Prakash Shesharaghavachar Column: ರೈಲು ಪ್ರಯಾಣಿಕರ ಸುರಕ್ಷತೆಗೆ ಕವಚ ತಂತ್ರಜ್ಞಾನ
ರೈಲು ಪ್ರಯಾಣಿಕರ ಸುರಕ್ಷತೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕವಚ ತಂತ್ರಜ್ಞಾನವು ಆತ್ಮನಿರ್ಭರ ಭಾರತದ ಮತ್ತೊಂದು ಮಹತ್ವದ ಮೈಲಿಗಗಿದೆ. ಕವಚವು ಭಾರತೀಯ ರೈಲ್ವೆಯ ಸ್ವಯಂ ಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದೆ. ಭಾರತೀಯ ರೈಲ್ವೆಯು 69000 ಕಿಮೀ ರೈಲು ಮಾರ್ಗವನ್ನು ಹೊಂದಿರುವ ವಿಶ್ವದ ಮೂರನೇ ಅತಿ ದೊಡ್ಡ ಸಂಚಾರ ವ್ಯವಸ್ಥೆಯಾಗಿದೆ. ಇದರೊಂದಿಗೆ ಎರಡು ಮತ್ತು ನಾಲ್ಕು ಲೇನ್‌ಗಳನ್ನು ಸೇರಿಸಿದರೆ ಇದು ಲಕ್ಷಾಂತರ ಮೈಲಿಗಳಾಗುತ್ತದೆ.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ರೈಲು ಪ್ರಯಾಣಿಕರ ಸುರಕ್ಷತೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕವಚ ತಂತ್ರಜ್ಞಾನವು ಆತ್ಮನಿರ್ಭರ ಭಾರತದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಕವಚವು ಭಾರತೀಯ ರೈಲ್ವೆಯ ಸ್ವಯಂ ಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದೆ. ಭಾರತೀಯ ರೈಲ್ವೆಯು 69000 ಕಿಮೀ ರೈಲು ಮಾರ್ಗವನ್ನು ಹೊಂದಿರುವ ವಿಶ್ವದ ಮೂರನೇ ಅತಿ ದೊಡ್ಡ ಸಂಚಾರ ವ್ಯವಸ್ಥೆಯಾಗಿದೆ. ಇದರೊಂದಿಗೆ ಎರಡು ಮತ್ತು ನಾಲ್ಕು ಲೇನ್‌ಗಳನ್ನು ಸೇರಿಸಿದರೆ ಇದು ಲಕ್ಷಾಂತರ ಮೈಲಿಗಳಾಗು ತ್ತದೆ. ವಿಶ್ವದಲ್ಲಿ 250000 ಕಿಮೀ ಉದ್ದವಿರುವ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಚೀನಾದಲ್ಲಿ 160000 ಕಿಮೀ ಉದ್ದದ ರೈಲು ಜಾಲವಿದ್ದು ಎರಡನೆಯ ಸ್ಥಾನದಲ್ಲಿದೆ.
ಅಮೆರಿಕಾದ ರೈಲು ಜಾಲವು ಪ್ರಯಾಣಿಕರಿಗಿಂತ ಮುಖ್ಯವಾಗಿ ಸರಕು ಸಾಗಣೆಗೆ ಹೆಚ್ಚು ಬಳಕೆ ಯಾಗುತ್ತದೆ. ಚೀನಾ ವೇಗದ ರೈಲಿಗೆ ಮತ್ತು ಪ್ರಯಾಣಿಕರ ಸಾಗಣೆಯಲ್ಲಿ ವಿಶ್ವದ ಮುಂಚೂಣಿ ಯಲ್ಲಿದೆ. ಪ್ರಯಾಣಿಕರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡರೆ ಚೀನಾ ಮತ್ತು ಭಾರತ ವಿಶ್ವದ ಅತ್ಯಂತ ದೊಡ್ಡ ರೈಲು ಪ್ರಯಾಣಿಕ ಸೇವೆ ನೀಡುವ ದೇಶಗಳಾಗಿವೆ.
ಭಾರತೀಯ ರೈಲ್ವೆಯಲ್ಲಿ ಪ್ರತಿದಿನ 25 ಸಾವಿರ ರೈಲುಗಳು ಸಂಚರಿಸುತ್ತವೆ. ಇದರಲ್ಲಿ 2.5 ಕೋಟಿ ಯಿಂದ 3 ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 13500 ಪ್ರಯಾಣಿಕ ರೈಲುಗಳು ಮತ್ತು 11500 ಸರಕು ಸಾಗಣೆ ರೈಲುಗಳು ವಾರ್ಷಿಕ 1617 ಅಗಾಧ ಮತ್ತು ವಿಶಾಲ ವ್ಯವಸ್ಥೆಯಲ್ಲಿ ಪ್ರಯಾಣಿಕರ ಸುರಕ್ಷತೆಯೇ ಅತ್ಯಂತ ಪ್ರಮುಖ ಆದ್ಯತೆಯಾಗಿದೆ.
ಇದನ್ನೂ ಓದಿ: Prakash Shesharaghavachar Column: ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್!
ರೈಲು ಸೇವೆ ನಿರಂತರವಾಗಿ ವಿಸ್ತರಿಸುತ್ತಿದ್ದು, ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕ ರನ್ನು ವಿವಿಧ ರೀತಿಯ ಅಪಘಾತ ಗಳು, ಅಪಾಯಗಳು ಮತ್ತು ಭದ್ರತಾ ಸವಾಲುಗಳಿಂದ ರಕ್ಷಿಸುವುದು ರೈಲ್ವೆಯ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ, ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ರೈಲ್ವೆ ಇಲಾಖೆಯು ಪ್ರತಿ ವರ್ಷ ಸುರಕ್ಷತಾ ಮೂಲಸೌಕರ್ಯ ಮತ್ತು ಕ್ರಮಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿದೆ.
ಪ್ರಯಾಣಿಕರ ವಿವಿಧ ಸುರಕ್ಷತಾ ಕ್ರಮಗಳು
2014ರಲ್ಲಿ 39200 ಕೋಟಿಯಿಂದ 2026-27ರ ವೇಳೆಗೆ 1,20,389 ಕೋಟಿಗೆ ಹೆಚ್ಚಳವಾಗಿದೆ. ಭಾರತೀಯ ರೈಲ್ವೆ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಹಣ ಖರ್ಚು ಮಾಡುತ್ತದೆ.
- ರೈಲು ಬೋಗಿ ಮತ್ತು ಇಂಜಿನ್ ಸುರಕ್ಷತೆ, ಸುರಕ್ಷಿತ ಎಲ್‌ಎಹ್‌ಬಿ ಬೋಗಿಗಳ ಬಳಕೆ ಮತ್ತು ಆಧುನಿಕ ಬ್ರೇಕ್ ವ್ಯವಸ್ಥೆ.
- ರೈಲು ಹಳಿ ನಿರ್ವಹಣೆ ಮತ್ತು ನವೀಕರಣ, ರೈಲು ಕ್ರಾಸಿಂಗ್‌ಗಳ ಸುರಕ್ಷತೆ ಹಾಗೂ ಲೆವೆಲ್ ಕ್ರಾಸಿಂಗ್‌ಗಳ ನಿರ್ಮೂಲನೆ.
- ಆಧುನಿಕ ಸಂವಹನ ವ್ಯವಸ್ಥೆಗಳು, ಟ್ರ್ಯಾಕ್, ಸಿಗ್ನಲಿಂಗ್ ಮತ್ತು ಸ್ವಯಂಚಾಲಿತ ಸುರಕ್ಷತಾ ಮೂಲ ಸೌಕರ್ಯಗಳ ಆಧುನೀಕರಣ.
- ಅಗ್ನಿ ಸುರಕ್ಷತೆಗಾಗಿ ಅಗ್ನಿಶಾಮಕ ಉಪಕರಣಗಳು ಮತ್ತು ಅವಘಡ ತಡೆಗೆ ಆಧುನಿಕ ತಂತ್ರಜ್ಞಾನ.
- ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಫುಟ್ ಓವರ್ ಬ್ರಿಡ್ಜ್‌ಗಳು ಮತ್ತು ಎಸ್ಕಲೇಟರ್‌ಗಳು.
- ಪ್ರಯಾಣಿಕರ ಭದ್ರತೆಗಾಗಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ.
- ಸೇತುವೆಗಳ ಸುರಕ್ಷತೆ ಕಾಪಾಡಲು ರೈಲ್ವೆ ಸೇತುವೆಗಳ ನಿಯಮಿತ ತಪಾಸಣೆ ಮತ್ತು ಪುನರ್ನಿರ್ಮಾಣ.
- ಅಪಘಾತ ಮತ್ತು ವಿಪತ್ತು ನಿರ್ವಹಣೆ ಹಾಗೂ ಅಪಘಾತ ಪರಿಹಾರ ರೈಲುಗಳು.
- ಪ್ರಯಾಣಿಕರ ಜಾಗೃತಿಗಾಗಿ ರೈಲ್ವೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಅಭಿಯಾನಗಳು.
- ಕವಚ ತಂತ್ರಜ್ಞಾನ: ರೈಲುಗಳ ನಡುವೆ ಡಿಕ್ಕಿ ತಪ್ಪಿಸಲು ಸ್ವಯಂಚಾಲಿತ ಬ್ರೇಕ್ ಮತ್ತು ಸಿಗ್ನಲ್ ಉಲ್ಲಂಘನೆ ತಡೆ ವ್ಯವಸ್ಥೆ.
ಕವಚ ಅತ್ಯಾಧುನಿಕ ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆ
2025-26ರಲ್ಲಿ ಒಟ್ಟು 16 ಗಂಭೀರ ರೈಲು ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. 2014-15ರಲ್ಲಿ 135ರಷ್ಟಿದ್ದ ಗಂಭೀರ ರೈಲು ಅಪಘಾತಗಳ ಸಂಖ್ಯೆ 2025-26ರಲ್ಲಿ 16ಕ್ಕೆ ಇಳಿದಿದೆ. ಇದು ರೈಲು ಸುರಕ್ಷತಾ ಕ್ರಮಗಳಲ್ಲಿ ಆಗಿರುವ ಗಮನಾರ್ಹ ಸುಧಾರಣೆ ಯನ್ನು ತೋರಿಸುತ್ತದೆ.
ಜೂನ್ 2, 2023ರಂದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದವು. ಕೋರಮಂಡಲ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಹೌರಾ-ಚೆನ್ನೈ ಮಾರ್ಗದ ಬಹನಾಗ ಬಜಾರ್ ರೈಲು ನಿಲ್ದಾಣದ ಬಳಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆಯಿತು. ಅತಿ ವೇಗವಾಗಿ ಸಂಚರಿಸು ತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ 21 ಬೋಗಿಗಳು ಹಳಿತಪ್ಪಿ, ಮೂರು ಬೋಗಿಗಳು ಪಕ್ಕದ ಹಳಿಯಲ್ಲಿ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್- ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದವು. ಈ ಭೀಕರ ಅಪಘಾತದಲ್ಲಿ 296 ಮಂದಿ ಮೃತಪಟ್ಟರು ಮತ್ತು 1200 ಜನ ಗಾಯಗೊಂಡರು.
ಅಪಘಾತಕ್ಕೊಳಗಾದ ರೈಲುಗಳಿಗೆ ಕವಚ ತಂತ್ರಜ್ಞಾನ ಅಳವಡಿಸಲ್ಪಟ್ಟಿದ್ದರೆ ಅಪಘಾತವು ಸಂಭವಿಸುತ್ತಿರಲಿಲ್ಲ. ರೈಲು-ರೈಲು ಡಿಕ್ಕಿ, ಸಿಗ್ನಲ್ ಉಲ್ಲಂಘನೆ ಮತ್ತು ಅತಿವೇಗದಿಂದ ಸಂಭವಿಸು ವ ಅಪಘಾತಗಳ ತಡೆಗಟ್ಟುವ ಉದ್ದೇಶದಿಂದಲೇ ಭಾರತೀಯ ರೈಲ್ವೆ ಅಭಿವೃದ್ಧಿ ಪಡಿಸಿರುವ ಅಪ್ಪಟ ಸ್ವದೇಶಿ ತಂತ್ರಜ್ಞಾನವೇ ಕವಚ.
ಲಕ್ನೊದಲ್ಲಿ ರೈಲ್ವೆ ಇಲಾಖೆಯ ಆರ್‌ಡಿಎಸ್‌ಒ ಎಂಬ ಸಂಶೋಧನಾ ಸಂಸ್ಥೆಯು ಖಾಸಗಿ ತಂತ್ರಜ್ಞಾನ ಕಂಪನಿಗಳ ಜೊತೆ ಕೈಜೋಡಿಸಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆಯೇ ಇದು. ರೈಲು ಚಾಲಕರ ತಪ್ಪಿನಿಂದ ಸಂಭವಿಸಬಹುದಾದ ಅಪಘಾತಗಳನ್ನು ತಂತ್ರಜ್ಞಾನದ ಮೂಲಕ ತಡೆಯುವುದು ಕವಚದ ಉದ್ದೇಶ ವಾಗಿದೆ.
ರೈಲಿನ ಇಂಜಿನ್ ಡಬ್ಬಿಯಲ್ಲಿ ವೇಗ ಮಾಪಕ, ಬ್ರೇಕ್ ನಿಯಂತ್ರಣ ವ್ಯವಸ್ಥೆ, ರೇಡಿಯೋ ಸಂವಹನ ಮತ್ತು ಜಿಪಿಎಸ್ ಆಧಾರಿತ ಸ್ಥಳ ನಿರ್ಧಾರ ಮಾಡುವ ಉಪಕರಣಗಳನ್ನು ಅಳವಡಿಸಲಾಗುತ್ತದೆ. ರೈಲ್ವೆ ಹಳಿಯ ಪಕ್ಕದಲ್ಲಿ ಸಿಗ್ನಲ್ ಮಾಹಿತಿ ಪ್ರಸರಣ ಮತ್ತು ಟ್ರ್ಯಾಕ್ ಸಂಬಂಧಿತ ಎಲೆಕ್ಟ್ರಾನಿಕ್ ಸಾಧನಗಳನ್ನು ಅಳವಡಿಸಲಾಗುತ್ತದೆ. ಕವಚ ನಿಯಂತ್ರಣ ಕೇಂದ್ರದಲ್ಲಿ ರೈಲುಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲಾಗುವುದು ಹಾಗೂ ಪರಸ್ಪರ ಸುರಕ್ಷಿತ ಅಂತರವನ್ನು ನಿರ್ವಹಿಸ ಲಾಗುವುದು.
ಈ ಮೂರು ಘಟಕಗಳು ನಿರಂತರವಾಗಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ರೈಲು ಯಾವ ವೇಗದಲ್ಲಿ ಸಾಗುತ್ತಿದೆ, ಮುಂದೆ ಸಿಗ್ನಲ್ ಯಾವ ಸ್ಥಿತಿಯಲ್ಲಿದೆ ಮತ್ತು ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದೆಯೇ ಎಂಬ ಮಾಹಿತಿ ಕ್ಷಣ ಕ್ಷಣದಲ್ಲಿ ಲಭ್ಯವಾಗುತ್ತದೆ.
ಕವಚದ ಪ್ರಮುಖ ವೈಶಿಷ್ಟ್ಯಗಳೆಂದರೆ, ರೈಲು ಸಿಗ್ನಲ್ ಉಲ್ಲಂಘನೆ ಮಾಡಿದರೆ ತಡೆಯುತ್ತದೆ. ಕೆಂಪು ಸಿಗ್ನಲ್ ಇದ್ದರೂ ಮುಂದೆ ಹೋದರೆ ಕವಚ ಚಾಲಕನನ್ನು ಎಚ್ಚರಿಸುತ್ತದೆ ಮತ್ತು ಅದನ್ನು ಮೀರಿ ಹೋದರೆ ಸ್ವಯಂಚಾಲಿತವಾಗಿ ಬ್ರೇಕ್ ಹಾಕುತ್ತದೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಅಪಾಯಕಾರಿ ಅಂತರಕ್ಕೆ ಬಂದರೆ ಎರಡೂ ರೈಲುಗಳನ್ನು ನಿಲ್ಲಿಸುತ್ತದೆ. ಇದರ ಪ್ರಯೋಗ ಟ್ರ್ಯಾಕ್ ನಲ್ಲಿ ನಡೆದಾಗ ಒಂದು ರೈಲಿನಲ್ಲಿ ಸ್ವತಃ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಇದ್ದರು. ತಂತ್ರಜ್ಞಾನ ಅಭಿವೃದ್ಧಿಪಡಿಸಿದವರ ಆತ್ಮವಿಶ್ವಾಸ ಇಂತಹ ನಡೆಗಳಿಂದ ಹೆಚ್ಚುತ್ತದೆ.
ನಿಗದಿತ ವೇಗದ ಮಿತಿಯನ್ನು ದಾಟಿದರೆ ಮೊದಲು ಎಚ್ಚರಿಕೆ ನೀಡುತ್ತದೆ ಮತ್ತು ಅನಿವಾರ್ಯ ವಾದರೆ ಸ್ವಯಂಚಾಲಿತ ಬ್ರೇಕ್ ಹಾಕುತ್ತದೆ. ಮಂಜಿನಿಂದ ಗೋಚರತೆ ಕಡಿಮೆಯಿದ್ದರೂ ಚಾಲಕರಿಗೆ ಸಿಗ್ನಲ್ ಮಾಹಿತಿ ಕ್ಯಾಬಿನ್‌ನ ಲಭ್ಯವಾಗುತ್ತದೆ. ಚಾಲಕರಿಗೆ ಮುಂದಿನ ಸಿಗ್ನಲ್ ಸ್ಥಿತಿ ಮತ್ತು ಅನುಮತಿಸಲಾದ ವೇಗವು ಕ್ಯಾಬಿನ್‌ನ ಪ್ರದರ್ಶಿತವಾಗುತ್ತವೆ.
ಕವಚ ತಂತ್ರಜ್ಞಾನದ ಸವಾಲು
ಕವಚ ತಂತ್ರಜ್ಞಾನದ ಅಳವಡಿಕೆಯಲ್ಲಿ ಹಲವಾರು ಸವಾಲುಗಳು ರೈಲ್ವೆಯ ಮುಂದಿವೆ. 69000 ಕಿಮೀ ರೈಲು ಜಾಲದಲ್ಲಿ ಅಳವಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸರಕಾರ ಈ ಯೋಜನೆಗೆ ನಿರಂತರವಾಗಿ ಬಂಡವಾಳ ಹೂಡುವುದು ಅತ್ಯಗತ್ಯ. ಈಗಾಗಲೇ ಅಳವಡಿಕೆಯಾಗಿರುವುದರಿಂದ ಹಳೆಯ ಸಿಗ್ನಲ್ ವ್ಯವಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ. ತಂತ್ರಜ್ಞಾನವು ಬದಲಾಗು ತ್ತಿರುವುದರಿಂದ ಅಳವಡಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನೂತನ ತಂತ್ರಜ್ಞಾನದ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು ಹಾಗೂ ನಿರಂತರ ನಿರ್ವಹಣೆ ಮತ್ತು ತಾಂತ್ರಿಕ ಮೇಲ್ವಿಚಾರಣೆಯ ಮೂಲಕ ಕವಚದ ಯಶಸ್ಸು ಸಾಧ್ಯವಾಗುವುದು.
ಮುಂದಿನ ದಿನಗಳಲ್ಲಿ ಕವಚವನ್ನು ಕೃತಕ ಬುದ್ಧಿಮತ್ತೆ, ಉಪಗ್ರಹ ಆಧಾರಿತ ನಿಖರ ಟ್ರ್ಯಾಕಿಂಗ್ ಮತ್ತು ಕೇಂದ್ರೀಕೃತ ಸಂಚಾರ ನಿಯಂತ್ರಣ ವ್ಯವಸ್ಥೆಗಳೊಂದಿಗೆ ಹೊಂದಿಸುವ ಯೋಜನೆ ಇರುವುದು. ತನ್ನ ಸಂಪೂರ್ಣ ಬ್ರಾಡ್‌ಗೇಜ್ ರೈಲು ಜಾಲದಲ್ಲಿ ಕವಚ ಅಳವಡಿಸುವ ದೀರ್ಘ ಕಾಲೀನ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ.
ಕವಚ ತಂತ್ರeನದ ಅಳವಡಿಕೆಯಿಂದ ಮಾನವೀಯ ತಪ್ಪುಗಳಿಂದ ಸಂಭವಿಸುವ ಅಪಘಾತಗಳಲ್ಲಿ ಗಣನೀಯ ಇಳಿಕೆಯಾಗಲಿದೆ, ಇದರಿಂದ ಪ್ರಯಾಣಿಕರ ಸುರಕ್ಷತೆ ಹೆಚ್ಚುತ್ತದೆ. ಅಪಘಾತಗಳಿಂದ ಉಂಟಾಗುವ ಆರ್ಥಿಕ ನಷ್ಟವು ಕಡಿತವಾಗುತ್ತದೆ ಮತ್ತು ಭಾರತದ ಅಭಿವೃದ್ಧಿಪಡಿಸಿರುವ ಕಾರಣ ವೆಚ್ಚದ ಉಳಿತಾಯವಾಗುತ್ತದೆ.
ಪ್ರತಿ ರೂಟ್ ಕಿಲೋಮೀಟರ್‌ಗೆ ಕವಚ ಅಳವಡಿಸುವ ವೆಚ್ಚ ಸುಮಾರು? 50 ಲಕ್ಷದಿಂದ 80 ಲಕ್ಷ ಎಂದು ಅಂದಾಜಿಸಲಾಗಿದೆ. ಒಂದು ಸಾವಿರ ಕಿಮೀ ಮಾರ್ಗದಲ್ಲಿ ಕವಚ ಅಳವಡಿಸಲು ಸುಮಾರು 700 ಕೋಟಿಯಷ್ಟು ವೆಚ್ಚವಾಗುತ್ತದೆ ಎಂದು ಅಂದಾಜಿಸಬಹುದು. ಈ ವೆಚ್ಚದಲ್ಲಿ ಟ್ರ್ಯಾಕ್ ಪಕ್ಕದ ಸಾಧನಗಳು, ಸಿಗ್ನಲ್ ಸಮನ್ವಯ, ಸಂವಹನ ವ್ಯವಸ್ಥೆ ಮತ್ತು ಲೋಕೋಮೊಟಿವ್ ಉಪಕರಣಗಳ ವೆಚ್ಚ ಒಳಗೊಂಡಿರುವುದು.
ಅಧಿಕೃತ ಅಂಕಿಅಂಶಗಳ ಪ್ರಕಾರ ಕವಚ ವ್ಯವಸ್ಥೆಯನ್ನು ಸುಮಾರು 2490 ರೂಟ್ ಕಿಲೋ ಮೀಟರ್‌ಗಳಲ್ಲಿ ಯಶಸ್ವಿಯಾಗಿ ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ. ಇದಲ್ಲದೆ, ಸುಮಾರು 24427 ರೂಟ್ ಕಿಮೀ ವ್ಯಾಪ್ತಿಯಲ್ಲಿ ಕವಚ ಅಳವಡಿಸುವ ಕೆಲಸವನ್ನು ಆರಂಭಿಸಲಾಗಿದೆ.
ಕವಚ ಕೇವಲ ಒಂದು ತಾಂತ್ರಿಕ ಸಾಧನವಲ್ಲ, ಅದು ಭಾರತೀಯ ರೈಲ್ವೆಯ ಸುರಕ್ಷತಾ ಕ್ರಾಂತಿಯ ಪ್ರತೀಕವಾಗಿದೆ. ಇದು ಮೇಕ್ ಇನ್ ಇಂಡಿಯಾ ಯೋಜನೆಗೆ ಮುಕುಟವಾಗಿದೆ. ಮಾನವೀಯ ತಪ್ಪುಗಳನ್ನು ತಂತ್ರಜ್ಞಾನದ ಮೂಲಕ ನಿಯಂತ್ರಿಸಿ ಸಾವಿರಾರು ಪ್ರಯಾಣಿಕರ ಜೀವವನ್ನು ರಕ್ಷಿಸುವ ಸಾಮರ್ಥ್ಯ ಈ ವ್ಯವಸ್ಥೆಗೆ ಇರುವುದು. ಸ್ವದೇಶಿ ಸಂಶೋಧನೆ, ತಂತ್ರಜ್ಞಾನ ಮತ್ತು ಸುರಕ್ಷತೆಯ ಸಮನ್ವಯವಾದ ಕವಚ ಭಾರತೀಯ ರೈಲ್ವೆಯನ್ನು ಇನ್ನಷ್ಟು ಸುರಕ್ಷಿತ, ಆಧುನಿಕ ಮತ್ತು ವಿಶ್ವಾಸಾರ್ಹವಾಗಿಸುತ್ತಿದೆ.