Mohan Vishwa Column: ಸೋಲಿನ ಹತಾಶೆ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ
ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ‘ಮೌತ್ ಕಾ ಸೌದಾಗರ್’ ಎಂದು ಹೇಳಿದ್ದರು, ಮತ್ತೊಬ್ಬ ಕಾಂಗ್ರೆಸ್‌ನ ನಾಯಕ ಮಣಿ ಶಂಕರ್ ಅಯ್ಯರ್ ಮೋದಿಯವರನ್ನು ‘ನೀಚ್ ಆದ್ಮಿ’ ಎಂದು ಅವಹೇಳನ ಮಾಡಿದ್ದರು, ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಪದವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿದ್ದರು.
-
ವೀಕೆಂಡ್ ವಿತ್ ಮೋಹನ್
ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ‘ಮೌತ್ ಕಾ ಸೌದಾಗರ್’, ಮತ್ತೊಬ್ಬ ಕಾಂಗ್ರೆಸ್‌ನ ನಾಯಕ ಮಣಿ ಶಂಕರ್ ಅಯ್ಯರ್ ಮೋದಿಯವರನ್ನು ‘ನೀಚ್ ಆದ್ಮಿ’ , ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಪದವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿದ್ದರು.
ಭಾರತದ ಪ್ರಜಾಪ್ರಭುತ್ವ ವಿಶ್ವದ ಅತಿ ದೊಡ್ಡದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸಂಭಾಷಣೆಯ ಮಟ್ಟ ಕುಸಿಯುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿ ದ್ದರೂ, ಅವಮಾನ, ನಿಂದನೆ ಮತ್ತು ವೈಯಕ್ತಿಕ ದಾಳಿಗಳು ಅದನ್ನು ದುರ್ಬಲ ಗೊಳಿಸುತ್ತಿವೆ.
ವಿಶೇಷವಾಗಿ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರ ವಿರುದ್ಧ ಬಳಸಲಾಗುತ್ತಿರುವ ಭಾಷೆ, ರಾಜಕೀಯ ಟೀಕೆಯನ್ನೂ ಮೀರಿದ ಒಂದು ವಿಷಕಾರಿ ಪ್ರವೃತ್ತಿಯನ್ನು ಸೂಚಿಸುತ್ತದೆ. ವಿಮರ್ಶೆ ಮತ್ತು ನಿಂದನೆಗಳ ನಡುವಿನ ರೇಖೆ ಸ್ಪಷ್ಟವಾಗಿರಬೇಕು, ಸರಕಾರದ ನೀತಿಗಳನ್ನು ಪ್ರಶ್ನಿಸುವುದು, ನಿರ್ಧಾರಗಳನ್ನು ವಿಮರ್ಶಿಸುವುದು, ಆಡಳಿತದ ಬಗ್ಗೆ ಚರ್ಚಿಸುವುದು, ಪ್ರಜಾ ಪ್ರಭುತ್ವದ ಆರೋಗ್ಯಕರ ಲಕ್ಷಣಗಳು. ಆದರೆ ಕೆಲವು ಸಂದರ್ಭಗಳಲ್ಲಿ ಆ ಟೀಕೆಗಳು ವೈಯಕ್ತಿಕ ಅವಹೇಳನಗಳಾಗಿ ಬದಲಾಗುತ್ತಿರುವುದು ವಿಪರ್ಯಾಸದ ಸಂಗತಿ.
ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ‘ಮೌತ್ ಕಾ ಸೌದಾಗರ್’ ಎಂದು ಹೇಳಿದ್ದರು, ಮತ್ತೊಬ್ಬ ಕಾಂಗ್ರೆಸ್‌ನ ನಾಯಕ ಮಣಿ ಶಂಕರ್ ಅಯ್ಯರ್ ಮೋದಿಯವರನ್ನು ‘ನೀಚ್ ಆದ್ಮಿ’ ಎಂದು ಅವಹೇಳನ ಮಾಡಿದ್ದರು, ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಪದವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿದ್ದರು.
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಮೋದಿಯವರನ್ನು 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಮಯದಲ್ಲಿ ‘ವಿಷ ಸರ್ಪ’ ಎಂದು ಕರೆದಿದ್ದರು, ಅಸ್ಸಾಂನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯನ್ನು ವಿಷಸರ್ಪಕ್ಕೆ ಹೋಲಿಸಿ ಕೊಲ್ಲುವಂತೆ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು, ಕೇರಳ ಚುನಾವಣೆ ಸಂದರ್ಭದಲ್ಲಿ ಮೋದಿಯವರನ್ನು ಗುರಿಯನ್ನಾಗಿಸಿ ಗುಜರಾತಿಗಳನ್ನು ಅನಕ್ಷರಸ್ಥ ರೆಂದು ಹೇಳಿದ್ದರು, ತಮಿಳುನಾಡಿನಲ್ಲಿ ಮೋದಿಯವರನ್ನು ‘ಭಯೋತ್ಪಾದಕ’ ಎನ್ನುವ ಮೂಲಕ ಮೋದಿಯವರ ಮೇಲಿನ ವೈಯಕ್ತಿಕ ದಾಳಿಯನ್ನು ಮುಂದುವರೆಸಿ, ಅತ್ಯಂತ ಕೀಳುಮಟ್ಟದ ಭಾಷೆ ಬಳಸಿದ್ದಾರೆ.
ಇದನ್ನೂ ಓದಿ: Mohan Vishwa Column: ಮಹಿಳಾ ಮೀಸಲು: ವಾಗ್ದಾನದಿಂದ ಇತಿಹಾಸದತ್ತ
ಸತತ ಚುನಾವಣಾ ಸೋಲಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಕಾಂಗ್ರೆಸ್‌ನ ನಾಯಕರು ಮೆಚ್ಚಿಸಬೇಕೆಂದರೆ ಮೋದಿ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಆಗಾಗ ತೆಗಳುತ್ತಿರಬೇಕು, ಎಂಬುದು ಅಲ್ಲಿನ ಅಲಿಖಿತ ನಿಯಮ.
ಒಂದೆಡೆ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಬೇಕು, ಮತ್ತೊಂದೆಡೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದರೆ ಮುಖ್ಯ ಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗಬೇಕು. ಇಬ್ಬರ ಉದ್ದೇಶ ಸ್ಪಷ್ಟವಾಗಿರುವುದರಿಂದ ರಾಜಕೀಯದ ನೈತಿಕ ಗಡಿಗಳನ್ನು ಮೀರಿ ನಾಲಗೆಯ ಮೇಲೆ ಹಿಡಿತವಿಲ್ಲದಂತೆ ಮಾತನಾಡು ತ್ತಿದ್ದಾರೆ.
ಪ್ರಧಾನಿ ಮೋದಿಯವರ ಮೇಲಿನ ಈ ರೀತಿಯ ಭಾಷೆಯ ಬಳಕೆ ಕೇವಲ ಒಬ್ಬ ನಾಯಕನ ವಿರುದ್ಧದ ದಾಳಿ ಮಾತ್ರವಲ್ಲ, ದೇಶದ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ದೊಡ್ಡ ಪರಿಣಾಮ ವನ್ನು ಉಂಟುಮಾಡುತ್ತದೆ. ಪ್ರಧಾನಮಂತ್ರಿಯ ಸ್ಥಾನ ಕೇವಲ ವ್ಯಕ್ತಿಯದ್ದಲ್ಲ, ಅದು ದೇಶದ ಗೌರವ ಮತ್ತು ಜನರ ಮತದ ಪ್ರತಿನಿಧಿಯಾಗಿದೆ. ಆ ಸ್ಥಾನಕ್ಕೆ ಅವಹೇಳನಕಾರಿ ಪದಗಳನ್ನು ಬಳಸುವುದು, ಅನೇಕ ಜನರ ಅಭಿಪ್ರಾಯವನ್ನು ತಿರಸ್ಕರಿಸುವಂತೆ ಕಂಡುಬರುತ್ತದೆ.
ಇದರಿಂದ ರಾಜಕೀಯ ಚರ್ಚೆಗಳು ಅಭಿವೃದ್ಧಿ, ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಮುಂತಾದ ಪ್ರಮುಖ ವಿಷಯಗಳಿಂದ ದೂರ ಸರಿದು ವೈಯಕ್ತಿಕ ಹೇಳಿಕೆಗಳತ್ತ ತಿರುಗುತ್ತವೆ. ಈ ಪ್ರವೃತ್ತಿಯ ಮತ್ತೊಂದು ಪರಿಣಾಮ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸುತ್ತದೆ, ರಾಜಕೀಯ ನಾಯಕರು ಬಳಸುವ ಭಾಷೆ, ಅವರ ಅನುಯಾಯಿಗಳಲ್ಲಿಯೂ ಪ್ರತಿಫಲಿಸುತ್ತದೆ.
ಪರಿಣಾಮ, ದ್ವೇಷಪೂರಿತ ಮತ್ತು ಅವಹೇಳನಕಾರಿ ಭಾಷೆ ಬಳಕೆ ಸಾಮಾನ್ಯವಾಗಿ ಬಿಡುತ್ತದೆ. ಇದು ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತದೆ ಮತ್ತು ಯುವಜನತೆಗೆ ತಪ್ಪು ಮಾದರಿಯನ್ನು ಒದಗಿಸುತ್ತದೆ. ಆರೋಗ್ಯಕರ ಚರ್ಚೆಗಳ ಬದಲಾಗಿ, ಕಟುವಾದ ವಾದ - ವಿವಾದಗಳು ಹೆಚ್ಚಾಗುತ್ತವೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಗೌರವಯುತ ಸಂಭಾಷಣೆಗೆ ಉದಾಹರಣೆಯಾಗಿರುವ ನಾಯಕರು ಅನೇಕರಿದ್ದಾರೆ. ಭಾರತ ಕಂಡಂತಹ ಧೀಮಂತ ನಾಯಕ ‘ಅಟಲ್ ಬಿಹಾರಿ ವಾಜಪೇಯಿ’ ರಂತಹ ನಾಯಕರು ವಿರೋಧ ಪಕ್ಷದಲ್ಲಿ ಕುಳಿತು, ಆಡಳಿತ ಪಕ್ಷದ ತೀರ್ಮಾನಗಳ ಬಗ್ಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರೂ, ಭಾಷೆಯಲ್ಲಿ ಸೌಜನ್ಯವನ್ನು ಕಾಪಾಡುತ್ತಿದ್ದರು.
ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಅವುಗಳನ್ನು ವ್ಯಕ್ತಪಡಿಸುವ ವಿಧಾನ ಪ್ರಜಾಪ್ರಭುತ್ವದ ಗುಣಮಟ್ಟವನ್ನು ನಿರ್ಧರಿಸುತ್ತದೆ. ರಾಜಕೀಯದಲ್ಲಿ ನಿಂದನೆ ಮತ್ತು ಅವಹೇಳನಗಳಿಗೆ ತಾತ್ಕಾಲಿಕ ಪ್ರಭಾವ ಇರಬಹುದು, ಆದರೆ ದೀರ್ಘಕಾಲದಲ್ಲಿ ಜನರು ವಿಷಯಾಧಾರಿತ ಚರ್ಚೆಗಳನ್ನು ಮತ್ತು ಫಲಿತಾಂಶಗಳನ್ನು ಗಮನಿಸುತ್ತಾರೆ, ಗೌರವಪೂರ್ಣ ಭಾಷೆಯೊಂದಿಗೆ ನಡೆಯುವ ಚರ್ಚೆಗಳು ಮಾತ್ರ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತವೆ.
ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವ ಮಲ್ಲಿಕಾರ್ಜುನ ಖರ್ಗೆಯವರು, ಸಂವಿಧಾನವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು 50 ಬಾರಿ ರಾಜ್ಯ ಸರಕಾರಗಳನ್ನು ಉರುಳಿಸಿದ ತಮ್ಮದೇ ಪಕ್ಷದ ಇಂದಿರಾ ಗಾಂಧಿಯವರನ್ನು ಏನೆಂದು ಕರೆಯುತ್ತಾರೆ? ಭಯೋತ್ಪಾದಕರ ವಿಷಯ ದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಒಮ್ಮೆ ತಿರುವು ಹಾಕಿದರೆ, ಭಯೋತ್ಪಾದನೆ ವಿರುದ್ಧದ ಆ ಪಕ್ಷದ ನಿಲುವು ಕನ್ನಡಿಯ ಮುಂದೆ ಬೆತ್ತಲಾಗಿಸುತ್ತದೆ.
ರಾಹುಲ್ ಗಾಂಧಿ ಪಾಕಿಸ್ತಾನ ಮೂಲದ ‘ಜೈಷೆ ಮೊಹಮ್ಮದ್’ ಉಗ್ರ ಸಂಘಟನೆಯ ನಾಯಕ ‘ಮಸೂದ್ ಅಜ್ಹರ್’ನನ್ನು ಅಜ್ಹರ್ ಜೀ ಎಂದು ಕರೆದಿದ್ದರು. ದಿಗ್ವಿಜಯ ಸಿಂಗ್ ‘ಲಷ್ಕರೆ ತಯ್ಬಾ’ ಉಗ್ರ ಸಂಘಟನೆಯ ನಾಯಕ ‘ಹಫೀಜ್ ಸಯೀದ್’ ನನ್ನು ಸಯೀದ್ ಸಾಬ್ ಎಂದು ಕರೆದಿದ್ದರು, 2008ರ ‘ಬಾಟ್ಲಾ ಹೌಸ್ ಎನ್ಕೌಂಟರ್’ ಕುರಿತು ದಿಗ್ವಿಜಯ ಸಿಂಗ್ ಸಂಶಯ ವ್ಯಕ್ತಪಡಿಸಿದ್ದರು.
ಕಾಶ್ಮೀರಿ ಪಂಡಿತರ ಸಾವಿಗೆ ಕಾರಣನಾದ ಉಗ್ರ ‘ಯಾಸೀನ್ ಮಲಿಕ್’ನನ್ನು ಕರೆಸಿ ರಾಜ ಮರ್ಯಾದೆ ನೀಡಿದ್ದು ಕಾಂಗ್ರೆಸ್ ಪಕ್ಷ. 2001ರ ಸಂಸತ್ ದಾಳಿಯ ರೂವಾರಿ ಉಗ್ರ ‘ಆಫ್ಜಲ್ ಗುರು’ನನ್ನು ಸುರ್ಜೆ ವಾಲಾ ‘ಆಫ್ಜಲ್ ಜಿ’ಎಂದು ಕರೆದಿದ್ದರು.
ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಹಿಂದೂ ತೀವ್ರವಾದ ಎಂಬ ಪದ ಬಳಸಿದ್ದರು, ನಿಜವಾದ ಭಯೋತ್ಪಾದಕರಿಗೆ ಸಹಾನಭೂತಿ ತೋರಿಸುವುದು ಆ ಪಕ್ಷದ ನಾಯಕರ ನಿತ್ಯಚಾಳಿಯಾಗಿದೆ. ರಾಜಕೀಯದಲ್ಲಿ ಬಳಸುವ ಪದಗಳು ಕೇವಲ ಹೇಳಿಕೆಗಳಲ್ಲ, ಅವು ಜನರ ಮನಸ್ಥಿತಿಯನ್ನು ಪ್ರಭಾವಿಸುತ್ತವೆ.
ಜಗತ್ತಿನ ವಿವಿಧ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ನರೇಂದ್ರ ಮೋದಿಯವರನ್ನು ತಮ್ಮ ಅತ್ಯುನ್ನತ ಪ್ರಶಸ್ತಿಗಳು ಮತ್ತು ಗೌರವಗಳಿಂದ ಸನ್ಮಾನಿಸಿವೆ, ಈ ಗೌರವಗಳು ಭಾರತವು ಜಾಗತಿಕ ವೇದಿಕೆಯಲ್ಲಿ ಪಡೆದಿರುವ ಪ್ರಾಮುಖ್ಯತೆಯ ಸೂಚಕವಾಗಿದೆ.
2016ರಲ್ಲಿ ಸೌದಿ ಅರೇಬಿಯಾ ಮೋದಿಯವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ Order of Abdulaziz Al Saud ನೀಡಿತ್ತು. 2018ರಲ್ಲಿ ಪ್ಯಾಲೆಸ್ತೀನ್ Grand Collar of the State of Palestine ಪ್ರಶಸ್ತಿಯನ್ನು ನೀಡಿದೆ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಅವರ ಕೊಡುಗೆ ಯನ್ನು ಮೆಚ್ಚಿ ನೀಡಿತ್ತು.
ಮಧ್ಯಪ್ರಾಚ್ಯದ ಮತ್ತೊಂದು ಪ್ರಮುಖ ರಾಷ್ಟ್ರ ಯುಎಇ - 2019ರಲ್ಲಿ ಮೋದಿಯವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ Order of Zayed ಅನ್ನು ಪ್ರದಾನ ಮಾಡಿತ್ತು. ಈ ಪ್ರಶಸ್ತಿ, ಭಾರತ - ಯುಎಇ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಪ್ರೇರಣೆಯನ್ನು ಗುರುತಿಸುತ್ತದೆ. ಅದೇ ಸಮಯದಲ್ಲಿ, ಬಹರೇನ್ ದೇಶ King Hamad Order of the Renaissance ಗೌರವವನ್ನು ನೀಡಿ, ಮೋದಿ ಯವರ ನಾಯಕತ್ವವನ್ನು ಶ್ಲಾಘಿಸಿತು.
ಆಫ್ರಿಕಾ ಖಂಡದಲ್ಲಿಯೂ ಮೋದಿಯವರ ಪ್ರಭಾವ ಸ್ಪಷ್ಟವಾಗಿ ಕಾಣಿಸಿದೆ, ಈಜಿಪ್ಟ್ 2023ರಲ್ಲಿ ತನ್ನ ಅತ್ಯುನ್ನತ ಗೌರವ Order of the Nile ನೀಡಿ, ಭಾರತ-ಈಜಿಪ್ಟ್ ಸಂಬಂಧಗಳನ್ನು ಬಲಪಡಿಸುವಲ್ಲೂ ಮೋದಿಯವರ ಪಾತ್ರವನ್ನು ಪ್ರಶಂಶಿಸಿತ್ತು.
ಅಂತರಾಷ್ಟ್ರೀಯ ವೇದಿಕೆಯಲ್ಲಿ, ಮೋದಿ ಯವರು ವಿಶ್ವ ಸಂಸ್ಥೆಯಿಂದಲೂ ಗೌರವಿಸಲ್ಪಟ್ಟಿದ್ದಾರೆ. 2018ರಲ್ಲಿ ಅವರಿಗೆ Champions of the Earth ಪ್ರಶಸ್ತಿ ಲಭಿಸಿತು, ಇದು ಪರಿಸರ ಸಂರಕ್ಷಣೆ ಮತ್ತು ಹವಾಮಾನದಲ್ಲಿ ಅವರ ಮುಂದಾಳತ್ವವನ್ನು ಗುರುತಿಸುತ್ತದೆ. ವಿಶೇಷವಾಗಿ ಅಂತರಾಷ್ಟ್ರೀಯ ಸೌರ ಮೈತ್ರಿ (International Solar Alliance) ಸ್ಥಾಪನೆಗೆ ನೀಡಿದ ಕೊಡುಗೆ ಈ ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ.
ಇದಲ್ಲದೆ, 2018ರಲ್ಲಿ ದಕ್ಷಿಣ ಕೊರಿಯಾದಿಂದ Seoul Peace Prize ಪ್ರಶಸ್ತಿ ದೊರೆತಿದ್ದು, ಜಾಗತಿಕ ಶಾಂತಿ, ಆರ್ಥಿಕ ಬೆಳವಣಿಗೆ ಮತ್ತು ಅಂತರಾಷ್ಟ್ರೀಯ ಸಹಕಾರಕ್ಕೆ ಅವರ ಕೊಡುಗೆಯನ್ನು ಮೆಚ್ಚ ಲಾಗಿದೆ. ಈ ಪ್ರಶಸ್ತಿ ಮೋದಿಯವರನ್ನು ಜಾಗತಿಕ ನಾಯಕತ್ವದ ಪ್ರಮುಖ ವ್ಯಕ್ತಿಯಾಗಿ ಗುರುತಿಸುವ ಮತ್ತೊಂದು ಉದಾಹರಣೆ.
ಮೋದಿಯವರ ಅಂತರಾಷ್ಟ್ರೀಯ ಗೌರವಗಳು ಕೇವಲ ಪ್ರಶಸ್ತಿಗಳ ಮಟ್ಟದ ಸೀಮಿತವಾಗಿಲ್ಲ. ಅನೇಕ ದೇಶಗಳಲ್ಲಿ ಅವರಿಗೆ ಸಂಸತ್ ಭಾಷಣ ಮಾಡುವ ಅವಕಾಶ, ವಿಶಿಷ್ಟ ಸ್ವಾಗತ, ಮತ್ತು ಭಾರತೀಯ ಸಮುದಾಯದಿಂದ ಭಾರೀ ಬೆಂಬಲ ದೊರೆತಿರುವುದು ಕೂಡ ಗಮನಾರ್ಹ.
ಅಮೆರಿಕದ ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣ, ಆಸ್ಟ್ರೇಲಿಯಾ, ಜಪಾನ್, ಯುರೋಪಿಯನ್ ರಾಷ್ಟ್ರಗಳಲ್ಲಿ ದೊರೆತ ಗೌರವಪೂರ್ಣ ಸ್ವಾಗತಗಳು ಭಾರತವು ಜಾಗತಿಕ ರಾಜಕೀಯದಲ್ಲಿ ಹೊಂದಿರುವ ಮಹತ್ವವನ್ನು ಪ್ರತಿಬಿಂಬಿಸುತ್ತವೆ.