ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shishir Hegde Column: ಮರದ ವಿಮಾನ ಅರ್ಧ ಮೈಲಿ ಹಾರಿದ ಕಥೆ !

ಅಮೆರಿಕದಲ್ಲಿ ಇಂತಹ ಎಷ್ಟು ವಸ್ತುಸಂಗ್ರಹಾಲಯಗಳಿರಬಹುದು ಹೇಳಿ? ಒಬ್ಬನ ಜೀವಮಾನ ದಲ್ಲಿ ನೋಡಿ ಮುಗಿಸಲಿಕ್ಕಾಗದಷ್ಟು. ಎಷ್ಟು? 35 ಸಾವಿರ..! ಹೌದು- ಅಷ್ಟು. ಜಗತ್ತಿನ ಅತ್ಯಂತ ಹೆಚ್ಚು ವಸ್ತುಸಂಗ್ರಹಾಲಯವಿರುವ ದೇಶ ಅಮೆರಿಕ. ಅದರಲ್ಲಿ ಚಿಕ್ಕ ಮನೆಯ ಗಾತ್ರದ ಸುಮಾರು 25 ಸಾವಿರ, ಮಧ್ಯಮ ಗಾತ್ರದ 7-8 ಸಾವಿರ ಮತ್ತು ಅಂತಾರಾಷ್ಟ್ರೀಯ ಮಟ್ಟದ - ಬೃಹದ್ ಗಾತ್ರದ ಸುಮಾರು ಒಂದು ಸಾವಿರ ವಸ್ತುಸಂಗ್ರಹಾಲಯಗಳಿವೆ.

Shishir Hegde Column: ಮರದ ವಿಮಾನ ಅರ್ಧ ಮೈಲಿ ಹಾರಿದ ಕಥೆ !

-

ಶಿಶಿರಕಾಲ

ಹಾ! ನಾನಿವತ್ತು ನಿಮಗೊಂದು ಕಥೆ ಹೇಳಬೇಕು. ಕಥೆ ಸ್ವಲ್ಪ ಹಳೆಯದು, ಅಮೆರಿಕದ್ದು. ಮಜವಾಗಿದೆ. ಆದರೆ ಕಥೆಗಿಂತ ಮೊದಲು ಒಂದು ಚಿಕ್ಕ ಪೀಠಿಕೆ ಬೇಕಲ್ಲ. ನಿಮಗೆ ಗೊತ್ತಿರ ಬಹುದು, ಅಮೆರಿಕ ದೇಶಕ್ಕೆ ನಮ್ಮ ದೇಶದಂತೆ ಸಾವಿರಾರು ವರ್ಷದ ಇತಿಹಾಸವಿಲ್ಲ. ಯೂರೋಪಿಯನ್ನರು ಅಮೆರಿಕಕ್ಕೆ ಬಂದದ್ದೇ 1492ರಲ್ಲಿ. ಹಾಗಾಗಿ ಅಮೆರಿಕದ ಇತಿಹಾಸ ವೇನಿದ್ದರೂ ಅದರಿಂದೀಚೆಯದ್ದು. ಅದಕ್ಕಿಂತ ಮೊದಲಿದ್ದ ಮೂಲ ನಿವಾಸಿಗಳು ಬುಡಕಟ್ಟು ಬದುಕಿನವರಾಗಿದ್ದರು ಎನ್ನುತ್ತಾರೆ.

ಅವರ ಇತಿಹಾಸವಂತೂ ಕುರುಹಿಲ್ಲದಂತೆ ಬಹುತೇಕ ಅಳಿಸಿಹೋಗಿದೆ, ಅಳಿಸಲಾಗಿದೆ. ಹಾಗಾಗಿ ಇಲ್ಲಿ ಯಾವುದೇ ಐತಿಹಾಸಿಕ ಸ್ಮಾರಕ ತೆಗೆದುಕೊಂಡರೂ ಅದರ ಇತಿಹಾಸ ಇನ್ನೂರು- ಮುನ್ನೂರು ವರ್ಷ ದಾಟುವುದಿಲ್ಲ. ಆದರೆ, ಅಮೆರಿಕನ್ನರು ಅವರ ಈ ಸೀಮಿತ ಇತಿಹಾಸವನ್ನು ಕಾಪಿಟ್ಟ ರೀತಿ ಮಾತ್ರ ಅನನ್ಯ. ಇವರು ಪ್ರತೀ ಊರು, ಬೀದಿಯಲ್ಲ ಮ್ಯೂಸಿ ಯಂ ಮಾಡಿಟ್ಟಿದ್ದಾರೆ.

ಅಲ್ಲಿ ಆ ಊರಿನ ಇತಿಹಾಸ, ಮೊದಲು ಅಲ್ಲಿಗೆ ಬಂದು ಸ್ಥಾಪನೆಯಾದದ್ದು ಯಾರು ಇತ್ಯಾದಿ ಐತಿಹಾಸಿಕ ವಿವರಗಳು. ಅವರು ಬಳಸಿದ ಪಾತ್ರೆ ಪಗಡೆ, ಆ ಊರಿನಲ್ಲಿ ನಡೆದ ಯುರೋಪಿಯನ್ನರ ನಡುವಿನ ಯುದ್ಧಗಳು, ಆ ಯುದ್ಧಕ್ಕೆ ಸಂಬಂಧಿಸಿದ ಬಂದೂಕು, ಚಾಕು, ಛತ್ರಿ, ಚೀಲ ಇತ್ಯಾದಿ ಅಲ್ಲಿ ಇಟ್ಟಿರುತ್ತಾರೆ.

ಅಮೆರಿಕದಲ್ಲಿ ಇಂತಹ ಎಷ್ಟು ವಸ್ತುಸಂಗ್ರಹಾಲಯಗಳಿರಬಹುದು ಹೇಳಿ? ಒಬ್ಬನ ಜೀವಮಾನದಲ್ಲಿ ನೋಡಿ ಮುಗಿಸಲಿಕ್ಕಾಗದಷ್ಟು. ಎಷ್ಟು? 35 ಸಾವಿರ..! ಹೌದು- ಅಷ್ಟು. ಜಗತ್ತಿನ ಅತ್ಯಂತ ಹೆಚ್ಚು ವಸ್ತುಸಂಗ್ರಹಾಲಯವಿರುವ ದೇಶ ಅಮೆರಿಕ. ಅದರಲ್ಲಿ ಚಿಕ್ಕ ಮನೆಯ ಗಾತ್ರದ ಸುಮಾರು 25 ಸಾವಿರ, ಮಧ್ಯಮ ಗಾತ್ರದ 7-8 ಸಾವಿರ ಮತ್ತು ಅಂತಾ ರಾಷ್ಟ್ರೀಯ ಮಟ್ಟದ - ಬೃಹದ್ ಗಾತ್ರದ ಸುಮಾರು ಒಂದು ಸಾವಿರ ವಸ್ತು ಸಂಗ್ರಹಾಲಯ ಗಳಿವೆ.

ಇದನ್ನೂ ಓದಿ: Shishir Hegde Column: ಅರೆ ಗೋಪಾಲ್‌, ನಿಮ್ದುಕೆ ಅಷ್ಟೆಲ್ಲಾ ದೇವ್ರು ಏಕಿದೆ ?

ಅವುಗಳಂದಿಷ್ಟು ಯುದ್ಧ ಸಂಬಂಧಿ ಸಂಗ್ರಹಾಲಯಗಳು. ಅಮೆರಿಕದ ಯುದ್ಧಗಳಲ್ಲಿ ಬಳಸಿದ ಸಲಕರಣೆಗಳು, ವಾಹನ, ಟ್ಯಾಂಕರ್, ವಿಮಾನಗಳು, ಫೈಟರ್ ಜೆಟ್ ಇತ್ಯಾದಿ.

ಹಾಗಾಗಿ ಅಮೆರಿಕದ ಯಾವುದೇ ಊರಿಗೆ ಹೋದರೂ, ಅಲ್ಲಿ ನೋಡಲೇಬೇಕಾದ ಸ್ಥಳ ಗಳಲ್ಲಿ ಆ ಊರಿನ ಒಂದೆರಡು ಮ್ಯೂಸಿಯಂ ಆ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ಬೇರಿನ್ನೇ ನೂ ಇರುವುದಿಲ್ಲ. ನಾನು ಇತ್ತೀಚೆಗೆ ಅಮೆರಿಕದ ಒರೆಗಾನ್ ರಾಜ್ಯದ ಮ್ಯಾಕ್ಮಿನ್ವಿಲ್ ( McMinnville)’ ಅನ್ನುವ ಊರಿಗೆ ವೃತ್ತಿ ನಿಮಿತ್ತ ಹೋಗಿದ್ದೆ.

‘ಊರಿಗೆ ಬಂದವನು ಮ್ಯೂಸಿಯಂಗೆ ಬರದಿರುತ್ತಾನೆಯೇ?’ ಎಂಬಂತೆ ಆ ಊರಿನಂದು ವಿಶೇಷ ವಿಮಾನ ಸಂಗ್ರಹಾಲಯಕ್ಕೆ (Evergreen Aviation Space Museum) ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ನನ್ನ ಗಮನ ಸೆಳೆದದ್ದು ಅಲ್ಲಿದ್ದ ಒಂದು ಅಸಾಮಾನ್ಯ ಗಾತ್ರದ ವಿಚಿತ್ರ ವಿಮಾನ. ಇವತ್ತಿನ ಕಥೆ ಆ ವಿಮಾನದ್ದು, ಅದನ್ನು ನಿರ್ಮಿಸಿದವನದ್ದು.

1942. ಎರಡನೇ ವಿಶ್ವ ಯುದ್ಧ ತುರಿಸಿನಲ್ಲಿತ್ತು. ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಸೋವಿಯತ್ ಯೂನಿ ಯನ್, ಚೀನಾ, ಫ್ರಾನ್ಸ್ ಮತ್ತು ಭಾರತ ಇತ್ಯಾದಿ ಬ್ರಿಟಿಷ್ ಆಳ್ವಿಕೆಯ ಪ್ರಾಂತ್ಯಗಳು ಯುದ್ಧದ ಒಂದು ಕಡೆ. ‌ಇನ್ನೊಂದು ಕಡೆ ಜರ್ಮನಿ, ಇಟಲಿ, ಜಪಾನ್ ಮತ್ತಿತರ ದೇಶಗಳು. ಹೀಗಿರುವ ಯುದ್ಧ ಬಹುತೇಕ ನಡೆದದ್ದು ಯುರೋಪಿಯನ್ ನೆಲದಲ್ಲಿ. ಅಮೆರಿಕದವರು ಹಾಗೆಯೇ ಅಲ್ಲವೇ? ಇವರು ಇವರ ಜಾಗದಲ್ಲಿ ಯುದ್ಧ ಮಾಡುವುದಿಲ್ಲ!

Screenshot_3

ಹಾಗಾಗಿ ಅಮೆರಿಕ ಮತ್ತು ಉಳಿದ ದೇಶಗಳ ಯುದ್ಧ ಸೈನಿಕರಿಗೆ ಆಹಾರ ಇತ್ಯಾದಿ ಹಡಗಿ ನಲ್ಲಿ ಸಾಗಾಣಿಕೆಯಾಗಬೇಕಿತ್ತು. ಅವು ಬೇರೆ ಬೇರೆ ಯುರೋಪಿಯನ್ ಬಂದರಿಗೆ ತಲುಪಿ, ಅಲ್ಲಿಂದ ರಣಕಣದಲ್ಲಿದ್ದ ಸೈನಿಕರಿಗೆ ತಲುಪುತ್ತಿದ್ದವು. ಆದರೆ ಈ ಹಡಗಿನ ಮಾರ್ಗದಲ್ಲಿ ಒಂದು ಹೊಸ ಸಮಸ್ಯೆ ಬಂತು.

ಜರ್ಮನ್ನರ ಬಳಿ, ಹಿಟ್ಲರ್‌ನ ಹತ್ತಿರ ಸಬ್ ಮರೀನ್‌ಗಳಿದ್ದವು. ಅವು ಈ ಆಹಾರ, ಮದ್ದು ಗುಂಡಿನ ಹಡಗನ್ನು ನೀರೊಳಗಿಂದ ಬಂದು ಧ್ವಂಸಮಾಡುತ್ತಿದ್ದವು. ಹೀಗಿರುವಾಗ ಅಮೆರಿಕ ಯುದ್ಧ ಅವಶ್ಯಕತೆಗಳನ್ನು ತನ್ನ ಸೈನಿಕರಿಗೆ ಸರಬರಾಜು ಮಾಡುವುದು ಹೇಗೆ? ಗಂಭೀರ.

ಸಬ್ ಮರೀನ್ ಕಾರಣದಿಂದ ಸಮುದ್ರದಲ್ಲಿ ಹಡಗಿನ ಮೂಲಕ ತೇಲಿ ಹೋಗ ಲಾಗುತ್ತಿಲ್ಲ, ಆದರೆ ಹಾರಿ ಸಮುದ್ರದ ಮೇಲೆ ಹೋಗಬಹುದಲ್ಲ? ಆದರೆ ವಿಮಾನಕ್ಕೆ ಇಳಿಯಲು ಶತ್ರು ನೆಲದಲ್ಲಿ ರನ್-ವೇ ಬೇಕು. ಅದು ಸಾಧ್ಯವಿಲ್ಲ. ಹೀಗೊಂದು ಸಮಸ್ಯೆಯನ್ನಿಟ್ಟುಕೊಂಡ ಅಮೆರಿಕದ ಸರಕಾರ ‘ಹೆನ್ರಿ ಕೈಸರ್’ ಎಂಬ ಆಗಿನ ಕಾಲದಲ್ಲಿ ಅಮೆರಿಕದಲ್ಲಿ ಹಡಗು ನಿರ್ಮಾಣ ಮಾಡುತ್ತಿದ್ದ ಆವಿಷ್ಕಾರೀ ಉದ್ಯಮಿಯನ್ನು ಸಂಪರ್ಕಿಸಿತು. ಅವನಲ್ಲಿ ಏನಾದರೂ ಪರಿಹಾರವಿದೆಯೇ ಎಂದು ಕೇಳಿತು. ಅವನಿಗೊಂದು ಹೊಸ ಆಲೋಚನೆ ಬಂತು. ವಿಮಾನವನ್ನೇ ರನ್-ವೇ ಬದಲಿಗೆ ಸಮುದ್ರದ ನೀರಲ್ಲಿ ಇಳಿಸುವಂತೆ ಮಾಡಿದರೆ ಹೇಗೆ? ಅವನು ‘ಹಾವರ್ಡ್ ಹ್ಯೂಸ್’ ಎನ್ನುವ ಇನ್ನೊಬ್ಬ ಉದ್ಯಮಿಯ ಜತೆ ಒಂದು ಯೋಜನೆ ರೂಪಿಸಿದ.

ಹಾವರ್ಡ್ ಹ್ಯೂಸ್ ಕೂಡ ಸಾಮಾನ್ಯದ ವ್ಯಕ್ತಿಯಲ್ಲ. ಹಾವರ್ಡ್ ಹ್ಯೂಸ್- ಅವನೇ ನಮ್ಮ ಇಂದಿನ ಕಥಾ ನಾಯಕ. ಅವರಿಬ್ಬರೂ ಸೇರಿ, ಒಂದು ಹಡಗಿನ ಗಾತ್ರದ, ಸಮುದ್ರದ ನೀರಿನ ಮೇಲೆ ಇಳಿಯುವ ವಿಮಾನ ತಯಾರಿಸುತ್ತೇವೆ ಎಂದು ಅಮೆರಿಕನ್ ಸರಕಾರಕ್ಕೊಂದು ಅರ್ಜಿ ಸಲ್ಲಿಸಿದರು. ಅಮೆರಿಕದ ಯುದ್ಧ ಇಲಾಖೆ (Department of War)ಗೆ ಇದೊಂದು ಒಳ್ಳೆಯ ಯೋಚನೆ ಎಂದೆನಿಸಿತು. ದೊಡ್ಡ ಹಡಗಿನಷ್ಟು ಗಾತ್ರದ, ಸಾಮಾನುಗಳನ್ನು ಒಯ್ದು ಬಂದರಿನ ಸಮೀಪದ ಸಮುದ್ರದ ನೀರಿನ ಮೇಲೆ ಇಳಿಯುವಂತಹ ವಿಮಾನ!

ನಮ್ಮ ಕಥಾ ನಾಯಕ ಹಾವರ್ಡ್ ಹ್ಯೂಸ್ ಸಾಮಾನ್ಯನಲ್ಲ. 1938ರಲ್ಲಿ ವಿಮಾನ ಹಾರಿಸಿ ಕೊಂಡು ಜಗತ್ತನ್ನು ನಾಲ್ಕೇ ದಿನದಲ್ಲಿ ಒಂದು ಸುತ್ತು ಹಾಕಿ ಬಂದು ಪ್ರಸಿದ್ಧಿ ಪಡೆದಿದ್ದ. ಅವನು ಕೇವಲ ವಿಮಾನ ಚಾಲಕನಷ್ಟೇ ಆಗಿರಲಿಲ್ಲ. ಬದಲಿಗೆ ವಿಮಾನ ತಜ್ಞನಾಗಿದ್ದ. ಆಗಿನ ಕಾಲದ ಕೌಶಲ ಏರೋನಾಟಿಕಲ್ ಎಂಜಿನಿಯರ್. ಅವನಿಗೆ ವಿಮಾನದ ಬಗ್ಗೆ ಯಾರಿಗೂ ತಿಳಿಯದಷ್ಟು ಗೊತ್ತಿತ್ತು.

ಸುಮಾರು ಇಪ್ಪತ್ತು ವರ್ಷ ವಿಮಾನ ತಯಾರಿಕೆಯಲ್ಲಿ ಪರಿಣಿತಿಯಿದ್ದವ. ಜತೆಯಲ್ಲಿ ಅನ್ವೇಷಕ ಮತ್ತು ಉದ್ಯಮಪತಿ, ಸಿನಿಮಾ ಪ್ರೊಡ್ಯೂಸರ್, ಅಮೆರಿಕದ ಶ್ರೀಮಂತರಲ್ಲಿ ಒಬ್ಬ ಇತ್ಯಾದಿ. ಹಿಡಿದ ಕೆಲಸವನ್ನು ಹುಚ್ಚನಂತೆ ಬೆಂಬಿದ್ದು ಮುಗಿಸಿಯೇ ತೀರಿಸುವ ಕಬ್ಬಿಣದ ಗಟ್ಟಿಗ. ಫೇಮಸ್. ವಿಮಾನ ತಂತ್ರಜ್ಞಾನ ಬಲ್ಲ ‘ಹಾವರ್ಡ್ ಹ್ಯೂಸ್’ ಮತ್ತು ಹಡಗು ಕಟ್ಟ ಬಲ್ಲ ‘ಹೆನ್ರಿ ಕೈಸರ್’ ಸೇರಿ ನೀಡಿದ ಅರ್ಜಿ ಸ್ವೀಕಾರವಾಯಿತು.

ಅಮೆರಿಕ ಸರಕಾರ ಸಮುದ್ರದ ಮೇಲೆ ಇಳಿಯಬಹುದಾದ ಒಂದು ದೊಡ್ಡ ವಿಮಾನ ತಯಾರಿಕೆಗೆ ಒಪ್ಪಿಗೆ ಸೂಚಿಸಿತು. ಚಿಕ್ಕಪುಟ್ಟ ವಿಮಾನಗಳಿದ್ದ ಕಾಲ ಅದು. ಹಡಗಿನ ಗಾತ್ರದ ವಿಮಾನ ಹೇಗೆ ಕಟ್ಟುವುದು? ಸ್ಟೀಲ್‌ನಿಂದ ಅಷ್ಟು ದೊಡ್ಡ ವಿಮಾನ ನಿರ್ಮಿಸಲು ಹೊರಟರೆ ಅಷ್ಟೆಲ್ಲಾ ಪ್ರಮಾಣದ ಉಕ್ಕು ಬೇಕು. ಉಕ್ಕು ತುಟ್ಟಿ, ಕೊರತೆ.

ಇದ್ದದ್ದೆಲ್ಲ ಟ್ಯಾಂಕರ್, ವಾಹನ, ಜೀಪು ಇತ್ಯಾದಿ ಯುದ್ಧ ತಯಾರಿಕೆಗೆ ಬೇಕು. ಅಲ್ಲದೆ ಅಷ್ಟು ಗಾತ್ರದ ಉಕ್ಕಿನ ವಿಮಾನ ಸಮುದ್ರದಲ್ಲಿ ಮುಳುಗಿ ಹೋದರೆ? ಏನೆಲ್ಲಾ ಲೆಕ್ಕಾಚಾರ ಮಾಡಿದ ಅಮೆರಿಕನ್ ಸರಕಾರ, ಹಡಗನ್ನು ಮರದಲ್ಲಿ ಕಟ್ಟಿದಂತೆ ವಿಮಾನವನ್ನು ಕೂಡ ಮರದಿಂದ ಕಟ್ಟಬಹುದೇ ಎಂದು ಕೇಳಿತು.

ಅಮೆರಿಕದಲ್ಲಿ ಯಾವತ್ತೂ ಮರದ ಕೊರತೆ ಇರಲಿಲ್ಲ. ಮರದ ಮೊದಲ ವಿಮಾನ, ವಿಮಾನದ ಮೂಲ ಮಾದರಿ (prototype) ತಯಾರಿಸಲು, ಅಭಿವೃದ್ಧಿಪಡಿಸಲು ಅಮೆರಿಕನ್ ಸರಕಾರ ಮತ್ತು ಇವರಿಬ್ಬರು ಗುತ್ತಿಗೆ ಕರಾರು ಮಾಡಿಕೊಂಡರು. ಸರಕಾರ ಇದಕ್ಕಾಗಿ ಒಂದು ಬೃಹತ್ ಮೊತ್ತ ಇವರಿಗೆ ಕೊಟ್ಟಿತು. ಲೆಕ್ಕದಂತೆ 22 ತಿಂಗಳೊಳಗೆ ಮೊದಲ ವಿಮಾನ ತಯಾರಾಗಬೇಕು ಎಂಬ ನಿಬಂಧನೆಯ ಮೇಲೆ ಮರದ ವಿಮಾನದ ನಿರ್ಮಾಣದ ಕೆಲಸ ಶುರುವಾಗಿಯೇಬಿಟ್ಟಿತು.

ಸರಿ. ಮರದಲ್ಲಿ ಉಳಿದ ವಿಮಾನಕ್ಕಿಂತ ಐದಾರುಪಟ್ಟು ದೊಡ್ಡ ಮರದ ವಿಮಾನ ಮಾಡಬೇಕೆಂದರೆ ಅಷ್ಟು ಮರಗೆಲಸದವರು ಬೇಕಾಯ್ತಲ್ಲ. ಅಮೆರಿಕದ ಕೆಲವು ಸಾವಿರ ಮರಗೆಲಸದವರನ್ನು ದೇಶದೆಡೆಯಿಂದ ಕರೆಸಿಕೊಂಡರು. ಎಲ್ಲ ವ್ಯವಸ್ಥೆ ಹಡಗು ಕಟ್ಟುವ ‘ಹೆನ್ರಿ ಕೈಸರ್’ ನದು. ಆದರೆ ವಿಮಾನ ನಿರ್ಮಾಣದ ಜವಾಬ್ದಾರಿ, ದೇಖ್ರೇಕಿ ‘ಹಾವರ್ಡ್ ಹ್ಯೂಸ್’ನದು. ಹ್ಯೂಸ್ ಸ್ವಲ್ಪ ವಿಲಕ್ಷಣ ಮನುಷ್ಯ. ಅವನಿಗೊಂದು ಚಾಳಿಯಿತ್ತು. ಅವನು ಯಾವುದೇ ಕೆಲಸ ಹಿಡಿಯಲಿ, ಅದನ್ನು ಮಾಡಿಯೇ ಶುದ್ಧ. ಅವನು ಈ ಮರದ ವಿಮಾನದ ತಯಾರಿಕೆಯಲ್ಲಿ ಹಗಲಿರುಳು ಮುನ್ನಡೆಸಿದ. ಅವನು ಪರಿಪೂರ್ಣತಾವಾದಿ ( Perfectionist ). ಅವನಿಗೆ ಮಾಡಿದ್ದೆಲ್ಲ ಸರಿಯಾಗಿಯೇ ಆಗಬೇಕು.

ಮಾಡಿದ್ದು ಸರಿಯಾಗದಿದ್ದರೆ ಕೆಲಸದವರಿಗೆ ಎರಡು ಪೆಟ್ಟು ಬಾರಿಸಲು ಕೂಡ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅವನ ಜತೆ ಕೆಲಸ ಮಾಡುವುದು, ವ್ಯವಹರಿಸುವುದು ಅಲ್ಲಿನ ಕೆಲಸಗಾರರಿಗೆ ಸುಲಭವಿರಲಿಲ್ಲ. ಆದರೆ ಯುದ್ಧಕಾಲ, ಅವರಿಗೂ ದುಡಿಮೆಯ ಅನಿವಾರ್ಯ! ಹಾಗಾಗಿ ಕೆಲಸ ಮುಂದುವರಿದಿತ್ತು. ಹಾಗೆ ಹೀಗೆ ನೋಡುವಾಗ ಅಮೆರಿಕದ ಸರಕಾರ ಕೊಟ್ಟ 22 ತಿಂಗಳ ಕಾಲಾವಕಾಶ ಮುಗಿಯಲು ಬಂದೇ ಬಿಟ್ಟಿತು. ಆದರೆ ವಾಯ್ದೆ ಯೊಳಗೆ ಮರದ ವಿಮಾನ ನಿರ್ಮಿಸಿ ಮುಗಿಯುವ ಲಕ್ಷಣ ಕಾಣಿಸಲಿಲ್ಲ.

ಸರಕಾರ ವಿಮಾನ ನಿರ್ಮಾಣಕ್ಕೆ ಕೊಟ್ಟ ಹಣವೂ ಹೆಚ್ಚುಕಡಿಮೆ ಖಾಲಿಯಾಗಿ ಆಗಿತ್ತು. ಈ ನಡುವೆ ಹಡಗಿನ ಉದ್ಯಮಿ ಹೆನ್ರಿ ಕೈಸರ್‌ಗೆ - ಅಂಡೆ ಪಿರ್ಕಿ ‘ಹಾವರ್ಡ್ ಹ್ಯೂಸ್’ ಜತೆ ವ್ಯವಹರಿಸುವುದು ಕಷ್ಟವಾಯಿತು. ಅವನು ಪಾಲುದಾರಿಕೆ (partnership) ಮುರಿದು ಕೊಂಡು ಹೋಗಿ ಬಿಟ್ಟ. ಅದೇ ಸಂದರ್ಭದಲ್ಲಿ ಅಮೆರಿಕ ವಿಶ್ವಯುದ್ಧದಲ್ಲಿ ಮುನ್ನಡೆ ಸಾಿಸಿತ್ತು.

ಹಾಗಾಗಿ ಈ ಸಮುದ್ರದಲ್ಲಿಳಿಯುವ Sea Plane ನ ಅವಶ್ಯಕತೆ ಇರಲಿಲ್ಲ. ಹಾಗಾಗಿ ಅಮೆರಿಕನ್ ಸರಕಾರ - ಈ ಮರದ ವಿಮಾನ ಮಾಡಿದ್ದು ಸಾಕು ಎಂದು ಅದಕ್ಕೆ ಕೊಡುತ್ತಿದ್ದ ಹಣವನ್ನು ಕೂಡ ನಿಲ್ಲಿಸಿಬಿಟ್ಟಿತು.

ಆದರೆ ಎಕ್ಕಡಪನ್ನಾಸ್ ‘ಹಾವರ್ಡ್ ಹ್ಯೂಸ್’ - ಹಿಡಿದ ಕೆಲಸ ಮುಗಿಸದೇ ಬಿಡುವುದುಂಟೆ? ಅಮೆರಿಕನ್ ಸರಕಾರ ಸಾಕು, ನಿಲ್ಲಿಸಿ, ನಮಗಿದು ಬೇಕಾಗಿಯೇ ಇಲ್ಲ ಎಂದರೂ ಹ್ಯೂಸ್ ಮಾತು ಕೇಳಲಿಲ್ಲ. ಪತ್ರಿಕೆಗಳು ಮರದ ವಿಮಾನದ ಪ್ರಾಜೆಕ್ಟ್ ಅನ್ನು ಹಿಯಾಳಿಸಿದವು, ಲೇವಡಿ ಮಾಡಿದವು. ಅದನ್ನು Spruce Goose - ಮರದ ಬಾತುಕೋಳಿ ಎಂದು ಕರೆದವು. ಅತ್ತ ವಿಶ್ವಯುದ್ಧವೇ ಮುಗಿದು‌ ಹೋಯಿತು. ಆದರೆ ಹಾವರ್ಡ್ ಹ್ಯೂಸ್ ಮರದ ವಿಮಾನ ದ ನಿರ್ಮಾಣ ಮಾತ್ರ ಬಿಡಲೇ ಇಲ್ಲ. ಅವನಿಗೆ ಇಷ್ಟು ಕಾಲ ವ್ಯಯಿಸಿದ ಹಣ, ಶ್ರಮ ಮತ್ತು ಸಮಯ ವ್ಯರ್ಥವಾಗಿಸಲು ಒಪ್ಪಿಗೆಯೇ ಇಲ್ಲ. ಅವನು ಆಗಲೇ ಕೆಲಸ ನಿಲ್ಲಿಸಿ ಬಿಡಬಹು ದಿತ್ತು. ಎಂಟಾಣೆ ನಷ್ಟವಿರಲಿಲ್ಲ.

ನಿಲ್ಲಿಸಿ ತನ್ನ ಉಕ್ಕಿನ ವಿಮಾನದ ಕೆಲಸವನ್ನು ಮುಂದುವರಿಸಿ ಬೇಕಾದಷ್ಟು ಹಣ ಸಂಪಾದಿಸಬಹುದಿತ್ತು. ಇನ್ನೇನೋ ಆವಿಷ್ಕರಿಸಬಹುದಿತ್ತು - ಆದರೆ ಅವನು ಈ ಬೇಡದ ಕೆಲಸ ನಿಲ್ಲಿಸಲು ಬಿಲ್ಕುಲ್ ಒಪ್ಪಲೇ ಇಲ್ಲ.

80 ಮಿಲಿಯನ್ ಡಾಲರ್ ಸರಕಾರಿ ಪ್ರಾಜೆಕ್ಟ್‌ - ಮುಗಿಯುವಾಗ ಸರಿಸುಮಾರು ಮುನ್ನೂರು ಮಿಲಿಯನ್ ಡಾಲರ್‌ನಷ್ಟು ಇವನ ಕಿಸೆಯಿಂದ ಖರ್ಚಾಯಿತು. ಯಾರಿಗೂ ಮರದ ವಿಮಾನ ಈಗ ಬೇಕಾಗಿರಲಿಲ್ಲ. ಆದರೂ ಕೊನೆಗೊಂದು ದಿನ ಬಹುನಿರೀಕ್ಷಿತ ದಿನ ಬಂದೇ ಬಿಟ್ಟಿತು. ವಿಮಾನ ತಯಾರಾಯ್ತು. ಪ್ರೆಸ್‌ನವರೆಲ್ಲ ಸೇರಿದರು. ಕ್ಯಾಲಿಫೋರ್ನಿಯಾದ ದಂಡೆಯಂಚಿನ ಸಮುದ್ರದಲ್ಲಿ ವಿಮಾನ ನೀರಿನ ಮೇಲೆ ತೇಲುತ್ತಾ ನಿಂತಿತು. ಖುದ್ದು ಹಾವರ್ಡ್ ಹ್ಯೂಸ್ ಅದರ ಚಾಲನೆಗೆ ಕೂತಿದ್ದ. ಆ ದಿನ ಕೇವಲ ನೀರಿನ ಮೇಲೆ ಒಂದಿಷ್ಟು ದೂರ ಸಾಗಲಷ್ಟೇ ಆ ವಿಮಾನಕ್ಕೆ ಅನುಮತಿಯಿತ್ತು.

ಆದರೆ ಹಾವರ್ಡ್ ಹ್ಯೂಸ್ ವಿಮಾನವನ್ನು ಓಡಿಸಿದ, ಮತ್ತು ಪ್ರೆಸ್‌ನವರೆದುರು ನೀರಿನಿಂದ ಮೇಲಕ್ಕೆ ಹಾರಿಸಿಯೇ ಬಿಟ್ಟ. ಹಾರಿದ್ದು ಎಷ್ಟು? ಸುಮಾರು ಮೂವತ್ತು ಸೆಕೆಂಡ್ - ಎರಡ ರಿಂದ ಮೂರು ಮೈಲಿ. ಆಮೇಲೆ ಕೆಳಗೆ ಸಮುದ್ರಕ್ಕೆ ಇಳಿಯಿತು ವಿಮಾನ. ಅಷ್ಟೇ. ಅದು ಹಾರಿದ್ದು ಕೆಲವೇ ಕೆಲವು ಸೆಕೆಂಡ್. ಅಲ್ಲಿಂದ ಮುಂದೆ ಅದನ್ನು ಲಂಗರು ಹಾಕಿ ನೀರಿನಲ್ಲಿ ನಿಲ್ಲಿಸಲಾಯಿತು. ಇದೆಲ್ಲ ಆಗುವಾಗ ಹಾವರ್ಡ್ ಹ್ಯೂಸ್ ದೇಶಕ್ಕೇ ಶ್ರೀಮಂತನಿದ್ದವನು ದಿವಾಳಿಯಂಚಿಗೆ ಬಂದಿದ್ದ, ಆದರೆ ಮರದ ವಿಮಾನವನ್ನು ಬಿಡಲಿಲ್ಲ. ಅದನ್ನು ಇಟ್ಟು ಕೊಳ್ಳಲು, ಹಾರುವ ಪರವಾನಗಿ ಚಾಲ್ತಿಯಲ್ಲಿಡಲು, ದುರಸ್ತಿಗೆ ಇನ್ನೆಷ್ಟೋ ಮಿಲಿಯನ್ ಹಣ ವ್ಯಯಿಸಿದ.

ಕೊನೆಗೊಂದು ದಿನ ಸತ್ತೇ ಹೋದ. ಅವನು ಸಾಯುತ್ತಿದ್ದಂತೆ ಅವನ ಮರದ ವಿಮಾನ ವನ್ನು ತುಂಡು ತುಂಡು ಮಾಡಿ ಬೇರೆ ಬೇರೆ ವಸ್ತುಸಂಗ್ರಹಾಲಯಗಳಿಗೆ ಸಾಗಿಸಲಾಯಿತು. ಅಲ್ಲಿಗೆ ಮರದ ವಿಮಾನದ ಕಥೆ ಇತಿಹಾಸವಾಗಿ ಹೀಗೆ ಮುಗಿಯಿತು! What a waste !!

ಒರೆಗಾನ್‌ನ ವಸ್ತುಸಂಗ್ರಹಾಲಯದ ಆ ದೊಡ್ಡ ಕಟ್ಟಡದ ಬಹು ಭಾಗ ಆವರಿಸಿದ್ದ ಅದೇ ‘ಮರದ ವಿಮಾನ’ದ ದೊಡ್ಡ ತುಂಡಿನ ಎದುರು ನಿಂತು ಈ ಕಥೆ ಕೇಳಿದಾಗ ಒಮ್ಮೆ ಎದೆ ಭಾರವಾಯಿತು. ಅಷ್ಟೊಂದು ಜನರ ವ್ಯರ್ಥವಾದ ಶ್ರಮ, ಹಾವರ್ಡ್ ಹ್ಯೂಸ್‌ನ ಹುಚ್ಚು ಪ್ರತಿಷ್ಠೆ ಎಲ್ಲವೂ ಕಣ್ಣೆದುರು ಪಟಪಟನೆ ಹಾದು ಹೋಯಿತು. ಒಂದು ವೇಳೆ ಹಾವರ್ಡ್ ಹ್ಯೂಸ್ ಸರಕಾರ ನಿಲ್ಲಿಸಿ ಎಂದಾಗ ನಿಲ್ಲಿಸಿದ್ದರೆ? ವ್ಯರ್ಥ ಯಾರಿಗೂ ಬೇಡದ ಮರದ ವಿಮಾನ ತಯಾರಿಸುವುದನ್ನು ಬಿಟ್ಟು ಇನ್ನೇನೋ ಆವಿಷ್ಕರಿಸಲು ಮುಂದಾಗಿದ್ದಾರೆ? ಅವನದೇ ಉಕ್ಕಿನ ವಿಮಾನ ಕಾರ್ಖಾನೆ ಇತ್ತು, ಅದನ್ನು ಮುಂದುವರಿಸಿಕೊಂಡು ಹೋದ ರೂ ಆರಾಮಾಗಿ ಶ್ರೀಮಂತನಾಗಿಯೇ ಇರಬಹುದಿತ್ತು. ಆದರೆ ಹಾವರ್ಡ್ ಹ್ಯೂಸ್‌ನಿಗೆ ತಾನು ವ್ಯಯಿಸಿದ ಸಮಯ, ಹಣ, ಶ್ರಮ ಮತ್ತು ಭಾವನೆಯನ್ನು ಮೀರಲಿಕ್ಕಾಗಲೇ ಇಲ್ಲ, ಸಾಯುವವರೆಗೂ. ಕಳೆದುಕೊಳ್ಳುವುದಕ್ಕಿಂತ ತಾನು ವ್ಯಯಿಸಿದ್ದೇ ಮೌಲ್ಯಯುತ ವೆನಿಸುತ್ತಾ ಹೋಯಿತು.

ಈ ರೀತಿ ವ್ಯಯಿಸಿದ ಹಣ, ಸಮಯ, ಶ್ರಮ, ಭಾವನೆಗಳಿಗೆ ಜೋತುಬಿದ್ದು ಇನ್ನಷ್ಟು ನಷ್ಟಕ್ಕೊಳಗಾಗುವ ಬುದ್ಧಿಗೊಂದು ಹೆಸರಿದೆ. Sunk cost fallacy - ಹಿಂದೆ ವ್ಯಯಿಸಿದ್ದರ ಮೇಲಿನ ಮೋಹದ ಭ್ರಮೆ. ಮೇಲ್ನೋಟಕ್ಕೆ ಇದೆಲ್ಲ ಅದ್ಯಾವುದೋ ಕಾಲದ, ಅದೆಲ್ಲಿಯೋ ಅಮೆರಿಕದ, ಅದೆಷ್ಟೋ ಮಿಲಿಯನ್ ಡಾಲರ್ ಕಳೆದುಕೊಂಡ ಯಾರೋ ಒಬ್ಬ ಹುಚ್ಚು ಪ್ಯಾಲಿ ಕಥೆ ಎಂದೆನಿಸಬಹುದು. ಆದರೆ ಇವತ್ತಿಗೂ ನಮ್ಮ ನಡುವಿನ ಅದೆಷ್ಟೋ ವ್ಯಾಪಾರ ಸ್ಥರದ್ದು ಇದೇ ಕಥೆ. ಏನೋ ಒಂದು ವ್ಯವಹಾರ ಕೈ ಹತ್ತಲಿಲ್ಲ ಎಂದು ಬಿಡುವುದು ಕೂಡ ವ್ಯಾಪಾರೀ ಜಾಣತನ. ಆದರೆ ಇಂಥದ್ದೊಂದು ಮೋಹದ ಕುರುಡಿನಿಂದ ಅದೆಷ್ಟೋ ಮಂದಿ ದಿವಾಳಿಯಾದವರಿzರೆ. ಇದೆಲ್ಲ ವ್ಯಾಪಾರ ವ್ಯವಹಾರಕ್ಕಷ್ಟೇ ಸೀಮಿತವಲ್ಲ.

ಇಂತಹುದೇ ಅವಗುಣ ನಮ್ಮ ನಿತ್ಯಜೀವನದಲ್ಲಿಯೂ ನಾವು ಅರಿವಿಲ್ಲದಂತೆ ಪಾಲಿಸುತ್ತಿರು ತ್ತೇವೆ. ಹಣವಷ್ಟೇ ಅಲ್ಲ, ಎಲ್ಲಿ ಶ್ರಮ, ಸಮಯ, ಮತ್ತು ಭಾವನೆಗಳನ್ನು ವ್ಯಯಿಸಿರು ತ್ತೇವೋ ಅಲ್ಲ. ನಾನೇ ಅದೆಷ್ಟೋ ಬಾರಿ ಯಾವುದೋ ಒಂದು ಪುಸ್ತಕವನ್ನು ಓದಲು ಶುರುಮಾಡಿಕೊಂಡಿರುತ್ತೇನೆ. ಅರ್ಧದಷ್ಟು ಓದಿ ಮುಗಿಸುವಾಗ ಸುಸ್ತಾಗಿ ಹೋಗಿರುತ್ತದೆ. ಸಾಕು ಬಿಡೋಣ ಎಂದೆನಿಸುತ್ತಿರುತ್ತದೆ. ಆದರೆ ಅರ್ಧ ಓದಿ ಆಗಿದೆಯಲ್ಲ!

ಈಗ ಬಿಟ್ಟರೆ ಮುಗಿಸಿದ ಹಾಗೆ ಆಗುವುದಿಲ್ಲವಲ್ಲ, ಪೈಸವಸೂಲ್ ಆಗಬೇಕಲ್ಲ ಎಂದು ಇನ್ನಷ್ಟು ತ್ರಾಸು ಪಟ್ಟು ಉಳಿದ ಪೇಜುಗಳನ್ನು ಮುಗಿಸಿರುತ್ತೇನೆ. ಇನ್ನೊಂದು ಅನುಭವ ನಿಮಗೂ ಆಗಿರಬಹುದು-ಹೋಟೆಲ್‌ನಲ್ಲಿ ಊಟ ಮುಗಿಸಿ ಒಂದು ಐಸ್ ಕ್ರೀಮ್ ತಿನ್ನೋಣ ಎಂದಾಗುತ್ತದೆ. ಆರ್ಡರ್ ಮಾಡಿ ಸುಮಾರು ಹೊತ್ತಾದರೂ ಐಸ್ ಕ್ರೀಮ್ ತಂದೇ ಕೊಡುವು ದಿಲ್ಲ. ಅಷ್ಟರೊಳಗೆ ನಮಗೆ ಇನ್ನಷ್ಟು ಹೊಟ್ಟೆ ತುಂಬಿದ್ದು ಗೊತ್ತಾಗಿ ಐಸ್ ಕ್ರೀಮ್ ಬೇಡವಾಗಿರುತ್ತದೆ. ಆದರೂ ದೊಡ್ಡು ಕೊಟ್ಟಾಗಿದೆ ಇಂದು ತಿಂದೇ ಬರುತ್ತೇವೆ. ಸಂಬಂಧ ಗಳ ವಿಷಯದಲ್ಲೂ ಸಂಬಂಧಗಳು ಹಾಗೆಯೇ. ಕುಲಗೆಟ್ಟು ಹೋಗಿರುತ್ತವೆ.

ಕೆಲವು ಅದೆಷ್ಟೇ ಪ್ರಯತ್ನಿಸಿದರೂ ಇನ್ನೊಂದು ಕಡೆಯಿಂದ ಸರಿಯಾಗುವ ಲಕ್ಷಣವಿರುವು ದಿಲ್ಲ. ಆದರೂ ಇಷ್ಟು ವರ್ಷ ಜತೆಯಲ್ಲಿದ್ದೇವೆ, ಹಾಗಾಗಿ ಈಗ ಬಿಡಲು ಆಗುವುದಿಲ್ಲ ಎಂದು ಜೋತು ಬೀಳುತ್ತೇವೆ. ಇಷ್ಟು ವರ್ಷ ಒಂದೇ ಕಂಪನಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕೆಲಸದಲ್ಲಿ, ಸಂಬಳದಲ್ಲಿ ತೃಪ್ತಿಯಿಲ್ಲದಿದ್ದರೂ - ಕೆಲಸ ಬದಲಿಸದವರು ಎಷ್ಟು ಮಂದಿ ಬೇಕು? ಸಿನಿಮಾ ಅದೆಷ್ಟೇ ಕೆಟ್ಟದಾಗಿರಲಿ, ದುಡ್ಡು ಕೊಟ್ಟದ್ದಕ್ಕೆ ಹಿಂಸೆಯಾದರೂ ಪರವಾಗಿಲ್ಲ, ಪೂರ್ತಿ ನೀಡಬೇಕು!

ಗೌರವ, ನಂಬಿಕೆ ಕಳೆದುಕೊಂಡ ನಂತರವೂ ಸ್ನೇಹ, ಪ್ರೀತಿ ಇತ್ಯಾದಿ ಮುಂದುವರಿಸುವ ಒದ್ದಾಟ ಇದೇ ಚಾಳಿಯ ರೂಪಾಂತರ.. ನಾವೆಲ್ಲರೂ ಎಷ್ಟೋ ಕಡೆ ಹಳೆಯ ಹೂಡಿಕೆ ಯನ್ನು ಪ್ರಸ್ತುತ ಮೌಲ್ಯದಂತೆ ತಪ್ಪಾಗಿ ಭಾವಿಸಿ ವ್ಯವಹರಿಸುತ್ತಿರುತ್ತೇವೆ. ಈಗ ಹೇಳಿ- ನಿಮ್ಮ ಮರದ ವಿಮಾನ ಯಾವುದು?