ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ರಾಜಣ್ಣನ ಬಾಯಲ್ಲಿ ‘ಓಹೋ ಪ್ರೇಮ ಕಾಶ್ಮೀರ’ ಎಂದು ಹಾಡಿಸಿಕೊಂಡ ಭೂಮಿ.. ‘ಅಲ್ಲ ನಾನು ರಕ್ತ ಕಾಶ್ಮೀರ’ ಎಂದು ಅಟ್ಟಹಾಸ ಮೆರೆದಿತ್ತು, ಇತ್ತೀಚಿನ ವರ್ಷಗಳಲ್ಲಿ ಪುಲ್ವಾಮಾ ದಾಳಿಯಲ್ಲಿ ಯೋಧರು ಹತರಾದಾಗ ಹೀಗೆ ಮನಸು ಮಗುಚಿಬಿದ್ದದ್ದು. ಆನಂತರ ಪುನೀತ್ ಅಕಾಲಿಕ ಮರಣ ಅತೀವವಾಗಿ ಡಿಪ್ರೆಸ್ ಮಾಡಿತ್ತು. ಆ ನಂತರದಲ್ಲಿ ಚೇತರಿಸಿಕೊಂಡ ಮನಸ್ಸಿಗೆ ಈ ಬಾರಿಯ ಕಾಶ್ಮೀರದ ದುರಂತ ಕೊಟ್ಟಿರೋ ನೋವು ನಿಜಕ್ಕೂ ಚಿಕ್ಕದಲ್ಲ

ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ಪದಸಾಗರ

ಈ ವಾರದ ಅಂಕಣಕ್ಕೆ ಅಂತ ತಲೆ ತುಂಬ ಏನೇನೋ ವಿಚಾರಗಳು ಅಸ್ಪಷ್ಟವಾಗಿ ರೆಡಿಯಾಗಿದ್ದವು. ಯಾವುದಾದರೊಂದನ್ನು ಹೆಕ್ಕಿ ಬರಹಕ್ಕಿಳಿಸೋದಷ್ಟೇ ಬಾಕಿ ಎಂಬಂತಿತ್ತು ಮನಸು. ಆದರೆ ಕಾಶ್ಮೀರದ ಘಟನೆ ಮಿದುಳನ್ನ, ಮನಸನ್ನ ಕಂಪ್ಲೀಟಾಗಿ ಹೊಸಕಿ ಫಾರ್ಮೆಟ್ ಮಾಡಿ ಹಾಕಿದೆ.

ಫಾರ್ಮೆಟ್ ಮಾಡಿ ಖಾಲಿ ಬಿಟ್ಟಿಲ್ಲ. ದುಃಖ, ಆಕ್ರೋಶ, ಕಣ್ಣೀರು, ಸಂಕಟಗಳನ್ನು ಯಥೇಚ್ಛವಾಗಿ ತುಂಬಿಸಿ ಅದರಿಂದ ಹೊರಬರಲಾಗದಂತೆ ಜರ್ಜರಿತಗೊಳಿಸಿ ಬಿಟ್ಟಿದೆ. ಏನನ್ನೂ ಬರೆಯಲಾಗದ ಅಸಹಾಯಕತೆ. ಏನನ್ನೂ ಯೋಚಿಸಲಾಗದ ಶೂನ್ಯಭಾವ. ಈ ಹೊತ್ತಲ್ಲಿ ಯಾರಾದ್ರೂ ಕಾಶ್ಮೀರದ ನರಮೇಧಕ್ಕೆ ಸಂಬಂಧಿಸಿದ್ದನ್ನು ಬಿಟ್ಟು ಬೇರೇನನ್ನೋ ಬರೆದರೆ ಅವರಿಗೆ ಸಂವೇದನೆಗಳೇ ಇಲ್ಲವಾ ಅಂತ ನಾನು ಪ್ರಶ್ನಿಸೋದಿಲ್ಲ. ಪ್ರಶ್ನಿಸಲೂ ಬಾರದು.

ಅವರಿಗೆ ದುಃಖವಿಲ್ಲ, ಬೇಸರವಿಲ್ಲ ಅಂತ ಯಾಕೆ ಅಂದ್ಕೋಬೇಕು? ಅವರು ಅದರಿಂದ ಹೊರ ಬರುವ ಮಾರ್ಗವಾಗಿ ಬೇರೇನನ್ನೋ ಮಾತನಾಡಲು ಪ್ರಯತ್ನಿಸ್ತಾ ಇದ್ದಿರಬಹುದು. ಆದರೆ ನನ್ನಿಂದ ಸಾಧ್ಯವಾಗ್ತಾ ಇಲ್ಲವಷ್ಟೆ. ಅವತ್ತು ಬೆಂಗಳೂರು, ಕರ್ನಾಟಕ ಮಾತ್ರ ಅಲ್ಲ ದೇಶಕ್ಕೆ ದೇಶವೇ ಐಪಿಎಲ್‌ನಲ್ಲಿ ಮುಳುಗಿತ್ತು. ಫ್ರಾಂಚೈಸಿಗಳ ನಡುವಣ ಸ್ಪರ್ಧೆಯಲ್ಲಿ ರಾಜ್ಯನಿಷ್ಠೆ, ಭಾಷಾನಿಷ್ಠೆ ಇವೆಲ್ಲದರ ಮಾಪನಗಳಾಗ್ತಾ ಇದ್ವು. ರಾಜ್ಯರಾಜ್ಯಗಳು ಯಃಕಶ್ಚಿತ್ ಐಪಿಎಲ್ ಹೆಸರಲ್ಲಿ ಕಚ್ಚಾಡಿ ಕೊಂಡು ಕಾಲೆಳೆದುಕೊಂಡು ಬಡಿದುಕೊಳ್ತಿದ್ವು.

ಇದನ್ನೂ ಓದಿ: Naveen Sagar Column: ಮುಖ ನೋಡಿ ಮೊಳ ಹಾಕಬೇಡ ಗುಣನೋಡಿ ಅಳೆಯಮ್ಮ !

ಬೆಂಗಳೂರಿನಲ್ಲಿ ಕನ್ನಡಿಗನಿಗೆ ಉತ್ತರದ ಯೋಧನೊಬ್ಬ ಹೊಡೆದ ಅಂತ ಯುದ್ಧ ಘೋಷಣೆ ಆಗಿತ್ತು. ಇಷ್ಟು ಸುಖವಾಗಿದ್ದ ಹೊತ್ತಲ್ಲಿ ಕಾಶ್ಮೀರದ ಪಹಲ್ಗಾಮ್ ಎಂಬ ಇಂಡಿಯನ್ ಸ್ವಿಜರ್ಲೆಂಡಿ ನ ಹಸಿರು ಹಾಸು ರಕ್ತದಿಂದ ಕೆಂಪಾಗಿತ್ತು. ಭೂಸ್ವರ್ಗ ಎಂದು ಬಣ್ಣನೆಗೊಳಗಾಗೋ ಕಾಶ್ಮೀರದ ನಿಜರೂಪ ಅನಾವರಣಗೊಂಡಿತ್ತು.

ರಾಜಣ್ಣನ ಬಾಯಲ್ಲಿ ‘ಓಹೋ ಪ್ರೇಮ ಕಾಶ್ಮೀರ’ ಎಂದು ಹಾಡಿಸಿಕೊಂಡ ಭೂಮಿ.. ‘ಅಲ್ಲ ನಾನು ರಕ್ತ ಕಾಶ್ಮೀರ’ ಎಂದು ಅಟ್ಟಹಾಸ ಮೆರೆದಿತ್ತು, ಇತ್ತೀಚಿನ ವರ್ಷಗಳಲ್ಲಿ ಪುಲ್ವಾಮಾ ದಾಳಿಯಲ್ಲಿ ಯೋಧರು ಹತರಾದಾಗ ಹೀಗೆ ಮನಸು ಮಗುಚಿಬಿದ್ದದ್ದು. ಆನಂತರ ಪುನೀತ್ ಅಕಾಲಿಕ ಮರಣ ಅತೀವವಾಗಿ ಡಿಪ್ರೆಸ್ ಮಾಡಿತ್ತು. ಆ ನಂತರದಲ್ಲಿ ಚೇತರಿಸಿಕೊಂಡ ಮನಸ್ಸಿಗೆ ಈ ಬಾರಿಯ ಕಾಶ್ಮೀರದ ದುರಂತ ಕೊಟ್ಟಿರೋ ನೋವು ನಿಜಕ್ಕೂ ಚಿಕ್ಕದಲ್ಲ.

ಯೋಧರು ಸೇನೆ ಸೇರಿದ ದಿನವೇ ತಮ್ಮ ಸಾವನ್ನು ನಿರ್ಧರಿಸಿಕೊಂಡಿರ್ತಾರೆ. ಯೋಧರು ಯುದ್ಧ ದಲ್ಲಿ ಹುತಾತ್ಮರಾದಾಗ ಮನಸ್ಸಿಗೆ ಎಷ್ಟೇ ದುಃಖವಾದರೂ ಅದರಲ್ಲಿ ಒಂದು ಹೆಮ್ಮೆ ಇರುತ್ತದೆ ಅವರ ಬಗ್ಗೆ. ಆದರೆ ಪಹಲ್ಗಾಮ್‌ನಲ್ಲಿ ಗುಂಡಿಗೆ ಬಲಿ ಆದದ್ದು ಅಮಾಯಕ ಜೀವಗಳು. ಕಾಶ್ಮೀರ ವನ್ನು ಸುಂದರ-ಸುರಕ್ಷಿತ ಎಂದು ನಂಬಿ ಬಂದ ಪ್ರವಾಸಿಗರು. ಸುಂದರ ನಿಜ. ಆದರೆ ಸುರಕ್ಷಿತ? ಕರ್ನಾಟಕದವರೂ ಬಲಿಯಾಗಿದ್ದಾರಂತೆ, ಮಂಜುನಾಥ್ ರಾವ್ ಅಂತೆ... ಹೀಗಂತ ಸುದ್ದಿ ಬಂದಾಗ ಆದ ಬೇಸರ ಬೇರೆ. ಆದರೆ ಬಲಿಯಾಗಿರುವ ಮಂಜುನಾಥ್ ನನ್ನ ಹೈಸ್ಕೂಲ್ ಕ್ಲಾಸ್ ಮೇಟ್ ಅಂತ ಗೊತ್ತಾದಾಗ ಆದ ಸಂಕಟ ವಿವರಣೆಗೆ ಮೀರಿದ್ದು. ಮಂಜು...!

ಫೇಸ್ಬುಕ್ಕಲ್ಲಿ ದಶಕಗಳ ನಂತರ ಕನೆಕ್ಟ್ ಆಗಿ ಹಳೆಯ ದಿನಗಳನ್ನೆಲ್ಲ ನೆನಪಿಸಿ ಪರಿಚಯ ಮಾಡ್ಕೊಂಡಿದ್ದ. “ನಂದೇ ವಯಸ್ಸು ನಿಂಗೆ. ಆದ್ರೆ ಹೀರೋ ಥರ ಇದೀಯ... ನೀನು ಬಿಡು ಎಲ್ಲರಿಗೂ ಪರಿಚಯ.. ಎಷ್ಟೊಂದ್ ಜನ ಅಭಿಮಾನಿಗಳು ನಿಂಗೆ" ಹೀಗೆ ಏನೇನೋ ಮನಸಿಗೆ ತೋಚಿದ ಹಾಗೆ ಹೊಗಳ್ತಾ ಇದ್ದ (ಇದನ್ನು ಆತ್ಮರತಿ ಇತ್ಯಾದಿಗಳ ಫ್ರೇಮಲ್ಲಿಟ್ಟು ನೋಡಬೇಡಿ). ನಾನು ಅವನೆದುರು ಸಂಕೋಚದಲ್ಲಿ, “ಅಯ್ಯೋ ಏನಿಲ್ಲಪ್ಪ ಈ ಫೇಸ್ಬುಕ್ಕಲ್ಲಿ ಎಲ್ಲರೂ ಹಾಗೇ ಅನಿಸ್ತಾರೆ... ರಿಯಲ್ ಲೈಫಲ್ಲಿ ನೀನು ಬೆಳೆದಿದೀಯ.

ಅದು ಮುಖ್ಯ" ಅಂತ ತಿರುಗಿ ಮಾತಾಡಿದ್ದೆ. ಮೆಸೇಜು, ಫೋನುಗಳಲ್ಲಿ ಮಾತನಾಡಿಕೊಂಡಿದ್ದ ನಾವು ಭೇಟಿಯಾಗುವುದು ಬಾಕಿ ಇತ್ತು. ಸಿಗೋಣ ಅಂತ ‘ಬೈ’ ಅಂದಿದ್ದೇ ಕೊನೆಯ ಮಾತು. ಜನವರಿಯಲ್ಲಿ ಮಾತನಾಡಿಕೊಂಡಿದ್ದು. ಮೂರು ತಿಂಗಳಲ್ಲಿ ಮಂಜು ಮರೆಯಾಗಿದ್ದಾನೆ. ನೀನು ಫೇಮಸ್.. ನೀನು ಹೀರೋ ಅಂತೆಲ್ಲ ಹೇಳಿದ್ದ ಮಂಜುವಿನ ಬದುಕು ಚರಿತ್ರೆಯ ಪುಟವಾಗಿದೆ. ಹೀರೋ ಆಗಿ ಜೀವನ ಮುಗಿಸಿದ್ದಾನೆ. ಯಾರಿಗೂ ಖುಷಿಯಾಗದ ರೀತಿಯಲ್ಲಿ ಸಂಕಟ ಉಮ್ಮಳಿಸುವ ರೀತಿಯಲ್ಲಿ ಅವನ ಹೆಸರು ಮನೆಮಾತಾಗಿದೆ. ಮಂಜು ಈಗ ಇಡೀ ದೇಶಕ್ಕೆ ಗೊತ್ತು.

ಅವ್ನಿಗೆ ಮಾತ್ರ ಅದು ಗೊತ್ತಿಲ್ಲ. ಉಗ್ರರ ಕೈಲಿ ಸಿಕ್ಕು ಮುಸಲ್ಮಾನನೋ ಹಿಂದೂನೋ ಅಂತ ಕೇಳಿದಾಗ ಜೀವ ಉಳಿಸಿಕೊಳ್ಳೋಕೆ ಮುಸಲ್ಮಾನ ಅಂತ ಹೇಳಲಿಲ್ಲ. ಆಗಲೇ ಮಂಜು ಹೀರೋ ಆದ. ‘ಕುತ್ತೇ ನನ್ನನ್ನೂ ಗುಂಡಿಟ್ಟು ಕೊ’ ಅಂತ ಧೈರ್ಯದಿಂದ ಉಗ್ರನ ಎದುರು ಕಿರುಚಿದನಲ್ಲ ಅಂಥ ಸಿಂಹದ ಮರಿಯ ತಂದೆ ಆದಾಗಲೇ ಮಂಜು ಹೀರೋ ಆಗಿದ್ದ, ಮಂಜು ಸಾವನ್ನು ಜೀರ್ಣಿಸಿಕೊಳ್ಳ ಲಾಗುತ್ತಿಲ್ಲ.

ಉಹೂಂ. ಪಹಲ್ಗಾಮ್ ದುರಂತದ ಯಾವ ಸಾವನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ; ಜೀವ ಎಷ್ಟು ಅನಿಶ್ಚಿತ, ಕ್ಷಣಿಕ. ಮಂಜು ನಾನು ಭಾರಿ ದೋಸ್ತ್‌ ಗಳೇನೂ ಅಲ್ಲ. ಆದರೆ ಇಂಥ ಘಟನೆಗಳು ಭಾವೋ ದ್ವೇಗಕ್ಕೆ ಒಳಪಡಿಸಿ ವಿಪರೀತ ಡಿಸ್ಟರ್ಬ್ ಮಾಡಿಬಿಡ್ತವೆ. ಎರಡು-ಮೂರು ದಿನಗಳಾದರೂ ಐಪಿಎಲ್ ಕಡೆ ಮುಖ ಹಾಕಲು ಮನಸು ಬರಲಿಲ್ಲ. ಏನು ಓದಿದರೂ, ನೋಡಿದರೂ ಮನಸು ಇಲ್ಲೇ ಸುತ್ತುತ್ತಿತ್ತು. ಹೇಗಾದ್ರೂ ಮರೆಯೋಣ ಅಂತ ಹೊಸ ಸಿನಿಮಾದ ಪ್ರೀಮಿಯರ್ ಅಂತ ಹೋದರೆ ಅಲ್ಲಿ ‘ಗ್ರೌಂಡ್ ಜೀರೋ’ ಎಂಬ ಸಿನಿಮಾದ ಟ್ರೇಲರ್. ಅದರಲ್ಲಿ ಕಾಶ್ಮೀರದ ನಿಜ ಘಟನೆ ಗಳಿಂದ ಪ್ರೇರಿತ ದೃಶ್ಯಗಳ ಸರಮಾಲೆ.

‘ಕಾಶ್ಮೀರದ ಜಮೀನೇನೋ ನಮ್ಮದು. ಆದ್ರೆ ಕಾಶ್ಮೀರದ ಜನರು?’ ಅಂತ ಫೌಜಿಯೊಬ್ಬ ಕೇಳ್ತಾ ಇದ್ರೆ.. ಮತ್ತೆ ಅದು ಇಲ್ಲಿನ ದುರ್ಘಟನೆಗೇ ತಳಕು ಹಾಕಿಕೊಳ್ತಿತ್ತು. ಕಾಶ್ಮೀರದ ಅಪರಾಧಿಗಳನ್ನು ಅರೆ ಮಾಡೋದಲ್ಲ ಅವರ ಕೈಯಿಂದ ಬಂದೂಕು ಬಿಡಿಸಬೇಕು, ಮನಪರಿವರ್ತನೆ ಮಾಡಬೇಕು, ಅದರಲ್ಲಿ ನಿಜವಾದ ಗೆಲುವಿರೋದು ಅಂತ ಯೋಧ ಭರವಸೆಯಲ್ಲಿ ಮಾತನಾಡ್ತಾ ಇದ್ರೆ, ಮತ್ತೆ ಮತ್ತೆ ರಿಯಾಲಿಟಿ ಕಣ್ಣೆದುರು ಬಂದು ಸಿಟ್ಟಿನಿಂದ ಗೇಲಿ ಮಾಡ್ತಾ ಇತ್ತು. ಯೋಧನ ಪತ್ನಿ ಕಾಶ್ಮೀರಕ್ಕೆ ಕಳಿಸಿಕೊಡುವಾಗ ಒಂದು ಎಚ್ಚರಿಕೆಯ ಮಾತನ್ನು ಹೇಳ್ತಾಳೆ.. ‘ಹುಷಾರು ಅದು ಕಾಶ್ಮೀರ.

ಅಲ್ಲಿಯ ವಾತಾವರಣ ಯಾವಾಗ ಬದಲಾಗತ್ತೋ ಹೇಳೋಕಾಗಲ್ಲ’ ಅಂತ! ಹಾಗೇ ಆಯ್ತಲ್ವಾ? ಕೆಂಡವನ್ನು ಬೂದಿಯಲ್ಲಿ ಮುಚ್ಚಿಟ್ಟಂತೆ, ಉಗ್ರರನ್ನು ಕಾಶ್ಮೀರದ ನಿವಾಸಿಗಳ ನಡುವೆಯೇ ಬಚ್ಚಿಡ ಲಾಗಿತ್ತು. ಸ್ವರ್ಗದಂತೆ ಕಾಣ್ತಾ ಇದ್ದ ಕಾಶ್ಮೀರ ನರಕವಾಗಿ ಬದಲಾಗಿತ್ತು.

‘ಗ್ರೌಂಡ್ ಜೀರೋ’ ಟ್ರೇಲರ್ ಯಾತನೆಯನ್ನು ಇನ್ನಷ್ಟು ಬಲವಾಗಿಸ್ತಾ ಇದೆ ಅನಿಸೋ ಹೊತ್ತಿಗೆ ಕನ್ನಡ ಸಿನಿಮಾ ಶುರು ಆಯ್ತು. ಸಿನಿಮಾದಲ್ಲೂ ಕಾಕತಾಳೀಯ ಎಂಬಂತೆ ಕಾಶ್ಮೀರದ್ದೇ ಮಾತು. ಅರೆ.. ಕಾಶ್ಮೀರ ಅನ್ನೋದು ನಮ್ಮ ಅವಿಭಾಜ್ಯ ಅಂಗ ಅನ್ನೋದಕ್ಕೆ ಇನ್ಯಾವ ಪುರಾವೆ ಬೇಕು. ನಮ್ಮ ಎಮೋಶನ್‌ನ ಭಾಗವದು. ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ನಾವು ಊಹಿಸಿಕೊಳ್ಳೋಕೂ ಅಸಾಧ್ಯ.

ಅಂಥ ಕಾಶ್ಮೀರವನ್ನು ನಮ್ಮದಲ್ಲವೆಂಬಂತೆ ಇಷ್ಟು ವರ್ಷ ಬಿಟ್ಟು, ಪ್ರತ್ಯೇಕ ಸ್ಥಾನಮಾನ ಕೊಟ್ಟು, ಪಾಕಿಸ್ತಾನಿಗಳ ಮೇಲೆ ಒಲವು ಹುಟ್ಟುವಂತೆ ಮಾಡಿ, ಅಲ್ಲಿನ ಹಿಂದೂಗಳನ್ನೇ ಪರಕೀಯ ರನ್ನಾಗಿಸಿದ್ದು ಎಪ್ಪತ್ತು ವರ್ಷ ಅಳಿದ ಸರಕಾರ. ಕಲ್ಲೆಸೆತ, ಗುಂಡಿನ ಮೊರೆತ, ಸಾವಿನ ಸರಣಿ, ಕಾಶ್ಮೀರಿ ಪಂಡಿತರ ಮಾರಣಹೋಮ ಇವೆಲ್ಲದರಿಂದ ಮುಕ್ತಿ ಸಿಗೋಕೆ 2019ರ ತನಕ ಕಾಯ ಬೇಕಾಯ್ತು.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಂತ ಘೋಷಿಸಿ, 370ನೇ ವಿಧಿಯನ್ನು ರದ್ದುಗೊಳಿಸಿ ದ್ದಾಯ್ತು. ಕಲ್ಲೆಸೆತ ನಿಂತಿತು. ಶಾಂತಿ ಮರುಕಳಿಸಿತು. ಕಾಶ್ಮೀರಕ್ಕೆ ಪ್ರವಾಸ ಹೋಗುವ ವಾತಾವರಣ ನಿರ್ಮಾಣವಾಯ್ತು. ಕಾಶ್ಮೀರದಲ್ಲಿ ದುಡಿದು ತಿನ್ನಲು ಬಯಸುವ ಜನರ ಕೈಗೆ ದುಡಿಮೆ ಸಿಕ್ಕಿತು. ಕೇಂದ್ರ ಸರಕಾರದಿಂದ ಸೌಲಭ್ಯಗಳು ಹರಿದು ಬಂದವು. ಇಂಥ ಐತಿಹಾಸಿಕ ನಿರ್ಧಾರ ತೆಗೆದು ಕೊಂಡಾಗ ಭಾರತಕ್ಕೆ ಭಾರತವೇ ಸಂಭ್ರಮಿಸಿತು. ಆದರೆ ಸೂತಕ ಫೀಲ್ ಮಾಡಿದ್ದು ಪಾಕಿಸ್ತಾನ್, ಕಾಂಗ್ರೆಸ್ ಮತ್ತು ಕಾಶ್ಮೀರ ಕಣಿವೆಯ ಮುಸಲ್ಮಾನರು.

ನಾವು ಕಾಶ್ಮೀರಿಗಳನ್ನು ನಮ್ಮವರು ಎಂದು ಒಪ್ಪಿದರೂ, ಅವರು ನಮ್ಮನ್ನು ಸ್ವೀಕರಿಸಲಿಲ್ಲ. ‘ಹಮ್ ಕಾಶ್ಮೀರಿ, ತುಮ್ ಹಿಂದೂಸ್ಥಾನಿ’ ಅಂತಲೇ ಹೇಳಿದ್ರು. ಕೊಡೋ ಫೆಸಿಲಿಟಿಗಳನ್ನು ಬಳಸಿಕೊಂಡರೂ ಕೃತಜ್ಞತಾ ಭಾವ ಮೂಡಲೇ ಇಲ್ಲ. ಪ್ರತ್ಯೇಕತಾವಾದಿ ಮನಸ್ಥಿತಿಯೇ ಹಾಗೆ. ಇವತ್ತು ದೇಶಕ್ಕೆ ದೇಶವೇ ಶೋಕದಲ್ಲಿ ಸಂಕಟದಲ್ಲಿ ಮುಳುಗಿದೆ. ಮುಸಲ್ಮಾನ ಉಗ್ರವಾದದ ವಿರುದ್ಧ ಆಕ್ರೋಶದಲ್ಲಿದೆ. ಆದರೆ ಕಾಂಗ್ರೆಸ್ ಮತ್ತು ಪ್ರಗತಿಪರ ಪಟಾಲಂ, ಮುಸ್ಲಿಂ ಸಿಂಪಥೈಸರ್ಸ್ ಮಾತ್ರ ಇದನ್ನು ಮೋದಿಯ ವೈಫಲ್ಯ, ಭದ್ರತಾ ವೈಫಲ್ಯ ಅಂತ ಅವರ ಬೆನ್ನಿಗೆ ಕಟ್ಟೋಕೆ ಸಿದ್ಧವಾಗಿ ನಿಂತಿದೆ.

ಸಾಲದು ಎಂಬಂತೆ, ಅಲ್ಲಿಯ ಪ್ರತ್ಯಕ್ಷದರ್ಶಿಗಳ, ಜೀವಕಳಕೊಂಡ ಕುಟುಂಬಸ್ಥರ ಮಾತನ್ನೇ ಸ್ಕ್ರಿಪ್ಟೆಡ್ ಅನ್ನೋ ಮಟ್ಟದ ಅಸಹ್ಯ ಪ್ರದರ್ಶಿಸುತ್ತಿದ್ದಾರೆ ಕಾಂಗ್ರೆಸ್ಸಿನ ಕೆಲಮಂದಿ. ‘ಧರ್ಮ ಕೇಳಿ ಹೊಡೆದದ್ದೇ ಸುಳ್ಳು, ಬಿಹಾರ್ ಚುನಾವಣೆ ಗೆಲ್ಲೋಕೆ ಮಾಡಿರೋ ಗಿಮಿಕ್ಕು’ ಎಂಬ ನೀಚ ಹೇಳಿಕೆ ಗಳನ್ನು ಕೊಟ್ಟು ನಿಕೃಷ್ಟರಾಗ್ತಾ ಇದ್ದಾರೆ.

ಈ ದೇಶ ಅಪಾಯದಲ್ಲಿರೋದು ಇಂಥ ಆಂತರಿಕ ಶತ್ರುಗಳಿಂದ ಎಂಬುದನ್ನು ಮತ್ತೆ ಸಾಬೀತು ಮಾಡ್ತಿದ್ದಾರೆ. ಬಿಡಿ ಕಾಲ ಉತ್ತರಿಸುತ್ತದೆ. ಆದರೆ ಮೋದಿ ಸರಕಾರ ನಿಜವಾಗ್ಯೂ ಎಡವಿದ್ದೆಲ್ಲಿ? ಇದು ಭದ್ರತಾ ವೈಫಲ್ಯ ಅಲ್ಲ. ಯಾಕಂದ್ರೆ ದೇಶದ ಗಡಿ ಇವತ್ತಿಗೂ ಸೈನಿಕರ ಕೈಲಿ ಸುಭದ್ರವಾಗಿದೆ. ಆದರೂ ಉಗ್ರರು ತಯಾರಾಗಿದ್ದು ಹೇಗೆ? ಎಲ್ಲಿ? ಎಲ್ಲಿ ಅಂದ್ರೆ ಅದೇ ಕಾಶ್ಮೀರ ಕಣಿವೆಯಲ್ಲಿ. ಹೇಗೆ ಅಂದ್ರೆ ಕಾಶ್ಮೀರದಲ್ಲಿರೋ ಮುಸಲ್ಮಾನರಿಂದಲೇ ರಕ್ಷಿಸಲ್ಪಟ್ಟ ಪೋಷಿಸಲ್ಪಟ್ಟು. ಅಧಿಕಾರ ದಲ್ಲಿರೋ ಓಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ಅವರ ಸಹಕಾರದಿಂದ. ಹೌದು.

ಇದು ಮೋದಿಯ ವೈಫಲ್ಯ ಅಲ್ಲ. ಆದರೆ ಮೋದಿ ಸರಕಾರವನ್ನು ವ್ಯವಸ್ಥಿತ ಖೆಡ್ಡಾದಲ್ಲಿ ಬೀಳಿಸಿದ್ದು ಇದೇ ಕಾಂಗ್ರೆಸ್ ತಂಡ. ಆರ್ಟಿಕಲ್ 370 ರದ್ದಾದ ತಕ್ಷಣ ಶುರುವಾದ ಕೂಗು, ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಸಾಕು, ಚುನಾವಣೆ ಬೇಕು ಅನ್ನೋದು. ವಿಚಾರ ಕೋರ್ಟ್ ಮೆಟ್ಟಿಲೇರಿತು. ಚುನಾವಣೆ ನಡೆಸಬೇಕು ಅನ್ನೋದು ಕೇಂದ್ರ ಸರಕಾರದ ಆಸೆ ಆಗಿರಲಿಲ್ಲ. ಮೋದಿಗೆ ಇಷ್ಟವೂ ಇರಲಿಲ್ಲ. ಚುನಾವಣೆ ನಡೆಸಿದರೆ ರಿಸಲ್ಟ್ ಏನು ಬರುತ್ತೆ ಅನ್ನೋ ಅರಿವೂ ಮೋದಿಗಿತ್ತು. ಚುನಾವಣೆ ನಡೆಸೋ ಮೊದಲು, ಕಾಶ್ಮೀರಿಗಳಲ್ಲಿ ನಾವು ಭಾರತದ ಭಾಗ ಎಂಬ ಭಾವವನ್ನು ಬಿತ್ತಿ ಹೆಮ್ಮರವಾಗಿಸಬೇಕು ಅನ್ನೋದು ಮೋದಿ ತಂಡದ ಆಲೋಚನೆಯಾಗಿತ್ತು. ‌

ಅದು ಒಂದೆರಡು ದಿನ ಅಥವಾ ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ. ಬಹುಶಃ ಹತ್ತು ವರ್ಷಗಳಾದರೂ ಬೇಕಿತ್ತು. 2019ರಿಂದ ಆ ಪ್ರಯತ್ನ ಶುರುವಾಗಿತ್ತು. 2029ರ ಹೊತ್ತಿಗೆ ಚುನಾವಣೆ ನಡೆಯುವಂತಾದರೆ ಅಷ್ಟರಲ್ಲಿ ಕಾಶ್ಮೀರಿಗಳ ಮನಸ್ಥಿತಿ ಬದಲಾಗಿರುತ್ತದೆ ಎಂಬ ಭರವಸೆ ಮೋದಿ ಸರಕಾರಕ್ಕಿತ್ತು. ಆದರೆ ಹಾಗಾಗೋದು ಕಾಂಗ್ರೆಸ್ಸಿಗಾಗಲೀ, ಓಮರ್ ಅಬ್ದುಲ್ಲಾನ ಪಕ್ಷಕ್ಕಾಗಲೀ ಬೇಕಿರಲಿಲ್ಲ. ಆ ಮನಸು ಬದಲಾಗೋ ಮುನ್ನ ಎಲೆಕ್ಷನ್ ನಡೆದರೆ ತಾವು ಗೆಲ್ಲೋಕೆ ಸಾಧ್ಯ ಅಂತ ಅವರಿಗೆ ಗೊತ್ತಿತ್ತು. ವಿಷಯ ಕೋರ್ಟ್ ಮೆಟ್ಟಿಲೇರಿತು.

ಸರ್ವೋಚ್ಚ ನ್ಯಾಯಾಲಯವನ್ನು ಬಹಳ ವ್ಯವಸ್ಥಿತವಾಗಿ ದಿಕ್ಕು ತಪ್ಪಿಸಿದ್ದು ಕಾಂಗ್ರೆಸ್ ವಕೀಲರು. ಕಪಿಲ್ ಸಿಬಲ್ ಆರ್ಟಿಕಲ್ 370 ರದ್ದತಿ ವಿರುದ್ಧವೇ ವಾದಕ್ಕಿಳಿದರು. ಪ್ರಶಾಂತ್ ಭೂಷಣ್ ಎಂಬ ವಕೀಲ ‘ಈಗಲೇ ಚುನಾವಣೆ ನಡೆಸದೇ ಹೋದ್ರೆ ಪ್ರಜಾಪ್ರಭುತ್ವವೇ ನಾಶ ಆಗತ್ತೆ’ ಅಂತ ಸುಪ್ರೀಂ ಕೋರ್ಟ್ ಎದುರು ಕಿರುಚಿದರು. ಇವರಿಬ್ಬರ ಜತೆಗೆ ಗೋಪಾಲ್ ಸುಬ್ರಮಣ್ಯಂ, ರಾಜೀವ್ ಧವನ್, ದುಷ್ಯಂತ್ ದಾವೆ, ಸಂಜಯ್ ಪಾರಿಖ್ ಸೇರಿಕೊಂಡರು. ಸುಮಾರು 23 ಪೆಟಿಷನ್‌ಗಳು ಸಲ್ಲಿಕೆ ಆದವು. ಎಲ್ಲವೂ 370ನೇ ವಿಧಿ ರದ್ದತಿ ವಿರುದ್ಧ ಹಾಗೂ ಚುನಾವಣೆ ಘೋಷಣೆಗೆ ಒತ್ತಾಯಿಸುವ ಪೆಟಿಷನ್‌ಗಳೇ ಆಗಿದ್ವು. ಸುಪ್ರೀಂ ಕೋರ್ಟ್‌ನ ಅತ್ಯಂತ ಪ್ರಬಲ ವಕೀಲರೆಂದೇ ಹೆಸರು ಮಾಡಿರೋ ಇವರ ವಾದಕ್ಕೆ ಸುಪ್ರೀಂ ಕೋರ್ಟ್ ಮನ್ನಣೆ ಕೊಟ್ಟು ಚುನಾವಣೆ ನಡೆಸಬೇಕು ಎಂಬ ತೀರ್ಪು ಕೊಟ್ಟಿತು.

2024ರ ಸೆಪ್ಟೆಂಬರ್‌ಗೂ ಮುನ್ನ ಚುನಾವಣೆ ನಡೆಸಬೇಕು ಅನ್ನೋ ಆದೇಶ ಬಂತು. ಮೋದಿ ಸರಕಾರ ಚುನಾವಣೆಗೆ ಒಪ್ಪದೇ ಬೇರೆ ದಾರಿ ಇರಲಿಲ್ಲ. ಚುನಾವಣೆಯ ಫಲಿತಾಂಶವೇ ಕಾಶ್ಮೀರ ಬದಲಾಗಿಲ್ಲ ಎಂದು ಸಾರಿ ಹೇಳಿತ್ತು. ಇಡೀ ಕಾಶ್ಮೀರ ಕಣಿವೆಯಲ್ಲಿ ಒಂದೇ ಒಂದು ಸೀಟ್ ಕೂಡ ಬಿಜೆಪಿಗೆ ಸಿಗಲಿಲ್ಲ. ಕೇಂದ್ರದ ಎಲ್ಲ ಉಪಕಾರಗಳನ್ನೂ ಸ್ವೀಕರಿಸಿದ ಕಾಶ್ಮೀರಿ ಮುಸ್ಲಿಮರು, ನ್ಯಾಷನಲ್ ಕಾನರೆ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಗೆಲ್ಲಿಸಿಕೊಂಡರು.

ಕಾಶ್ಮೀರದಿಂದ ಹಿಂದೂಗಳನ್ನು, ಕಾಶ್ಮೀರಿ ಪಂಡಿತರನ್ನು ಓಡಿಸಿ ಆದಮೇಲೆ ಅಲ್ಲಿ ಬಿಜೆಪಿಗೆ ಮತ ಹಾಕೋವ್ರಾದ್ರೂ ಯಾರು? ಅಲ್ಲಿನ ಮುಸಲ್ಮಾನರ ಮನಸ್ಸುಗಳನ್ನು ಗೆದಕ್ಕೆ, ಬದಲಾಯಿಸೋದಕ್ಕೆ ನಿಜಕ್ಕೂ ಸಾಧ್ಯವಿದೆಯಾ? ಖಂಡಿತ ಅದು ಭ್ರಮೆ. ಮುಸ್ಲಿಮರಲ್ಲಿರೋ ಧಾರ್ಮಿಕ ಅಂಧತ್ವ, ಮೂಲಭೂತವಾದ, ಹಿಂಸಾಮನಸ್ಥಿತಿ ಇವ್ಯಾವುದೂ ಬದಲಾಗದ್ದು. ಈಗ ಕಾಶ್ಮೀರದಲ್ಲಿ ಮುಸ್ಲಿಂ ಪಕ್ಷ ಅಧಿಕಾರದಲ್ಲಿದೆ. ಉಗ್ರವಾದ ಮತ್ತೆ ಗರಿಗೆದರಿದೆ. ದೇಶದ ಒಳಗಿನ ಶತ್ರುಗಳಿಗೆ ದೇಶದೊಳಗೆಯೇ ಬೆಂಬಲ ಸಿಗುತ್ತಿದೆ. ವಾದ್ರಾ ಥರದವರು, ಮುಸ್ಲಿಮರ ಪರ ಮಾತನಾಡಿ ಉಗ್ರರ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ.

ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪು ಕಾಶ್ಮೀರದ ಇಂದಿನ ಸ್ಥಿತಿಗೆ ನೇರ ಕಾರಣ ವಾಗಿದೆ. ಅಮಾಯಕ ಪ್ರವಾಸಿಗರ ಬಲಿ ಕೇವಲ ಮುನ್ನುಡಿ ಅಷ್ಟೆ. ಕಾಶ್ಮೀರವನ್ನು ಮತ್ತೆ ಅದೇ ಸ್ಥಿತಿಗೆ ಕೊಂಡೊಯ್ಯುವ ಎಲ್ಲ ಸಂಚುಗಳು ಆಂತರಿಕ ಶತ್ರುಗಳಿಂದ ಈಗಾಗಲೇ ಶುರುವಾಗಿವೆ. ಭಾರತದೊಳಗಿರೋ ಪಾಪಿಗಳನ್ನು ಮಟ್ಟ ಹಾಕದ ಹೊರತು ಪಾಪಿಸ್ತಾನವನ್ನು ಮಟ್ಟ ಹಾಕೋದು ಕನಸಿನ ಮಾತು. ಮೋದಿ ಮೇಲಿನ ರಾಜಕೀಯ ದ್ವೇಷದಲ್ಲಿ ದೇಶನಾಶ ಬಯಸುತ್ತಿರೋದು ನಿಜಕ್ಕೂ ದುರಂತ. ಕಾಶ್ಮೀರದ ಘಟನೆ ಕೂಡ ದೇಶವನ್ನು ಒಗ್ಗೂಡಿಸೋದಿಲ್ಲ, ಇನ್ನಷ್ಟು ಕಂದಕ ಸೃಷ್ಟಿಸು ತ್ತಿದೆ ಎಂಬುದು ದುಃಖ ತರೋ ವಿಚಾರ.