೆಯಿಂದ ಪಾಲಿಸುವುದು ಅತ್ಯಗತ್ಯ. ಯಾವುದೇ ಅನಧಿಕೃತ ಸಂಸ್ಥೆಗಳು ಮತ್ತು ಏಜೆನ್ಸಿಗಳ ಮೋಸದ ಜಾಲಕ್ಕೂ ಬೀಳದಂತೆ ಎಚ್ಚರಿಕೆ ವಹಿಸಬೇಕು. CARA ಪೋರ್ಟಲ್ ಮತ್ತು ಇಅಅದ ನಿಯಮಾವಳಿಗಳನ್ನು ಪಾಲಿಸಿ ದತ್ತಕ ಪಡೆದು ಕೊಂಡರೆ ಯಾವುದೇ ಸಮಸ್ಯೆಗಳಾಗುವುದಿಲ್ಲ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)