Vishweshwar Bhat Column: ಆರೋಗ್ಯ ಅಪಹರಿಸಿದ ಇಂಟರ್ʼನೆಟ್
ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಂಶೋಧನೆಗಳಿಗಿಂತ ಹೆಚ್ಚಾಗಿ ಕ್ಲಿಕ್ಬೈಟ್ ಹೆಡ್ಲೈನ್‌ಗಳು ಹೇಗೆ ವೈರಲ್ ಆಗುತ್ತವೆ ಎಂಬುದನ್ನು ವಿವರಿಸಲಾಗಿದೆ. ಕ್ಯಾನ್ಸರ್ ಗುಣಪಡಿಸುವ ಸಣ್ಣ ಮನೆಮದ್ದು ಎಂಬ ಸುಳ್ಳು ಸುದ್ದಿಗಳು ಜಾಗತಿಕ ಆರೋಗ್ಯ ವ್ಯವಸ್ಥೆಗೆ ಎಷ್ಟು ದೊಡ್ಡ ಪೆಟ್ಟು ನೀಡುತ್ತಿವೆ ಎಂಬುದನ್ನು ಅವರು ಕೊಹೆನ್ ಎಚ್ಚರಿಸಿದ್ದಾರೆ.
-
ಸಂಪಾದಕರ ಸದ್ಯಶೋಧನೆ
ಖ್ಯಾತ ತನಿಖಾ ಪತ್ರಕರ್ತೆ ಮತ್ತು ವೈದ್ಯಕೀಯ ವರದಿಗಾರ್ತಿ ಡೆಬೋರಾ ಕೊಹೆನ್ ಬರೆದ ’Bad Influence: How the Internet Hijacked Our Health’ ಕೃತಿಯನ್ನು ಓದುತ್ತಿದ್ದೆ. ಇದು ಇಂದಿನ ಡಿಜಿಟಲ್ ಯುಗದಲ್ಲಿ ಆರೋಗ್ಯ ಮತ್ತು ತಂತ್ರಜ್ಞಾನದ ನಡುವಿನ ಅಪಾಯಕಾರಿ ಸಂಬಂಧವನ್ನು ಬಿಚ್ಚಿಡುತ್ತದೆ.
ನಮ್ಮ ಕೈಯಲ್ಲಿರುವ ಸ್ಮಾರ್ಟ್ʼಫೋನ್‌ಗಳು ನಮಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಸಾಧನಗಳಂತೆ ಕಂಡರೂ, ಅವು ವಾಸ್ತವದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಹೈಜಾಕ್ ಮಾಡುತ್ತಿವೆ ಎಂಬುದನ್ನು ಕೊಹೆನ್ ಇಲ್ಲಿ ವಿವರಿಸಿದ್ದಾರೆ.
ತಂತ್ರಜ್ಞಾನ ಕಂಪನಿಗಳು ಕೇವಲ ಲಾಭಕ್ಕಾಗಿ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜತೆ ಹೇಗೆ ಆಟವಾಡುತ್ತಿವೆ ಎಂಬುದು ಈ ಪುಸ್ತಕದ ಮುಖ್ಯ ವಸ್ತು. ಈ ಪುಸ್ತಕದಲ್ಲಿ ಅಲ್ಗಾರಿದಮ್‌ಗಳ ಬಗ್ಗೆ ಚರ್ಚಿಸಲಾಗಿದೆ. ನಾವು ಒಮ್ಮೆ ತೂಕ ಇಳಿಸುವ ಬಗ್ಗೆ ಅಥವಾ ಯಾವುದೋ ಕಾಯಿಲೆಯ ಬಗ್ಗೆ ಸರ್ಚ್ ಮಾಡಿದರೆ, ಇಂಟರ್‌ನೆಟ್ ನಮಗೆ ಅಂಥ ಸಾವಿರಾರು ಮಾಹಿತಿಗಳ ಸುರಿಮಳೆಗೈಯು ತ್ತದೆ. ಇದರಲ್ಲಿ ವೈಜ್ಞಾನಿಕವಾಗಿ ಸಾಬೀತಾಗದ ಸೂಪರ್ ಫುಡ್‌ಗಳು, ಅಪಾಯಕಾರಿ ಡಯಟ್‌ಗಳು ಮತ್ತು ನಕಲಿ ಔಷಧಿಗಳ ಜಾಹೀರಾತುಗಳೇ ಹೆಚ್ಚಿರುತ್ತವೆ. ಇದನ್ನು ಕೊಹೆನ್ ಮಾಹಿತಿಯ ‘ವಿಷಪೂರಿತ ಆಹಾರ’ ಎಂದು ಕರೆಯುತ್ತಾರೆ.
ಇದನ್ನೂ ಓದಿ: Vishweshwar Bhat Column: ಬ್ರೀಫ್ ಫೀ ಎಂದರೇನು ?
ನಮ್ಮ ಸರ್ಚ್ ಹಿಸ್ಟರಿ ಮತ್ತು ನಡವಳಿಕೆಯನ್ನು ನೋಡಿ ಅಲ್ಗಾರಿದಮ್‌ಗಳು ನಮಗೆ ನೀಡುವ ಜಾಹೀರಾತುಗಳು ಎಷ್ಟು ಭೀಕರವಾಗಿರುತ್ತವೆ ಎಂದರೆ, ಒಬ್ಬ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ ಅಥವಾ ಯಾವುದೋ ಆರೋಗ್ಯದ ಸಮಸ್ಯೆಯಿಂದ ಆತಂಕಗೊಂಡಾಗ ಅಲ್ಗಾರಿದಮ್‌ಗಳು ಅದನ್ನು ಪತ್ತೆ ಹಚ್ಚುತ್ತವೆ.
ಅಂಥ ಸಮಯದಲ್ಲಿ ನಮಗೆ ಅತ್ಯಂತ ದುಬಾರಿ ಮತ್ತು ಅನಗತ್ಯವಾದ ‘ಆರೋಗ್ಯ ಉತ್ಪನ್ನ’ ಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗುತ್ತದೆ. ನಾವು ಬಳಸುವ ಫಿಟ್ನೆಸ್ ಆಪ್‌ಗಳಲ್ಲಿ ‘ಡಾರ್ಕ್ ಪ್ಯಾಟರ್ನಸ್’ ಎಂಬ ತಂತ್ರವನ್ನು ಬಳಸಲಾಗುತ್ತದೆ.
ಉದಾಹರಣೆಗೆ, ನಿಮ್ಮ ವ್ಯಾಯಾಮವನ್ನು ಒಂದು ಆಟದಂತೆ ಬಿಂಬಿಸಿ, ನೀವು ಒಂದು ದಿನ ವ್ಯಾಯಾಮ ಮಾಡದಿದ್ದರೆ ಅದು ನಿಮಗೆ ಅಪರಾಧ ಪ್ರಜ್ಞೆ ಮೂಡಿಸುತ್ತದೆ. ಇದು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಬದಲು ಒತ್ತಡವನ್ನು ಹೆಚ್ಚು ಮಾಡುತ್ತದೆ. ಈ ಆಪ್‌ಗಳಿಂದ ಹೊರಬರುವುದು ಅಥವಾ ನಿಮ್ಮ ಡೇಟಾ ಅಳಿಸುವುದು ಎಷ್ಟು ಸಂಕೀರ್ಣವಾಗಿರುತ್ತದೆ ಎಂದರೆ, ಜನರು ಅನಿವಾರ್ಯವಾಗಿ ಅದರ ಭಾಗವಾಗಿಯೇ ಉಳಿಯುತ್ತಾರೆ.
ಇಂದಿನ ಕಾಲದಲ್ಲಿ ಜನರು ವೈದ್ಯರಿಗಿಂತ ಹೆಚ್ಚಾಗಿ ಇನ್ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ಇನ್ಲುಯೆನ್ಸರ್‌ಗಳನ್ನು ನಂಬುತ್ತಿದ್ದಾರೆ. ಅನೇಕ ಇನ್ಲುಯೆನ್ಸರ್‌ಗಳು ಯಾವುದೇ ವೈದ್ಯಕೀಯ ಹಿನ್ನೆಲೆ ಇಲ್ಲದಿದ್ದರೂ ತಮಗೆ ಹಣ ನೀಡುವ ಕಂಪನಿಗಳ ಉತ್ಪನ್ನಗಳನ್ನು ‘ಆರೋಗ್ಯವರ್ಧಕ’ ಎಂದು ಪ್ರಚಾರ ಮಾಡುತ್ತಾರೆ.
ಇದು ಯುವಜನತೆಯಲ್ಲಿ ತಪ್ಪು ತಿಳಿವಳಿಕೆ ಮತ್ತು ಹೊಸ ರೀತಿಯ ಕಾಯಿಲೆಗಳಿಗೆ ಕಾರಣ ವಾಗುತ್ತಿದೆ. ನಾವು ಬಳಸುವ ಹೆಲ್ತ ಆಪ್‌ಗಳು ನಮ್ಮನ್ನು ನಿರಂತರವಾಗಿ ನೋಟಿಫಿಕೇಶನ್‌ಗಳ ಮೂಲಕ ಆತಂಕಕ್ಕೆ ತಳ್ಳುತ್ತವೆ. ಇಷ್ಟು ಹೆಜ್ಜೆ ನಡೆದಿಲ್ಲ, ನಿಮ್ಮ ಹೃದಯ ಬಡಿತದಲ್ಲಿ ವ್ಯತ್ಯಾಸ ವಾಗಿದೆ ಎಂಬ ಎಚ್ಚರಿಕೆಗಳು ಜನರಲ್ಲಿ ಸೈಬರ್ಕೊಂಡ್ರಿಯಾ ಎಂಬ ಹೊಸ ರೀತಿಯ ಮಾನಸಿಕ ಸಮಸ್ಯೆಯನ್ನು ಹುಟ್ಟುಹಾಕುತ್ತಿವೆ.
ಅಂದರೆ, ಸಣ್ಣ ಪುಟ್ಟ ಲಕ್ಷಣಗಳಿಗೂ ಇಂಟರ್‌ನೆಟ್ ನೋಡಿ ದೊಡ್ಡ ಕಾಯಿಲೆ ಇರಬಹುದೆಂದು ಹೆದರುವುದು. ನಾವು ನಮಗೇ ಅರಿಯದಂತೆ ನಮ್ಮ ಆರೋಗ್ಯದ ಡೇಟಾವನ್ನು ಈ ಆಪ್‌ಗಳಿಗೆ ನೀಡುತ್ತೇವೆ. ಈ ಡೇಟಾವನ್ನು ವಿಮಾ ಕಂಪನಿಗಳು ಮತ್ತು ಫಾರ್ಮಾ ಕಂಪನಿಗಳು ಖರೀದಿಸುತ್ತವೆ.
ನಿಮ್ಮ ಅನಾರೋಗ್ಯದ ಸ್ಥಿತಿಯನ್ನು ನೋಡಿ ನಿಮಗೆ ಹೆಚ್ಚಿನ ಬೆಲೆಯ ವಿಮೆ ಅಥವಾ ಅನಗತ್ಯ ಔಷಧಿಗಳನ್ನು ಮಾರಾಟ ಮಾಡುವ ಜಾಲವನ್ನು ಈ ಕೃತಿಯಲ್ಲಿ ಬಯಲು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳು ಸೃಷ್ಟಿಸಿರುವ ಪರ್ಫೆಕ್ಟ್ ಬಾಡಿ ಚಿತ್ರಣವು ಹದಿಹರೆಯದವರಲ್ಲಿ ಖಿನ್ನತೆ ಮತ್ತು ಈಟಿಂಗ್ ಡಿಸಾರ್ಡರ್ ಗಳಿಗೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಕೊಹೆನ್ ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಂಶೋಧನೆಗಳಿಗಿಂತ ಹೆಚ್ಚಾಗಿ ಕ್ಲಿಕ್ಬೈಟ್ ಹೆಡ್ಲೈನ್‌ಗಳು ಹೇಗೆ ವೈರಲ್ ಆಗುತ್ತವೆ ಎಂಬುದನ್ನು ವಿವರಿಸಲಾಗಿದೆ. ಕ್ಯಾನ್ಸರ್ ಗುಣಪಡಿಸುವ ಸಣ್ಣ ಮನೆಮದ್ದು ಎಂಬ ಸುಳ್ಳು ಸುದ್ದಿಗಳು ಜಾಗತಿಕ ಆರೋಗ್ಯ ವ್ಯವಸ್ಥೆಗೆ ಎಷ್ಟು ದೊಡ್ಡ ಪೆಟ್ಟು ನೀಡುತ್ತಿವೆ ಎಂಬುದನ್ನು ಅವರು ಕೊಹೆನ್ ಎಚ್ಚರಿಸಿದ್ದಾರೆ. ಈ ಪುಸ್ತಕವು ನಮ್ಮ ಫೋನ್‌ಗಳು ನಮಗೆ ಉಪಕಾರಿಯಾಗಿದೆಯೇ ಅಥವಾ ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿವೆಯೇ ಎಂಬ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ.