Rangaswamy Mookanahalli Column: ಇದೊಂದು ನಿರಂತರ ವ್ಯಥೆ, ಬದುಕು ಬದಲಾಗುತ್ತಿರುವ ಕಥೆ !
ಬದುಕಿಗೆ ಅಪ್ಪ ಅಮ್ಮ ಇಬ್ಬರೂ ಬೇಕು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯೂ ಅಲ್ಲ. ಒಬ್ಬರನೊಬ್ಬರು ರೀಪ್ಲೇಸ್ ಮಾಡಲು ಕೂಡ ಸಾಧ್ಯವಿಲ್ಲ. ನಮ್ಮದಿನ್ನೂ ರಿಟೈರ್ಮೆಂಟ್ ಪ್ಲಾನ್ ಮಾಡದ, ಮಕ್ಕಳಿಗಾಗಿ ಇರುವುದೆ ಖರ್ಚು ಮಾಡಿ ಖಾಲಿ ಕೈಯಲ್ಲಿ ನಿಲ್ಲುವ ಸಮಾಜ. ಹೀಗಾಗಿ ಅಪ್ಪ ಅಮ್ಮ ಬರ್ಡನ್ ಅಲ್ಲ. ಅದು ನಮ್ಮ ಕರ್ತವ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು.


ವಿಶ್ವರಂಗ
mookanahalli@gmail.com
ಬದುಕಿಗೆ ಅಪ್ಪ ಅಮ್ಮ ಇಬ್ಬರೂ ಬೇಕು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯೂ ಅಲ್ಲ. ಒಬ್ಬರನೊಬ್ಬರು ರೀಪ್ಲೇಸ್ ಮಾಡಲು ಕೂಡ ಸಾಧ್ಯವಿಲ್ಲ. ನಮ್ಮದಿನ್ನೂ ರಿಟೈರ್ಮೆಂಟ್ ಪ್ಲಾನ್ ಮಾಡದ, ಮಕ್ಕಳಿಗಾಗಿ ಇರುವುದೆ ಖರ್ಚು ಮಾಡಿ ಖಾಲಿ ಕೈಯಲ್ಲಿ ನಿಲ್ಲುವ ಸಮಾಜ. ಹೀಗಾಗಿ ಅಪ್ಪ ಅಮ್ಮ ಬರ್ಡನ್ ಅಲ್ಲ. ಅದು ನಮ್ಮ ಕರ್ತವ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಉಳ್ಳವರ ಬದುಕು ಬೇರೆ ರೀತಿಯಲ್ಲಿ ಈಗಾಗಲೇ ಬದಲಾಗಿದೆ. ಒಂದು ಭಾರತದಲ್ಲಿ ಹತ್ತು ಭಾರತವಿದೆ.
ನಾವು ಕಣ್ಣು ಬಿಟ್ಟಾಗ ಕಾಣುವ ಅಮ್ಮನ ಬಗ್ಗೆ ಪ್ರೀತಿ, ಅತೀವ ಪ್ರೀತಿ ಜತೆಗೆ ಒಂದು ಸದರ ಕೂಡ ಬೆಳೆದುಬಿಡುತ್ತದೆ. ಅಮ್ಮನನ್ನು ನಾವು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಮುಕ್ಕಾಲು ಪಾಲು ನಾವೆಲ್ಲರೂ ಹೀಗೇ ಅನ್ನಿಸುತ್ತೆ. ಆದರೆ ಅಪ್ಪ ಇzನಲ್ಲ ಅವನನ್ನು ಒಂದು ಚೂರು ಭಯ, ಚೂರು ಗೌರವ, ಚೂರು ಕೋಪದಿಂದ ಕಾಣುವವರ ಸಂಖ್ಯೆಯೇ ಹೆಚ್ಚು ಎಂದು ನನ್ನ ಭಾವನೆ. ಈ ಸಾಲು ಗಳನ್ನು ಓದುತ್ತಿರುವ ನನ್ನ ಸಹೋದರಿಯರಿಗೆ ಇದು ಅನ್ವಯವಾಗುವುದಿಲ್ಲ. ಯಾಕೆ ಗೊತ್ತಾ, ಈ ಹೆಣ್ಮಕ್ಕಳಿಗೆ ಅವರಪ್ಪನ ಕಂಡರೆ ಸದರ ಜಾಸ್ತಿ.
ಮೇಲಿನ ಸಾಲಿನಲ್ಲಿ ಬರೆದಿರುವ ಎಲ್ಲವೂ ಇಲ್ಲಿ ಉಲ್ಟಾ ಆಗಿ ಬಿಡುತ್ತದೆ. ಅಮ್ಮನನ್ನು ಅವರು ಪ್ರೀತಿಸುವುದಿಲ್ಲ ಎಂದಲ್ಲ, ನಾವು ಅಪ್ಪನನ್ನು ಕಾಣುವ ಹಾಗೆ ಅವರು ಅಮ್ಮನನ್ನು ಕಾಣುತ್ತಾರೆ ಅಷ್ಟೇ. ಅಂದು ಇಂದು ಅಪವಾದಗಳು ಇದ್ದೇ ಇರುತ್ತವೆ. ಅಪ್ಪನನ್ನು ಅಪ್ಪಿಕೊಂಡು, ಕೆನ್ನೆ ಹಿಂಡಿ ಮುದ್ದು ಮಾಡುವ ನನಗಿಂತ 10 ವರ್ಷ ಕಿರಿಯ ಸ್ನೇಹಿತನನ್ನು ನೋಡಿದ್ದೇನೆ.
ಅಪ್ಪನ ತಲೆ ಕಂಡರೆ ಉರಿದು ಬೀಳುವ ಸ್ನೇಹಿತರೂ ಇದ್ದಾರೆ. ಆದರೆ ಅಮ್ಮ? ಅಮ್ಮನನ್ನು ದ್ವೇಷಿಸುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದು. ಸದರದ ಕಾರಣ ಅವರ ಮೇಲೆ ಏರಿದ ಧ್ವನಿಯಲ್ಲಿ ‘ನಿನಗೆ ಎಷ್ಟು ಹೇಳಿದರೂ ಅರ್ಥ ಆಗೋಲ್ಲ’ ಎನ್ನಬಹುದು. ಆದರೆ ತಾಯಿಗೆ ಮಗ ಕೂಗಾಡಿದ್ದು ನೆನಪಲ್ಲಿರುವುದಿಲ್ಲ. ಆದರೆ ಅಪ್ಪನ ವಿಷಯದಲ್ಲಿ ಹೀಗಲ್ಲ, ಅಲ್ಲಿನ ಕಿತ್ತಾಟ ಬೇರೆ ಲೆವೆಲ್ಲಿಗೂ ಹೋಗುತ್ತದೆ. ಜೀವನ ಪೂರ್ತಿ ಅಪ್ಪನ ಜತೆ ಮಾತನಾಡದೆ ಇರುವ ಸ್ನೇಹಿತರು ಕೂಡ ನನಗಿದ್ದಾರೆ.
ಇದನ್ನೂ ಓದಿ: Rangaswamy Mookanahalli Column: ಆಷಾಢದಲ್ಲಿ ಮೈಸೂರಿನ ಅಂದವೇ ಬೇರೆ !
ಅಮ್ಮನ ಮುಖ ನೋಡದೆ, ಅಮ್ಮನನ್ನು ಶತ್ರುವಿನಂತೆ ಕಾಣುವ ಹೆಣ್ಣು ಮಕ್ಕಳನ್ನೂ ಕಂಡಿದ್ದೇನೆ. ಅದೇನು ಕಥೆಯೋ ಗೊತ್ತಿಲ್ಲ. ಆದರೆ ಇಂಥ ಅನೇಕ ಕೇಸುಗಳು ನಮ್ಮ ಮಧ್ಯದಲ್ಲಿ ಇರುತ್ತವೆ. ನೀವು ನೋಡಿರುತ್ತೀರಿ. ನನಗೆ ಅರ್ಥ ಆಗದೆ ಇರುವ ವಿಷಯ ಏನು ಗೊತ್ತಾ? ನಮ್ಮ ಜನ್ಮ, ನಮ್ಮ ಇರುವಿಕೆಗೆ ಕಾರಣ ಅವರು, ನಮ್ಮ ಹೆತ್ತವರು. ಏನೂ ಗೊತ್ತಿಲ್ಲದ ನಮ್ಮನ್ನು ಬೆಳೆಸಿ, ಓದಿಸಿ, ಅವರು ಬೇಕಾದದ್ದು ಕೊಳ್ಳದೆ, ಖರ್ಚು ಮಾಡದೆ ನಮಗಾಗಿ ಖರ್ಚು ಮಾಡುತ್ತಾರೆ.
ಅವರ ಬದುಕಿನ ಉದ್ದೇಶವೇ ನಾವು ಆಗಿ ಬಿಟ್ಟಿರುತ್ತೇವೆ. ಬದುಕಿನ ಪ್ರಥಮ 10-12 ವರ್ಷ ಕೂಡ ನಮಗೆ ಅವರೇ ಹೀರೋ, ಅವರೇ ಆದರ್ಶ. ಹೆಣ್ಮಕ್ಕಳ ಪಾಲಿಗೆ ಅಪ್ಪ, ನಮ್ಮ ಪಾಲಿಗೆ ಅಮ್ಮ. ಆದರೆ ಈ ಬದುಕು ಬದಲಾಗಿಬಿಡುತ್ತೆ ನೋಡ್ರಿ. ಅದ್ಯಾವಾಗ ಟೀನ್‌ಗೆ ಬರುತ್ತೇವೋ, ಆಗ ಅಪ್ಪ-ಅಮ್ಮ ಹೇಳಿದ ಎಲ್ಲಾ ಮಾತುಗಳೂ ಕಿವಿಗೆ ಕಾದ ಸೀಸ ಹುಯ್ದಂತೆ ಭಾಸವಾಗುತ್ತದೆ. ಅವರು ಎರಡನೇ ಬಾರಿ ಏನಾದರೂ ಕೇಳಿದರೆ ಸಾಕು ಕಿರಿಕಿರಿ ಆಗುತ್ತೆ.
ಕೂಗಾಟ, ಕಿರುಚಾಟ ಕಾಮನ್ ಆಗಿರುತ್ತೆ. ಹೀಗೆ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುತ್ತ, ನಮ್ಮನ್ನು ಅವರು, ಅವರನ್ನು ನಾವು ಸಹಿಸಿಕೊಂಡು ಹತ್ತು ವರ್ಷ ಕಳೆದುಹೋಗುತ್ತೆ. ಆ ನಂತರದ್ದು ಬೇರೆ ರೀತಿಯ ಬದುಕು. ದುಡಿಯೋಕ್ಕೆ ಶುರು ಮಾಡಿದ ಮೇಲೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವವರ ಸಂಖ್ಯೆ ಹೆಚ್ಚು. ಅಪ್ಪ ‘ಬೈ ಒನ್, ಗೆಟ್ ಒನ್ ಆಫರ್’ನಲ್ಲಿ ಬಂದ ಫ್ರೀ ಗಿಫ್ಟ್ ಥರ, ಅಮ್ಮನ ಜತೆಗೆ ಆತನಿಗೂ ಒಂದಷ್ಟು ಮರ್ಯಾದೆ ಸಿಗುತ್ತದೆ.

ಮೊದಲೇ ಹೇಳಿದ್ದೇನೆ, ಅಪವಾದ ಇದ್ದೇ ಇರುತ್ತದೆ. ಅಲ್ಲದೆ ಇದು ನಮ್ಮ ತಲೆಮಾರಿನ ಜನರ ಬಗ್ಗೆ ಬರೆದದ್ದು. ಈಗೀಗ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ಹೀಗೆ ಒಂದಷ್ಟು ವರ್ಷ ಕಳೆಯುತ್ತೆ, ನಿಧಾನಕ್ಕೆ ಮದುವೆ ಮಕ್ಕಳು ಬರುತ್ತಾರೆ. ಅಪ್ಪ ಅಮ್ಮನಿಗೆ ಏನೂ ತಿಳಿಯುವುದಿಲ್ಲ ಎನ್ನುವ ಮನೋಭಾವ ಬೆಳೆಯುತ್ತದೆ.
ಟೀನ್‌ನಲ್ಲಿದ್ದ ಕಿರಿಕಿರಿ ಮತ್ತೆ ಶುರುವಾಗುತ್ತೆ. ಅದರಲ್ಲೂ ಇವತ್ತಿನ ನಗರ ಪ್ರದೇಶದ ಜೀವನದಲ್ಲಿ ಅಪ್ಪ ಅಮ್ಮ ಕೈ ಖಾಲಿ ಮಾಡಿಕೊಂಡು ಮಕ್ಕಳ ಮೇಲೆ ಡಿಪೆಂಡ್ ಆಗಿದ್ದರೆ ಅಲ್ಲಿಗೆ ಕಥೆ ಮುಗಿ ಯಿತು ಎನ್ನಬಹುದು. ಅವರು ಬರ್ಡನ್ ಎನ್ನಿಸಲು ಶುರುವಾಗುತ್ತದೆ. ಅವರು ತ್ಯಾಗ ಮಾಡಿ, ಅವರ ಬೇಕುಬೇಡಗಳ ಬದಿಗಿಟ್ಟು ನಮಗಾಗಿ ಮಾಡಿದ ಖರ್ಚು, ನೀಡಿದ ಸವಲತ್ತು ಮರೆತು ಹೋಗುತ್ತದೆ. ಅವರು ನಮಗೆ ಬರ್ಡನ್ ಆಗಿಬಿಡುತ್ತಾರೆ. ಈ ಬದುಕು ಎನ್ನುವುದೇ ಅದೆಷ್ಟು ಕೆಟ್ಟದ್ದು ಅಲ್ವಾ ಎನ್ನಿಸಿಬಿಡುತ್ತದೆ.
ಅವರ ಮಕ್ಕಳು ನಿಧಾನಕ್ಕೆ ಟೀನ್‌ಗೆ ಬಂದಾಗ ಜೀವನಚಕ್ರದ ಕಥೆ ಅರಿವಾಗುತ್ತದೆ. ಅಪ್ಪ ಅಮ್ಮನ ನಿಜವಾದ ಬೆಲೆ ತಿಳಿಯುತ್ತದೆ. ನೀವೆಷ್ಟೇ ಕಥೆ ಹೇಳಿ, ಏನೇ ಮಾಡಿ ಇದೊಂದು ಸೈಕಲ್ ಮಾತ್ರ ಬದಲಾಗುವುದೇ ಇಲ್ಲ ಅನ್ನಿಸುತ್ತೆ. ಕೆಲವು ಮನೆಗಳಲ್ಲಿ ಈ ಪಾಠವನ್ನೂ ಕಲಿಯುವುದಿಲ್ಲ. ಹೆತ್ತವರ ಹೊಟ್ಟೆ ತುಂಬಾ ಊಟ ಕೂಡ ಹಾಕದ ನಿರ್ದಯಿ ಜನರನ್ನು ಕಂಡಿದ್ದೇನೆ.
ಥೇಟ್ ‘ಬಾಗ್‌ಬಾನ್’ ಚಿತ್ರದಲ್ಲಿ ಮಾಡಿದಂತೆ ತಂದೆ ತಾಯಿಯನ್ನು ವರ್ಷಪೂರ್ತಿ ಡಿವೈಡ್ ಮಾಡಿ ಹಂಚಿಕೊಳ್ಳುವ ಮಕ್ಕಳನ್ನು ಕಂಡಿದ್ದೇನೆ. ಆದರೆ ಇಂಥ ಜನಕ್ಕೆ ಕರ್ಮ ಎನ್ನುವುದು ಗೊತ್ತಿಲ್ಲ. ಅದು ಅವರನ್ನು ಬಾಧಿಸದೆ ಬಿಡುವುದಿಲ್ಲ. ಎಲ್ಲಕ್ಕೂ ಅಪವಾದವಿದೆ, ಡಿಮ್ಯಾಂಡಿಂಗ್ ಆಗಿ ಮಕ್ಕಳ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ, ಇಂದಿಗೂ ನಿನ್ನೆಯ ಪ್ರಸ್ತುತತೆ ಉಳಿಸಿಕೊಳ್ಳಬೇಕು ಎಂದು ಬಯಸುವ ಪೋಷಕರನ್ನು ಕಂಡಿದ್ದೇನೆ.
ಮಕ್ಕಳೂ ಸರಿಯಾಗಿದ್ದು, ಪೋಷಕರೂ ಹೊಂದಿಕೊಂಡು, ಮುಂದಿನ ಸಂತಾನ ಕೂಡ ನಗು ನಗುತ್ತಾ ಇರುವ ಮನೆಗಳು ಕಡಿಮೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇನೆ. ಸರಿ ತಪ್ಪು ಎನ್ನುವು ದನ್ನು ಹೇಳಲು, ವಿಶ್ಲೇಷಿಸಲು ಹೋಗುವುದಿಲ್ಲ. ಏಕೆಂದರೆ ಪ್ರತಿಯೊಂದೂ ವಿಭಿನ್ನ ಪರಿಸ್ಥಿತಿಯಲ್ಲಿ ಉತ್ಪನ್ನವಾದವು. ಅವರವರ ವಿವೇಚನೆ, ಮನುಷ್ಯತ್ವ ಅವರ ತಲೆ ಕಾಯುತ್ತದೆ. ಬದುಕಿಗೆ ಅಪ್ಪ ಅಮ್ಮ ಇಬ್ಬರೂ ಬೇಕು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯೂ ಅಲ್ಲ. ಒಬ್ಬರನೊಬ್ಬರು ರೀಪ್ಲೇಸ್ ಮಾಡಲು ಕೂಡ ಸಾಧ್ಯವಿಲ್ಲ. ನಮ್ಮದಿನ್ನೂ ರಿಟೈರ್ಮೆಂಟ್ ಪ್ಲಾನ್ ಮಾಡದ, ಮಕ್ಕಳಿಗಾಗಿ ಇರುವುದೆ ಖರ್ಚು ಮಾಡಿ ಖಾಲಿ ಕೈಯಲ್ಲಿ ನಿಲ್ಲುವ ಸಮಾಜ. ಹೀಗಾಗಿ ಅಪ್ಪ ಅಮ್ಮ ಬರ್ಡನ್ ಅಲ್ಲ. ಅದು ನಮ್ಮ ಕರ್ತವ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಉಳ್ಳವರ ಬದುಕು ಬೇರೆ ರೀತಿಯಲ್ಲಿ ಈಗಾಗಲೇ ಬದಲಾಗಿದೆ. ಒಂದು ಭಾರತದಲ್ಲಿ ಹತ್ತು ಭಾರತ ವಿದೆ.
ಅಂಥವರಿಗೆ ಈ ಬರಹವಲ್ಲ. ಆದರೆ ನಮ್ಮ ಜನರೇಷನ್ ಇದೆಯಲ್ಲ ಅಂದರೆ ಇವತ್ತಿಗೆ 45/50ರ ವಯೋಮಾನದ ಜನ, ನಮ್ಮದು ತೀರಾ ವಿಚಿತ್ರ ಪರಿಸ್ಥಿತಿ. ಅತ್ತ ಟೀನ್ ಅಥವಾ ಇಪ್ಪತ್ತರ ಮಕ್ಕಳನ್ನೂ ಸಂಭಾಳಿಸಬೇಕು. ಇತ್ತ ಎಲ್ಲವನ್ನೂ ನಮಗಾಗಿ ಖರ್ಚು ಮಾಡಿ ಈಗ ನಮ್ಮನ್ನು ಅವಲಂಬಿಸಿರುವ ಹೆತ್ತವರನ್ನೂ ಕಾಪಾಡಿಕೊಳ್ಳಬೇಕು. ನಮ್ಮ ಹೆತ್ತವರ ಕಾಲ ಬೇರೆಯದಿತ್ತು. ಅವರು ಪೂರ್ಣ ನಂಬಿಕೆಯಿಂದ ಇದ್ದದ್ದೆಲ್ಲವನ್ನೂ ನಮಗಾಗಿ, ಬದುಕಿಗಾಗಿ ಖರ್ಚು ಮಾಡಿದರು.
ಆದರೆ ನಾವು? ನಮ್ಮ ಹೆತ್ತವರಂತೆ ಎಲ್ಲವನ್ನೂ ನಮ್ಮ ಮಕ್ಕಳು ನೋಡಿಕೊಳ್ಳಲಿ ಅಥವಾ ನೋಡಿ ಕೊಳ್ಳುತ್ತಾರೆ ಎಂದು ಧೈರ್ಯವಾಗಿ ಕೂರಬವೆ? ಹಾಗೆ ಕೂರುವುದು ಸಾಧ್ಯವೇ? ಸಾಧುವೇ? ಹೀಗಾಗಿ ನಮ್ಮ ತಲೆಮಾರಿನದ್ದು ವಿಚಿತ್ರ ಹೊಯ್ದಾಟ. ಬದುಕಿನ ಎಲ್ಲಾ ಖರ್ಚುಗಳ ಬಂಡಿಯನ್ನು ಹೊಡೆಯುತ್ತ ಸಂಧ್ಯಾಕಾಲಕ್ಕೂ ಒಂದಷ್ಟು ಗಂಟು ಮಾಡಿಟ್ಟು ಕೊಳ್ಳಬೇಕಾದ ಪರಿಸ್ಥಿತಿ ನಮ್ಮದು.
ಇವೆಲ್ಲವುಗಳ ಜತೆಗೆ ಇನ್ನೊಂದು ಪ್ರಮುಖ ಅಂಶವನ್ನು ಕೂಡ ನಿಮಗೆ ಹೇಳಬೇಕಿದೆ. ಅದು ನಿಮ್ಮ ಕಥೆಯೂ ಹೌದು, ನನ್ನದೂ ಹೌದು. ಹಾಗೆ ನಮ್ಮಂಥ ಲಕ್ಷ ಲಕ್ಷ ಜನರದ್ದು ಹೌದು. ಅದೇನು ಗೊತ್ತ? ಆರೋಗ್ಯ. 45/50ರ ವೇಳೆಗೆ ಬೇಡವೆಂದರೂ ಬಿಪಿ ಮತ್ತು ಶುಗರ್ ದೇಹದಲ್ಲಿ ವಾಸ ಮಾಡಲು ಆರಂಭಿಸಿಬಿಡುತ್ತವೆ. ‘ಅಲ್ಲಪ್ಪ ನಿಮ್ಮನ್ನು ಯಾರು ಕರೆದದ್ದು?’ ಎನ್ನುವುದಕ್ಕೆ ಅವುಗಳು ಉತ್ತರ ಕೊಡುವುದಿಲ್ಲ.
ಒಮ್ಮೆ ಬಂದರೆ ಝಾಂಡಾ ಹೂಡಿ ಬಿಡುತ್ತವೆ. ಮತ್ತೆಂದೂ ನಮ್ಮನ್ನು ಅವು ಬಿಟ್ಟು ಹೋಗುವು ದಿಲ್ಲ. ಅವುಗಳ ಜತೆಗೆ ಬದುಕಬೇಕು. ಮುಕ್ಕಾಲು ಪಾಲು ಮನೆಗಳಲ್ಲಿ ಹೆತ್ತವರಿಗೆ ಇದ್ಯಾವುದೂ ಇರುವುದಿಲ್ಲ. ಅವರು ತಿಂದುಂಡು ಆರಾಮಾಗಿರುತ್ತಾರೆ. ಅವರಿಗಿರುವ ಆರೋಗ್ಯ ಭಾಗ್ಯ ನಮ್ಮ ವಯೋಮಾನದವರಿಗಿಲ್ಲ. ಮತ್ತೊಮ್ಮೆ ಹೇಳಿ ಬಿಡುತ್ತೇನೆ. ಎಲ್ಲದಕ್ಕೂ ಅಪವಾದ ಇದ್ದೇ ಇರುತ್ತದೆ.
ಹೀಗಾಗಿ ನಾವು ಆರೋಗ್ಯ ವಿಮೆಯನ್ನು ಕೂಡ ಮಾಡಿಸಬೇಕು. ಯಾವ ಗಳಿಗೆಯಲ್ಲಿ ಯಾರಿಗೆ ಏನು ಬೇಕಾದರೂ ಆಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಟರ್ಮ್ ಇನ್ಸೂರೆನ್ಸ್ ಬೇಕೇಬೇಕು. ಅಂದಹಾಗೆ ಇವೆಲ್ಲಕ್ಕೂ ನಾಮಿನೇಷನ್ ಕೂಡ ಬೇಕು. ನಾವೇ ಬಯಸಿ ಕಟ್ಟಿಕೊಂಡ ಬದುಕನ್ನು ಅದೆಷ್ಟು ಸಂಕ್ಲಿಷ್ಟಗೊಳಿಸಿಕೊಂಡುಬಿಟ್ಟೆವು ಅನ್ನಿಸುತ್ತೆ.
ಇಂದಿನ ದಿನಗಳಲ್ಲಿ ಬದುಕು ಎಷ್ಟು ಅಸ್ಥಿರ ಎನ್ನುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಹೀಗಾಗಿ ನಮ್ಮ ಸ್ಥಿರಾಸ್ಥಿ ಮತ್ತು ಚರಾಸ್ಥಿ ನಮ್ಮ ನಂತರ ಯಾರಿಗೆ ಸೇರಬೇಕು ಎನ್ನುವ ನಿಖರತೆ ಮತ್ತು ಅದನ್ನು ಅಕ್ಷರರೂಪಕ್ಕೆ ಇಳಿಸಿ ಅದಕ್ಕೊಂದು ಸಹಿ ಹಾಕಿ ರಿಜಿಸ್ಟರ್ ಮಾಡಿಸಿಡುವುದು ಮಾಡಲೇ ಬೇಕಾದ ಕೆಲಸ. ಈ ಕೆಲಸವನ್ನು ಹಿರಿಯ ನಾಗರಿಕರು ಮಾಡಬೇಕು ಎಂದಲ್ಲ.
ಈ ರೀತಿಯ ಉಯಿಲು ಬರೆದಿಡುವುದು ಮತ್ತು ನಾಮಿನೇಷನ್ ಮಾಡುವುದು ಎಲ್ಲರೂ ಮಾಡಬೇಕು. ಇದಕ್ಕೆ ವಯಸ್ಸಿನ ನಿರ್ಬಂಧ ತೊಡಿಸುವ ಅಗತ್ಯತೆಯಿಲ್ಲ. ಒಬ್ಬ ವ್ಯಕ್ತಿ ಜೀವಿತಾವಧಿ ಯಲ್ಲಿ ಹಲವಾರು ಹಣಕಾಸು ವ್ಯವಹಾರಗಳನ್ನು ಮಾಡುತ್ತಾನೆ. ಹಾಗೆ ವ್ಯವಹರಿಸುವ ವ್ಯಕ್ತಿಗೆ ಆಕಸ್ಮಿಕವಾಗಿ ಏನಾದರೂ ಆದರೆ ಎನ್ನುವ ಕಾರಣಕ್ಕೆ ನಾಮಿನಿಯನ್ನು ನೇಮಿಸಬೇಕಾಗುತ್ತದೆ.
ಹೀಗೆ ನಿರ್ದೇಶಿಸಲ್ಪಟ್ಟ ವ್ಯಕ್ತಿ ಮುಂದಿನ ಎಲ್ಲಾ ಹಕ್ಕುಗಳಿಗೆ ಬಾಧ್ಯಸ್ಥನಾಗುತ್ತಾನೆ. ಕೆಲವೊಂದು ಆಸ್ತಿಗಳನ್ನು ಕೇವಲ ನಾಮಿನಿ ಮೂಲಕ ಹೇಳಲಾಗುವುದಿಲ್ಲ. ಅಥವಾ ನಾಮಿನಿ ಇಲ್ಲದ ಕಡೆಗೆ ವಿಲ್ ಅಥವಾ ಉಯಿಲು ಮಾಡಿಡುವುದು ಬಹಳ ಅವಶ್ಯಕ. ಗಮನಿಸಿ ಮನೆ, ನೆಲ, ಬಂಗಾರ ಇತ್ಯಾದಿ ಆಸ್ತಿಗಳಿಗೆ ನಮ್ಮ ನಂತರ ಯಾರು ವಾರಸುದಾರರು ಎನ್ನುವುದನ್ನು ಬರೆದಿಡಬೇಕು,
ಅದಕ್ಕೆ ಸಹಿ ಹಾಕಿ ಅದನ್ನು ರಿಜಿಸ್ಟರ್ ಮಾಡಿಡಬೇಕು. ರಿಜಿಸ್ಟರ್ ಮಾಡಿರದ ಉಯಿಲಿಗೆ ಬೆಲೆ ಇರುವುದಿಲ್ಲ. ಏನೂ ಇಲ್ಲ ಎನ್ನುವುದಕ್ಕಿಂತ ಏನೂ ಇದೆ ಎನ್ನುವುದು ವಾಸಿ. ಆದರೆ ಯಾವಾಗಲೂ ವಿಲ್ ರಿಜಿಸ್ಟರ್ ಮಾಡುವುದು ಉತ್ತಮ. ಇದನ್ನು ಕೂಡ ಹಿರಿಯ ನಾಗರಿಕರಾದ ಮೇಲೆ ಮಾಡಬೇಕು ಎನ್ನುವ ಕಡ್ಡಾಯವಿಲ್ಲ.
ಆಸ್ತಿ ಜಾಸ್ತಿಯಿದ್ದಾಗ, ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಾಗ, ಅಥವಾ ವಯಸ್ಸು ಐವತ್ತರ ಆಜುಬಾಜಿಗೆ ಬಂದಾಗ, ಕೈಯಲ್ಲಿ, ಮಿದುಳಿನಲ್ಲಿ ಶಕ್ತಿಯಿದ್ದಾಗ ವಿಲ್ ಮಾಡಿಡುವುದು ಉತ್ತಮ. ನಾಮಿನಿ ವಿಚಾರದಲ್ಲಿ ಆದ ಹಾಗೆ ಇಲ್ಲಿ ಕೂಡ ವಿಲ್ ಇರದಿದ್ದರೆ ಬಹಳ ಕಷ್ಟವಾಗುತ್ತದೆ. ವಿಲ್ ಇzಗ ಸುಲಭವಾಗಿ ಮಾಲೀಕತ್ವ ನಾವು ಇಚ್ಛೆಪಟ್ಟವರದ್ದಾಗುತ್ತದೆ.
ಹಿಂದೆ ಹಣವಿರಲಿಲ್ಲ ಆದರೆ ಸಂಬಂಧಗಳು ಚೆನ್ನಾಗಿ ಇರುತ್ತಿದ್ದವು. ದಾಯಾದಿ ಕಲಹ ಎಲ್ಲಾ ಕಾಲದಲ್ಲೂ ಇತ್ತು. ರಾಮ-ಲಕ್ಷಣ ಇವರೆ ಎಂದಾಗೆ ವಾಲಿ-ಸುಗ್ರೀವರ ಹೆಸರೂ ಉಲ್ಲೇಖವಾಗುತ್ತದೆ ಅಲ್ಲವೇ? ಆದರೆ ಇಂದು ಸಂಬಂಧಗಳು ಬೇರೆ ಲೆವೆಲ್ಲಿಗೆ ಹೋಗಿವೆ. ಮುಕ್ಕಾಲು ಪಾಲು ಎಲ್ಲವೂ ಹಣದಿಂದ, ಹಣದಲ್ಲಿ ಹುಟ್ಟಿ ಹಣದ ವಿಚಾರದಲ್ಲಿ ಕೊನೆಯಾಗುತ್ತಿದೆ. ಕುರುಡು ಕಾಂಚಾಣ ಪದ್ಯದಲ್ಲಿ ಕವಿ ವರ್ಣಿಸುವುದು ನೆನೆದಾಗ ಜಗತ್ತು ಯಾವತ್ತಿಗೂ ಹೀಗೇ ಇತ್ತೇನೋ, ನನಗೆ ಈಗ ಅರಿವಿಗೆ ಬಂತೇನೋ? ಎನ್ನಿಸುತ್ತಿದೆ.