ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwath Column: ಟ್ರಂಪ್‌ ಸುಂಕದ ಬರೆಗೆ ಜಿಎಸ್‌ಟಿ ಕಡಿತದ ಮುಲಾಮು

ಸರಕುಗಳು ಮತ್ತು ಸೇವೆಗಳ ಮಾರಾಟ ಒಂದು ರಾಜ್ಯದ ಒಳಗೇ ನಡೆದರೆ ರಾಜ್ಯ ಮಾರಾಟ ತೆರಿಗೆ ( SST ಅಥವಾ KST) ಅನ್ವಯವಾಗುತ್ತದೆ. ಅದು ಅಂತಾರಾಜ್ಯ ಮಾರಾಟವಾದರೆ ಕೇಂದ್ರ ಮಾರಾಟ ತೆರಿಗೆ ( CST) ಕೂಡಾ ಅನ್ವಯವಾಗುತ್ತದೆ. ಇಂಥ ತೆರಿಗೆಗಳ ದರಗಳು ರಾಜ್ಯದಿಂದ ರಾಜ್ಯಕ್ಕೆ ಪ್ರತ್ಯೇಕವಿದ್ದು ದರಿಂದ ಕೈಗಾರಿಕೆಗಳ ಉತ್ಪಾದನಾ ವೆಚ್ಚ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು.

ಟ್ರಂಪ್‌ ಸುಂಕದ ಬರೆಗೆ ಜಿಎಸ್‌ಟಿ ಕಡಿತದ ಮುಲಾಮು

-

Ashok Nayak Ashok Nayak Sep 12, 2025 9:38 AM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

ಅಂಶವೆಂದರೆ ದೇಶದ ಒಟ್ಟೂ ಉತ್ಪಾದನೆಯ ಶೇ.61ಕ್ಕಿಂತಲೂ ಹೆಚ್ಚು ಆಂತರಿಕ ಬೇಡಿಕೆಗೇ ಅಗತ್ಯವಿರುವುದರಿಂದ ರಫ್ತು ವ್ಯಾಪಾರದಲ್ಲಿ ಉಂಟಾಗಬಹುದಾದ ಸವಾಲು ಗಳಿಂದ ನಮ್ಮ ಕೈಗಾರಿಕೆಗಳು ತಮ್ಮನ್ನು ರಕ್ಷಿಸಿಕೊಳ್ಳಬಲ್ಲವು. ಆದ್ದರಿಂದ ಯಾವುದೇ ಒಂದು ರಾಷ್ಟ್ರ ಸುಂಕ ಹೆಚ್ಚು ಮಾಡಿ ಭಾರತದ ಆರ್ಥಿಕತೆಯನ್ನು ನಾಶಮಾಡುವೆ ಎಂದುಕೊಂಡರೆ ಅದು ಅವರ ಭ್ರಮೆ ಮಾತ್ರ.

56ನೇ ಜಿಎಸ್‌ಟಿ ಸಮಿತಿಯ ಸಭೆಯು ಅನುಮೋದಿಸಿದ ಜಿಎಸ್‌ಟಿ-2, ಅಮೆರಿಕದ ಸುಂಕ ಧಮಕಿ‌ ಯಿಂದ ಭಾರತದ ಆರ್ಥಿಕತೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳಿಗೆ ಪರಿಣಾಮಕಾರಿ ಪ್ರತಿಬಂಧಕ ಎನ್ನುವುದರಲ್ಲಿ ಸಂಶಯವಿಲ್ಲ. ಎರಡು ಹಂತದ ತೆರಿಗೆ ಶ್ರೇಣಿ (slab) ಮತ್ತು ಒಂದು ‘ಪಾಪ ಸರಕು’ಗಳ ಶ್ರೇಣಿ (Sin Goods) ಒಳಗೊಂಡಿರುವ ಜಿಎಸ್‌ಟಿ-2, ಕೇವಲ ತೆರಿಗೆ ದರ ಇಳಿಕೆ ಯಲ್ಲ.

ವ್ಯವಸ್ಥೆಯ ಆಮೂಲಾಗ್ರ ಪರಿಷ್ಕರಣೆ ಕೂಡಾ. ಪ್ರಧಾನಿಯವರ ಸ್ವಾತಂತ್ರ್ಯೋತ್ಸವದ ಭಾಷಣ ದಲ್ಲಿ ದೀಪಾವಳಿ ಕೊಡುಗೆ ಎಂದಿದ್ದನ್ನು ನವರಾತ್ರಿಗೇ ನೀಡಿದ್ದು, ಪರಿಸ್ಥಿತಿಯನ್ನು ಎದುರಿಸಲು ದೇಶ ಸಿದ್ಧವಾಗಿರುವುದರ ಸ್ಪಷ್ಟ ಸಂದೇಶ. ಆದರೆ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್, “ಜಿಎಸ್‌ಟಿ-2ಗೆ ಕಳೆದ ಒಂದೂವರೆ ವರ್ಷದಿಂದಲೇ ತಯಾರಿ ನಡೆದಿತ್ತು ಮತ್ತು ಟ್ರಂಪ್‌ರ ಸುಂಕಕ್ಕೂ ಇದಕ್ಕೂ ನೇರ ಸಂಬಂಧ ಇಲ್ಲ" ಎಂದರು.

ಆದರೂ ಇಂಥ ಪ್ರಮುಖ ನಿರ್ಣಯ ಕೈಗೊಂಡ ಸಮಯ ಮತ್ತು ಸಂದರ್ಭ ಮಹತ್ವದ್ದು. ರಾಜತಾಂತ್ರಿಕತೆಯಲ್ಲಿ ಹೆಚ್ಚು ಮಾತನಾಡುವುದಕ್ಕಿಂತ ಕಾರ್ಯಗಳೇ ಹೆಚ್ಚು ಪರಿಣಾಮಕಾರಿ ಯಾಗಿರುತ್ತವೆ ಎಂಬುದನ್ನು ಅದರಲ್ಲಿ ನುರಿತವರು ಮಾತ್ರ ತಿಳಿದಿರುತ್ತಾರೆ. ಹಾಗೆ ನೋಡಿದರೆ ಅಮೆರಿಕಕ್ಕೆ ಭಾರತದ ರಫ್ತ 87.4 ಬಿಲಿಯನ್ ಡಾಲರ್. ಅದು ದೇಶದ ಒಟ್ಟೂ ಉತ್ಪಾದನೆಯ ಶೇ.2ರಷ್ಟು ಮಾತ್ರ!

ಇದನ್ನೂ ಓದಿ: Thimmanna Bhagwath Column: ಬ್ರಿಕ್ಸ್:‌ ಡಾಲರ್‌ನ ಸೊಕ್ಕು ಮುರಿಯಬಲ್ಲದೇ ?

ಇನ್ನೊಂದು ಪ್ರಮುಖ ಅಂಶವೆಂದರೆ ದೇಶದ ಒಟ್ಟೂ ಉತ್ಪಾದನೆಯ ಶೇ.61ಕ್ಕಿಂತಲೂ ಹೆಚ್ಚು ಆಂತರಿಕ ಬೇಡಿಕೆಗೇ ಅಗತ್ಯವಿರುವು ದರಿಂದ ರಫ್ತು ವ್ಯಾಪಾರದಲ್ಲಿ ಉಂಟಾಗಬಹುದಾದ ಸವಾಲು ಗಳಿಂದ ನಮ್ಮ ಕೈಗಾರಿಕೆಗಳು ತಮ್ಮನ್ನು ರಕ್ಷಿಸಿಕೊಳ್ಳಬಲ್ಲವು. ಆದ್ದರಿಂದ ಯಾವುದೇ ಒಂದು ರಾಷ್ಟ್ರ ಸುಂಕ ಹೆಚ್ಚು ಮಾಡಿ ಭಾರತದ ಆರ್ಥಿಕತೆಯನ್ನು ನಾಶ ಮಾಡುವೆ ಎಂದು ಕೊಂಡರೆ ಅದು ಅವರ ಭ್ರಮೆ ಮಾತ್ರ.

ಏನಿದು ಜಿಎಸ್‌ಟಿ?: ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದ ಸಂವಿಧಾನದ 265ನೇ ವಿಧಿಯನ್ವಯ ಯಾವುದೇ ತೆರಿಗೆಯನ್ನು ಸಂಸತ್ತು ಅಥವಾ ರಾಜ್ಯ ಶಾಸನ ಸಭೆಗಳು ಅಂಗೀಕರಿಸಿದ ಕಾಯಿದೆಗಳಡಿಯಲ್ಲೇ ವಿಧಿಸಬೇಕು. 246ನೇ ವಿಧಿ ಹಾಗೂ 7ನೇ ಪರಿಶಿಷ್ಟಗಳು ಕೇಂದ್ರ ಮತ್ತು ರಾಜ್ಯಗಳ ಪ್ರತ್ಯೇಕ ಯಾದಿ ಹಾಗೂ ಸಮಾನ ಯಾದಿಗಳನ್ನು(Central, State and Concurrent List ) ಒದಗಿಸುತ್ತವೆ.

ಸರಕುಗಳು ಮತ್ತು ಸೇವೆಗಳ ಮಾರಾಟ ಒಂದು ರಾಜ್ಯದ ಒಳಗೇ ನಡೆದರೆ ರಾಜ್ಯ ಮಾರಾಟ ತೆರಿಗೆ ( SST ಅಥವಾ KST) ಅನ್ವಯವಾಗುತ್ತದೆ. ಅದು ಅಂತಾರಾಜ್ಯ ಮಾರಾಟವಾದರೆ ಕೇಂದ್ರ ಮಾರಾಟ ತೆರಿಗೆ ( CST) ಕೂಡಾ ಅನ್ವಯವಾಗುತ್ತದೆ. ಇಂಥ ತೆರಿಗೆಗಳ ದರಗಳು ರಾಜ್ಯದಿಂದ ರಾಜ್ಯಕ್ಕೆ ಪ್ರತ್ಯೇಕ ವಿದ್ದುದರಿಂದ ಕೈಗಾರಿಕೆಗಳ ಉತ್ಪಾದನಾ ವೆಚ್ಚ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಈ ಕಾರಣಕ್ಕೆ ಕೈಗಾರಿಕೆಗಳ ಸ್ಪರ್ಧಾ ಸಾಮರ್ಥ್ಯ ಮತ್ತು ಲಾಭಾರ್ಹತೆ ಬದಲಾಗುವುದರಿಂದ ಕೈಗಾರಿಕಾ ಅಭಿವೃದ್ಧಿಯಲ್ಲಿ ಭೌಗೋಳಿಕ ಅಸಮಾನತೆಗೆ ಕಾರಣವಾಗುತ್ತದೆ.

Thimmanna B 1209

ಅಲ್ಲದೆ ಉತ್ಪಾದನೆಯ ವಿವಿಧ ಕಚ್ಚಾವಸ್ತುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸುವುದರಿಂದ ಬಹುಹಂತದ ತೆರಿಗೆ ನೀಡಬೇಕಾಗುತ್ತದೆ. ಅಂಥ ತೆರಿಗೆಯನ್ನು ಅಂತಿಮ ತೆರಿಗೆ ಪಾವತಿಗೆ ಹೊಂದಾಣಿಕೆ ಮಾಡು ವುದು ಹಿಂದಿನ ವ್ಯವಸ್ಥೆಯಲ್ಲಿ ಸರಳವಾಗಿರಲಿಲ್ಲ. ಈ ಗೊಂದಲಗಳನ್ನು ತೊಡೆದು ಹಾಕಿ ‘ಒಂದು ದೇಶ ಒಂದೇ ತೆರಿಗೆ’ ಎಂಬ ಘೋಷವಾಕ್ಯದಡಿಗೆ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತೆ ಸಮಾನ ತೆರಿಗೆ ದರ ಮತ್ತು ಪದ್ಧತಿಯನ್ನು ತರುವ ಉದ್ದೇಶದಿಂದ ಜಿಎಸ್‌ಟಿ ವ್ಯವಸ್ಥೆಯನ್ನು ಜುಲೈ 1, 2017 ರಿಂದ ದೇಶಾದ್ಯಂತ ಜಾರಿಗೆ ತರಲಾಯಿತು.

ಸರಕು ಮತ್ತು ಸೇವಾ ತೆರಿಗೆ ( Goods and Services Tax) ಎಂದು ಕರೆಯಲ್ಪಡುವ ಈ ತೆರಿಗೆಯು ಈ ಹಿಂದೆ ಇದ್ದ ಕೇಂದ್ರ ಮತ್ತು ರಾಜ್ಯ ಮಾರಾಟ ತೆರಿಗೆಯಲ್ಲದೆ ಇನ್ನಿತರ ಹಲವು ತೆರಿಗೆಗಳ ಬದಲಿಗೆ ತರಲಾದ ಅಪರೋಕ್ಷ ತೆರಿಗೆ ವ್ಯವಸ್ಥೆ.

ಜಿಎಸ್‌ಟಿಯ ಇತಿಹಾಸ: ಜಿಎಸ್‌ಟಿ ಜಾರಿ ಕುರಿತಂತೆ 2000ದ ವರ್ಷದಲ್ಲಿ ವಾಜಪೇಯಿ ಸರಕಾರ ಒಂದು ಸಮಿತಿಯನ್ನು ರಚಿಸಿತ್ತು. ನಂತರ ಬಂದ ಕಾಂಗ್ರೆಸ್ ಸರಕಾರ 2004ರಲ್ಲಿ ಈ ಕುರಿತು ಎಲ್ಲಾ ರಾಜ್ಯಗಳ ವಿತ್ತ ಸಚಿವರನ್ನೊಳಗೊಂಡ ಒಂದು ಅಧಿಕಾರಸ್ಥ (Empowered) ಸಮಿತಿಯನ್ನು ರಚಿಸಿತು. 2006ರಲ್ಲಿ ಅಂದಿನ ವಿತ್ತ ಸಚಿವ ಪಿ.ಚಿದಂಬರಂ, ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್‌ಟಿ ಜಾರಿ ಮಾಡುವ ಪ್ರಸ್ತಾಪ ಮಂಡಿಸಿದರು. 2011ರಲ್ಲಿ ಈ ಕುರಿತು 115ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತಾದರೂ 15ನೇ ಲೋಕಸಭೆಯ ವಿಸರ್ಜನೆಯಿಂದಾಗಿ ಅದು ಜಾರಿಯಾಗಲಿಲ್ಲ.

ಅಂತಿಮವಾಗಿ ಮೋದಿ ಸರಕಾರ 2014ರಲ್ಲಿ ಮಂಡಿಸಿದ 122ನೇ ಸಂವಿಧಾನ ತಿದ್ದುಪಡಿ ವಿಧೇಯಕ 2016ರಲ್ಲಿ ಅಂಗೀಕೃತವಾಗಿ 2017 ಜುಲೈ 1ರಿಂದ ಕೇಂದ್ರ ಮತ್ತು ರಾಜ್ಯಗಳ ಜಿಎಸ್‌ಟಿ ಕಾಯಿದೆಗಳು ಜಾರಿಗೆ ಬಂದವು.

ಯಾವೆಲ್ಲ ತೆರಿಗೆಗಳು ಜಿಎಸ್‌ಟಿಯಲ್ಲಿ ಒಳಗೊಂಡಿವೆ?: ಸರಕು ಮತ್ತು ಸೇವೆಗಳ ಉತ್ಪಾದನೆ ಮತ್ತು ಪೂರೈಕೆಯ ಭಾಗವಾಗಿರುವ ವೆಚ್ಚಗಳ ಮೇಲೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ ಮತ್ತು ಉತ್ಪಾದನೆ ಹಾಗೂ ಪೂರೈಕೆಯ ವಿವಿಧ ಹಂತಗಳುದ್ದಕ್ಕೂ ಇದನ್ನು ವಿಧಿಸಲಾಗುತ್ತದೆ. ಈ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರದ ವಿವಿಧ ಅಬಕಾರಿ ತೆರಿಗೆಗಳು (Central Excise Duty), ಸೇವಾ ತೆರಿಗೆ, ಸರ್‌ ಚಾರ್ಜ್ ಮತ್ತು ಸೆಸ್, ರಾಜ್ಯದ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ (CST), ಐಷಾರಾಮಿ ತೆರಿಗೆ, ಪ್ರವೇಶ ತೆರಿಗೆ, ಮನರಂಜನಾ ತೆರಿಗೆ, ಮತ್ತು ಜಾಹೀರಾತು ತೆರಿಗೆಗಳು ಜಿಎಸ್‌ಟಿಯಲ್ಲಿ ವಿಲೀನವಾಗಿವೆ.

ಕಸ್ಟಮ್ಸ್ ಸುಂಕ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರ ಮತ್ತು ರಾಜ್ಯ ಮಾರಾಟ ತೆರಿಗೆ, ತಂಬಾಕು ಮತ್ತು ಅಲ್ಕೋಹಾಲ್ ಮೇಲಿನ ಅಬಕಾರಿ ಸುಂಕ ಇವೆಲ್ಲ ಜಿಎಸ್‌ಟಿಯಲ್ಲಿ ಒಳ ಗೊಂಡಿಲ್ಲ. ಸರಕು ಮತ್ತು ಸೇವೆಗಳ ಉತ್ಪಾದನೆ ಹಾಗೂ ಪೂರೈಕೆ ಎಲ್ಲಾ ಹಂತಗಳಿಗೆ ಮತ್ತು ಅಂತಿಮವಾಗಿ ಗ್ರಾಹಕರವರೆಗೆ ಒಂದೇ ವೇದಿಕೆಯಡಿಯಲ್ಲಿ ತೆರಿಗೆ ವಿಧಿಸುವುದರಿಂದ ಮತ್ತು ಅಂಥ ತೆರಿಗೆಯ ದರಗಳು ವಿವಿಧ ರಾಜ್ಯಗಳಿಗೆ ಸಮಾನವಾಗಿರುವುದರಿಂದ ತೆರಿಗೆ ಪಾವತಿ ಮತ್ತು ನಿಯಮ ಗಳ ಪಾಲನೆ ಸರಳವಾಗಿದೆ.

ಕೇಂದ್ರ-ರಾಜ್ಯಗಳ ನಡುವೆ ತೆರಿಗೆಯ ಹಂಚಿಕೆಯ ವ್ಯವಸ್ಥೆ ಪಾರದರ್ಶಕವಾಗಿದೆ. ತೆರಿಗೆ ವಂಚನೆಗೆ ಕಠಿಣ ಕ್ರಮಗಳನ್ನು ವಿಧಿಸುವ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹ ಮತ್ತು ಆ ಮೂಲಕ ಸರಕಾರಕ್ಕೆ ಹೆಚ್ಚಿನ ಆದಾಯ ತರಲು ಸಹಾಯಕ. ಇ-ವೇಬಿಲ್ ವ್ಯವಸ್ಥೆಯಿಂದ ಪ್ರವೇಶ ಟೋಲ್‌ಗಳಲ್ಲಿ ಸರಕುಗಳ ಸಾಗಾಣಿಕೆಯ ಮೇಲೆ ನಿಯಂತ್ರಣ ಸುಲಭ. 1.5 ಕೋಟಿ ರುಪಾಯಿಗಳವರೆಗಿನ ವಹಿವಾಟು ಹೊಂದಿದವರಿಗೆ ಸರಳವಾದ ಸಂಯೋಜನೆ ( Composition) ಪದ್ಧತಿಯಲ್ಲಿ ತೆರಿಗೆ ಪಾವತಿಸಲು ಅವಕಾಶವಿದೆ.

ಜಿಎಸ್‌ಟಿ-2ರ ಲಾಭಗಳೇನು?: ಶೇ.5, ಶೇ.12, ಶೇ.18 ಮತ್ತು ಶೇ.28ರ ನಾಲ್ಕು ಹಂತದ ದರಗಳ ಬದಲಾಗಿ ಶೇ.5 ಮತ್ತು 18ರ ಎರಡು ಹಂತದ ಕಡಿಮೆದರದ ತೆರಿಗೆ ಸುಮಾರು 98 ಪ್ರತಿಶತ ಉತ್ಪನ್ನ ಮತ್ತು ಸೇವೆಗಳಿಗೆ ಅನ್ವಯವಾಗುವುದರಿಂದ ಅವುಗಳ ಉತ್ಪಾದನಾ ಮತ್ತು ಪೂರೈಕೆ ವೆಚ್ಚ ಕಡಿಮೆ ಯಾಗುತ್ತದೆ. ತಂಬಾಕು, ಮದ್ಯ, ಕೋಕಾ ಕೋಲಾದಂಥ ಪೇಯಗಳು, ಹೆಚ್ಚಿನ ದರದ ಕಾರುಗಳಂಥ ‘ಪಾಪದ ಸರಕು’ಗಳಿಗೆ ಶೇ.40ರ ದರ ಅನ್ವಯಿಸುತ್ತದೆ.

ಹಾಲು, ಹಣ್ಣು, ತರಕಾರಿ, ಆರೋಗ್ಯವಿಮೆ, ಜೀವವಿಮೆಯಂಥ ಅನೇಕ ಜೀವನಾವಶ್ಯಕ ಸರಕು/ಸೇವೆಗಳಿಗೆ ಶೂನ್ಯ ತೆರಿಗೆ. ಪ್ಯಾಕ್ ಮಾಡಿದ ಆಹಾರ, ಔಷಧ, ಚಪ್ಪಲಿ, ಗೃಹಬಳಕೆಯ ವಸ್ತುಗಳು, ಇತರ ಸಾಮಾನ್ಯ ಬಳಕೆಯ ವಸ್ತುಗಳಿಗೆ ಶೇ.5, ಹೋಟೆಲ್ ಸೇವೆಗಳು, ದೂರಸಂಪರ್ಕ ಸೇವೆಗಳು, ಹಣಕಾಸು ಸೇವೆಗಳು, ಟಿ.ವಿ., ವಾಶಿಂಗ್-ಮಷಿನ್, ಲ್ಯಾಪ್‌ಟಾಪ್, 350 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಮೋಟರ್ ಸೈಕಲ್, 1200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳು ಮುಂತಾದವು ಗಳಿಗೆ ಶೇ.18. ಶೇ.28ರ ದರದಲ್ಲಿದ್ದ ಬಹುತೇಕ ಸರಕುಗಳನ್ನು 18 ಅಥವಾ 5ಕ್ಕೆ ತರಲಾಗಿದ್ದು, 12ರ ದರದಲ್ಲಿದ್ದ ಎಲ್ಲಾ ಸರಕುಗಳು 5 ಅಥವಾ ಶೂನ್ಯದರಕ್ಕೆ ಬಂದಿವೆ.

ವಿಶೇಷವಾಗಿ ಸಿಮೆಂಟ್ ನಂಥ ಕಟ್ಟಡ ಸಾಮಗ್ರಿಗಳು, ವಾಹನಗಳು, ಕೃಷಿ ಉಪಕರಣಗಳು, ಶಸ್ತ್ರ ಚಿಕಿತ್ಸೆಯ ಉಪಕರಣಗಳು ಮುಂತಾದ ವಸ್ತುಗಳಿಗೆ ಭರ್ಜರಿ ತೆರಿಗೆ ಕಡಿತ ಮಾಡಲಾಗಿದೆ. ಜಿಎಸ್‌ಟಿ ದರಗಳು ಇಷ್ಟೊಂದು ಇಳಿಕೆಯಾಗಿರುವುದರಿಂದ ದೇಶದ ಆರ್ಥಿಕತೆಯಲ್ಲಿ 1.98 ಲಕ್ಷ ಕೋಟಿ ರುಪಾಯಿಗಳಷ್ಟು ಹಣದ ಹರಿವು ಹೆಚ್ಚಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಜನರ ಕೈಯಲ್ಲಿ ಹಣದ ಪೂರೈಕೆ ಹೆಚ್ಚಾದಾಗ ತನ್ನಿಂದ ತಾನೇ ಸರಕು ಸೇವೆಗಳ ಬೇಡಿಕೆ ಹೆಚ್ಚಾಗು ತ್ತದೆ ಮತ್ತು ಅದರಿಂದ ಉತ್ಪಾದನೆಯ ಮಟ್ಟವೂ ಹೆಚ್ಚಾಗುತ್ತದೆ. ಆದ್ದರಿಂದ ಜಿಎಸ್‌ಟಿ ದರದ ಇಳಿತವಾದರೂ ದೀರ್ಘಾವಽಯಲ್ಲಿ ಜಿಎಸ್‌ಟಿ ಆದಾಯ ಹೆಚ್ಚಾಗುತ್ತದೆ. ಇನ್‌ಪುಟ್ ಕ್ರೆಡಿಟ್ ವ್ಯವಸ್ಥೆಗೆ ಜಿಎಸ್‌ಟಿ ನೋಂದಣಿ ಕಡ್ಡಾಯವಾದ್ದರಿಂದ ಹೆಚ್ಚು ಉದ್ದಿಮೆಗಳು ನೋಂದಣಿಯಾಗು ತ್ತವೆ ಮತ್ತು ದಾಖಲೆಗೆ ಸಿಗದ ವ್ಯವಹಾರಗಳ ಪ್ರಮಾಣ ಕಡಿಮೆಯಾಗಿ ತೆರಿಗೆಯ ಜಾಲ ( Tax Base) ಹೆಚ್ಚಲಿದೆ. ಅಲ್ಲದೆ ತೆರಿಗೆ ದರ ಇಳಿಕೆಯಾದಾಗ ತೆರಿಗೆ ವಂಚನೆಯ ಪ್ರಮಾಣ ಕಡಿಮೆಯಾಗಿ ಜಿಎಸ್‌ಟಿ ಅಲ್ಲದೆ ಆದಾಯಕರದ ಆದಾಯ ಕೂಡಾ ಹೆಚ್ಚಳವಾಗುತ್ತದೆ.

ದರದ ಇಳಿಕೆಯ ಜತೆಗೆ ತೆರಿಗೆ ಪದ್ಧತಿಯಲ್ಲಿ ಅನೇಕ ಬದಲಾವಣೆ ಮಾಡಲಾಗಿದೆ. ಉದಾಹರಣೆಗೆ ಕಟ್ಟಡ, ಯಂತ್ರೋಪಕರಣಗಳಂಥ ಆಸ್ತಿಗಳ ಮೇಲೆ ನೀಡಲಾದ ಜಿಎಸ್ ಟಿಯ ಮೊತ್ತವನ್ನು ಕೂಡಾ ಮರಳಿ ಪಡೆಯುವ ಅನುವು ಕೈಗಾರಿಕೆಗಳಿಗೆ ಒಂದು ದೊಡ್ಡ ಲಾಭ.

ಇನ್‌ಪುಟ್ ಕ್ರೆಡಿಟ್ ಮೊತ್ತವನ್ನು ಪಾವತಿಸಬೇಕಾದ ಒಟ್ಟೂ ತೆರಿಗೆಯ ಮೊತ್ತದಲ್ಲಿ ಹೊಂದಾಣಿಕೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ತೆರಿಗೆಯ ದರ ಇಳಿಸಿದ ಮುಖ್ಯ ಉದ್ದೇಶ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವುದರ ಜತೆಗೆ ಸರಕು/ಸೇವೆಗಳ ದರ ಇಳಿಸುವ ಮೂಲಕ ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಿಸುವದು. ಆದ್ದರಿಂದ ಉದ್ದಿಮೆದಾರರು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾ ಯಿಸಬೇಕು ಮತ್ತು ಹಾಗೆ ಮಾಡುವಂತೆ ನಿಗಾ ವಹಿಸಲಾಗುವುದೆಂದು ಕೇಂದ್ರ ವಿತ್ತ ಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತದ ಕೆಲವು ರಾಜ್ಯಗಳು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಒಪ್ಪಿದರೂ ನಂತರ ರಾಜಕೀಯ ಕಾರಣಕ್ಕೆ ಈ ಪರಿಷ್ಕರಣೆಗೆ ಆದಾಯ ನಷ್ಟದ ಕಾರಣ ನೀಡಿ ಒಪ್ಪಿಗೆ ನಿರಾಕರಿಸಿವೆ. ಇದರ ಪರಿಣಾಮವನ್ನು ಕೇಂದ್ರ ಸರಕಾರ ಹೇಗೆ ನಿಭಾಯಿಸುತ್ತದೆಂದು ನೋಡಬೇಕು.

ಒಟ್ಟಾರೆಯಾಗಿ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಹೀಗಳೆಯಲ್ಪಟ್ಟ ಜಿಎಸ್‌ಟಿ, ಒಟ್ಟಾರೆ ತೆರಿಗೆ ಆದಾಯದಲ್ಲಿ ಐತಿಹಾಸಿಕ ಗರಿಷ್ಠ ಮಟ್ಟವನ್ನು ದಾಖಲಿಸುವ ಜತೆಗೆ ದೇಶದ ಆರ್ಥಿಕತೆಯ ಅಭೂತಪೂರ್ವ ಅಭಿವೃದ್ಧಿಗೂ ಕಾರಣವಾಗಿದೆ. ಇದೀಗ ದೊಡ್ಡ ಪ್ರಮಾಣದ ಇಳಿಕೆದರವನ್ನೂ ಘೋಷಿಸಲಾಗಿರುವುದರಿಂದ ಜಿಎಸ್‌ಟಿಯನ್ನು ವಿರೋಧಿಸಲು ಯಾವ ಸೂಕ್ತ ಕಾರಣವೂ ಸಿಗುತ್ತಿಲ್ಲ.

ಸತ್ವಯುತ ಆರ್ಥಿಕತೆ ಹೊಂದುವ ಮೂಲಕ ಭಾರತ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಜಿಎಸ್‌ಟಿ-2 ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)