ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ 11: ರಾಜ ಪ್ರದ್ಯುಮ್ನನ ಆಸ್ಥಾನದಲ್ಲಿ ನಡೆದ ಬ್ರಹ್ಮಹತ್ಯೆಯ ದೋಷ

ಹದ್ದಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಆ ಸರ್ಪವು ವಿಲವಿಲನೆ ಒದ್ದಾಡುತ್ತಾ, ಆಪತ್ತಿನ ಆವೇಶ ದಲ್ಲಿ ಬಾಯಿಂದ ಉಗ್ರವಾದ ವಿಷವನ್ನು ಕಾರಿತು. ಆಕಾಶದಿಂದ ಬಿದ್ದ ಆ ಹಾಲಾಹಲದ ವಿಷದ ಹನಿಗಳು, ಕೆಳಗೆ ಸೇವಕನು ತೆರೆದ ಪಾತ್ರೆಯಲ್ಲಿ ತರುತ್ತಿದ್ದ ಹಾಲಿನೊಳಗೆ ಬಿದ್ದು ಕರಗಿಹೋದವು! ಈ ಅನಾಹುತವು ಹಾರುತ್ತಿದ್ದ ಹದ್ದಿಗಾಗಲಿ, ಹಾವಿಗಾಗಲಿ ಅಥವಾ ಕೆಳಗೆ ನಡೆಯುತ್ತಿದ್ದ ಸೇವಕನಿಗಾಗಲಿ ಕಿಂಚಿತ್ತೂ ತಿಳಿಯಲಿಲ್ಲ

ರಾಜ ಪ್ರದ್ಯುಮ್ನನ ಆಸ್ಥಾನದಲ್ಲಿ ನಡೆದ ಬ್ರಹ್ಮಹತ್ಯೆಯ ದೋಷ

-

ಒಂದೊಳ್ಳೆ ಮಾತು

ಶೋಭಾವತಿ ನಗರದ ರಾಜ ಪ್ರದ್ಯುಮ್ನನು ದಾನಶೀಲನೂ ಧರ್ಮಪರಾಯಣನೂ ಆಗಿದ್ದನು. ಒಮ್ಮೆ ಆತನ ಅರಮನೆಗೆ ದೇವಸ್ವಾಮಿ ಎಂಬ ಸದ್ಗುಣ ಸಂಪನ್ನ ವಿದ್ವಾಂಸ ಬ್ರಾಹ್ಮಣನೊಬ್ಬ ಅತಿಥಿಯಾಗಿ ಬಂದನು. ರಾಜನು ಆತನಿಗೆ ವಿಶೇಷ ಸತ್ಕಾರ ಮಾಡಿ, ಪೌಷ್ಟಿಕವಾದ ಶುದ್ಧ ಹಸುವಿನ ಹಾಲನ್ನು ಉಪಹಾರವಾಗಿ ನೀಡಲು ಸೇವಕನಿಗೆ ಆಜ್ಞಾಪಿಸಿದನು.

ಸೇವಕನು ಗೋಶಾಲೆಯಿಂದ ಹೊಸದಾಗಿ ಕರೆದ ಬಿಸಿ ಹಾಲನ್ನು ಪಾತ್ರೆಯಲ್ಲಿ ತುಂಬಿಕೊಂಡು ಅರಮನೆಯ ಉದ್ಯಾನವನದ ಹಾದಿಯಲ್ಲಿ ರಾಜನ ಸಭೆಗೆ ತರುತ್ತಿದ್ದನು. ದುರದೃಷ್ಟವಶಾತ್, ಅದೇ ಕ್ಷಣದಲ್ಲಿ ಆಕಾಶ ದಲ್ಲಿ ಹದ್ದು ಒಂದು ವಿಷಕಾರಿ ಸರ್ಪವನ್ನು ಕಾಲಿನ ಉಗುರುಗಳಿಂದ ಹಿಡಿದುಕೊಂಡು ಹಾರುತ್ತಿತ್ತು.

ಹದ್ದಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಆ ಸರ್ಪವು ವಿಲವಿಲನೆ ಒದ್ದಾಡುತ್ತಾ, ಆಪತ್ತಿನ ಆವೇಶದಲ್ಲಿ ಬಾಯಿಂದ ಉಗ್ರವಾದ ವಿಷವನ್ನು ಕಾರಿತು. ಆಕಾಶದಿಂದ ಬಿದ್ದ ಆ ಹಾಲಾಹಲದ ವಿಷದ ಹನಿಗಳು, ಕೆಳಗೆ ಸೇವಕನು ತೆರೆದ ಪಾತ್ರೆಯಲ್ಲಿ ತರುತ್ತಿದ್ದ ಹಾಲಿನೊಳಗೆ ಬಿದ್ದು ಕರಗಿ ಹೋದವು!

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 10: ಅತೀ ನಾಜೂಕಿನ ಮೂವರು ರಾಜಕನ್ಯೆಯರು

ಈ ಅನಾಹುತವು ಹಾರುತ್ತಿದ್ದ ಹದ್ದಿಗಾಗಲಿ, ಹಾವಿಗಾಗಲಿ ಅಥವಾ ಕೆಳಗೆ ನಡೆಯುತ್ತಿದ್ದ ಸೇವಕನಿಗಾಗಲಿ ಕಿಂಚಿತ್ತೂ ತಿಳಿಯಲಿಲ್ಲ. ಸೇವಕನು ಮುಗ್ಧತೆಯಿಂದ ಆ ಹಾಲನ್ನು ರಾಜನಿಗೆ ನೀಡಿದನು. ರಾಜನು ಅಪಾರ ಭಕ್ತಿ-ಗೌರವಗಳಿಂದ ಆ ಬಟ್ಟಲನ್ನು ಬ್ರಾಹ್ಮಣನ ಕೈಗಿತ್ತನು. ಹಾಲು ಕುಡಿದ ಕೆಲವೇ ಕ್ಷಣಗಳಲ್ಲಿ ಆ ಮುಗ್ಧ ಬ್ರಾಹ್ಮಣನು ವಿಷದ ಪರಿಣಾಮದಿಂದ ನರಳಿ ಪ್ರಾಣ ಬಿಟ್ಟನು!

ಆತಿಥ್ಯ ನೀಡಲು ಹೋದ ಅರಮನೆಯಲ್ಲಿ ಮಹಾ ದುರಂತ ಸಂಭವಿಸಿ, ಬ್ರಹ್ಮಹತ್ಯೆಯ ಆಘಾತ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಕಠಿಣ ಧರ್ಮ ಪ್ರಶ್ನೆಯೊಡ್ಡು ತ್ತಾನೆ: ಹೇ ರಾಜಾ, ಆ ಬ್ರಾಹ್ಮಣನ ಸಾವಿನ ಪಾಪದ ಪಾಲು ಯಾರಿಗೆ ಸಲ್ಲುತ್ತದೆ? ವಿಷ ಕಾರಿದ ಹಾವಿಗೋ? ಹಾವನ್ನು ಹಿಡಿದು ತಂದ ಹದ್ದಿಗೋ? ತೆರೆದ ಪಾತ್ರೆಯಲ್ಲಿ ಹಾಲು ತಂದ ಸೇವಕನಿಗೋ? ಅಥವಾ ಆ ಹಾಲನ್ನು ಕೈಯಾರೆ ಕೊಟ್ಟ ರಾಜ ಪ್ರದ್ಯುಮ್ನನಿಗೋ? ವಿಕ್ರಮಾದಿತ್ಯನು ವಿವೇಕದಿಂದ ಉತ್ತರಿಸು ತ್ತಾನೆ: ಈ ಸಾವಿನ ಪಾಪ ಇವರಲ್ಲಿ ಯಾರಿಗೂ ಸಲ್ಲುವುದಿಲ್ಲ!

ಹದ್ದು ತನ್ನ ಆಹಾರಕ್ಕಾಗಿ ಹಾವನ್ನು ಹಿಡಿದಿತ್ತು, ಹಾವು ಪ್ರಾಣಭಯದಿಂದ ಒದ್ದಾಡುತ್ತಾ ವಿಷ ಕಾರಿತು; ಇಬ್ಬರಲ್ಲೂ ಹತ್ಯೆಯ ಉದ್ದೇಶವಿರಲಿಲ್ಲ. ಸೇವಕನಿಗೆ ಹಾಲಿನಲ್ಲಿ ವಿಷ ಬಿದ್ದದ್ದು ತಿಳಿದಿರಲಿಲ್ಲ; ರಾಜನಿಗೆ ಬ್ರಾಹ್ಮಣನನ್ನು ಸತ್ಕರಿಸುವ ಸದುದ್ದೇಶವಿತ್ತೇ ಹೊರತು ಕೊಲ್ಲುವ ಕಲ್ಪನೆಯಿರಲಿಲ್ಲ. ಎಲ್ಲಿ ದುರುದ್ದೇಶವಿರುವು ದಿಲ್ಲವೋ, ಅಲ್ಲಿ ಪಾಪದ ಲೇಪವಿರುವುದಿಲ್ಲ. ಆದರೆ, ಈ ಘಟನೆಯನ್ನು ನೋಡಿ ‘ರಾಜನೇ ಕೊಂದ’, ‘ಸೇವಕನೇ ವಿಷವಿಕ್ಕಿದ’ ಎಂದು ಸತ್ಯ ವನ್ನರಿಯದೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ, ದೋಷಾರೋಪಣೆ ಮಾಡುವ ಜನರಿದ್ದಾರಲ್ಲವೇ? ಆ ಬ್ರಾಹ್ಮಣ ಹತ್ಯೆಯ ಸಮಗ್ರ ಪಾಪವು ಆ ಸುಳ್ಳು ನಿಂದನೆ ಮಾಡುವವರಿಗೇ ಸೇರುತ್ತದೆ! ಎಂದನು.

ಬದುಕಿನಲ್ಲಿ ಹಲವು ಬಾರಿ ನಮ್ಮ ಕಣ್ಣೆದುರು ನಡೆಯುವ ಅನಿರೀಕ್ಷಿತ ಘಟನೆಗಳು ಅಥವಾ ಅನಾಹುತಗಳ ಹಿಂದೆ ದುರುದ್ದೇಶವಿರುವುದಿಲ್ಲ; ಅವು ಕೇವಲ ವಿಧಿಯ ಆಟ ಅಥವಾ ಅಚಾತು ರ್ಯದ ಪ್ರಮಾದಗಳಾಗಿರುತ್ತವೆ. ಆದರೆ ನಾವು ಸತ್ಯಾಸತ್ಯತೆಯನ್ನು ಅರಿಯದೆ, ಯಾರದ್ದೋ ಒಬ್ಬರ ಮೇಲೆ ತಕ್ಷಣವೇ ಅಪವಾದ ಹೊರಿಸಿ, ಬೆರಳು ತೋರಿಸಿಬಿಡುತ್ತೇವೆ.

ಒಂದು ಕ್ರಿಯೆಯ ಒಳ್ಳೆಯತನ ಅಥವಾ ಕೆಟ್ಟತನ ಅಡಗಿರುವುದು ಅದರ ಹಿಂದಿರುವ ಮನಸ್ಸಿನ ಉದ್ದೇಶ ದಲ್ಲಿ. ಅಪಘಾತವನ್ನು ಅಪರಾಧವೆಂದು ಬಿಂಬಿಸುವುದು, ಮುಗ್ಧರ ಮೇಲೆ ಸುಳ್ಳು ಆರೋಪ ಹೊರಿಸುವುದು ಅನ್ಯಾಯ ಮಾಡಿದಷ್ಟೇ ಪಾಪದ ಕೆಲಸ. ಇನ್ನೊಬ್ಬರನ್ನು ದೂಷಿಸುವ ಮುನ್ನ ಘಟನೆಯ ಒಳ ಹೊರಗನ್ನು ಅರಿಯುವ ಸಂಯಮ ಮತ್ತು ವಿವೇಕ ನಮ್ಮಲ್ಲಿರಬೇಕು. ನಿಜ ಹೇಳಬೇಕೆಂದರೆ ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ , ನಿಜ ಜೀವನದಲ್ಲಿ ಇದನ್ನೇ ಮಾಡುತ್ತಿದ್ದೇವೆ. ವಿಷಯ ವನ್ನು ಅರ್ಧಂಬರ್ಧ ತಿಳಿದು ಪಕ್ಷಗಳನ್ನು ಕಟ್ಟುತ್ತಾ ದೋಷಾರೋಪಣೆ ಯನ್ನು ಆರಂಭಿಸುತ್ತೇವೆ. ಮಾಡಿದವರದಲ್ಲ ಅನುಭವಿಸಿದವರದಲ್ಲ ಇದೆಲ್ಲ ದರ ಕರ್ಮ ಸುತ್ತಿಕೊಳ್ಳುವುದು ನಮ್ಮನ್ನೇ! ನಿಜವಲ್ಲವೇ?