ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬದುಕನ್ನು ಎದುರಿಸಲು ಭಗೀರಥ ಪ್ರಯತ್ನ ಬೇಕು

ತಪೋನಿರತರಾದ ಕಪಿಲ ಮುನಿಗಳು ಕೋಪಗೊಂಡು ಕಣ್ಬಿಟ್ಟಾಗ ರಾಜಕುಮಾರರು ಸುಟ್ಟು ಬೂದಿ ಯಾದರು. ತನ್ನ ಚಿಕ್ಕಪ್ಪಂದಿರನ್ನು ಹುಡುಕುತ್ತಾ ಬಂದಂತಹ ಅದೇ ವಂಶದ ಅಂಶುಮಂತನು, ಕಪಿಲ ಮಹರ್ಷಿಯ ಆಶ್ರಮದಲ್ಲಿಯಾಗದ ಕುದುರೆಯನ್ನು ಮತ್ತು ಬೃಹದಾದ ಬೂದಿಯ ರಾಶಿಯನ್ನು ನೋಡಿದನು.

ಬದುಕನ್ನು ಎದುರಿಸಲು ಭಗೀರಥ ಪ್ರಯತ್ನ ಬೇಕು

ಒಂದೊಳ್ಳೆ ಮಾತು

rgururaj628@gmail.com

ಕೋಸಲ ದೇಶದ ದೊರೆ ಸಗರ ಮಹಾರಾಜನು ಅತ್ಯಂತ ಪರಾಕ್ರಮಿಯೂ, ಧರ್ಮಿಷ್ಟನೂ ಆಗಿದ್ದನು. ಮಹತ್ವಾಕಾಂಕ್ಷಿಯಾಗಿ ತೊಂಭತ್ತೊಂಭತ್ತು ಅಶ್ವಮೇಧ ಯಾಗಗಳನ್ನು ನೆರವೇರಿಸಿದ ಸಗರ ಮಹಾರಾಜನಿಗೆ ನೂರನೇ ಯಾಗ ಮಾಡುವ ಆಲೋಚನೆ ಬಂದಿತು. ಯಾಗದ ಪ್ರಕ್ರಿಯೆ ಯಂತೆ ಕುದುರೆಯನ್ನು ಅಲಂಕರಿಸಿ, ಪೂಜಿಸಿ ತನ್ನ ಸೈನ್ಯವನ್ನು ಸಿದ್ಧಪಡಿಸಿ ಕುದುರೆಯ ರಕ್ಷಣೆಗೆ ಕಳುಹಿಸಿದನು. ಸಗರ ಮಹಾರಾಜನ 100ನೇ ಅಶ್ವಮೇಧಯಾಗಕ್ಕೆ ವಿಘ್ನವನ್ನುಂಟು ಮಾಡಲು ಇಂದ್ರನು ರಾಕ್ಷಸರೂಪದಲ್ಲಿ ಬಂದು, ಯಾಗದ ಕುದುರೆಯನ್ನು ಅಪಹರಿಸಿ ಪಾತಾಳ ಲೋಕದಲ್ಲಿ ಕಪಿಲ ಮಹರ್ಷಿಯ ಆಶ್ರಮದಲ್ಲಿ ಕಟ್ಟಿ ಹಾಕಿದನು.

ಕುದುರೆ ಅಪಹರಣವಾದ ವಿಷಯ ಕೇಳಿ, ತನ್ನ ಅರವತ್ತು ಸಾವಿರ ಮಕ್ಕಳಿಗೆ ಕುದುರೆಯನ್ನು ಹುಡುಕಿಕೊಂಡು ಬರುವಂತೆ ಸಗರ ರಾಜ ಆದೇಶವಿತ್ತನು. ಆ ರಾಜಕುಮಾರರು ಭೂ ಲೋಕದಲ್ಲಿ ಹುಡುಕಿ ನಂತರದಲ್ಲಿ ಪಾತಾಳ ಲೋಕದ ಕಪಿಲ ಮುನಿಯ ಆಶ್ರಮವನ್ನು ತಲುಪಿದರು. ಅಲ್ಲಿ ಯಾಗದ ಕುದುರೆಯನ್ನು ನೋಡಿದ ರಾಜಕುಮಾರರು ಕಪಿಲ ಮಹರ್ಷಿಯ ಬಗ್ಗೆ ತಪ್ಪು ತಿಳಿದು ಅವರ ತಪಸ್ಸಿಗೆ ಭಂಗವನ್ನು ಉಂಟುಮಾಡಿದರು.

ತಪೋನಿರತರಾದ ಕಪಿಲ ಮುನಿಗಳು ಕೋಪಗೊಂಡು ಕಣ್ಬಿಟ್ಟಾಗ ರಾಜಕುಮಾರರು ಸುಟ್ಟು ಬೂದಿಯಾದರು. ತನ್ನ ಚಿಕ್ಕಪ್ಪಂದಿರನ್ನು ಹುಡುಕುತ್ತಾ ಬಂದಂತಹ ಅದೇ ವಂಶದ ಅಂಶುಮಂತನು, ಕಪಿಲ ಮಹರ್ಷಿಯ ಆಶ್ರಮದಲ್ಲಿಯಾಗದ ಕುದುರೆಯನ್ನು ಮತ್ತು ಬೃಹದಾದ ಬೂದಿಯ ರಾಶಿಯನ್ನು ನೋಡಿದನು.

ಇದನ್ನೂ ಓದಿ: Roopa Gururaj Column: ಏಕ ಶ್ಲೋಕಿ ಮಜ್ಜಿಗೆ ರಾಮಾಯಣದ ಸಾರ

ಅಂಶುಮಂತನಿಗೆ ಗರುಡನು ಯಥಾರ್ಥವಾಗಿ ವಿಚಾರವನ್ನು ತಿಳಿಸಿ ಮೊದಲು ಯಾಗವನ್ನು ಸಂಪನ್ನಗೊಳಿಸು ನಂತರದಲ್ಲಿ ದೇವಗಂಗೆಯನ್ನು ಈ ಬೂದಿ ರಾಶಿಯ ಮೇಲೆ ಹರಿಸಿದರೆ ನಿನ್ನ ಪಿತೃವರ್ಗಕ್ಕೆ ಸದ್ಗತಿಯಾಗುವುದು ಎಂದು ತಿಳಿಸಿದನು.

ಅಂತೆಯೇ ಅಂಶುಮಂತನು ಯಾಗದ ಕುದುರೆ ಸಮೇತನಾಗಿ ಅಯೋಧ್ಯೆಗೆ ಹಿಂದಿರುಗಿದನು. ತನ್ನ ಚಿಕ್ಕಪ್ಪಂದಿರ ವಿಚಾರವನ್ನು ಸಗರನಿಗೆ ತಿಳಿಸಿದನು. ಯಾಗದ ದೀಕ್ಷೆಯಲ್ಲಿದ್ದ ಸಗರ ಮಹಾರಾಜ ಯಾಗವನ್ನು ಸಂಪನ್ನಗೊಳಿಸಿ ನಂತರದಲ್ಲಿ ತನ್ನ ಮಹತ್ವಾಕಾಂಕ್ಷೆಗೆ ಮಕ್ಕಳು ಬಲಿಯಾದ ದುಃಖಕ್ಕೆ ಆ ಜವಾಬ್ದಾರಿಯನ್ನು ಅಂಶುಮಂತನಿಗೆ ವಹಿಸಿ ತಪಸ್ಸನ್ನು ಮಾಡುವ ಸಂಕಲ್ಪದಿಂದ ರಾಜ್ಯವನ್ನು ತೊರೆದನು. ಮುಂದಿನ ರಾಜರುಗಳಾದ ಅಂಶು ಮಂತ ಹಾಗು ಅವನ ಪುತ್ರ ದಿಲೀಪನ ಪೀಳಿಗೆ ಯಲ್ಲಿಯೂ ದೇವಗಂಗೆಯನ್ನು ಭೂಮಿಗೆ ತರಲಾಗಲಿಲ್ಲ.

ಮುಂದಿನ ಕೋಸಲ ದೇಶದ ಭಗೀರಥ ರಾಜನು ಬ್ರಹ್ಮದೇವನನ್ನು ಕುರಿತು ತಪಸ್ಸನ್ನು ಆಚರಿಸಿ ದನು. ಬ್ರಹ್ಮನು ಪ್ರಸನ್ನನಾಗಿ ಗಂಗೆಯನ್ನು ಕಳುಹಿಸಿ ಕೊಡುತ್ತೇನೆ ಆದರೆ ಆ ರಭಸಕ್ಕೆ ಭೂ ಮಂಡಲವೇ ನಾಶವಾಗುತ್ತದೆ. ಅವಳ ರಭಸವನ್ನು ತಡೆಯಲು ಪರಶಿವನಿಗೆ ಮಾತ್ರ ಸಾಧ್ಯ. ಆದ್ದರಿಂದ ಈಶ್ವರನ ಮನವೊಲಿಸು ಆನಂತರದಲ್ಲಿ ಗಂಗೆಯನ್ನು ಕಳುಹಿಸುವೆ ಎಂದರು.

ಅದರಂತೆ ಭಗೀರಥನು ಏಕಾಗ್ರಚಿತ್ತನಾಗಿ ಮತ್ತೆ ತಪಸ್ಸನ್ನು ಆಚರಿಸಿದನು. ಅದರ ಫಲವಾಗಿ ಈಶ್ವರನು ಗಂಗೆಯ ರಭಸವನ್ನು ತನ್ನ ಜಟೆಯಲ್ಲಿ ಕಟ್ಟಿ ಹಾಕಿ ಶಾಂತಳಾದ ನಂತರದಲ್ಲಿ ಭಗೀರಥನನ್ನು ಹಿಂಬಾಲಿಸುವಂತೆ ಆದೇಶಿಸಿ ಗಂಗೆಯನ್ನು ಭುವಿಗೆ ಬಿಟ್ಟನು. ಭಗೀರಥ ಜಹ್ನು ಋಷಿಗಳ ಆಶ್ರಮವನ್ನು ಪ್ರವೇಶಿಸಿದಂತೆಯೇ ಗಂಗೆಯೂ ಸಹ ಪ್ರವೇಶಿಸಿದಳು. ಆದರೆ ಪ್ರವಾಹದ ಪರಿಸ್ಥಿತಿ ಎದುರಾದ ನಿಮಿತ್ತವಾಗಿ ಮಹರ್ಷಿಯು ಗಂಗೆಯನ್ನು ಕುಡಿದುಬಿಟ್ಟರು.

ಭಗೀರಥನು ಜಹ್ನುಮುನಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿ ನಮ್ರತೆಯಿಂದ ಗಂಗೆಯನ್ನು ಹರಿಯ ಬಿಡುವಂತೆ ಪ್ರಾರ್ಥಿಸಿದನು. ಮನಕರಗಿದ ಋಷಿಗಳು ಗಂಗೆಯನ್ನು ತಮ್ಮ ಕಿವಿಯಿಂದ ಹೊರ ಬಿಟ್ಟರು. ಆದ್ದರಿಂದ ಗಂಗೆಗೆ ಜಾಹ್ನವೀ ಎಂಬ ಹೆಸರೂ ಬಂತು. ಭಗೀರಥನು ಪಾತಾಳ ಸೇರಿ ಅಲ್ಲಿದ್ದ ಭಸ್ಮರಾಶಿಯ ಮುಂದೆನಿಂತು ‘ತಾಯಿ ಗಂಗೆ ನನ್ನ ಪೂರ್ವಿಕರು ಸುಟ್ಟು ಬೂದಿಯಾಗಿ ದ್ದಾರೆ. ಈ ಭಸ್ಮರಾಶಿಯ ಮೇಲೆ ಪ್ರವಹಿಸಿ ಅವರ ಆತ್ಮಗಳಿಗೆ ಮೋಕ್ಷ ಕೊಡು’ ಎಂದು ಪ್ರಾರ್ಥಿಸಿದನು. ಅದರಂತೆ ಗಂಗೆಯು ಭಸ್ಮರಾಶಿಯ ಮೇಲೆ ಹರಿದು ಸಗರ ಮಹಾರಾಜನ ಅರವತ್ತು ಸಾವಿರ ಮಕ್ಕಳನ್ನು ಪಾಪಮುಕ್ತರಾಗಿ ಮಾಡಿ ಸ್ವರ್ಗ ಸೇರಿಸಿದಳು. ಅದೆಷ್ಟೇ ಕಷ್ಟ ಎದುರಾದರೂ ತನ್ನ ಪ್ರಯತ್ನವನ್ನು ಬಿಡದೆ ಮತ್ತೆ ಮತ್ತೆ ತಪಸ್ಸು ಮಾಡಿ, ಮನವೊಲಿಸಿ ಕೊನೆಗೂ ಗಂಗೆಯನ್ನು ತನ್ನ ಪೂರ್ವಜರ ಅಸ್ತಿಯ ಮೇಲೆ ಹರಿಸಿ ಪಾಪಮುಕ್ತರನ್ನಾಗಿ ಮಾಡಿದ ಭಗೀರಥನ ಪ್ರಯತ್ನ ನಮ್ಮೆಲ್ಲರ ಜೀವನಕ್ಕೂ ದೊಡ್ಡ ಪ್ರೇರಣೆ. ಬದುಕಿನಲ್ಲಿ ಅಂದುಕೊಂಡದ್ದನ್ನು ಸಾಧಿಸಬೇಕಾದರೆ ‘ಭಗೀರಥ ಪ್ರಯತ್ನ’ ಮಾಡಲೇಬೇಕು. ಅದಕ್ಕೆ ಭಗವಂತನೂ ಒಲಿದು ಸತ್ಫಲ ಸಿಗುವುದರಲ್ಲಿ ಯಾವ ಸಂಶಯವೂ ಇಲ್ಲ.