Roopa Gururaj Column: ನಾಮದ ಬಲವೊಂದಿದ್ದರೇ ಸಾಕೋ ! ಭಗವಂತನ ನಾಮಸ್ಮರಣೆಯ ಮಹತ್ವ
ಒಂದು ಊರಿನಲ್ಲಿ ಅತ್ಯಂತ ಬಡ ಕೃಷಿಕನೊಬ್ಬನಿದ್ದ. ದಿನವಿಡೀ ದುಡಿದರೂ ಅವನಿಗೆ ಹೊಟ್ಟೆ ತುಂಬ ಊಟ ಸಿಗುತ್ತಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಹರಿದಾಸರ ಬಳಿ ಹೋಗಿ, ತನ್ನ ದಾರಿದ್ರ್ಯ ನೀಗಿಸಲು ಉಪಾಯ ಕೇಳಿದ. ದಾಸರು ಪೂಜೆ ಮಾಡು, ದೇವಸ್ಥಾನಕ್ಕೆ ಹೋಗು ಎಂದಾಗ, ಅದಕ್ಕೆ ಹಣವೂ ಇಲ್ಲ, ಎತ್ತುಗಳನ್ನು ಬಿಟ್ಟು ಹೋಗಲು ಸಮಯವೂ ಇಲ್ಲ ಎಂದ.
-
ಒಂದೊಳ್ಳೆ ಮಾತು
ದೇವರ್ಷಿ ನಾರದರು ಒಮ್ಮೆ ವೈಕುಂಠಕ್ಕೆ ತೆರಳಿ ಶ್ರೀಮನ್ನಾರಾಯಣನನ್ನು ಭಕ್ತಿಯಿಂದ ವಂದಿಸಿ, ಸ್ವಾಮಿ, ಬಡತನದಲ್ಲಿ ಬೆಂದು ಹೋಗುವ, ಪೂಜೆ-ಪುನಸ್ಕಾರಗಳನ್ನು ಮಾಡಲು ಧನವಿಲ್ಲದ ಸಾಮಾನ್ಯ ಮನುಷ್ಯನಿಗೆ ನಿಮ್ಮ ಅನುಗ್ರಹ ದೊರೆಯುವ ಸರಳ ದಾರಿ ಯಾವುದು? ಎಂದು ಕೇಳಿದರು.
ಆಗ ಶ್ರೀಹರಿಯು ಮಂದಹಾಸ ಬೀರುತ್ತಾ, ನಾರದ, ನನ್ನನ್ನು ಸೇರಲು ದುಬಾರಿ ಯಾಗ-ಯಜ್ಞ ಗಳಾಗಲಿ, ಆಡಂಬರದ ಪೂಜೆಗಳಾಗಲಿ ಬೇಕಿಲ್ಲ; ಭಕ್ತಿಯಿಂದ ಕೂಗುವ ನನ್ನ ನಾಮವೊಂದೇ ಸಾಕು ಎಂದು ಹೇಳಿ ಭೂಲೋಕದ ಒಂದು ಸ್ವಾರಸ್ಯಕರ ಕಥೆಯನ್ನು ವಿವರಿಸಿದನು.
ಒಂದು ಊರಿನಲ್ಲಿ ಅತ್ಯಂತ ಬಡ ಕೃಷಿಕನೊಬ್ಬನಿದ್ದ. ದಿನವಿಡೀ ದುಡಿದರೂ ಅವನಿಗೆ ಹೊಟ್ಟೆ ತುಂಬ ಊಟ ಸಿಗುತ್ತಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಹರಿದಾಸರ ಬಳಿ ಹೋಗಿ, ತನ್ನ ದಾರಿದ್ರ್ಯ ನೀಗಿಸಲು ಉಪಾಯ ಕೇಳಿದ. ದಾಸರು ಪೂಜೆ ಮಾಡು, ದೇವಸ್ಥಾನಕ್ಕೆ ಹೋಗು ಎಂದಾಗ, ಅದಕ್ಕೆ ಹಣವೂ ಇಲ್ಲ, ಎತ್ತುಗಳನ್ನು ಬಿಟ್ಟು ಹೋಗಲು ಸಮಯವೂ ಇಲ್ಲ ಎಂದ.
ಇದನ್ನೂ ಓದಿ: Roopa Gururaj Column: ದೇವಿಯ ಮಹಾತ್ಮೆ ನುತಿಸುವ ಲಲಿತಾ ಸಹಸ್ರನಾಮದ ವೈಶಿಷ್ಟ್ಯ
ಆಗ ದಾಸರು, ನಿಮ್ಮ ಮನೆಯ ಸುತ್ತಮುತ್ತ ಹಣೆಗೆ ನಾಮ ಧರಿಸುವವರು ಯಾರಾದರೂ ಇzರೆಯೇ? ಎಂದು ವಿಚಾರಿಸಿದರು. ಬಡವನು, ಎದುರು ಮನೆಯ ಕುಂಬಾರ ಅಜ್ಜ ಪ್ರತಿದಿನ ಹಣೆಗೆ ಮೂರು ನಾಮ ಧರಿಸುತ್ತಾರೆ ಎಂದ. ಹಾಗಾದರೆ ಸಾಕು, ನೀನು ನಿತ್ಯವೂ ಅವರ ಹಣೆಯ ಮೇಲಿನ ನಾಮ ವನ್ನು ಕಣ್ಣಾರೆ ಕಂಡು ನಂತರ ಕೆಲಸಕ್ಕೆ ಹೋಗು ಎಂದು ದಾಸರು ಸರಳ ನಿಯಮವೊಂದನ್ನು ರೂಪಿಸಿಕೊಟ್ಟರು.
ಅಂದಿನಿಂದ ಆ ಬಡವನಲ್ಲಿ ಮಂತ್ರ, ತಂತ್ರಗಳಿಲ್ಲದಿದ್ದರೂ ಗುರುವಾಕ್ಯದ ಮೇಲಿನ ದೃಢ ನಂಬಿಕೆ ಯಿತ್ತು. ಪ್ರತಿದಿನ ಮುಂಜಾನೆ ಅಜ್ಜನ ಹಣೆಯ ನಾಮವನ್ನು ನೋಡುವುದು ಅವನ ಅಭ್ಯಾಸ ವಾಯಿತು. ಒಂದಿನ ಬೆಳಿಗ್ಗೆ ಅಜ್ಜ ಮನೆಯಲ್ಲಿರದೆ, ಮಣ್ಣು ತರಲು ಕೆರೆಗೆ ಹೋಗಿದ್ದ. ನೇಮ ತಪ್ಪಬಾರದೆಂದು ಬಡವನೂ ಕೆರೆಗೆ ಹೋದ.
ಅದೇ ಸಮಯದಲ್ಲಿ ಅಜ್ಜ ಕೆರೆಯಲ್ಲಿ ಮಣ್ಣು ಅಗೆಯುವಾಗ ಆಕಸ್ಮಿಕವಾಗಿ ಮೂರು ಬಿಂದಿಗೆ ಗಳಷ್ಟು ಅಪಾರ ನಿಽ ದೊರಕಿತ್ತು. ಯಾರೂ ನೋಡದಂತೆ ಅದನ್ನು ಬಚ್ಚಿಡಲು ಅಜ್ಜ ಯತ್ನಿ ಸುತ್ತಿದ್ದಾಗ, ಏರಿಯ ಮೇಲೆ ನಿಂತಿದ್ದ ಬಡವನು ಅಜ್ಜನ ಹಣೆಯ ನಾಮವನ್ನು ಕಂಡು ಸಂತಸ ದಿಂದ, ನೋಡಿದೆ! ಎಂದು ಕೂಗಿದ.
ಅಜ್ಜ ಬೆಚ್ಚಿ ಬಿದ್ದು, ಇವನಿಗೆ ನಿಽಯ ರಹಸ್ಯ ತಿಳಿಯಿತೆಂದು ಭಾವಿಸಿ, ಇಲ್ಲಿ ಬಾ, ನಿನಗೊಂದು ಮಾತು ಹೇಳುತ್ತೇನೆ ಎಂದ. ನಾಮದ ದರ್ಶನ ಮುಗಿದಿತ್ತಾದ್ದರಿಂದ ಬಡವನು ಮುಗ್ಧವಾಗಿ, ಬೇಡ ಅಜ್ಜ, ಮೂರನ್ನೂ ನೋಡಿಕೊಂಡೆ! ಎಂದ (ಅವನು ಹೇಳಿದ್ದು ಹಣೆಯ ಮೇಲಿನ ಮೂರು ನಾಮ ಗಳನ್ನು!). ಇದರಿಂದ ಬೆದರಿದ ಅಜ್ಜ, ವಿಷಯ ಹೊರಬೀಳದಿರಲಿ ಎಂದು ಓಡಿಬಂದು ಆ ನಿಧಿಯ ಅರ್ಧ ಭಾಗವನ್ನು ಬಡವನಿಗೆ ಒಪ್ಪಿಸಿದ. ಬಡವನ ಕಷ್ಟಗಳೆಲ್ಲ ಕರಗಿ, ಸಂಸಾರ ನೆಮ್ಮದಿ ಯಾಯಿತು.
ಕಥೆಯನ್ನು ಮುಗಿಸಿದ ಶ್ರೀಹರಿ ನಾರದರಿಗೆ ನೋಡಿದೆಯಾ ನಾರದ! ಆ ಬಡವನಲ್ಲಿ ಆಡಂಬರ ವಿರಲಿಲ್ಲ, ಆದರೆ ನಿಯಮ ಮತ್ತು ಅಚಲ ಶ್ರದ್ಧೆಯಿತ್ತು. ಕೇವಲ ನನ್ನ ನಾಮವನ್ನು ನೋಡಿದವ ನಿಗೇ ಇಷ್ಟು ಫಲ ದೊರೆತರೆ, ಇನ್ನು ನನ್ನ ನಾಮವನ್ನು ನಾಲಿಗೆಯಿಂದ ಜಪಿಸುವವನಿಗೆ ಎಂತಹ ಸದ್ಗತಿ ಸಿಗಬೇಡ? ಶ್ರೀಮಂತ-ಬಡವ, ಮೇಲು-ಕೀಳೆಂಬ ಭೇದವಿಲ್ಲದೆ ಎಲ್ಲರೂ ಸುಲಭವಾಗಿ ಆಚರಿಸಬಹುದಾದ ಏಕೈಕ ಸಾಧನವೇ ಭಗವನ್ನಾಮ ಸ್ಮರಣೆ ಎಂದನು ನಗುತ್ತಾ. ನಾರದರು ಭಕ್ತಿ ಭಾವದಿಂದ ಎರಡೂ ಕೈ ಜೋಡಿಸಿ ಹೌದು ಭಗವಂತ ನಿನ್ನ ಕೃಪೆಗೆ ಆಡಂಬರಕ್ಕಿಂತ ಅನುಭೂತಿ ಮುಖ್ಯ ಎಂದು ನುಡಿದರು.
ದೊಡ್ಡ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗದಿದ್ದರೂ ಪರವಾಗಿಲ್ಲ; ಹಣ, ಸಮಯದ ಮಿತಿ ಯಿಲ್ಲದ ‘ನಾಮಸ್ಮರಣೆ’ಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶ ನಮಗಿದೆ. ಬ್ರಹ್ಮನು ನಮಗೆ ಹೆಚ್ಚು ನೋಡಲು ಎರಡು ಕಣ್ಣುಗಳನ್ನು, ಅಳೆದು ತೂಗಿ ಮಾತನಾಡಲು ಒಂದೇ ನಾಲಿಗೆಯನ್ನು ನೀಡಿದ್ದಾನೆ.
ಅದಕ್ಕೇ ಪುರಂದರದಾಸರು ಭಕ್ತಿ ಭಾವದಿಂದ ಹೀಗೆ ಹಾಡಿರುವುದು;
ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ |
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||