ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ವಿಜಯೇಂದ್ರ ಬ್ರ್ಯಾಂಡ್ ಮೌಲ್ಯ ವೃದ್ಧಿಸುವುದೇ ಪಾದಯಾತ್ರೆ?

ಪಾದಯಾತ್ರೆಯ ಆರಂಭದ ದಿನದಲ್ಲಿ ಕಾಣಿಸಿಕೊಂಡ ಕೆಲ ಬಿಜೆಪಿ ನಾಯಕರು ಈ ಝಳಪಿನ ಬಿಸಿಲಿನ ಮಧ್ಯೆ ನಡೆಯುವುದು ಸಾಧ್ಯವಿಲ್ಲಪ್ಪ ಎಂದು ಬೆಂಗಳೂರಿಗೆ ವಾಪಸಾಗಿದ್ದಾರೆ. ಮತ್ತೆ ಕೆಲವರು ತಮ್ಮ ಇರುವಿಕೆಯನ್ನು 2 ದಿನಕ್ಕೆ ಸೀಮಿತಗೊಳಿಸಿ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಮಾಜಿ ಸಚಿವ, ಹಿರಿಯ ನಾಯಕ ಸಿ.ಟಿ. ರವಿ ಪಾದಯಾತ್ರೆಯಲ್ಲಿ ಅಧ್ಯಕ್ಷ ವಿಜಯೇಂದ್ರರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಬೆಳವಣಿಗೆ.

ವಿಜಯೇಂದ್ರ ಬ್ರ್ಯಾಂಡ್ ಮೌಲ್ಯ ವೃದ್ಧಿಸುವುದೇ ಪಾದಯಾತ್ರೆ?

-

ಜನಪಥ

ವಾಲ್ಮೀಕಿ ನಿಗಮದದ ಹಗರಣ ಹಾಗೂ ಮತ್ತಿತರೆ ಆಡಳಿತ ವೈಫಲ್ಯದ ಅಂಶಗಳನ್ನು ಗುರಿಯಾಗಿ ಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಸುಮಾರು 170 ಕಿಮೀ ಉದ್ದದ ರಾಯಚೂರು ಜಿಲ್ಲೆಯ ‘ಲಿಂಗಸಗೂರು ಟು ಬಳ್ಳಾರಿ ಚಲೋ’ ಪಾದಯಾತ್ರೆಯ 9ನೇ ದಿನ ಪೂರ್ಣಗೊಂಡಿದ್ದು, ಗುರುವಾರದಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶದ ಮೂಲಕ ಮುಕ್ತಾಯಗೊಳ್ಳುತ್ತಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಬೆಂಕಿ ಬಿಸಿಲಿನ ಸವಾಲಿನ ಮಧ್ಯೆ ಪಾದಯಾತ್ರೆ ನಡೆಸುತ್ತಿರುವುದು ಸುಲಭದ ವಿಷಯವೇನಲ್ಲ. ಇದಕ್ಕೆ ಮಾನಸಿಕ ಗಟ್ಟಿತನದ ಜತೆಗೆ ದೈಹಿಕ ಸಾಮರ್ಥ್ಯವೂ ಬಹಳ ಮುಖ್ಯ. ಅದನ್ನು ಸಾಬೀತುಪಡಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ ಎಂದರೆ ಅದು ಅತಿಶಯದ ಮಾತೇನಲ್ಲ.

ಪಾದಯಾತ್ರೆಯ ಆರಂಭದ ದಿನದಲ್ಲಿ ಕಾಣಿಸಿಕೊಂಡ ಕೆಲ ಬಿಜೆಪಿ ನಾಯಕರು ಈ ಝಳಪಿನ ಬಿಸಿಲಿನ ಮಧ್ಯೆ ನಡೆಯುವುದು ಸಾಧ್ಯವಿಲ್ಲಪ್ಪ ಎಂದು ಬೆಂಗಳೂರಿಗೆ ವಾಪಸಾಗಿದ್ದಾರೆ. ಮತ್ತೆ ಕೆಲವರು ತಮ್ಮ ಇರುವಿಕೆಯನ್ನು 2 ದಿನಕ್ಕೆ ಸೀಮಿತಗೊಳಿಸಿ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಮಾಜಿ ಸಚಿವ, ಹಿರಿಯ ನಾಯಕ ಸಿ.ಟಿ. ರವಿ ಪಾದಯಾತ್ರೆಯಲ್ಲಿ ಅಧ್ಯಕ್ಷ ವಿಜಯೇಂದ್ರರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಬೆಳವಣಿಗೆ.

ಇದನ್ನೂ ಓದಿ: Raghava Sharma Nidle Column: ಮೀಸಲಾತಿ ನೀತಿ ಲೋಪ: ಸುಧಾರಣೆ ಬರೀ ಕನಸು ?

ಮೈಸೂರು ಲೋಕಸಭೆ ಟಿಕೆಟ್ ತಪ್ಪಿದ ವಿಷಯದಲ್ಲಿ ವಿಜಯೇಂದ್ರರ ಬಗ್ಗೆ ಬೇಸರ ಹೊಂದಿದ್ದ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿ, ಪಕ್ಷದ ಕುರಿತ ಜನಾಭಿಪ್ರಾಯ ಬಲಗೊಳಿಸುವಲ್ಲಿ ಕೈಜೋಡಿಸಿದ್ದಾರೆ. ಪ್ರತಾಪ್ ಸಿಂಹರ ಹರಿತದ ಮಾತುಗಳಿಗೆ ಆಕರ್ಷಿತರಾದ ಯುವಕರ ಪಡೆ ಇಲ್ಲಿರುವುದೂ ಕಾಣುತ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರರು ಕಾಂಗ್ರೆಸ್ ವಿರುದ್ಧದ ಹೋರಾಟದ ಜತೆಗೆ ತಮ್ಮ ಪೊಲಿಟಿಕಲ್ ಬ್ರಾಂಡ್ ಮೌಲ್ಯ ವೃದ್ಧಿಸುವ ತಂತ್ರವನ್ನೂ ಈ ಪಾದಯಾತ್ರೆ ಮೂಲಕ ಹೆಣೆದಿzರೆ. ತಾನು ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯೇಂದ್ರ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳದಿದ್ದರೂ, ಅವರ ತಂಡ ವ್ಯವಸ್ಥಿತವಾಗಿ ಅಂಥದ್ದೊಂದು ‘ನರೇಟಿವ್’ನ್ನು ಈ ಭಾಗದಲ್ಲಿ ತೇಲಿ ಬಿಡುತ್ತಿದೆ. ಈ ಮೂಲಕ ಭವಿಷ್ಯದಲ್ಲೂ ಪಕ್ಷ ಮತ್ತು ಸಂಘಟನೆಗೆ ಅವರದ್ದೇ ನಾಯಕತ್ವ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಬಿಗಿಗೊಳಿಸಲಾಗುತ್ತಿದೆ.

ಪಾದಯಾತ್ರೆಯಲ್ಲಿ ಮಧ್ಯಾಹ್ನದ ಭೋಜನ ವಿರಾಮದ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ವಿಜಯೇಂದ್ರರ ನೇತೃತ್ವದಲ್ಲಿ ಅಗತ್ಯ ಶೈಕ್ಷಣಿಕ ಸುಧಾರಣೆಗಳನ್ನು ಮಾಡಲಾಗು ವುದು ಎಂದೂ ಭರವಸೆ ನೀಡಲಾ ಗುತ್ತಿದೆ.

BYV with

ಬಳ್ಳಾರಿಯ ಅಲೆಮಾರಿ ಬುಡ್ಗ ಜಂಗಮ ವೇಷಗಾರರ ಸಮುದಾಯ ದೊಂದಿಗೆ ಬೆರೆಯುವುದು, ಕುರಿಗಾಹಿ ಕುಟುಂಬಗಳನ್ನು ಭೇಟಿ ಮಾಡಿದ ಚಿತ್ರಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದು.. ಇವೆಲ್ಲವೂ ವಿಜಯೇಂದ್ರ ಬ್ರಾಂಡ್ ಮೌಲ್ಯ ವೃದ್ಧಿಯ ಭಾಗಗಳೇ ಆಗಿವೆ. ಯಾವುದೇ ವಸ್ತು ಸೇಲ್ ಅಗಬೇಕೆಂದರೆ ಅದಕ್ಕೆ ಬ್ರಾಂಡ್ ಮುಖ್ಯ.

ಈ ನಿಟ್ಟಿನಲ್ಲಿ ತಮ್ಮನ್ನು ಜನರ ಹೃದಯದಲ್ಲಿ ಗಟ್ಟಿಗೊಳಿಸುವ ಹಾಗೂ ಆ ಮೂಲಕ ಅವರ ಆಕರ್ಷಣೆಗೆ ಪಾತ್ರವಾಗುವ ಯತ್ನ ವಿಜಯೇಂದ್ರರಿಂದ ನಡೆಯುತ್ತಿದೆ. ಅದು ತಪ್ಪೇನಲ್ಲ ಬಿಡಿ. ಒಟ್ಟಿನಲ್ಲಿ ಹಾಲಿ ಪಾದಯಾತ್ರೆಯು ಕೇವಲ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ಮಾತ್ರ ವಲ್ಲದೆ, ವಿಜಯೇಂದ್ರ ನಾಯಕತ್ವದ ‘ಬ್ರಾಂಡ್ ಮೌಲ್ಯ’ ವೃದ್ಧಿಸುವ ಮತ್ತು ಭವಿಷ್ಯದ ನಾಯಕತ್ವ ದ ನೆಲೆಗಟ್ಟನ್ನು ಗಟ್ಟಿಗೊಳಿಸುವ ಒಂದು ವ್ಯವಸ್ಥಿತ ರಾಜಕೀಯ ತಂತ್ರದಂತೆ ಗೋಚರಿಸುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟಿನ ಮೇಲುಗೈ ಸಾಧಿಸಿತ್ತು. ಬೆರಳೆಣಿಕೆ ಶಾಸಕರನ್ನು ಹೊಂದಿರುವ ಬಿಜೆಪಿಗೆ ಈ ಭಾಗದಲ್ಲಿ ಪಕ್ಷ ಸಂಘಟನೆ ಬಲಗೊಳ್ಳಬೇಕಿರುವುದರಿಂದ ಈ ಪಾದಯಾತ್ರೆ ಅಂಥದ್ದೊಂದು ಸಾಧ್ಯತೆಗೆ ನಾಂದಿ ಹಾಡಬಹುದು ಎಂಬ ನಿರೀಕ್ಷೆ ವಿಜಯೇಂದ್ರ ಸೇರಿ ಅನೇಕರದ್ದು.

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಪಡೆದು ಕೊಂಡಿದ್ದರೂ, ಪಾದಯಾತ್ರೆಯ ನಿರ್ಧಾರದಿಂದ ಹಿಂದೆ ಸರಿಯದ ಬಿಜೆಪಿ ನಾಯಕರು, ಮತ್ತಿತರೆ ಆಡಳಿತ ವೈಫಲ್ಯಗಳ ಬಗ್ಗೆ ಚರ್ಚಿಸುತ್ತಾ ಕಾಂಗ್ರೆಸ್‌ನ್ನು ಮೂಲೆಗುಂಪು ಮಾಡುವ ಯತ್ನದಲ್ಲಿದ್ದಾರೆ. ಆಂತರಿಕ ಬಿಕ್ಕಟ್ಟಿನಿಂದ ತತ್ತರಿಸಿ ದುರ್ಬಲಾವಸ್ಥೆ ಯಲ್ಲಿರುವ ಪಕ್ಷಕ್ಕೆ ಪಾದಯಾತ್ರೆ ಮದ್ದರೆಯುತ್ತಿದೆ.

ಯಾವುದೇ ರಾಜಕೀಯ ನಾಯಕ ಅಥವಾ ಪಕ್ಷಗಳಿಗೆ ಪಾದಯಾತ್ರೆಗಳು ಪೊಲಿಟಿಕಲ್ ಡಿವಿಡೆಂಡ್ ತಂದುಕೊಡುತ್ತವೆ. ಸಂಘಟನೆ ದೃಢವಾಗುವುದು ಮತ್ತು ಜನರ ನೋವುಗಳನ್ನು ನೈಜವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅವರ ಮನ ಗೆಲ್ಲಲು ಪಾದಯಾತ್ರೆ ಉತ್ತಮ ವೇದಿಕೆ. ಬಳ್ಳಾರಿ ರೆಡ್ಡಿಗಳ ಗಣಿ ಹಗರಣ ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ 2009ರಲ್ಲಿ ನಡೆಸಿದ್ದ ಬಳ್ಳಾರಿ ಪಾದಯಾತ್ರೆ ಅವರನ್ನು 2013ರಲ್ಲಿ ಅಧಿಕಾರದ ಕುರ್ಚಿಯಲ್ಲಿ ಕೂರಿಸಿತ್ತು.

ಆಂಧ್ರ ಪ್ರದೇಶದ ಮಾಜಿ ಸಿಎಂ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ವೈ.ಎಸ್. ಜಗನ್ ಅವರು ಕಾಂಗ್ರೆಸ್ ವಿರುದ್ಧ ನಡೆಸಿದ್ದ ಪಾದಯಾತ್ರೆ ವೈಎಸ್‌ಆರ್‌ಸಿಪಿ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಮಹತ್ವದ ಕೊಡುಗೆ ನೀಡಿತ್ತು. ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆ ಆ ಭಾಗದಲ್ಲಿ ಕಾಂಗ್ರೆಸ್ ಮತಗಳನ್ನು ಹೆಚ್ಚಿಸಿತು. ಕಳೆದ ಬಿಹಾರ ಚುನಾವಣೆಗೆ ಮುನ್ನ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ರಾಜ್ಯದುದ್ದಕ್ಕೂ ಪಾದಯಾತ್ರೆ ನಡೆಸಿದ್ದರು.

ಆದರೆ, ಅದು ಚುನಾವಣೆಯಲ್ಲಿ ಸೀಟುಗಳನ್ನು ತಂದುಕೊಡದಿದ್ದರೂ, ಬಿಹಾರದ ಮನೆ-ಮನ ಗಳಲ್ಲಿ ಅವರು ನೆಲೆ ಕಂಡುಕೊಂಡರು. ಅದನ್ನು ನಾನು ಕಣ್ಣಾರೆ ಕಂಡಿದ್ದೇನೆ ಕೂಡ. ಪ್ರಶಾಂತ್ ಕಿಶೋರ್ 5 ವರ್ಷದ ನಂತರ ರಾಜ್ಯದ ನಾಯಕ ಅಗಬಲ್ಲರು ಎಂದು ಯುವಕರು ಭವಿಷ್ಯ ನುಡಿಯುತ್ತಿದ್ದರು. ಅದಾಗಿ ಕೆಲ ತಿಂಗಳುಗಳ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಂದ ತೆರವಾಗಿದ್ದ ಬಾಂಕಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಜಯಭೇರಿ ಸಾಧಿಸಿರುವುದು ಜನ ಅವರ ಮೇಲೆ ಇರಿಸಿದ ನಂಬಿಕೆಗೆ ಸಾಕ್ಷಿ.

ಇಲ್ಲವಾದಲ್ಲಿ, ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೇರಿದ ಮೈತ್ರಿಕೂಟವೊಂದು ಅಧಿಕಾರ ಗಳಿಸಿದ ವರ್ಷಾಚರಣೆಗೆ ಮುನ್ನವೇ ರಾಷ್ಟ್ರೀಯ ಅಧ್ಯಕ್ಷರ ಸೀಟಿನಲ್ಲಿ ಸೋಲುವುದನ್ನು ಊಹಿಸ ಲಾದರೂ ಸಾಧ್ಯವೇ? ಹೀಗಾಗಿ, ಜನರೊಂದಿಗಿದ್ದೇವೆ ಎಂಬ ಸಂದೇಶ ಸಾರುವ ಪಾದಯಾತ್ರೆಗಳು ತತ್‌ಕ್ಷಣದ ಲಾಭ ಕೊಡದಿದ್ದರೂ, ನಂತರದಲ್ಲಿ ಫಲ ತಂದುಕೊಡುತ್ತವೆ ಎನ್ನುವುದನ್ನು ತಳ್ಳಿ ಹಾಕಲಾಗದು.

ಕಲ್ಯಾಣ ಕರ್ನಾಟಕದ ಪಾದಯಾತ್ರೆಯನ್ನು ವಿಜಯೇಂದ್ರ ಈ ದೃಷ್ಟಿಕೋನದಿಂದ ನೋಡು ತ್ತಿದ್ದಾರೆ. ಪಾದಯಾತ್ರೆಯಿಂದ ಮಾಜಿ ಸಚಿವ, ಅಕ್ರಮ ಗಣಿಗಾರಿಕೆ ಆರೋಪಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲುಗೆ ಲಾಭವಾಗಲಿದೆ ಎಂಬ ಚರ್ಚೆ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದೆ. ಆದರೂ, ಗಣಿ ಹಗರಣದ ಆರೋಪಿ ಜನಾರ್ದನ ರೆಡ್ಡಿ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಕೇಳಿದಾಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ಗಾದೆ ಮಾತು ನೆನಪಾಗುತ್ತಿದೆ ಎಂದು ವಿಪಕ್ಷಗಳು ಆಡಿಕೊಳ್ಳುತ್ತಿವೆ.

ವಿಜಯೇಂದ್ರ ಬಿರುಸಿನ ಪಾದಯಾತ್ರೆ ನಡೆಸುತ್ತಿರುವ ಮಧ್ಯೆಯೂ ಅವರು ರಾಜ್ಯಾಧ್ಯಕ್ಷರಾಗಿ ಮತ್ತೆ ಮುಂದುವರಿಯುತ್ತಾರಾ ಇಲ್ಲವಾ ಎಂಬ ಸ್ಪಷ್ಟತೆ ಕಾರ್ಯಕರ್ತರಲ್ಲಿ ಈಗಲೂ ಇಲ್ಲ. ಈ ಖಚಿತತೆ ಯನ್ನು ಹೈಕಮಾಂಡ್ ಇನ್ನೂ ನೀಡಿಲ್ಲ. ನವೆಂಬರ್‌ನಲ್ಲಿ ಅವಧಿ ಪೂರ್ಣಗೊಂಡರೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೇನೆ, ದಿಲ್ಲಿ ನಾಯಕರ ಆಶೀರ್ವಾದವಿದೆ ಎಂಬ ವಿಶ್ವಾಸ ವಿಜಯೇಂದ್ರರಲ್ಲಿದೆ. ಆದರೂ, ಅವರ ವಿರೋಧಿ ಬಣ- ನೇತೃತ್ವದಲ್ಲಿ ಬದಲಾವಣೆಯಾಗದೆ ವಿಧಿ ಇಲ್ಲ ಎಂದು ದಿಲ್ಲಿ ದೊರೆಗಳ ಕಿವಿ ಊದುವ ಯತ್ನ ಮಾಡುತ್ತಲೇ ಇದೆ. ಒಂದು ವೇಳೆ ಹೈಕಮಾಂಡ್ ಈ ಹಂತದಲ್ಲಿ ಬದಲಾವಣೆಗೆ ಮನಸ್ಸು ಮಾಡಿದರೆ ಅದು ಮತ್ತೊಂದು ಹಂತದ ಬಿಕ್ಕಟ್ಟಿಗೆ ಕಾರಣವಾಗಬಹುದು.

ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವ ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದು ಪಕ್ಷಕ್ಕೆ ಅನುಕೂಲವಾಗುವುದಕ್ಕಿಂತ ನಷ್ಟವೇ ಹೆಚ್ಚು. ಹೊಸ ನಾಯಕತ್ವ ಬೇಕು ಎನ್ನುವುದಿದ್ದರೆ ಅದನ್ನು ಮೊದಲೇ ಮಾಡಬೇಕಿತ್ತು. ಈಗ ನಾವು ವಿಜಯೇಂದ್ರರ ನಾಯಕತ್ವ ಒಪ್ಪಿ ಮುಂದುವರಿಯಬೇಕು ಎನ್ನುವುದು ತಟಸ್ಥ ಗುಂಪಿನಲ್ಲಿರುವ ಪಕ್ಷನಿಷ್ಠರ ಅನಿಸಿಕೆ.

ಕಂಪ್ಲಿಯಲ್ಲಿ ಪಾದಯಾತ್ರೆ ಸಾಗುತ್ತಿದ್ದ ವೇಳೆ ಕಲ್ಯಾಣ ಕರ್ನಾಟಕದ ಮುಖಂಡರೊಬ್ಬರ ಜತೆಗೆ ನಾನು ಹೆಜ್ಜೆ ಹಾಕುತ್ತಿದ್ದಾಗ, ಹೈಕಮಾಂಡ್ ಈ ಬಗ್ಗೆ ಖಚಿತತೆ ನೀಡದಿರುವುದು ನಮ್ಮೆಲ್ಲರನ್ನು ಗೊಂದಲದಲ್ಲಿ ಸಿಲುಕಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ನಿತಿನ್ ನಬಿನ್ ಯಾರೊಬ್ಬರೂ ಸ್ಪಷ್ಟವಾಗಿ ತಿಳಿಸುವುದಿಲ್ಲ. ಅದೇಕೆ ಈ ಅಸಡ್ಡೆ ಎಂದೇ ಅರ್ಥವಾಗುವುದಿಲ್ಲ ಎಂದು ಬೇಸರ ಹೊರಹಾಕಿದರು.

ಆರೆಸ್ಸೆಸ್‌ನಲ್ಲಿ ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ, ಮುಕುಂದ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ದೆಹಲಿಯಲ್ಲಿ ಬಿ.ಎಲ್.ಸಂತೋಷ್ ಅವರಿದ್ದರೂ, ರಾಜ್ಯ ಬಿಜೆಪಿಯ ಮನೆಯೊಂದು ಮೂರು ಬಾಗಿಲಿನ ಸಮಸ್ಯೆಯನ್ನು ಪರಿಹರಿಸದಿರುವುದು ನಮ್ಮಂತಹ ನೈಜ ಕಾರ್ಯಕರ್ತ‌ ರಿಗೆ ನೋವುಂಟು ಮಾಡಿದೆ. ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ ಮೇಲೆ ಅವರನ್ನು ಒಪ್ಪಿಕೊಂಡು ಹೋಗಬೇಕಲ್ಲವೇ? ಅವರದ್ದು ಕುಟುಂಬ ರಾಜಕಾರಣ ಎನ್ನುವು ದಾದರೆ ಅಧ್ಯಕ್ಷರನ್ನಾಗಿ ಮಾಡಿದ್ದೇಕೆ ಎಂದು ಪ್ರಶ್ನಿಸಿದರು ಅವರು.

ಯಡಿಯೂರಪ್ಪನವರ ಹಠಕ್ಕೆ ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಹಾಗಾದರೆ ನಮ್ಮಲ್ಯಾರಲ್ಲೂ ಅರ್ಹತೆ ಇಲ್ಲವೇ ಎಂಬ ಪ್ರಶ್ನೆಯನ್ನು ಮೊದಲಿನಿಂದಲೂ ಕೇಳುತ್ತಿರುವ ಕೆಲ ನಾಯಕರು ಈ ಪಾದಯಾತ್ರೆಗೆ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿಲ್ಲ. ಇದು ವಿಜಯೇಂದ್ರ ತಮ್ಮನ್ನು ನಾಯಕನನ್ನಾಗಿ ರೂಪಿಸಿಕೊಳ್ಳುವ, ಭವಿಷ್ಯದ ದೊಡ್ಡ ಹುದ್ದೆಗೆ ತಮ್ಮನ್ನು ಸಜ್ಜುಗೊಳಿಸಲು ಮಾಡುತ್ತಿರುವ ಪಾದಯಾತ್ರೆ ಎನ್ನುವುದು ಅವರ ಒಳ ಕೂಗು.

ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರಿಗಿಂತ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿರುವುದನ್ನು ನೋಡಿದರೆ, ತಮ್ಮ ನಾಯಕರಿಂದ ಅವರು ಮತ್ತಷ್ಟು ಬದ್ಧತೆ, ಪ್ರಾಮಾಣಿಕತೆ ಹಾಗೂ ಅಕ್ರಮಣ ಶೀಲತೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದೇ ಅರ್ಥ. ಇದು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಎ ನಾಯಕ ಮಹಾಶಯರಿಗೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ.

ಅದೇನೇ ಇರಲಿ, ಮುಂದಿನ ಚುನಾವಣೆಯಲ್ಲಿ ಸಿಎಂ ಡಿಕೆ ಶಿವಕುಮಾರ್‌ರನ್ನು ಎದುರಿಸಲು ಬಿಜೆಪಿ ಬಳಿ ಗಟ್ಟಿ ನಾಯಕತ್ವವಿಲ್ಲದಿದ್ದರೆ ಮತದಾರರು ಮತ್ತೊಮ್ಮೆ ಮನೆಗೆ ಕಳುಹಿಸುವುದು ನಿಶ್ಚಿತ. ಪಿಎಂ ಮೋದಿ, ಅಮಿತ್ ಶಾ ಮುಖ ನೋಡಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎನ್ನುವುದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿ, ಸಂಘಟನೆಗೆ ನಾಯಕತ್ವದ ಖಚಿತತೆ ಸಿಗುವ ದೃಷ್ಟಿಯಿಂದ ಪಾದಯಾತ್ರೆಯ ನಂತರದ ದಿನಗಳು ಹಾಗೂ ಹೈಕಮಾಂಡ್ ಕ್ರಮಗಳು ನಿರ್ಣಾಯಕ ಪಾತ್ರ ವಹಿಸಲಿದೆ.

ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಚುನಾವಣೆಗಳಲ್ಲಿ ನಾಯಕತ್ವ ಎಂಬ ಅಂಶ ಪ್ರಮುಖ ಪಾತ್ರ ವಹಿಸಿವೆ. ರಾಜ್ಯ ಚುನಾವಣೆಗಳಲ್ಲಿ ಪಕ್ಷಕ್ಕಿಂತ ಹೆಚ್ಚು ನಾಯಕತ್ವವೇ ಜನರನ್ನು ಹೆಚ್ಚು ಆಕರ್ಷಿಸಿದೆ. ಉತ್ತರ ಭಾರತದ ರಾಜ್ಯಗಳಂತೆ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುವುದು ಈ ಭಾಗದಲ್ಲಿ ಹೆಚ್ಚು ಫಲ ಕೊಟ್ಟಿಲ್ಲ.

ಇತ್ತೀಚಿನ ವರ್ಷಗಳ ಉದಾಹರಣೆ ನೀಡುವುದಾದರೆ ಕರ್ನಾಟಕದಲ್ಲಿ ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ತಮಿಳುನಾಡಿನಲ್ಲಿ ಎಂ. ಕರುಣಾನಿಧಿ, ಜಯಲಲಿತಾ, ಈಗ ವಿಜಯ್ ಜೋಸೆಫ್, ಕೇರಳದಲ್ಲಿ ಕರುಣಾಕರನ್, ಅಚ್ಯುತಾ ನಂದನ್, ಪಿನರಾಯಿ ವಿಜಯನ್, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಜಗನ್ ರೆಡ್ಡಿ, ತೆಲಂಗಾಣ ದಲ್ಲಿ ಚಂದ್ರಶೇಖರ ರಾವ್, ಈಗ ರೇವಂತ್ ರೆಡ್ಡಿ..ಹೀಗೆ ನಾಯಕತ್ವ ಎನ್ನುವುದು ಜನ-ಮನ ಸೆಳೆಯುವಲ್ಲಿ ಇಲ್ಲಿ ಅತ್ಯಂತ ನಿರ್ಣಾಯಕ ಕೊಡುಗೆ ನೀಡಿದೆ. ‌

ತಮಿಳುನಾಡು ಬಿಜೆಪಿ ನಾಯಕನಾಗಿದ್ದ ಅಣ್ಣಾಮಲೈ ಮಾತನ್ನು ಕಡೆಗಣಿಸಿ, ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡ ಪರಿಣಾಮ ಏನಾಯ್ತು? ಅಣ್ಣಾಮಲೈರಂತಹ ಪ್ರತಿಭೆ ಬಿಜೆಪಿ ಸಹವಾಸ ಸಾಕು ಎಂದು ತಮ್ಮದೇ ಹಾದಿ ಕಂಡುಕೊಳ್ಳಲು ಮುಂದಾದರು. ನಾಯಕತ್ವ ಬೆಳೆಸುವ ಜತೆಗೆ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಅಣ್ಣಾಮಲೈ ತಾಜಾ ಉದಾಹರಣೆ.

ಕರ್ನಾಟಕದಲ್ಲೂ ರಾಜ್ಯ ಬಿಜೆಪಿಗೆ ವಿಜಯೇಂದ್ರರೇ ನಾಯಕ ಎನ್ನುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ದಿಲ್ಲಿ ನಾಯಕರು ಹೇಳಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಈಗ ಪಾದಯಾತ್ರೆ ಮೂಲಕ ವಿಜಯೇಂದ್ರ ತಮ್ಮ ಸ್ಥಾನ ಮತ್ತಷ್ಟು ಭದ್ರಗೊಳಿಸುತ್ತಿದ್ದಾರೆ. ಪಾದಯಾತ್ರೆ ಬಳಿಕ ನವೆಂಬರ್ ಅಂತ್ಯಕ್ಕೆ ಮುನ್ನ ಅವರು 31 ಜಿಲ್ಲೆಗಳ ಕ್ಷೇತ್ರವಾರು ಪ್ರವಾಸಗಳನ್ನು ಮಾಡುವ ಉದ್ದೇಶ ಹೊಂದಿದ್ದಾರೆ. ಇಷ್ಟೆಲ್ಲ ಕಸರತ್ತು ನಡೆಸಿದ ಮೇಲೂ ಹೈಕಮಾಂಡ್ ನಾಯಕತ್ವದ ಬದಲಾವಣೆಯ ಅಪಾಯಕಾರಿ ಸಾಹಸ ಮಾಡಬಹುದೇ?