Vinayaka V Bhat Column: ಹಿಮಂತ ಬಿಸ್ವ ಶರ್ಮಾ: ಈಶಾನ್ಯ ಭಾರತದ ಧೀರಧುರಂದರ
ಮಾತಿನ ಮಲ್ಲ, ಜಗದೇಕವೀರ, ಈಶಾನ್ಯ ರಾಜ್ಯಗಳ ಭರವಸೆಯ ನಾಯಕ, ಪ್ರಖರ ರಾಷ್ಟ್ರೀಯ ತಾವಾದಿ, ನಿರ್ಭಿಡೆಯ ದಕ್ಷ ಆಡಳಿತಗಾರ, ಅಪರ ಯೋಗಿ ಆದಿತ್ಯನಾಥ ಎಂದೆನಿಸಿಕೊಳ್ಳುವ ಹಿಮಂತ ಬಿಸ್ವ ಶರ್ಮಾ ಬಹಳ ಜಮಘಟ್ಟಿಯಾದ ನಾಯಕ. ಈಶಾನ್ಯ ರಾಜ್ಯಗಳ ಅದರಲ್ಲೂ ಆಸ್ಸಾಮಿನ ಅತ್ಯಂತ ಜನಪ್ರಿಯ ರಾಜಕಾರಣಿ.
-
ವಿದ್ಯಮಾನ
ಹಿಮಂತ ಬಿಸ್ವ ಶರ್ಮಾ ಸುದ್ದಿಯಲ್ಲಿರುವ, ದೇಶಾದ್ಯಂತ ಸದ್ದು ಮಾಡುತ್ತಿರುವ ನಾಯಕ. ಮಾತಿನ ಮಲ್ಲ, ಜಗದೇಕವೀರ, ಈಶಾನ್ಯ ರಾಜ್ಯಗಳ ಭರವಸೆಯ ನಾಯಕ, ಪ್ರಖರ ರಾಷ್ಟ್ರೀಯತಾವಾದಿ, ನಿರ್ಭಿಡೆಯ ದಕ್ಷ ಆಡಳಿತಗಾರ, ಅಪರ ಯೋಗಿ ಆದಿತ್ಯನಾಥ ಎಂದೆನಿಸಿಕೊಳ್ಳುವ ಹಿಮಂತ ಬಿಸ್ವ ಶರ್ಮಾ ಬಹಳ ಜಮಘಟ್ಟಿಯಾದ ನಾಯಕ.
ದೇಶದಲ್ಲಿ ಮತ್ತೆ ಚುನಾವಣೆಗಳು ಸದ್ದು ಮಾಡುತ್ತಿವೆ, ಆಸ್ಸಾಂ, ಪಶ್ಚಿಮ ಬಂಗಾಳ, ತಮಿಳು ನಾಡು, ಕೇರಳ ಇವು ಚುನಾವಣೆ ಎದುರಿಸುತ್ತಿರುವ ರಾಜ್ಯಗಳಾಗಿವೆ. ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಆಸ್ಸಾಂ ಬಹಳ ಮುಖ್ಯವಾದ ರಾಜ್ಯವಾಗಿದೆ. ಹಾಗಾಗಿಯೇ ಆ ರಾಜ್ಯದ ಚುನಾವಣಾ ವ್ಯವಹಾರಗಳ ಜವಾಬ್ದಾರಿಯನ್ನು ಸ್ವತಃ ಪ್ರಿಯಾಂಕಾ ಗಾಂಧಿ ಯವರಿಗೆ ವಹಿಸಲಾಗಿದೆ ಹಾಗೂ ನಮ್ಮ ಚುನಾವಣಾ ಚಾಣಾಕ್ಷ ಉಪಮುಖ್ಯಮಂತ್ರಿಗಳೂ ಅವರ ನೆರವಿಗಿರಲಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಮರ್ಮಾಘಾತ ನೀಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಶತಾಯ ಗತಾಯ ಸೋಲಿಸಲೇಬೇಕು ಎನ್ನುವ ಹಠತೊಟ್ಟಂತಿದೆ ಕಾಂಗ್ರೆಸ್. ಹಿಮಂತ ಬಿಸ್ವ ಶರ್ಮಾ ಅತ್ಯಂತ ಸುದ್ದಿಯಲ್ಲಿರುವ ಹಾಗೂ ದೇಶಾದ್ಯಂತ ಸದ್ದು ಮಾಡುತ್ತಿರುವ ನಾಯಕರಾಗಿದ್ದಾರೆ.
ಮಾತಿನ ಮಲ್ಲ, ಜಗದೇಕವೀರ, ಈಶಾನ್ಯ ರಾಜ್ಯಗಳ ಭರವಸೆಯ ನಾಯಕ, ಪ್ರಖರ ರಾಷ್ಟ್ರೀಯತಾವಾದಿ, ನಿರ್ಭಿಡೆಯ ದಕ್ಷ ಆಡಳಿತಗಾರ, ಅಪರ ಯೋಗಿ ಆದಿತ್ಯನಾಥ ಎಂದೆನಿಸಿಕೊಳ್ಳುವ ಹಿಮಂತ ಬಿಸ್ವ ಶರ್ಮಾ ಬಹಳ ಜಮಘಟ್ಟಿಯಾದ ನಾಯಕ. ಈಶಾನ್ಯ ರಾಜ್ಯಗಳ ಅದರಲ್ಲೂ ಆಸ್ಸಾಮಿನ ಅತ್ಯಂತ ಜನಪ್ರಿಯ ರಾಜಕಾರಣಿ.
ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಆಸಕ್ತಿ ತೋರಿದ್ದ ಬಡ ಬ್ರಾಹ್ಮಣ ಹುಡುಗ, ‘ಆಲ್ ಆಸ್ಸಾಂ ಸ್ಟೂಡೆಂಟ್ ಯೂನಿಯನ್’ ಮೂಲಕ ವಿಧಾನಸಭೆಗೆ ಸ್ಪರ್ಧಿಸಿ ಸೋತಿ ದ್ದರು. ಮುಂದೆ ಕಾಂಗ್ರೆಸ್ ಸೇರಿ 2001ರಿಂದ 2015ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಹಣಕಾಸು, ಕೃಷಿ, ಯೋಜನೆ, ಆರೋಗ್ಯ ಮುಂತಾದ ಪ್ರಬಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹೆಸರುಗಳಿಸಿದ ಅತ್ಯಂತ ಚಾಣಾಕ್ಷ ರಾಜಕಾರಣಿ.
ಇದನ್ನೂ ಓದಿ: Vinayak V Bhat Column: ಸಂಗೀತ ಸರಸ್ವತಿಯ ಜತೆಗೆ ಮೈತ್ರಿ ಸಾಧಿಸಿದ ಲಕ್ಷ್ಮಿ
2015ರಲ್ಲಿ ಬಿಜೆಪಿಗೆ ಸೇರಿದ ಶರ್ಮಾ North-East Democratic Alliance ಚುಕ್ಕಾಣಿ ಹಿಡಿದು, ಬಿಜೆಪಿಯನ್ನು ಆಸ್ಸಾಂನಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ತಂದರು. ಪಕ್ಷಕ್ಕೆ ಸೇರಿ ಇನ್ನೂ ಐದು ವರ್ಷಗಳಾಗುವಷ್ಟರಲ್ಲಿ ಜನಪ್ರಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದು, ಈ ಬಾರಿಯೂ ಇವರ ನೇತೃತ್ವದಲ್ಲಿ ಬಹಳ ಕಷ್ಟವಿಲ್ಲದೇ ಬಿಜೆಪಿ ಆಸ್ಸಾಮಿನಲ್ಲಿ ಅಧಿಕಾರಕ್ಕೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಬಾಂಗ್ಲಾ ವಲಸೆ, ಕಾನೂನುಬಾಹಿರವಾಗಿ ರಾಜ್ಯದಲ್ಲಿ ನಡೆಯುತ್ತಿದ್ದ ಮದರಸಾಗಳನ್ನು ಮುಲಾಜಿಲ್ಲದೆ ನಿಯಂತ್ರಣಕ್ಕೆ ತಂದ ಧೀರನೀತ. ‘ಬಾಬರ್-ಔರಂಗಜೇಬ್ ಸಂತತಿಗೆ ಸರಿಯಾದ ಪಾಠ ಕಲಿಸದಿದ್ದರೆ ನಾನು ಮುಖ್ಯಮಂತ್ರಿಯಾಗಿ ಪ್ರಯೋಜನವೇನು?’ ಎಂದು ಕೇಳುವ ಗಟ್ಟಿಗನೀತ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನಾಲ್ಕರಲ್ಲಿ ಹನ್ನೊಂದು ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟಿದ್ದಾರೆ, ಅವರು ಮುಖ್ಯಮಂತ್ರಿಯಾದ ಮೇಲೆ ಆಸ್ಸಾಂ ರಾಜ್ಯದ ಆರ್ಥಿಕತೆ ದೇಶದ ಆರ್ಥಿಕತೆಗಿಂತ ಎರಡುಪಟ್ಟು ವೇಗದಲ್ಲಿ ಬೆಳೆಯುತ್ತಿದೆ ಅಂದರೆ ಇವರ ಸಾಮರ್ಥ್ಯ ಏನು ಎನ್ನುವುದು ನಮಗೆ ಅರ್ಥವಾಗುತ್ತದೆ.
ಅದೆಲ್ಲ ಸರಿ, ಆದರೆ ಹಿಮಂತ ಬಿಸ್ವ ಶರ್ಮಾ ಕಾಂಗ್ರೆಸ್ ಬಿಟ್ಟಿದ್ದೇಕೆ ಎಂದರೆ, ಈಗ ನಮ್ಮ ಡಿ.ಕೆ. ಶಿವಕುಮಾರ್ ಯಾವ ಪರಿಸ್ಥಿತಿಯಲ್ಲಿದ್ದಾರೋ, ಶರ್ಮಾ ಅವರೂ 2015ರ ಸಮಯ ದಲ್ಲಿ ಅದೇ ಪರಿಸ್ಥಿತಿಯಲ್ಲಿದ್ದರು. 80 ವರ್ಷದ ತರುಣ್ ಗೊಗೋಯ್ ಅವರಿಂದ ಯುವಕ ಹಿಮಂತ ಬಿಸ್ವ ಶರ್ಮಾ ಅವರಿಗೆ ಅಧಿಕಾರ ಹಸ್ತಾಂತರದ ಒಪ್ಪಂದವಾಗಿತ್ತು.
ಪಕ್ಷದಲ್ಲಿ ಯಾವುದೇ ಅಧಿಕಾರವಿಲ್ಲದಿದ್ದರೂ ಮಾತು ಮಾತ್ರ ರಾಹುಲ್ ಗಾಂಧಿಯವರದ್ದೇ ನಡೆಯುತ್ತಿದ್ದ ಕಾಲ ಅದು. ಯಾವುದೇ ವಿಷಯ, ರಾಹುಲ್ ಗಾಂಧಿಯವರನ್ನು ದಾಟಿಯೇ ಸೋನಿಯಾ ಗಾಂಧಿಯವರಲ್ಲಿಗೆ ಬರುತ್ತಿತ್ತು. ಈಗ ಕರ್ನಾಟಕ ಸರಕಾರದ ವಿಷಯದಲ್ಲಿ ವರ್ತಿಸುತ್ತಿದ್ದಂತೆ ಸಂಕ್ರಾಂತಿ, ಶಿವರಾತ್ರಿ ಎನ್ನುತ್ತಾ ನಾಯಕತ್ವ ಬದಲಾವಣೆಗೆ ರಾಹುಲ್ ಗಾಂಧಿ ದಿನ ಮುಂದೂಡುವ ತಂತ್ರವನ್ನು ಉಪಯೋಗಿಸುತ್ತಿದ್ದರು.
ತಾನೂ ತೀರ್ಮಾನ ತೆಗೆದುಕೊಳ್ಳದೇ, ರಾಜ್ಯಮಟ್ಟದ ನಾಯಕರುಗಳಿಗೆ ಸೋನಿಯಾ ಗಾಂಧಿಯವರನ್ನು ತಲುಪಲೂ ಬಿಡುತ್ತಿರದ ರಾಹುಲ್‌ರ ಇದೇ ವರ್ತನೆಗೆ ಬೇಸತ್ತು ಶರ್ಮಾ ಪಕ್ಷ ಬಿಡುವ ತೀರ್ಮಾನಕ್ಕೆ ಬಂದುಬಿಟ್ಟರು. ಅದಲ್ಲದಿದ್ದರೆ, ಈತ ಸೋನಿಯಾ ಗಾಂಧಿ ಯವರ ನೆಚ್ಚಿನ ಭಂಟ, ಪಕ್ಷಕ್ಕೆ ಸಂಕಟ ಬಂದಾಗಲೆಲ್ಲ ಆಕೆ ಮೊದಲು ನೆನಪಿಸಿಕೊಳ್ಳು ತ್ತಿದ್ದುದು ಇದೇ ಶರ್ಮಾ ಅವರನ್ನು.
ಈತ ಅಷ್ಟು ಸಂಘಟನಾ ಚತುರ. ಮಾತಂತೂ ಬೆಂಕಿಯ ಕಿಡಿಗಳಂತೆ, ಆಸ್ಸಾಮಿ ಉಚ್ಚಾರ ದಲ್ಲಿ ಅವರ ಮಾತನ್ನು ಕೇಳುವುದೇ ಒಂದು ರೀತಿಯ ಸೊಗಸು. ವಿಭಿನ್ನ ಚುನಾವಣಾ ತಂತ್ರಗಾರಿಕೆ, ರೆಸಾರ್ಟ್ ರಾಜಕಾರಣ, ಶಾಸಕರ ಕ್ರಯ-ವಿಕ್ರಯ ಮುಂತಾದ ಪಕ್ಷ ವಹಿಸುವ ಕೈ ಕೊಳಕು ಮಾಡಿಕೊಳ್ಳುವ ಕೆಲಸವನ್ನೆ ಸಂತೋಷದಿಂದ ಮಾಡುತ್ತಿದ್ದ ಕಾಂಗ್ರೆಸ್ಸಿನ ನಿಷ್ಠ ಸೇವಕ.
ಆದರೆ ಏನು ಮಾಡೋಣ, ಯಾವುದೇ ಶರ್ಮಾ ಅಥವಾ ಇನ್ನೊಬ್ಬರು ಸೋನಿಯಾ ಅವರಿಗೆ ರಾಹುಲ್‌ಗಿಂತ ಹೆಚ್ಚಲ್ಲವಲ್ಲ. ಈಗ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವಂತೆ ಅಧಿಕಾರ ಹಸ್ತಾಂತರದ ವಿಷಯದಲ್ಲಿ ರಾಹುಲ್ ಗಾಂಧಿ ತಮ್ಮ ಜತೆ ಆಟವಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದ ಹಾಗೆ, ‘ಹೋಗುವವರು ಹೋಗಲಿ ಬಿಡಿ’ ಎನ್ನುವ ಮಾತು ರಾಹುಲ್ ಗಾಂಧಿಯವರ ಬಾಯಿಂದ ಬರುತ್ತಿದ್ದಂತೆ, ಗಂಜಿಯಲ್ಲಿ ಬಿದ್ದ ನೊಣಗಳ ಹಾಗೆ ಅ ಒದ್ದಾಡುತ್ತ ಕುಳಿತುಕೊಳ್ಳದೇ, ‘ನಾನು ಸೋನಿಯಾ ಗಾಂಧಿಯವರಿಗೆ ಆತ್ಮೀಯ, ಅವರು ನನ್ನನ್ನು ಕೈಬಿಡಲಿಕ್ಕಿಲ್ಲ’ ಎನ್ನುವ ಕುರುಡು ವ್ಯಾಮೋಹಕ್ಕೆ ಒಳಗಾಗದೇ, ಗಾಂಧಿ ಕುಟುಂಬಕ್ಕೆ ದೊಡ್ಡ ನಮಸ್ಕಾರ ಮಾಡಿ ವಿಳಂಬವಿಲ್ಲದೇ ಹೊರಬಿದ್ದ ಧೈರ್ಯಶಾಲಿ ನಾಯಕ ಈತ.
ಒಂದು ಕಾಲದಲ್ಲಿ ಇಡೀ ಈಶಾನ್ಯ ಭಾಗವನ್ನು ಆಳಿದ ಕಾಂಗ್ರೆಸ್, ಇಂದು ಈ ಪ್ರದೇಶದಿಂದ ಬಹುತೇಕ ಮಾಯವಾಗಿ ಬಿಟ್ಟಿದೆ. ಅಸ್ಸಾಂನ ಪ್ರಮುಖ ನಾಯಕರಾಗಿದ್ದ ಹಿಮಂತ ಬಿಸ್ವ ಶರ್ಮಾ ಅವರ ನಿರ್ಗಮನದೊಂದಿಗೆ ಈ ಪತನದ ಪ್ರಾರಂಭವಾಯಿತು ಅಂತ ಹೇಳಬಹುದು. ಅವರು ಈಗ ಈ ಪ್ರದೇಶದಲ್ಲಿ ಬಿಜೆಪಿಯ ಯಶಸ್ಸಿನ ಕಥೆಯ ಮುಖ್ಯ ವಾಸ್ತುಶಿಲ್ಪಿಯಾಗಿದ್ದಾರೆ.
2015ರಲ್ಲಿ ಕಾಂಗ್ರೆಸ್ ತೊರೆದ ಹಿಮಂತ ಬಿಸ್ವ ಶರ್ಮಾ ಅಸ್ಸಾಂನಲ್ಲಿ ತಾವು ಬಿಟ್ಟು ಬಂದ ಪಕ್ಷದ ಸೋಲನ್ನು ಮೊದಲು ಖಚಿತಪಡಿಸಿದ್ದಲ್ಲದೆ, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಈ ಪ್ರದೇಶದ ಇತರ ರಾಜ್ಯಗಳಿಂದಲೂ ಕಾಂಗ್ರೆಸ್ಸನ್ನು ಕ್ರಮೇಣ ಹೊರ ಹಾಕಲು ಯಶಸ್ವಿಯಾದರು.
ರಾಹುಲ್ ಗಾಂಧಿ ಅವರು ಹಿಮಂತ ಪ್ರಸಂಗವನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಆರೋಪಿಸಿದ್ದಾರೆ. “ಹಿಮಂತ ಬಿಸ್ವ ಶರ್ಮಾ ಅವರಿಗೆ ಬಹುಪಾಲು ಶಾಸಕರ ಬೆಂಬಲವಿದೆ ಮತ್ತು ನಿರ್ಲಕ್ಷಿಸಿದರೆ ಅವರು ಬಂಡಾಯ ಎದ್ದು ಪಕ್ಷವನ್ನು ತೊರೆಯುತ್ತಾರೆ, ಶರ್ಮಾ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಆಸ್ಸಾಮಿನಲ್ಲಿ ಕಾಂಗ್ರೆಸ್‌ನ ಪ್ರಮುಖ ತಂತ್ರಜ್ಞರಾಗಿದ್ದಾರೆ ಎಂದು ನಾವೆಲ್ಲ ರಾಹುಲ್ ಗಾಂಧಿಯವರಿಗೆ ಹೇಳಿದಾಗ, ಅವರನ್ನು ಕರೆದು ಮಾತನಾಡಿಸುವುದರ ಬದಲಿಗೆ ‘ಹೋಗುವುದಾದರೆ ಹೋಗಲಿ ಬಿಡಿ, ನಾಯಕತ್ವದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದರು" ಎಂದು ಗುಲಾಂ ನಬಿ ಆಜಾದ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಆಜಾದ್ ಅವರು ಊಹಿಸಿದಂತೆ, ಬಂಡಾಯವೆದ್ದ ಶರ್ಮಾ ಸೆಪ್ಟೆಂಬರ್ 2015ರಲ್ಲಿ ಪಕ್ಷ ವನ್ನು ತೊರೆದ ನಂತರ ಹತ್ತು ಶಾಸಕರೂ ಅವರನ್ನು ಹಿಂಬಾಲಿಸಿದರು. ಮುಂದೆ ರಾಜ್ಯ ದಲ್ಲಿ ಬಿಜೆಪಿಗೆ ಸತತ ಎರಡನೇ ಗೆಲುವನ್ನು ಖಾತ್ರಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಮತ್ತು ಕಾಂಗ್ರೆಸ್ ತೊರೆದ ಕೇವಲ ಐದು ವರ್ಷಗಳೊಳಗೆ ರಾಜ್ಯದ ಮುಖ್ಯ ಮಂತ್ರಿಯಾಗಿ ತೋರಿಸಿದರು.
ಸೋನಿಯಾ ಗಾಂಧಿ ಅವರ ನಿರ್ದೇಶನದ ಮೇರೆಗೆ ಶರ್ಮಾ ಅವರೊಂದಿಗೆ ಸಂಧಾನದ ಪ್ರಯತ್ನಗಳಲ್ಲಿ ಭಾಗಿಯಾಗಿದ್ದ ಆಜಾದ್, “ರಾಹುಲ್ ತಮ್ಮನ್ನು ತಾವು ಸಮರ್ಥಿಸಿ ಕೊಳ್ಳಲು ಏನು ಮಾಡಿದ್ದಾರೆ ಅಥವಾ ಅವರ ನಿರ್ಧಾರವು ಅಸ್ಸಾಂ ರಾಜ್ಯದಲ್ಲಿ ಮಾತ್ರ ವಲ್ಲದೆ ಇಡೀ ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಅಂತ ಅವರಿಗೆ ತಿಳಿದಿರಲಿಲ್ಲ" ಎಂದು ಬರೆದಿದ್ದಾರೆ.
“ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರಿಗೆ ಬುದ್ಧಿ ಹೇಳುವ ಬದಲು, ಅಲುಗಾಡು ತ್ತಿರುವ ದೋಣಿಯನ್ನು ಉಳಿಸುವಂತೆ ಹಿಮಂತ ಶರ್ಮಾರನ್ನು ವಿನಂತಿಸುವಂತೆ ನನ್ನನ್ನು ಕೇಳಿಕೊಂಡರು" ಎಂದೂ ಆಜಾದ್ ಬರೆಯುತ್ತಾರೆ.
ಹಿಮಂತರಿಂದ ಪ್ರಾರಂಭಿಸಿ ಆಜಾದ್‌ವರೆಗೆ ರಾಹುಲ್ ಅವರ ವರ್ತನೆಯಿಂದಲೇ ಪಕ್ಷ ತೊರೆಯಬೇಕಾಗಿ ಬಂದ ಈ ಎಲ್ಲ ನಾಯಕರುಗಳಿಗೆ ರಾಹುಲ್ ಗಾಂಧಿ ಅವರ ಕಾರ್ಯ ವೈಖರಿಯ ಬಗ್ಗೆ ಇರುವ ದೂಷಣೆಗಳೇನು ಎನ್ನುವುದನ್ನು ತಿಳಿಯಬೇಕಾದರೆ ಅವರುಗಳ ರಾಜೀನಾಮೆ ಪತ್ರಗಳ ವಿಮರ್ಶೆ, ಸಾರ್ವಜನಿಕ ಹೇಳಿಕೆಗಳ ಹಿನ್ನೆಲೆಗಳೊಂದಿಗೆ ನೋಡಿದರೆ ಸುಳಿವು ಸುಲಭವಾಗಿ ಸಿಕ್ಕೀತು.
ಹಿಮಂತ ಬಿಸ್ವ ಶರ್ಮಾ ಮತ್ತು ಗುಲಾಂ ನಬಿ ಆಜಾದ್ ಇಬ್ಬರೂ ತಮ್ಮ ರಾಜೀನಾಮೆ ಪತ್ರಗಳಲ್ಲಿ ರಾಹುಲ್ ಗಾಂಧಿ ಅವರೊಂದಿಗಿನ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು. ‘ಅಪಕ್ವ, ಬಾಲಿಶ, ದುರಹಂಕಾರಿ, ವಿಚಿತ್ರ, ಅನಿರೀಕ್ಷಿತ, ಗಂಭೀರವಲ್ಲದ, ಅಭದ್ರ, ವಿಲಕ್ಷಣ ಮತ್ತು ಅವಮಾನಕರ ವ್ಯಕ್ತಿತ್ವವನ್ನು ಹೊಂದಿರುವವರು’ ಎನ್ನುವುದು ಪಕ್ಷವನ್ನು ತೊರೆಯುವಾಗ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಬಳಸಿದ ಪದಗಳು.
ರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ, ವಿಶೇಷವಾಗಿ ಸೋನಿಯಾ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿದ ನಂತರ ಅವರು ಕಾಂಗ್ರೆಸ್‌ನ ಸಲಹಾ ಕಾರ್ಯವಿಧಾನವನ್ನು ಸಂಪೂರ್ಣ ಧ್ವಂಸಗೊಳಿಸಿದರು ಎಂದು ಶರ್ಮಾ ಹೇಳುತ್ತಾರೆ.
ತರುಣ್ ಗೊಗೊಯ್ ಅವರನ್ನು ಪದಚ್ಯುತಗೊಳಿಸಲು ಬಯಸಿದ ತಮ್ಮ ಹಾಗೂ ಅಸ್ಸಾಂ ಕಾಂಗ್ರೆಸ್ ಶಾಸಕರ ಬಗ್ಗೆ ಅಹಂಕಾರದ ಧೋರಣೆ ತಳೆದು ಮುಖ್ಯಮಂತ್ರಿಗಳನ್ನು ಬದಲಾಯಿಸುವುದು ತಮ್ಮ ವಿಶೇಷಾಧಿಕಾರ ಎಂದು ಹೇಳಿದರು. ತಾವು ಅಸ್ಸಾಂನ ಜನರಿಗಿಂತ ಶಕ್ತಿಶಾಲಿ ಎಂದು ಭಾವಿಸಿದ್ದರು ಎಂದು ಅವರು ಹೇಳಿದ್ದಾರೆ.
“ಅಸಮರ್ಥ ಹಾಗೂ ‘ಔಟ್‌ಡೇಟೆಡ್’ ನಾಯಕ ತರುಣ್ ಗೊಗೊಯ್ ಅವರ ಬದಲಾವಣೆಗೆ ಮೊದಲೇ ಪಕ್ಷದಲ್ಲಿ ಚರ್ಚೆಯಾಗಿತ್ತು, ಆ ಬಗ್ಗೆ ಒತ್ತಾಯಿಸುವಾಗ ನನ್ನ ಮತ್ತು ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ವಿಪರ್ಯಾಸವೆಂದರೆ, ಮೊದಲೇ ಚರ್ಚೆಯಾದ ವಿಚಾರವಾಗಿದ್ದರೂ ಕೊನೆಯ ಕ್ಷಣದಲ್ಲಿ ರಾಹುಲ್ ಗಾಂಧಿ ಯವರಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾಗಿತ್ತು.
ತರುಣ್ ಗೊಗೊಯ್ ಅವರನ್ನು ಕೆಳಗಿಳಿಸಿ ಹಿಮಂತ ಶರ್ಮಾ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವುದನ್ನು ಸೋನಿಯಾ ಗಾಂಽ ಬಹುತೇಕ ದೃಢಪಡಿಸಿದ್ದರು, ಆದರೆ ಈ ನಿರ್ಧಾರಕ್ಕೆ ರಾಹುಲ್ ಗಾಂಧಿ ಅವರು ಕೆಂಪು ಧ್ವಜ ತೋರಿಸಿಬಿಟ್ಟಿದ್ದರು" ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
“ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬ ಮಾತ್ರ ಉಳಿಯುವ ಸಮಯ ದೂರವಿಲ್ಲ ಎಂದು ನಾನು ಹೇಳಿದ್ದೆ, ಇದು ಈಗ ನಡೆಯುತ್ತಿದೆ. ಕಾಂಗ್ರೆಸ್‌ನ ಸಮಸ್ಯೆಯೆಂದರೆ ರಾಹುಲ್ ಗಾಂಧಿ ಅಪ್ರಬುದ್ಧ, ವಿಚಿತ್ರ ಮತ್ತು ಅನಿರೀಕ್ಷಿತ ಎಂದು ಎಲ್ಲರಿಗೂ ತಿಳಿದಿದೆ; ಆದರೆ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಪಕ್ಷದ ಅಧ್ಯಕ್ಷ ಯಾರೇ ಆದರೂ ರಾಹುಲ್ ಗಾಂಧಿ ಹೆಚ್ಚಿನ ಉತ್ತರದಾಯಿತ್ವವಿಲ್ಲದೆ ಅಧಿಕಾರವನ್ನು ಮಾತ್ರ ಚಲಾಯಿಸುತ್ತಾರೆ ಎಂದು ಕಾಂಗ್ರೆಸ್ ಭಿನ್ನಮತೀಯರು ಹೇಳು ತ್ತಾರೆ. ರಾಹುಲ್ ಗಾಂಧಿ ರಾಜಕೀಯಕ್ಕೆ ಕಾಲಿಟ್ಟಾಗ, ಯುವ ಕಾಂಗ್ರೆಸ್ ಅನ್ನು ಪುನರು ಜ್ಜೀವನಗೊಳಿಸುವತ್ತ ತಮ್ಮ ಗಮನ ಹರಿಸಿದ್ದರು, ಯುವ ನಾಯಕರುಗಳನ್ನು ಮುನ್ನೆಲೆಗೆ ತಂದು ಪಕ್ಷದ ಭವಿಷ್ಯವನ್ನು ಭದ್ರಪಡಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿತ್ತು.
ಅದು ಎಷ್ಟರಮಟ್ಟಿಗೆ ಎಂದರೆ, ಪಕ್ಷದ ಹಳೆಯ ’ಸಾರ್ಜೆಂಟ್’ಗಳೆಲ್ಲ ಆಗಾಗ್ಗೆ ರಾಹುಲ್ ರಿಂದ ಅವಮಾನಕ್ಕೊಳಗಾಗುತ್ತ ಅವರನ್ನು ದೂಷಿಸಿರುವುದೂ ಇತ್ತು. ಆದರೆ ಈಗ ಪಕ್ಷ ದಲ್ಲಿ ತಮಗೆ ಸ್ಪರ್ಧೆಯೊಡ್ಡಬಹುದಾದ ಯುವ ಪ್ರತಿಭೆಗಳನ್ನು ನಿರ್ಲಕ್ಷಿಸಲಾಗುತ್ತಿದೆ, ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದರು, ಅಸ್ಸಾಂ ಮತ್ತು ಮಧ್ಯಪ್ರದೇಶ ದಂತೆ, ರಾಹುಲ್ ಅವರು ರಾಜಸ್ಥಾನದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಅಶೋಕ್ ಗೆಹ್ಲೋಟ್ ಅವರಿಗೆ ಆದ್ಯತೆ ನೀಡಿದರು.
ಇದು ಅಂತಿಮವಾಗಿ ಸಚಿನ್ ಪೈಲಟ್ ಅವರ ದಂಗೆಗೆ ಕಾರಣವಾಯಿತು. ಆದರೆ, ಶರ್ಮಾ ಮತ್ತು ಸಿಂಧಿಯಾ ಪ್ರಕರಣಗಳಂತಲ್ಲದೆ, ಇದು ಪೈಲಟ್ ರಾಜೀನಾಮೆಗೆ ಕಾರಣವಾಗಲಿಲ್ಲ ಅಷ್ಟೇ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಮತ್ತು ಅನುಭವಿ ನಾಯಕ ರನ್ನು ಬದಿಗಿರಿಸಲಾಯಿತು, ಯುವ ಮುಖಗಳು ಪಕ್ಷವನ್ನು ತೊರೆದಾಯಿತು ಮತ್ತು ಅನನುಭವಿ ಹೊಗಳಿಕೆಗಾರರ ಹೊಸ ಗುಂಪು ಕಾಂಗ್ರೆಸ್ ಅನ್ನು ನಡೆಸಲು ಪ್ರಾರಂಭಿಸಿತು ಮತ್ತು ಇಂದು ಅವರ ಭದ್ರತಾ ಸಿಬ್ಬಂದಿ ಸಹ ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳು ತ್ತಿದ್ದಾರೆ" ಎಂದು ಪಕ್ಷ ತೊರೆದ ಆಜಾದ್‌ರಂಥ ಹಿರಿಯರು ಮಾತನಾಡುತ್ತಾರೆ.
ಆಜಾದ್‌ಗೆ ಕೆಲವೇ ದಿನಗಳ ಮೊದಲು ಪಕ್ಷ ತೊರೆದ ಮತ್ತೊಬ್ಬ ಕಾಂಗ್ರೆಸ್ ನಾಯಕ ಜೈವೀರ್ ಶೇರ್‌ಗಿಲ್ ಕೂಡ, “ಒಂದು ವರ್ಷದಿಂದ ಪ್ರಯತ್ನಿಸಿದರೂ ಗಾಂಧಿ ಕುಟುಂಬ ವನ್ನು ಭೇಟಿ ಮಾಡಲು ನನಗೆ ಸಾಧ್ಯವಾಗಲಿಲ್ಲ" ಎಂದು ಹೇಳಿದರು. ವೇಣುಗೋಪಾಲ್ ಅವರನ್ನು ಬಿಟ್ಟರೆ ರಾಹುಲ್ ಅವರ ಇನ್ನೊಬ್ಬ ಆಪ್ತ ಯಾರೆಂದರೆ ರಣದೀಪ್ ಸುರ್ಜೇ ವಾಲಾ ಮಾತ್ರ.
“ಕಾಂಗ್ರೆಸ್ಸಿನಲ್ಲಿ ಒಂದು ಕುಟುಂಬದ ಆರಾಧನೆ ಮಾತ್ರ ನಡೆಯುತ್ತಿತ್ತು, ಈಗ ಬಿಜೆಪಿಯಲ್ಲಿ ಮಾತೃಭೂಮಿಯ ಆರಾಧನೆ ನಡೆಯುತ್ತಿದೆ; ಇಪ್ಪತ್ತೆರಡು ವರ್ಷಗಳನ್ನು ಕಾಂಗ್ರೆಸ್ಸಿನಲ್ಲಿ ವ್ಯರ್ಥವಾಗಿ ಕಳೆದಿದ್ದಕ್ಕೆ ಬೇಸರವಿದೆ" ಎನ್ನುತ್ತಾರೆ ಶರ್ಮಾ. ದೇಶದ ಈಶಾನ್ಯ ಭಾಗದ ರಾಜಕೀಯ ಚಿತ್ರಣವನ್ನೇ ಬದಲಿಸಿದ ಇಂಥ ಧುರಂಧರನ ರಾಜ್ಯಕ್ಕೆ ಚುನಾವಣಾ ಉಸ್ತುವಾರಿಯಾಗಿ ನಮ್ಮ ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ.
ಪಕ್ಷದಲ್ಲಿ ಈಗ ತಾವು ಅನುಭವಿಸುತ್ತಿರುವ ಸಂಕಟವನ್ನು ಒಂದು ಕಾಲದಲ್ಲಿ ಅಲ್ಲಿನ ಮುಖ್ಯಮಂತ್ರಿಯವರು ಅನುಭವಿಸಿದವರೇ ಆಗಿದ್ದಾರೆ, ಅಲ್ಲಿಂದ ಹೊರಬಿದ್ದು ಈಗ ರಾಜಕೀಯದ ಉತ್ತುಂಗದಲ್ಲಿದ್ದಾರೆ ಎನ್ನುವುದು ಶಿವಕುಮಾರ್ ಅವರಿಗೂ ತಿಳಿದ ವಿಷಯ ವೇ ಆಗಿದೆ.
ಶಿವಕುಮಾರ್ ಅವರು ಹಿಮಂತರಿಂದ ಏನಾದರೂ ಕಲಿಯುವ ಪ್ರಯತ್ನ ಮಾಡಿ ಅದೇ ದಾರಿಯಲ್ಲಿ ತಾವೂ ನಡೆಯುತ್ತಾರೋ, ಅಥವಾ ಪ್ರಾರ್ಥನೆಯನ್ನೇ ಮುಂದುವರಿಸು ತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಹಿಮಂತ ಅವರು ಪ್ರಯತ್ನದಲ್ಲಿ ಹೆಚ್ಚು ನಂಬಿಕೆ ಇಟ್ಟವರು, ಪ್ರಾರ್ಥನೆಗೆ ಪ್ರಯತ್ನಕ್ಕಿಂತ ಹೆಚ್ಚು ಶಕ್ತಿ ಇದೆ ಎಂದು ನಂಬುವವರು ನಮ್ಮ ಡಿ.ಕೆ. ಶಿವಕುಮಾರ್. ಈ ಬಾರಿ ಪ್ರಾರ್ಥನೆಯೋ ಅಥವಾ ಪ್ರಯತ್ನವೋ ಎನ್ನುವ ಕುತೂಹಲವಂತೂ ಇದೆ.