Thimmanna Bhagwath Column: ಬ್ರಿಕ್ಸ್: ಡಾಲರ್‌ನ ಸೊಕ್ಕು ಮುರಿಯಬಲ್ಲದೇ ?
ಅಮೆರಿಕ ಅಧ್ಯಕ್ಷರ ಇತ್ತೀಚಿನ ನಡವಳಿಕೆಗಳಿಂದ ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು ಹೊಂದುವ ಅವಶ್ಯಕತೆ ಎಂದಿಗಿಂತ ಹೆಚ್ಚಾಗಿ ಕಾಣತೊಡಗಿದೆ. ಹಾಗೆ ನೋಡಿದರೆ, ಇಂಥ ಪ್ರಯತ್ನಗಳು ಈಗಿನವಲ್ಲ. ಇಂಗ್ಲೆಂಡನ್ನು ಕೇಂದ್ರವಾಗಿರಿಸಿ ಯುರೋಪಿನ ದೇಶಗಳು ಯುರೋ (EURO) ಕರೆನ್ಸಿಯನ್ನು 1999ರಷ್ಟು ಹಿಂದೆಯೇ ಆರಂಭಿಸಿದವು. ಮುಖ್ಯವಾಗಿ ಯುರೋಪಿಯನ್ ರಾಷ್ಟ್ರಗಳ ವಹಿವಾಟುಗಳಿಗೆ ಸೀಮಿತ ವಾಗಿದ್ದರೂ ‘ಯುರೋ’ ಅಂತಾರಾಷ್ಟ್ರೀಯ ಕರೆನ್ಸಿಯಾಗಬೇಕೆಂಬ ಹಂಬಲವೂ ಇತ್ತು.

-

ಪ್ರಚಲಿತ
ತಿಮ್ಮಣ್ಣ ಭಾಗ್ವತ್
ಶಾಂಘೈ ಸಹಕಾರ ಕೂಟದ (SCO) ಶೃಂಗಸಭೆಯಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು ಮತ್ತು ನಿರ್ಣಯಗಳನ್ನು ಅನುಮೋದಿಸಲಾಯಿತು ಎನ್ನುವುದಕ್ಕಿಂತ ಆ ಸಭೆಯ ಕಾರಣಕ್ಕೆ ನಡೆದ ಚೀನಾ, ರಷ್ಯಾ ಮತ್ತು ಭಾರತ- ಈ ಮೂರು ರಾಷ್ಟ್ರ ನಾಯಕರ ಭೇಟಿ ಹೆಚ್ಚು ಪ್ರಚಾರ ಪಡೆಯಿತು. ಆ ಭೇಟಿ ನಡೆದ ಸಮಯ ಮತ್ತು ಸಂದರ್ಭಗಳು ವಿಶ್ವದಲ್ಲಿ ಹೊಸ ವ್ಯವಸ್ಥೆಗೆ ನಾಂದಿ ಹಾಡಿದವು ಎಂಬುದು ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಡವಳಿಕೆಯಲ್ಲಿ ‘ಸಂಪತ್ತಿಗೆ ಸವಾಲ್’ ಚಿತ್ರದ ಸಾಹುಕಾರ್ ಸಿದ್ಧಪ್ಪನನ್ನೂ ಮೀರಿಸಿದ ದರ್ಪ ಮತ್ತು ದಾದಾಗಿರಿ ಕಾಣುತ್ತಿದೆ. ವಿಶ್ವದ ಎಲ್ಲಾ ರಾಷ್ಟ್ರಗಳೂ ತಮಗೆ ಸಲಾಂ ಹಾಕಿ, ‘ಜೀ ಹುಜೂರ್’ ಎಂದು, ತಾವು ಗುರುತು ಮಾಡಿದಲ್ಲಿ ಸಹಿ ಮಾಡಬೇಕೆಂಬ ಸೊಕ್ಕಿನ ಮನಸ್ಥಿತಿಯ ಟ್ರಂಪ್, ನೊಬೆಲ್ ಶಾಂತಿ ಪ್ರಶಸ್ತಿಗೆ ಹಾತೊರೆಯುತ್ತಿರು ವುದು ಹಾಸ್ಯಾಸ್ಪದ.
ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಏಕಮೇವ ನಿಯಂತ್ರಕ ಕರೆನ್ಸಿ ತಮ್ಮದೆಂದು, ಡಾಲರ್ ಅನ್ನು ತೋರಿಸಿ ಎಲ್ಲಾ ದೇಶಗಳನ್ನೂ ಹೆದರಿಸಿ ಬಗ್ಗಿಸಬಹುದೆಂಬ ಜಂಭದಿಂದ ಲಾಗಾಯ್ತಿ ನಿಂದಲೂ ಅಮೆರಿಕ ಇಡೀ ವಿಶ್ವದ ದೊಡ್ಡಣ್ಣನೆಂದು ತಾನೇ ಪಟ್ಟಾಭಿಷೇಕ ಮಾಡಿಕೊಂಡಿದೆ. ಅದು ಅಧ್ಯಕ್ಷ ನಿಕ್ಸನ್‌ರ ಕಾಲದಿಂದಲೂ ನಡೆದುಬಂದಿದೆ ಮತ್ತು ಆ ಕಾಲಕ್ಕೆ ಅದು ಬಹುತೇಕ ಸತ್ಯವೂ ಆಗಿತ್ತು.
ಇದನ್ನೂ ಓದಿ: Thimmanna Bhagwat Column: ದತ್ತಕ ಸ್ವೀಕಾರ ಮತ್ತು ಪ್ರದಾನ- ನಂಬಿಕೆಗಳು ಮತ್ತು ನಿಬಂಧನೆಗಳು
ರಷ್ಯಾ, ಅಂದರೆ ಅಂದಿನ ಯುಎಸ್‌ಎಸ್‌ಆರ್, ಮಿಲಿಟರಿ ದೃಷ್ಟಿಯಲ್ಲಿ ಪರ್ಯಾಯ ಶಕ್ತಿಯಾಗಿ ದ್ದರೂ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಡಾಲರ್ ಗೆ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಅತ್ಯಾಧು ನಿಕ ಮಿಲಿಟರಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಬೃಹತ್ ಕೈಗಾರಿಕೆಗಳು, ಇಂಧನ ಪೂರೈಕೆ ಮತ್ತು ಸಂಗ್ರಹ, ಅಪಾರ ಶಸ್ತ್ರಾಸ್ತ್ರ ಸಂಗ್ರಹ, ನೈಸರ್ಗಿಕ ಸಂಪನ್ಮೂಲ, ಅಣುಶಕ್ತಿ, ಜತೆಗೆ ‘ನಾಸಾ’ ದಂಥ ಸಮರ್ಥ ಬಾಹ್ಯಾಕಾಶ ಸಂಸ್ಥೆಯನ್ನು ಹೊಂದಿರುವ ಅಮೆರಿಕ, ಬೃಹತ್ ಆರ್ಥಿಕ ಶಕ್ತಿಯೂ ಆಗಿದೆ.
ಭಾರತದಂಥ ದೇಶಗಳು ತಮ್ಮ ಉತ್ಪನ್ನ ಮತ್ತು ಸೇವೆಗಳ ರಫ್ತಿಗಾಗಿ ಮತ್ತು ತಂತ್ರಜ್ಞಾನ ಆಧಾರಿತ ವಸ್ತುಗಳ ಆಮದಿಗೆ ಅಲ್ಲದೆ ಯುವಕರಿಗೆ ಉದ್ಯೋಗಾವಕಾಶಗಳಿಗಾಗಿ ಕೂಡಾ ಅಮೆರಿಕವನ್ನು ಅವಲಂಬಿಸಿವೆ. ಈ ಕಾರಣಕ್ಕಾಗಿಯೇ ವಿಶ್ವ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಅಮೆರಿಕ ‘ಸಾಹು ಕಾರ್ ಸಿದ್ಧಪ್ಪ’ ಆಗಿರುವುದು!
ಆದರೆ ಜಗತ್ತು ಈಗ ಹೊಸ ವ್ಯವಸ್ಥೆಗಳತ್ತ ತೆರೆದುಕೊಳ್ಳುತ್ತಿದೆ. ಗುಲಾಮಗಿರಿಯನ್ನು ಯಾರೂ ಒಪ್ಪುತ್ತಿಲ್ಲ- ಅದು ವ್ಯಕ್ತಿಗಳಿರಲಿ, ರಾಷ್ಟ್ರಗಳಿರಲಿ, ಈ ಗ್ರಹಿಕೆ ಸಮಾನವಾಗಿ ಅನ್ವಯವಾಗುತ್ತದೆ. ಅಮೆರಿಕದ ಆರ್ಥಿಕ ಪ್ರತಿಬಂಧ, ಮಿಲಿಟರಿ ಸಹಕಾರ, ಅಪರೋಕ್ಷ ಯುದ್ಧಗಳು, ಸುಂಕ-ಪ್ರತಿಸುಂಕ ಗಳಂಥ ಬ್ಲ್ಯಾಕ್‌ಮೇಲ್ ತಂತ್ರಗಳ ಜತೆಗೆ ಐಎಂಎಫ್ ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳ ಮೇಲೆ ಅದು ಹೊಂದಿರುವ ನಿಯಂತ್ರಣಗಳು, ಅನೇಕ ದೇಶಗಳನ್ನು ನಿಜಕ್ಕೂ ಚಿಂತೆಗೀಡು ಮಾಡಿವೆ.

ತನ್ನ ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳಿಂದ ದೇಶ-ದೇಶಗಳ ನಡುವಿನ ವೈರಕ್ಕೆ ಕೂಡ ಅಮೆರಿಕ ಕುಮ್ಮಕ್ಕು ನೀಡುತ್ತಾ ತನ್ನ ಮೇಲಿನ ಅವಲಂಬನೆಯನ್ನು ಹೆಚ್ಚಿಸಿ, ಆ ಮೂಲಕ ತನ್ನ ಯುದ್ಧ ಸಾಮಗ್ರಿಗಳ ಮಾರಾಟವನ್ನೂ ಹೆಚ್ಚಿಸುವ ಹುನ್ನಾರವೆಸಗುತ್ತಿದೆ. ಈ ಎಲ್ಲಾ ಕಾರಣ ಗಳಿಂದಾಗಿ ಅಮೆರಿಕ-ಕೇಂದ್ರಿತ ಆರ್ಥಿಕತೆಯಿಂದ ಹೊರಒಂದು ಪರ್ಯಾಯ ಅಥವಾ ಸಮಾ ನಾಂತರ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವತ್ತ ವಿಶ್ವನಾಯಕರ ಪ್ರಯತ್ನಗಳು ನಡೆಯುತ್ತಿವೆ.
ಅಮೆರಿಕ ಅಧ್ಯಕ್ಷರ ಇತ್ತೀಚಿನ ನಡವಳಿಕೆಗಳಿಂದ ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು ಹೊಂದು ವ ಅವಶ್ಯಕತೆ ಎಂದಿಗಿಂತ ಹೆಚ್ಚಾಗಿ ಕಾಣತೊಡಗಿದೆ. ಹಾಗೆ ನೋಡಿದರೆ, ಇಂಥ ಪ್ರಯತ್ನಗಳು ಈಗಿನವಲ್ಲ. ಇಂಗ್ಲೆಂಡನ್ನು ಕೇಂದ್ರವಾಗಿರಿಸಿ ಯುರೋಪಿನ ದೇಶಗಳು ಯುರೋ (EURO) ಕರೆನ್ಸಿ ಯನ್ನು 1999ರಷ್ಟು ಹಿಂದೆಯೇ ಆರಂಭಿಸಿದವು. ಮುಖ್ಯವಾಗಿ ಯುರೋಪಿಯನ್ ರಾಷ್ಟ್ರಗಳ ವಹಿವಾಟುಗಳಿಗೆ ಸೀಮಿತವಾಗಿದ್ದರೂ ‘ಯುರೋ’ ಅಂತಾರಾಷ್ಟ್ರೀಯ ಕರೆನ್ಸಿಯಾಗಬೇಕೆಂಬ ಹಂಬಲವೂ ಇತ್ತು. ಆದರೆ ಯುರೋ ಕರೆನ್ಸಿಗೆ ಆಧಾರ ವಾಗಿ ಸ್ಟಾಕ್, ಬಾಂಡ್ ಅಥವಾ ಬಂಗಾರ ದಂಥ ಸಶಕ್ತ ಆರ್ಥಿಕ ಆಸ್ತಿಗಳು ಸಾಕಷ್ಟು ಇಲ್ಲದ್ದು ಮತ್ತು ಅಂಥ ಆಸ್ತಿಗಳ ಮೌಲ್ಯ ಹೆಚ್ಚಳವಾಗ ದಿರುವುದು ಹಾಗೂ ಅದರ ಹಿಂದೆ ದೊಡ್ಡ ಆರ್ಥಿಕ ಶಕ್ತಿಯಾಗಿ ಯಾವುದೇ ದೇಶ ಇಲ್ಲದ್ದರಿಂದ ಅದು ಡಾಲರ್‌ಗೆ ಪ್ರತಿಸ್ಪರ್ಧಿಯಾಗಿ ಬೆಳೆಯಲಿಲ್ಲ.
ಕೋವಿಡ್ ನಂತರದ ಆರ್ಥಿಕ ಹಿಂಜರಿತ ಹಾಗೂ ಕೆಲಮಟ್ಟಿಗೆ ಇಂಗ್ಲೆಂಡಿನ ರಾಜಕೀಯ ಅಸ್ಥಿರತೆ ಕೂಡ ಯುರೋ ನಿರೀಕ್ಷಿತ ಮಟ್ಟಕ್ಕೆ ಏರದಿರಲು ಕಾರಣವಾಯ್ತು. ಬದಲಾದ ಪರಿಸ್ಥಿತಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ರಷ್ಯಾ, ಭಾರತ, ಚೀನಾದಂಥ ರಾಷ್ಟ್ರಗಳ ಆರ್ಥಿಕತೆ ಹೆಚ್ಚು ಶಕ್ತಿಯುತವಾಗುತ್ತಿದೆ.
ಇತ್ತೀಚಿಗಿನ ಅಂಕಿ-ಅಂಶಗಳ ಪ್ರಕಾರ ಟ್ರಂಪ್‌ರಿಂದ ‘ಸತ್ತ ಆರ್ಥಿಕತೆ’ ಎಂದು ಕರೆಸಿಕೊಂಡ ಭಾರತದ ಜಿಡಿಪಿ 7.6 ಪ್ರತಿಶತ ವೃದ್ಧಿಯನ್ನು ಹೊಂದಿದೆ. ಅದು ಸ್ವತಃ ಅಮೆರಿಕದ ಜಿಡಿಪಿ ವೃದ್ಧಿಯ ದರವಾದ ಶೇ.3.3ರ ದುಪ್ಪಟ್ಟಿಗಿಂತ ಹೆಚ್ಚಿರುವುದರಿಂದ ಟ್ರಂಪ್ ಮತ್ತು ಅವರ ಹೇಳಿಕೆಯನ್ನು ಸಮರ್ಥಿಸಿದವರು ಮುಟ್ಟಿ ನೋಡಿಕೊಳ್ಳುವಂತಾಗಿದೆ.
ಚೀನಾವಂತೂ ತನ್ನ ಕೈಗಾರಿಕೆ, ತಾಂತ್ರಿಕತೆ, ಮತ್ತು ಬೃಹತ್ ಆರ್ಥಿಕತೆಯ ಮೂಲಕ ಅಮೆರಿಕ ದಂಥ ರಾಷ್ಟ್ರಕ್ಕೇ ದೊಡ್ಡ ಪೂರೈಕೆದಾರ ಎನಿಸಿಕೊಂಡಿದೆ. ಬಹು ದೊಡ್ಡ ಆರ್ಥಿಕ ಹಾಗೂ ಮಿಲಿ ಟರಿ ಶಕ್ತಿಯಾಗಿ ಹೊರಹೊಮ್ಮಿರುವ ಚೀನಾ, ಈಗ ಎಲ್ಲಾ ರಾಷ್ಟ್ರಗಳಿಗೆ ಅನಿವಾರ್ಯ ವ್ಯಾವಹಾ ರಿಕ ಪಾಲುದಾರ ಎನಿಸಿಕೊಂಡಿದೆ. ಬ್ರೆಜಿಲ್, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳೂ ಪ್ರಗತಿಯ ಸ್ಪರ್ಧೆಯಲ್ಲಿ ಮಂಚೂಣಿಯಲ್ಲಿವೆ.
ಬ್ರಿಕ್ಸ್ ( BRICS ) ಇತಿಹಾಸ
ಗೋಲ್ಡ್‌ಮೆನ್ ಸ್ಯಾಚ್ ಕಂಪನಿಯ ಆರ್ಥಿಕ ಸಲಹೆಗಾರರಾಗಿದ್ದ ಜಿಮ್ ಓನೀಲ್ ಎಂಬವವರು ಆರ್ಥಿಕ ಶಕ್ತಿಗಳಾಗಿ ಬೆಳೆಯುತ್ತಿರುವ ಬ್ರೆಜಿಲ್, ರಷ್ಯಾ, ಇಂಡಿಯಾ ಮತ್ತು ಚೀನಾ ದೇಶಗಳು ಪರ್ಯಾಯ ವಿಶ್ವ ಆರ್ಥಿಕ ಶಕ್ತಿಗಳಾಗಲಿವೆ ಎಂದು 2001ರಲ್ಲೇ ಹೇಳಿದ್ದರು. 2009ರಲ್ಲಿ ಈ ರಾಷ್ಟ್ರ ಗಳು ತಮ್ಮ ಹೆಸರುಗಳ ಮೊದಲ ಅಕ್ಷರದ ಜೋಡಣೆಯಾದ BRIC ಎಂಬ ಹೆಸರಿನಲ್ಲಿ ಒಂದು ಅನೌಪಚಾರಿಕ ಸಭೆ ನಡೆಸಿದವು.
2010ರಲ್ಲಿ ದಕ್ಷಿಣ ಆಫ್ರಿಕಾ ಸೇರಿಕೊಂಡಾಗ ಅದು BRICS ಆಯಿತು. ಆನಂತರ ಇರಾನ್, ಇಥಿಯೋ ಪಿಯಾ, ಯುಎಇ, ಈಜಿಪ್ಟ್ ಮತ್ತು ಇಂಡೋನೇಷ್ಯಾ ರಾಷ್ಟ್ರಗಳು ಸೇರಿದಾಗ ಒಟ್ಟೂ ಸದಸ್ಯ ರಾಷ್ಟ್ರ ಗಳ ಸಂಖ್ಯೆ 10ಕ್ಕೆ ಏರಿ ಅದು ಬ್ರಿಕ್ಸ್+ ಆಯಿತು. ಈ ವರೆಗೆ 17 ಸಲ ಶೃಂಗಸಭೆ ನಡೆಸಿದ ಬ್ರಿಕ್ಸ್, ಪರಸ್ಪರ ಸಹಕಾರ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅನೇಕ ಮಹತ್ವದ ಯೋಜನೆ ಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಕೆಲವು ಕಾರ್ಯರೂಪಕ್ಕೆ ಬಂದರೆ ಇನ್ನು ಕೆಲವು ಪ್ರಗತಿ ಯಲ್ಲಿವೆ. ಇದರಲ್ಲಿ ಬ್ರಿಕ್ಸ್ ರಾಷ್ಟ್ರಗಳಿಗೆ ಸಾಮಾನ್ಯ ಕರೆನ್ಸಿ ಆರಂಭಿಸುವುದು (BRICS Basket Reserve Currency), ಬ್ರಿಕ್ಸ್ ಡೆವಲಪ್‌ಮೆಂಟ್ ಬ್ಯಾಂಕ್ ಸ್ಥಾಪನೆ, ಬ್ರಿಕ್ಸ್ ತುರ್ತುನಿಧಿ ಸ್ಥಾಪನೆ, BRICS Pay - ಡಿಜಿಟಲ್ ಪಾವತಿ ವ್ಯವಸ್ಥೆ ಮುಂತಾದವು ಮುಖ್ಯವಾದವು.
BRICS Satellite Constellation ಅಂದರೆ ರಷ್ಯಾ, ಭಾರತ ಮತ್ತು ಚೀನಾ ದೇಶಗಳ ಉಪಗ್ರಹಗಳು ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸದಸ್ಯ ರಾಷ್ಟ್ರಗಳಿಗೆ ಅವಶ್ಯಕ ವಾದ ಹವಾಮಾನದಂಥ ವಿಷಯಗಳ ದೂರ ಸಂವೇದಿ ಅಂಕಿ-ಅಂಶಗಳನ್ನು ಒದಗಿಸುವ ಯೋಜನೆ ಇನ್ನೊಂದು ಮಹತ್ವದ ಉಪಕ್ರಮ. ಸಂಸ್ಥಾಪಕ ದೇಶಗಳು ತಲಾ 10 ಬಿಲಿಯನ್ ಡಾಲರ್ ತೊಡಗಿಸುವ ಮೂಲಕ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕನ್ನು ಚೀನಾದ ಶಾಂಘೈನಲ್ಲಿ ಸ್ಥಾಪಿಸಲಾಗಿದೆ.
ಅಮೆರಿಕದಂಥ ಬಲಾಢ್ಯ ರಾಷ್ಟ್ರದ ನಿಯಂತ್ರಣದಲ್ಲಿರುವ ಐಎಂಎಫ್ ಗೆ ಪರ್ಯಾಯವಾಗಿ ಇದು ಬೆಳೆದರೆ ವಿಶ್ವ ಆರ್ಥಿಕತೆಯ ಮೇಲೆ ಅಮೆರಿಕದ ನಿಯಂತ್ರಣ ಬಹುತೇಕ ಕಡಿಮೆಯಾಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಡಾಲರ್‌ಗೆ ಪರ್ಯಾಯವಾಗಿ ಸಾಮಾನ್ಯ ಕರೆನ್ಸಿಯೊಂದನ್ನು ಆರಂಭಿ ಸುವ ಪ್ರಸ್ತಾಪವನ್ನು 2023ರ ಸಭೆಯಲ್ಲಿ ಚರ್ಚಿಸಲಾಯಿತು.
ಡಾಲರ್ ರಹಿತ ವಿಶ್ವ ಆರ್ಥಿಕತೆಯ ( De dollarisation) ದಿಶೆಯಲ್ಲಿ ವಿವಿಧ ದೇಶಗಳ ಕೇಂದ್ರ ಬ್ಯಾಂಕುಗಳು (ಭಾರತದಲ್ಲಿ ರಿಸರ್ವ್ ಬ್ಯಾಂಕ್ ಇದ್ದಂತೆ) ತಮ್ಮ ಡಿಜಿಟಲ್ ಕರೆನ್ಸಿ ಆರಂಭಿ ಸುವ ಮೂಲಕ ದೇಶಗಳ ನಡುವಿನ ಹಣಕಾಸು ಇತ್ಯರ್ಥವನ್ನು ಆನ್‌ಲೈನ್ ಮೂಲಕ ಬಗೆಹರಿಸುವ ವ್ಯವಸ್ಥೆ ಹೊಂದಲು ಎಲ್ಲಾ ಸದಸ್ಯ ದೇಶಗಳು ಒಪ್ಪಿವೆ. ಉದ್ದೇಶಿತ ಸಾಮಾನ್ಯ ಕರೆನ್ಸಿಗೆ ‘ಬ್ರಿಕ್ಸ್-ಬ್ರಿಜ್’ ಎಂಬ ಹೆಸರನ್ನು ಆರಂಭದಲ್ಲಿ ಸೂಚಿಸಲಾಗಿತ್ತು.
ಆನಂತರ ಐದು ರಾಷ್ಟ್ರಗಳ ಕರೆನ್ಸಿಯ ಮೊದಲ ಅಕ್ಷರವನ್ನು ಬಳಸಿ R5 ಎಂಬ ಹೆಸರನ್ನು ಸೂಚಿಸ ಲಾಯಿತು. ಇಂಥ ಹೊಸ ಸಾಮಾನ್ಯ ಕರೆನ್ಸಿ ಹೊಂದುವುದರ ಪ್ರಮುಖ ಲಾಭವೆಂದರೆ ಡಾಲರ್ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜತೆಗೆ ಡಾಲರ್‌ಗೆ ಆಯಾ ದೇಶಗಳ ಕರೆನ್ಸಿಯನ್ನು ವಿನಿಮಯ ಮಾಡುವಾಗ ಆಗುವ ಕಡಿತದ ಹಾನಿಯನ್ನು ಉಳಿಸಬಹುದು.
ಡಾಲರಿಗೆ ಆಂತರಿಕ ಮೌಲ್ಯ ಜಾಸ್ತಿ ಇರುವುದು ನಿಜವಾದರೂ, ಅದು ಅಮೆರಿಕದ ಆರ್ಥಿಕ ಮತ್ತು ರಾಜಕೀಯ ದಾದಾಗಿರಿಯ ಕಾರಣದಿಂದ ಅದರ ನಿಜವಾದ ಮೌಲ್ಯಕ್ಕಿಂತ ಉತ್ಪ್ರೇಕ್ಷಿತವಾಗಿದೆ ಎನ್ನಲಾಗುತಿದೆ. ಬ್ರಿಕ್ಸ್ ಕರೆನ್ಸಿ ಜಾರಿಗೆ ಬಂದು ಹೆಚ್ಚು ಹೆಚ್ಚು ದೇಶಗಳು ಅದನ್ನು ಬಳಸಿದಾಗ ಡಾಲರ್‌ನ ಮೌಲ್ಯ ತನ್ನಿಂದ ತಾನೇ ಕುಸಿಯುತ್ತದೆ ಮತ್ತು ಆಗ ವಿಶ್ವ ಆರ್ಥಿಕತೆಯ ಸಮತೋಲನ ಹೊಸ ಆಯಾಮ ಪಡೆಯುತ್ತದೆ.
ಚೀನಾ, ಭಾರತ, ರಷ್ಯಾದಂಥ ದೊಡ್ಡ ಆರ್ಥಿಕತೆ ಮತ್ತು ಬೃಹತ್ ಮಾರುಕಟ್ಟೆಯನ್ನು ಹೊಂದಿದ ರಾಷ್ಟ್ರಗಳು ಬ್ರಿಕ್ಸ್ ಕರೆನ್ಸಿಯ ಬೆನ್ನಿಗೆ ನಿಂತಾಗ ಅದರ ಮೌಲ್ಯ ತಾನಾಗಿ ಹೆಚ್ಚುತ್ತದೆ. ಜತೆಗೆ ಬಂಗಾರ ಹಾಗೂ ಇತರ ಅಮೂಲ್ಯ ಆಸ್ತಿಗಳನ್ನು ಆಧಾರವಾಗಿಟ್ಟು ಕರೆನ್ಸಿಯನ್ನು ಹೊರ ತಂದಲ್ಲಿ ಅದು ಅಪಮೌಲ್ಯ ವಾಗುವ ಸಂಭವ ಇರುವುದಿಲ್ಲ.
ಇದೇನೂ ಸರಳ ವಿಷಯವಲ್ಲ. ಈ ಚಿಂತನೆಯನ್ನು ಸದಸ್ಯ ರಾಷ್ಟ್ರಗಳು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಹಲವು ಸವಾಲುಗಳಿರುವ ಈ ಪ್ರಸ್ತಾಪವು ಕಾರ್ಯರೂಪಕ್ಕೆ ಬರಲು ದೇಶಗಳ ಬದ್ಧತೆ ಮತ್ತು ಸಮನ್ವಯದ ಪ್ರಯತ್ನ ಅಗತ್ಯ. ಭೌಗೋಳಿಕವಾಗಿ ಹಾಗೂ ರಾಜಕೀಯವಾಗಿ ಸಹಜ ವಾಗಿಯೇ ಒಕ್ಕೂಟವಾಗಿರುವ ಯುರೋಪಿನಲ್ಲೇ ಸಾಮಾನ್ಯ ಕರೆನ್ಸಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಬ್ರಿಕ್ಸ್ ರಾಷ್ಟ್ರಗಳಲ್ಲಿ ಅಂಥ ಸಮಾನ ಅಂಶಗಳಿಲ್ಲ. ಸದಸ್ಯ ರಾಷ್ಟ್ರಗಳ ನಡುವಿನ ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳು ಕೂಡ ಸಮನ್ವಯದ ಕೊರತೆಗೆ ದಾರಿಯಾಗಬಹುದು. ಆರ್ಥಿಕ ವಾಗಿ ಅತಿ ಬಲಾಢ್ಯವಾಗಿರುವ ಚೀನಾ ದೇಶವು ಬ್ರಿಕ್ಸ್ ಕೂಟ, ಅಭಿವೃದ್ಧಿ ಬ್ಯಾಂಕ್ ಮತ್ತು ಕರೆನ್ಸಿಯ ಮೇಲೆ ನಿಯಂತ್ರಣ ಸಾಧಿಸಿದರೆ ಅದು ಮತ್ತೊಂದು ಅಮೆರಿಕ ವಾಗುವ ಸಾಧ್ಯತೆ ಇದೆ.
ಭಾರತ ಮತ್ತು ರಷ್ಯಾ ಈ ದಿಶೆಯಲ್ಲಿ ಒಂದಾಗಿ ನಡೆದರೆ ಬ್ರಿಕ್ಸ್‌ನ ನಿಜ ವಾದ ಗುರಿ ಸಾಧಿಸಲು ಸಾಧ್ಯವಾದೀತು. ಬ್ರಿಕ್ಸ್ ಸದಸ್ಯತ್ವ ಹೊಂದಿರುವ ರಾಷ್ಟ್ರಗಳನ್ನು ತನ್ನ ವಿರೋಧಿಗಳೆಂದು ಈಗಾಗಲೇ ಪರಿಗಣಿಸಿರುವ ಅಮೆರಿಕ, ಈ ಪ್ರಯತ್ನಗಳಿಗೆ ತಡೆ ಒಡ್ಡುವುದು ನಿಶ್ಚಿತ. ಕೇವಲ ಅಮೆರಿಕದ ವಿರೋಧವಷ್ಟೇ ಮೈತ್ರಿಗೆ ಕಾರಣವಾದರೆ ಅದು ಶಾಶ್ವತ ಸ್ನೇಹವಾಗಲಿಕ್ಕಿಲ್ಲ.
ಶಾಂಘೈನಲ್ಲಿ ಮೋದಿ ಮತ್ತು ಪುಟಿನ್ ಜತೆಗೆ ಜಿನ್‌ಪಿಂಗ್ ತೋರಿದ ಮೈತ್ರಿ ಭಾವ ಮತ್ತು ಉತ್ಸಾಹ ಗಳು ಪ್ರಾಮಾಣಿಕವಾಗಿದ್ದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಕಷ್ಟವಾಗಲಿಕ್ಕಿಲ್ಲ.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)