Roopa Gururaj Column: ಜನರನ್ನು ಮೋಸಗೊಳಿಸುವ ಸುಲಭ ಮಾರ್ಗ
ಕಳ್ಳನನ್ನು ಅಟ್ಟಿಸಿಕೊಂಡು ಬರುತ್ತಿದ್ದ ಸೇವಕನಿಗೆ ಒಂದಷ್ಟು ದೂರ ಓಡಿ ಬಂದಮೇಲೆ ಕಳ್ಳ ಕಾಣಿಸಲೇ ಇಲ್ಲ. ಅವನು ಅತ್ತ ಇತ್ತ ತಿರುಗಿ ಮರದ ಕೆಳಗೆ ಕೂತಿದ್ದ ಸಾಧುವನ್ನು ಕೇಳಿದ ಕಳ್ಳನೊಬ್ಬನನ್ನು ಇಲ್ಲಿ ಎಲ್ಲಾದರೂ ನೋಡಿದಿರಾ? ಆಗ ಸಾಧು ಹೇಳಿದ ,ಇಲ್ಲಿ ಯಾರೂ ಬರಲೇ ಇಲ್ಲವಲ್ಲ ಬೇರೆದಾರಿಯಲ್ಲಿ ಹೋಗಿರಬೇಕು ಎಂದ.


ಒಂದೊಳ್ಳೆ ಮಾತು
rgururaj628@gmail.com
ಕಳ್ಳನೊಬ್ಬ ಕದಿಯಲು ಒಬ್ಬ ಸಾಹುಕಾರನ ಮನೆಗೆ ಹೋದ. ದುಡ್ಡು, ಆಭರಣ ಗಳನ್ನು ಕದ್ದು ಬಟ್ಟೆಯಲ್ಲಿ ಕಟ್ಟಿ ಇನ್ನೇನು ಗೇಟಿನ ಆಚೆ ಬರುವಷ್ಟರಲ್ಲಿ, ಸಾಹುಕಾರನ ನಾಯಿ ಬೊಗಳಲು ಶುರುಮಾಡಿತು. ಸಾಹುಕಾರನ ಸೇವಕ ಕಳ್ಳನನ್ನು ನೋಡಿ ಓಡಿ ಬಂದ. ಕಳ್ಳ ಕದ್ದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಓಡತೊಡಗಿದ. ಸೇವಕ ಅವನನ್ನು ಬಿಡದೇ ಹಿಂಬಾಲಿಸತೊಡಗಿದ. ಕಳ್ಳನಿಗೆ ಓಡಿ, ಓಡಿ ತುಂಬಾ ಆಯಾಸವಾಗತೊಡಗಿತು. ಈ ಸೇವಕನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಿರುವಾಗ ಅವನಿಗೆ ಬೂದಿ ಗುಡ್ಡೆಯೊಂದು ಕಾಣಿಸಿತು. ಸೀದ ಓಡಿ ಅದರಲ್ಲಿ ಬಿದ್ದು ಮೈಗೆಲ್ಲಾ ಬೂದಿ ಬಳಿದುಕೊಂಡು ಅಲ್ಲೇ ಪಕ್ಕದಲ್ಲಿದ್ದ ಒಂದು ಮರದ ಕೆಳಗೆ ಕಣ್ಮುಚ್ಚಿ ಕುಳಿತು ಕೊಂಡ.
ಕಳ್ಳನನ್ನು ಅಟ್ಟಿಸಿಕೊಂಡು ಬರುತ್ತಿದ್ದ ಸೇವಕನಿಗೆ ಒಂದಷ್ಟು ದೂರ ಓಡಿ ಬಂದಮೇಲೆ ಕಳ್ಳ ಕಾಣಿಸಲೇ ಇಲ್ಲ. ಅವನು ಅತ್ತ ಇತ್ತ ತಿರುಗಿ ಮರದ ಕೆಳಗೆ ಕೂತಿದ್ದ ಸಾಧುವನ್ನು ಕೇಳಿದ ಕಳ್ಳನೊಬ್ಬನನ್ನು ಇಲ್ಲಿ ಎಲ್ಲಾದರೂ ನೋಡಿದಿರಾ? ಆಗ ಸಾಧು ಹೇಳಿದ, ಇಲ್ಲಿ ಯಾರೂ ಬರಲೇ ಇಲ್ಲವಲ್ಲ ಬೇರೆದಾರಿಯಲ್ಲಿ ಹೋಗಿರಬೇಕು ಎಂದ.
ಇದನ್ನೂ ಓದಿ: Roopa Gururaj Column: ಹದ್ದಿನ ರೂಪಾಂತರದ ಹಿಂದಿನ ಸಂಘರ್ಷ
ಆಗ ಸೇವಕ ಆ ಕಳ್ಳ ಸಾಧುವಿಗೆ ನಮಸ್ಕರಿಸಿ ಅಲ್ಲಿಂದ ಹೊರಟ. ಕಳ್ಳ ಸಾಧು ಹಾಗೇ ಎರಡು ಮೂರು ದಿನ ಆ ಮರದ ಕೆಳಗೇ ಕುಳಿತಿದ್ದ. ಅವನನ್ನು ಆ ಊರಿನವರು ನಿಜವಾದ ಸಾಧುವೆಂದು ಭಾವಿಸಿ ದರು. ಹಣ್ಣು ಹಂಪಲು ತಂದಿಟ್ಟು ನಮಸ್ಕರಿಸಿ, ಅವನಲ್ಲಿ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳ ತೊಡಗಿದರು.
ಕಳ್ಳತನ ಮಾಡುವುದಕ್ಕಿಂತ, ಸಾಧು ವೇಷವೇ ಮಿಗಿಲೆನ್ನಿಸಿತು ಆ ಕಳ್ಳನಿಗೆ. ಜನರು ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಏನಾದರೂ ಪರಿಹಾರ ನೀಡಿ ಎಂದು ಬೇಡಿಕೊಂಡಾಗ ಇವನು ಕೊಟ್ಟ ಪರಿಹಾರ ಕೆಲವರಿಗೆ ಪರಿಣಾಮ ಬೀರಿತು. ಇವನನ್ನು ಸನ್ಮಾನಿಸಿ ಹಣ, ನಗ ನಾಣ್ಯಗಳನ್ನು ಕೊಡತೊಡಗಿದರು. ಕಳ್ಳತನದ ದುಡಿಮೆಗಿಂತ ಹತ್ತು ಪಟ್ಟು ಹಣ ಇವನ ಬಳಿ ಸೇರತೊಡಗಿತು.
ಜೊತೆಗೆ ಗೌರವ ಸನ್ಮಾನವೂ ದೊರೆಯ ತೊಡಗಿತು. ಒಂದು ದಿನ ಅವನಿಗೆ ಈ ಸನ್ಮಾನ, ಗೌರವ ಜಾಸ್ತಿ ದಿನ ಉಳಿಯುವುದಿಲ್ಲ ಸತ್ಯ ಗೊತ್ತಾದರೆ ಚಪ್ಪಲಿ, ಕಲ್ಲೇಟು ನಿಶ್ಚಿತವೆಂದು ಅನ್ನಿಸಿತು. ಒಂದು ರಾತ್ರಿ ಇದ್ದಕ್ಕಿದ್ದಂತೆ ಆ ಊರಿನಿಂದ ಮಾಯವಾದ. ಎಲ್ಲಿಯ ತನಕ ಜನರು ತಾವೇ ಮೋಸಕ್ಕೆ ಒಳಗಾಗಲು ತಯಾರಾಗಿರುತ್ತಾರೊ, ಅಲ್ಲಿಯ ತನಕ ಈ ಕಳ್ಳ ಸಾಧುವಿನಂತವರು ಮೋಸ ಮಾಡಲು ತಯಾರಾಗೇ ಇರುತ್ತಾರೆ. ಈ ಕಳ್ಳನಿಗಂತೂ ಪಾಪಪ್ರಜ್ಞೆ ಜಾಗ್ರತವಾಯಿತು ಅಲ್ಲಿಂದ ಹೊರಟು ಹೋದ.
ಆದರೆ ಇವನಿಗಿಂತ ನೀಚ ಮನ ಸ್ಥಿತಿಯ ಅನೇಕರು ನಮ್ಮ ಸಮಾಜದಲ್ಲಿ ಸಾಧುಗಳಂತೆ, ಭವಿಷ್ಯ ನುಡಿಯುವ ಜ್ಯೋತಿಷ್ಯರಂತೆ, ಪಂಡಿತರಂತೆ ವೇಷ ಧರಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇವರನ್ನು ಅರಸಿ ಹೋಗುವವರೆಲ್ಲ ಜೀವನದಲ್ಲಿ ನೋಂದವರು ಬೆಂದವರು ಯಾವುದೋ ವಿಷಯಕ್ಕೆ ಏಟು ತಿಂದವರು. ಲೆಕ್ಕವಿಲ್ಲದೆ ಹಣಕಾಸು ಖರ್ಚು ಮಾಡಿ ಇವರ ಬಳಿ ಏನಾದರೂ ಪರಿಹಾರ ಸಿಗುತ್ತದೆ ಎಂದು ಆಸೆಯಿಂದ ಇವರು ಹೇಳಿದ್ದನ್ನೆಲ್ಲ ಮಾಡುತ್ತಾರೆ.
ಆದರೆ ಅತ್ತ ಪರಿಹಾರವೂ ಇಲ್ಲ, ಇದ್ದ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗೆ ತಮ್ಮನ್ನು ತಾವೇ ದೂಡಿ ಕೊಳ್ಳುತ್ತಾರೆ. ಇದ್ದ ಅವರ ಸಹವಾಸದಲ್ಲಿ ಮನೆ ಮಠ ಕಳೆದುಕೊಂಡವರು ಇದ್ದಾರೆ. ಹೀಗೆ ಮೋಸ ಹೋದವರು ನಾಲ್ಕು ಜನರ ಮುಂದೆ ಅದನ್ನು ಹೇಳಿಕೊಳ್ಳಲು ಕೂಡ ಹಿಂಜರಿಯುತ್ತಾರೆ. ಕಾರಣ ಜನರು ಆಗ ಇವರನ್ನೇ ದೂಷಿಸುವುದು. ಇಂತಹವರ ವಿಷಯ ಸಮಾಜಕ್ಕೆ ತಿಳಿಯದೆ ಇದ್ದರೆ ಇವರ ಮೋಸ ಮುಂದುವರೆಯುತ್ತಲೇ ಇರುತ್ತದೆ.
ದಯವಿಟ್ಟು ಇಂತಹ ದಯ ವಂಚಕರಿಂದ ದೂರವಿರಿ. ನಮ್ಮ ಜೀವನದ ಕಷ್ಟಗಳಿಗೆ ಪರಿಶ್ರಮ ವಹಿಸಿ ಪರಿಹಾರ ಕಂಡುಕೊಳ್ಳೋಣ. ಇಂತಹ ನಯ ವಂಚಕರಿಂದ ದೂರವಿರಿ.