ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರೇಕೆ ಉಳಿದವರ ಮೇಲೆ ಸವಾರಿ ಮಾಡುತ್ತಾರೆ ?

ಇಲ್ಲಿ ಇಬ್ಬರು ಮಕ್ಕಳ ‘ಅಸಹಿಷ್ಣುತೆ’ ಅಥವಾ ಹಠ ಇಡೀ ಶಾಲೆಯ ಮೆನುವನ್ನು ನಿರ್ಧರಿಸುತ್ತದೆ. ಯುರೋಪ್ ಅಥವಾ ಅಮೆರಿಕದಲ್ಲಿ ಇಂದು ಮ್ಯಾನುಯಲ್ ಗೇರ್ ಕಾರುಗಳು ಸಿಗುವುದು ಅಪರೂಪ ವಾಗಿದೆ. ಕಾರಣ ಸರಳ: ಯಾರಿಗೆ ಮ್ಯಾನುಯಲ್ ಕಾರು ಓಡಿಸಲು ಬರುತ್ತದೆಯೋ ಅವರು ಆಟೋ ಮ್ಯಾಟಿಕ್ ಕಾರನ್ನೂ ಓಡಿಸಬಲ್ಲರು. ಆದರೆ ಆಟೋಮ್ಯಾಟಿಕ್ ಕಾರು ಮಾತ್ರ ಕಲಿತವರಿಗೆ ಮ್ಯಾನು ಯಲ್ ಓಡಿಸಲು ಬರುವುದಿಲ್ಲ.

ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರೇಕೆ ಉಳಿದವರ ಮೇಲೆ ಸವಾರಿ ಮಾಡುತ್ತಾರೆ ?

-

ಇದೇ ಅಂತರಂಗ ಸುದ್ದಿ

ಒಂದು ಶಾಲೆಯಲ್ಲಿ ನೂರು ಮಕ್ಕಳಿದ್ದಾರೆ ಎಂದುಕೊಳ್ಳಿ. ಅದರಲ್ಲಿ ಕೇವಲ ಇಬ್ಬರು ಮಕ್ಕಳಿಗೆ ’ಶೇಂಗಾ’ (ಪೀನಟ್) ತಿಂದರೆ ಅಲರ್ಜಿಯಾಗುತ್ತದೆ. ಉಳಿದ ತೊಂಬತ್ತೆಂಟು ಮಕ್ಕಳಿಗೆ ಯಾವುದೇ ಅಲರ್ಜಿ ಇರುವುದಿಲ್ಲ. ಈಗ ಶಾಲೆಯ ಆಡಳಿತ ಮಂಡಳಿ ಪಿಕ್ನಿಕ್ ಆಯೋಜಿಸುವಾಗ ಏನು ಮಾಡುತ್ತದೆ? ಅದು ಇಡೀ ಶಾಲೆಯ ಪಿಕ್ನಿಕ್‌ನಲ್ಲಿ ಶೇಂಗಾವನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.

ಇಲ್ಲಿ ಇಬ್ಬರು ಮಕ್ಕಳ ‘ಅಸಹಿಷ್ಣುತೆ’ ಅಥವಾ ಹಠ ಇಡೀ ಶಾಲೆಯ ಮೆನುವನ್ನು ನಿರ್ಧರಿಸುತ್ತದೆ. ಯುರೋಪ್ ಅಥವಾ ಅಮೆರಿಕದಲ್ಲಿ ಇಂದು ಮ್ಯಾನುಯಲ್ ಗೇರ್ ಕಾರುಗಳು ಸಿಗುವುದು ಅಪರೂಪವಾಗಿದೆ. ಕಾರಣ ಸರಳ: ಯಾರಿಗೆ ಮ್ಯಾನುಯಲ್ ಕಾರು ಓಡಿಸಲು ಬರುತ್ತದೆಯೋ ಅವರು ಆಟೋಮ್ಯಾಟಿಕ್ ಕಾರನ್ನೂ ಓಡಿಸಬಲ್ಲರು. ಆದರೆ ಆಟೋಮ್ಯಾಟಿಕ್ ಕಾರು ಮಾತ್ರ ಕಲಿತವರಿಗೆ ಮ್ಯಾನುಯಲ್ ಓಡಿಸಲು ಬರುವುದಿಲ್ಲ.

ಕಾರು ಬಾಡಿಗೆಗೆ ನೀಡುವ ಕಂಪನಿಗಳು ಎರಡೂ ತರಹದ ಕಾರುಗಳನ್ನು ಇಟ್ಟುಕೊಳ್ಳುವ ಬದಲು, ಎಲ್ಲರಿಗೂ ಒಪ್ಪುವ ಆಟೋಮ್ಯಾಟಿಕ್ ಕಾರುಗಳನ್ನೇ ಇಟ್ಟುಕೊಳ್ಳುತ್ತವೆ. ಒಂದು ಕಚೇರಿಯಲ್ಲಿ ಹತ್ತು ಜನರಿzರೆ. ಅದರಲ್ಲಿ ಒಂಬತ್ತು ಜನರಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಬರುತ್ತದೆ. ಆದರೆ ಒಬ್ಬನಿಗೆ ಕೇವಲ ಇಂಗ್ಲಿಷ್ ಮಾತ್ರ ಬರುತ್ತದೆ, ಕನ್ನಡ ಬರುವುದಿಲ್ಲ. ಈಗ ಆ ಕಚೇರಿಯ ಅಧಿಕೃತ ಸಭೆ ನಡೆದಾಗ ಇಡೀ ಸಭೆಯು ಇಂಗ್ಲಿಷ್‌ನ ನಡೆಯುತ್ತದೆ. ಆ ಒಬ್ಬ ವ್ಯಕ್ತಿಯ ಭಾಷಾ ಮಿತಿ ಇಡೀ ಒಂಬತ್ತು ಜನರ ಭಾಷಾ ನಡವಳಿಕೆಯನ್ನು ಬದಲಾಯಿಸಿ ಬಿಡುತ್ತದೆ.

ಇದನ್ನು ‘ಅಲ್ಪಸಂಖ್ಯಾತರ ಸರ್ವಾಧಿಕಾರ’ (The Dictatorship of the Minority) ಅಂತಾರೆ. ನಸ್ಸಿಮ್ ನಿಕೋಲಸ್ ತಾಲೆಬ್ ಅವರ ‘ಸ್ಕಿನ್ ಇನ್ ದಿ ಗೇಮ್’ ಪುಸ್ತಕದಲ್ಲಿ ಈ ಸಂಗತಿಗಳನ್ನು ಸ್ವಾರಸ್ಯಕರವಾಗಿ ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: 'ಮಾರಿಯೋ': ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ

‘ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಬಹುಸಂಖ್ಯಾತರದ್ದೇ ಮೇಲುಗೈ, ಅವರ ನಿರ್ಧಾರಗಳೇ ಸಮಾಜವನ್ನು ಮುನ್ನಡೆಸುತ್ತವೆ’ ಎಂಬುದು ನಮ್ಮ ಸಾಮಾನ್ಯ ನಂಬಿಕೆ. ಆದರೆ ತಾಲೆಬ್ ಈ ನಂಬಿಕೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತುಪಡಿಸುತ್ತಾರೆ.

ಸಮಾಜದ ಸೌಹಾರ್ದತೆ, ಮಾರುಕಟ್ಟೆಯ ನಿಯಮಗಳು ಮತ್ತು ರಾಜಕೀಯ ಬದಲಾವಣೆಗಳು ಬಹುಸಂಖ್ಯಾತರಿಂದ ನಿರ್ಧಾರವಾಗುವುದಿಲ್ಲ. ಬದಲಿಗೆ, ತಮ್ಮ ನಿಲುವಿನಲ್ಲಿ ಅತ್ಯಂತ ಹಠಮಾರಿ ಯಾಗಿರುವ, ಯಾವುದೇ ರಾಜಿ ಮಾಡಿಕೊಳ್ಳದ ಒಂದು ಸಣ್ಣ ಅಲ್ಪಸಂಖ್ಯಾತ ಗುಂಪಿನಿಂದ ನಿರ್ಧಾರವಾಗುತ್ತವೆ ಎನ್ನುವುದೇ ಈ ಸಿದ್ಧಾಂತದ ಜೀವಾಳ. ಈ ಆಸಕ್ತಿದಾಯಕ ಪರಿಕಲ್ಪನೆಯು ಹೇಗೆ ಕೆಲಸ ಮಾಡುತ್ತದೆ ಮತ್ತು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಕುತೂಹಲಕರವೇ.

ಈ ನಿಯಮವು ಕೆಲಸ ಮಾಡಲು ಒಂದು ಪ್ರಮುಖ ಷರತ್ತು ಇರಬೇಕಾಗುತ್ತದೆ. ಒಂದು ಗುಂಪು ಅತ್ಯಂತ ಹಠಮಾರಿಯಾಗಿರಬೇಕು (Intolerant) ಮತ್ತು ಮತ್ತೊಂದು ಗುಂಪು ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವzಗಿರಬೇಕು (Flexible).

ಯಾವಾಗ ಸಮಾಜದಲ್ಲಿ ಒಂದು ಸಣ್ಣ ಗುಂಪು (ಉದಾಹರಣೆಗೆ ಶೇ.3 ಅಥವಾ ಶೇ.4ರಷ್ಟು ಜನ) ‘ನಾವು ಈ ನಿರ್ದಿಷ್ಟ ನಿಯಮವನ್ನು ಬಿಟ್ಟು ಬೇರೆ ಯಾವುದನ್ನೂ ಒಪ್ಪುವುದಿಲ್ಲ’ ಎಂದು ಪಟ್ಟು ಹಿಡಿಯುತ್ತದೆಯೋ ಮತ್ತು ಉಳಿದ ಶೇ.90ಕ್ಕಿಂತ ಹೆಚ್ಚು ಜನ ನಮಗೆ ಯಾವುದೇ ತೊಂದರೆಯಿಲ್ಲ, ‘ನಾವು ಯಾವುದಕ್ಕಾದರೂ ಹೊಂದಿಕೊಳ್ಳುತ್ತೇವೆ’ ಎಂದು ಯೋಚಿಸುತ್ತಾರೋ, ಆಗ ಇಡೀ ವ್ಯವಸ್ಥೆಯು ಆ ಸಣ್ಣ ಗುಂಪಿನ ಇಚ್ಛೆಯಂತೆ ಬದಲಾಗಬೇಕಾಗುತ್ತದೆ.

ಇಲ್ಲಿ ಬಹುಸಂಖ್ಯಾತರು ಸೋಲುವುದಿಲ್ಲ, ಬದಲಿಗೆ ಅವರ ‘ಹೊಂದಾಣಿಕೆಯ ಗುಣವೇ’ ಅವರನ್ನು ಅಲ್ಪಸಂಖ್ಯಾತರ ನಿಯಮಗಳಿಗೆ ತಲೆಬಾಗುವಂತೆ ಮಾಡುತ್ತದೆ. ತಾಲೆಬ್ ಈ ಸಿದ್ಧಾಂತವನ್ನು ವಿವರಿಸಲು ಜಾಗತಿಕ ಆಹಾರ ಮಾರುಕಟ್ಟೆಯ ಹಲಾಲ/ಕೋಶರ್ ಉದಾಹರಣೆ ನೀಡುತ್ತಾರೆ.

Screenshot_8

ಪಾಶ್ಚಿಮಾತ್ಯ ದೇಶಗಳಲ್ಲಿ ಯಹೂದಿಗಳು (ಕೋಶರ್ ಆಹಾರ ಸೇವಿಸುವವರು) ಮತ್ತು ಮುಸ್ಲಿಮರು (ಹಲಾಲ್ ಆಹಾರ ಸೇವಿಸುವವರು) ಜನಸಂಖ್ಯೆಯಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿದ್ದಾರೆ. ಹಲಾಲ್ ಅಥವಾ ಕೋಶರ್ ನಿಯಮದಂತೆ ಸಿದ್ಧವಾಗದ ಆಹಾರವನ್ನು ಮುಸ್ಲಿಮರಾಗಲಿ, ಹೂದಿಗಳಾಗಲಿ ಯಾವುದೇ ಕಾರಣಕ್ಕೂ ಸೇವಿಸುವುದಿಲ್ಲ. ಅವರ ನಿಲುವು ಅತ್ಯಂತ ಕಟ್ಟುನಿಟ್ಟು. ಇಸ್ಲಾಂ ಅಥವಾ ಯಹೂದಿ ಧರ್ಮಕ್ಕೆ ಸೇರದ ಸಾಮಾನ್ಯ ಜನರಿಗೆ ಆಹಾರವು ಹಲಾಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಅವರು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾರೆ. ಅವರಿಗೆ ಯಾವುದೇ ಹಠವಿಲ್ಲ.

ಈ ಪರಿಸ್ಥಿತಿಯಲ್ಲಿ ಒಬ್ಬ ದೊಡ್ಡ ಆಹಾರ ಉತ್ಪಾದಕ ಅಥವಾ ಸೂಪರ್ ಮಾರ್ಕೆಟ್ ಮಾಲೀಕ ಏನು ಯೋಚಿಸುತ್ತಾನೆ? ಆತ ಎರಡು ರೀತಿಯ ಆಹಾರಗಳನ್ನು ತಯಾರಿಸಿದರೆ (ಒಂದು ಸಾಮಾನ್ಯ ಮತ್ತು ಇನ್ನೊಂದು ಹಲಾಲ/ಕೋಶರ್) ಅವನಿಗೆ ಪ್ಯಾಕೇಜಿಂಗ್, ವಿತರಣೆ ಮತ್ತು ನಿರ್ವಹಣೆಯ ವೆಚ್ಚ ದುಪ್ಪಟ್ಟಾಗುತ್ತದೆ. ಅದರ ಬದಲು, ಆತ ಇಡೀ ಮಾರುಕಟ್ಟೆಗೆ ಕೇವಲ ಹಲಾಲ್ ಅಥವಾ ಕೋಶರ್ ಪ್ರಮಾಣೀಕೃತ ಆಹಾರವನ್ನೇ ಪೂರೈಸಲು ಆರಂಭಿಸುತ್ತಾನೆ. ಏಕೆಂದರೆ ಅದನ್ನು ಹಠಮಾರಿ ಅಲ್ಪಸಂಖ್ಯಾತರೂ ಕೊಳ್ಳುತ್ತಾರೆ, ಯಾವುದೇ ಪಥ್ಯವಿಲ್ಲದ ಬಹುಸಂಖ್ಯಾತರೂ ಕೊಳ್ಳುತ್ತಾರೆ!

ಪರಿಣಾಮ, ತಮಗೇ ತಿಳಿಯದಂತೆ ಶೇ.90ಕ್ಕಿಂತ ಹೆಚ್ಚಿರುವ ಬಹುಸಂಖ್ಯಾತರು ಕೇವಲ ಶೇ.3 ರಷ್ಟಿರುವ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಬ್ರಿಟನ್ ಅಥವಾ ಅಮೆರಿಕದ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಬಹುಪಾಲು ಮಾಂಸ ಮತ್ತು ಸಿದ್ಧ ಆಹಾರಗಳು ಇಂದು ಹಲಾಲ್ ಆಗಿರುವುದರ ಹಿಂದಿನ ಆರ್ಥಿಕ ಮತ್ತು ಸಾಮಾಜಿಕ ರಹಸ್ಯ ಇದೇ ಆಗಿದೆ.

ಈ ಸರ್ವಾಧಿಕಾರವು ಕೇವಲ ಧರ್ಮ ಅಥವಾ ಆಹಾರಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಅನ್ವಯವಾಗುತ್ತದೆ. ಇತಿಹಾಸದಲ್ಲಿ ಸಂಭವಿಸಿದ ದೊಡ್ಡ ಕ್ರಾಂತಿಗಳು ಮತ್ತು ಧರ್ಮ ಬದಲಾವಣೆಗಳ ಹಿಂದೆ ಇದೇ ನಿಯಮ ಕೆಲಸ ಮಾಡಿದೆ ಎಂದು ತಾಲೆಬ್ ವಾದಿಸು ತ್ತಾರೆ. ರೋಮನ್ ಸಾಮ್ರಾಜ್ಯವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು ಇಡೀ ದೇಶದ ಜನರ ಇಚ್ಛೆಯಿಂದಲ್ಲ.

ಬದಲಿಗೆ, ಕ್ರಿಶ್ಚಿಯನ್ ಧರ್ಮದ ಆರಂಭಿಕ ಅನುಯಾಯಿಗಳು ತಮ್ಮ ನಂಬಿಕೆಯಲ್ಲಿ ಅತ್ಯಂತ ದೃಢವಾಗಿದ್ದರು ಮತ್ತು ಬೇರೆ ಯಾವುದೇ ರೋಮನ್ ದೇವತೆಗಳನ್ನು ಆರಾಧಿಸಲು ನಿರಾಕರಿಸಿ ದರು. ರೋಮನ್‌ರು ಎಲ್ಲ ಧರ್ಮಗಳನ್ನೂ ಗೌರವಿಸುವ ಮುಕ್ತ ಸ್ವಭಾವದವರಾಗಿದ್ದರಿಂದ, ಅಂತಿಮವಾಗಿ ಇಡೀ ಸಾಮ್ರಾಜ್ಯವೇ ಹಠಮಾರಿಗಳ ಧರ್ಮಕ್ಕೆ ಶರಣಾಗಬೇಕಾಯಿತು.

ಇದೇ ನಿಯಮವು ಸಮಾಜದಲ್ಲಿ ನೈತಿಕ ಪ್ರಗತಿಗೂ ಕಾರಣವಾಗಬಹುದು. ಉದಾಹರಣೆಗೆ, ಹಿಂದೆ ಸಮಾಜದಲ್ಲಿ ಧೂಮಪಾನ ಮಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಧೂಮಪಾನ ಮಾಡದ ಒಂದು ಸಣ್ಣ ಗುಂಪು ನಮ್ಮ ಎದುರು ‘ಧೂಮಪಾನ ಮಾಡಬಾರದು, ಅದು ಆರೋಗ್ಯಕ್ಕೆ ಹಾನಿಕರ’ ಎಂದು ತೀವ್ರವಾಗಿ ಪ್ರತಿಭಟಿಸಲು ಆರಂಭಿಸಿತು.

ಧೂಮಪಾನ ಮಾಡುವವರು ‘ಸರಿ, ನಾವು ಹೊರಗೆ ಹೋಗಿ ಸೇದುತ್ತೇವೆ’ ಎಂದು ಹೊಂದಾಣಿಕೆ ಮಾಡಿಕೊಂಡರು. ಇಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣ ನಿಷೇಧವಾಗಲು ಆ ಸಣ್ಣ ಅಲ್ಪಸಂಖ್ಯಾತ ಗುಂಪಿನ ಹಠವೇ ಕಾರಣ.

ನಸ್ಸಿಮ್ ತಾಲೆಬ್ ಶೇ.3ರಷ್ಟು ಜನಸಂಖ್ಯೆಯನ್ನು ಒಂದು ವಿಶಿಷ್ಟ ಸಂಖ್ಯೆಯಾಗಿ ಬಳಸುತ್ತಾರೆ. ಒಂದು ಸಣ್ಣ ಗುಂಪು ಸಮಾಜದಲ್ಲಿ ಹರಡಿಕೊಂಡಿದ್ದರೂ, ಅವರು ಭೌಗೋಳಿಕವಾಗಿ ಒಂದೇ ಕಡೆ ಇರಬೇಕಾಗಿಲ್ಲ. ಅವರು ಮಾರುಕಟ್ಟೆಯಲ್ಲಿ ‘ವೀಟೋ ಪವರ್’ ಹೊಂದಿರುತ್ತಾರೆ. ಯಾವುದೇ ಒಂದು ದೊಡ್ಡ ಕಂಪನಿ ಗ್ರಾಹಕರನ್ನು ಕಳೆದುಕೊಳ್ಳಲು ಬಯಸುವುದಿಲ್ಲ.

ಒಂದು ಉತ್ಪನ್ನವನ್ನು ಶೇ.97ರಷ್ಟು ಜನ ಇಷ್ಟಪಡುತ್ತಾರೆ, ಆದರೆ ಶೇ.3ರಷ್ಟು ಜನ ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದರೆ, ಕಂಪನಿಯು ಆ ಶೇ.3ರಷ್ಟು ಜನರನ್ನು ತೃಪ್ತಿಪಡಿಸಲು ತನ್ನ ಉತ್ಪನ್ನದ ಸೂತ್ರವನ್ನೇ ಬದಲಾಯಿಸುತ್ತದೆ. ಹೀಗಾಗಿ, ಜಾಗತಿಕ ಕಂಪನಿಗಳಾದ ಮೆಕ್ ಡೊನಾಲ್ಡ್ಸ್, ಕೋಕಾ-ಕೋಲಾ ಅಥವಾ ನೆಸ್ಲೇ ತಮ್ಮ ಉತ್ಪನ್ನಗಳನ್ನು ಜಾಗತಿಕವಾಗಿ ತಯಾರಿಸು ವಾಗ ಈ ಹಠಮಾರಿ ಅಲ್ಪಸಂಖ್ಯಾತರ ನಿಯಮಗಳನ್ನೇ ಪ್ರಮಾಣಕವಾಗಿ (Standard) ಬಳಸುತ್ತವೆ.

‘ಅಲ್ಪಸಂಖ್ಯಾತರ ಸರ್ವಾಧಿಕಾರ’ದ ಪರಿಕಲ್ಪನೆಯು ನಮಗೆ ಒಂದು ಕಹಿ ಸತ್ಯವನ್ನು ನೆನಪಿಸು ತ್ತದೆ. ಸಮಾಜದಲ್ಲಿ ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲಿ, ಬದಲಾವಣೆ ತರಲು ಎಲ್ಲರ ಒಪ್ಪಿಗೆ ಬೇಕಾಗಿಲ್ಲ. ಅತ್ಯಂತ ಸಂಘಟಿತವಾದ, ರಾಜಿ ಮಾಡಿಕೊಳ್ಳದ ಒಂದು ಸಣ್ಣ ಉಗ್ರ ಅಥವಾ ಹಠಮಾರಿ ಗುಂಪು ಇಡೀ ಸಮಾಜದ ದಿಕ್ಕನ್ನು ಬದಲಾಯಿಸಬಲ್ಲದು.

ಉದಾರವಾದಿ (ಲಿಬರಲ್) ಮತ್ತು ಮುಕ್ತ ಸಮಾಜಗಳುಯಾವಾಗಲೂ ‘ಸಹಿಷ್ಣುತೆ’ ಮತ್ತು ‘ಹೊಂದಾಣಿಕೆಗೆ’ ಬೆಲೆ‌ ನೀಡುತ್ತವೆ. ಆದರೆ, ಇದೇ ಮುಕ್ತ ಸಮಾಜಗಳು ತೀವ್ರ ಅಸಹಿಷ್ಣು ಹಾಗೂ ಹಠಮಾರಿ ಗುಂಪುಗಳ ಎದುರು ಬಂದಾಗ, ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯ ವಿರುತ್ತದೆ. ಏಕೆಂದರೆ ಹೊಂದಾಣಿಕೆ ಮಾಡಿಕೊಳ್ಳುವ ಗುಣವೇ ಸಮಾಜದ ದೌರ್ಬಲ್ಯವಾಗಿ ಪರಿಣಮಿಸುತ್ತದೆ.

ತಾಲೆಬ್ ಅವರ ಪ್ರಕಾರ, ಒಂದು ಮುಕ್ತ ಸಮಾಜವು ಎಲ್ಲವನ್ನೂ ಸಹಿಸಬೇಕು, ಆದರೆ ಅಸಹಿಷ್ಣುತೆ ಯನ್ನು ಮಾತ್ರ ಎಂದಿಗೂ ಸಹಿಸಬಾರದು. ಇಲ್ಲದಿದ್ದರೆ, ಸಣ್ಣ ಗುಂಪಿನ ಸರ್ವಾಧಿಕಾರ ಇಡೀ ವ್ಯವಸ್ಥೆಯನ್ನು ನುಂಗಿಹಾಕುತ್ತದೆ ಎಂಬುದೇ ನಸ್ಸಿಮ್ ತಾಲೆಬ್ ನೀಡುವ ಅತ್ಯಂತ ರೋಚಕ ಮತ್ತು ಗಂಭೀರ ಸಂದೇಶವಾಗಿದೆ.

ಆರ್ಥಿಕ ಶಿಸ್ತು-ನೆಮ್ಮದಿ ಬದುಕು

ಹಣಕಾಸಿನ ಶಿಸ್ತು ಮತ್ತು ಜೀವನದ ನೆಮ್ಮದಿ ಮಧ್ಯೆ ಒಂದು ಉತ್ತಮ ಸಂಬಂಧವಿದೆ. ಹಣಕಾಸು ಶಿಸ್ತು ಇಲ್ಲದಿದ್ದರೆ ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯವೇ ಇಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ‘ಈಗಲೇ ಖರೀದಿಸಿ, ಆಮೇಲೆ ಪಾವತಿಸಿ’ (Buy Now, Pay Later) ಎಂಬ ಆಕರ್ಷಕ ಜಾಹೀರಾತುಗಳು ನಮ್ಮನ್ನು ಸದಾ ಪ್ರಲೋಭಿಸುತ್ತಿರುತ್ತವೆ. ಕ್ರೆಡಿಟ್ ಕಾರ್ಡ್‌ಗಳು ಮತ್ತು ಸುಲಭ ಇಎಂಐ (EMI) ಸೌಲಭ್ಯಗಳು ನಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತವೆ. ಇಂತಹ ಸಂದರ್ಭದಲ್ಲಿ, ನಗದು ಪಾವತಿಸಲು ಸಾಧ್ಯವಾಗದಿದ್ದರೆ, ‘ನೀವು ಅದನ್ನು ಖರೀದಿಸಲು ಅರ್ಹರಲ್ಲ’, ‘ಅಭ್ಯಾಸ ಮೀರಿ ಖರೀದಿಸಬೇಡಿ’ ಮತ್ತು ‘ಮನೆ ಖರೀದಿಯನ್ನು ಹೊರತುಪಡಿಸಿ ಸಾಲ ಮಾಡಬೇಡಿ’ ಎಂಬ ಮೂರು ಬಂಗಾರದಂಥ ನಿಯಮಗಳು ನಮಗೆ ಅತ್ಯಂತ ಪ್ರಸ್ತುತ. ಇವು ಕೇವಲ ಆರ್ಥಿಕ ನಿಯಮಗಳಲ್ಲ, ಬದಲಿಗೆ ವ್ಯಕ್ತಿಯೊಬ್ಬನಿಗೆ ನಿಜವಾದ ಆರ್ಥಿಕ ಸ್ವಾತಂತ್ರ್ಯ ಮತ್ತು ನೆಮ್ಮದಿಯನ್ನು ನೀಡುವ ಜೀವನ ಸೂತ್ರಗಳಾಗಿವೆ.

ಯಾವುದೇ ವಸ್ತುವಿಗೆ ನಗದು ರೂಪದಲ್ಲಿ (ಅಥವಾ ಬ್ಯಾಂಕ್ ಖಾತೆಯಲ್ಲಿರುವ ಹಣದಿಂದ) ತಕ್ಷಣ ಪಾವತಿಸಲು ಸಾಧ್ಯವಾಗದಿದ್ದರೆ, ನೀವು ಅದನ್ನು ಆರ್ಥಿಕವಾಗಿ ಭರಿಸಲು ಸಾಧ್ಯವಿಲ್ಲ ಎನ್ನುವುದು ಮೊದಲ ನಿಯಮ. ಕಾರು, ದುಬಾರಿ ಮೊಬೈಲ್, ಗ್ಯಾಜೆಟ್‌ಗಳು ಅಥವಾ ಐಷಾರಾಮಿ ಪ್ರವಾಸ ಗಳಂಥ‌ ಸವಕಳಿಯಾಗುವ (Depreciating Assets) ವಸ್ತುಗಳನ್ನು ಖರೀದಿಸುವಾಗ ಈ ನಿಯಮ ವನ್ನು ಕಡ್ಡಾಯವಾಗಿ ಪಾಲಿಸಬೇಕು.

ನಿಮ್ಮ ಜೇಬಿನಲ್ಲಿ ಹಣವಿzಗ ಮಾತ್ರ ವಸ್ತುಗಳನ್ನು ಖರೀದಿಸಿದರೆ, ನೀವು ಭವಿಷ್ಯದ ಆದಾಯವನ್ನು ಇಂದೇ ಖರ್ಚು ಮಾಡುವ ಅಪಾಯದಿಂದ ಪಾರಾಗುತ್ತೀರಿ. ನಗದು ಪಾವತಿಯು ನಿಮ್ಮ ಆರ್ಥಿಕ ಮಿತಿಯನ್ನು ನಿಮಗೆ ಸದಾ ನೆನಪಿಸುತ್ತಿರುತ್ತದೆ. ಅನೇಕರು ಕೇವಲ ಸಮಾಜದಲ್ಲಿ ಗೌರವಕ್ಕಾಗಿ ಅಥವಾ ಪ್ರದರ್ಶನಕ್ಕಾಗಿ ತಮ್ಮ ಯೋಗ್ಯತೆಗೂ ಮೀರಿದ ದುಬಾರಿ ಕಾರು ಅಥವಾ ಸ್ಮಾರ್ಟ್-ನ್‌ಗಳನ್ನು ಇಎಂಐ ಮೂಲಕ ಖರೀದಿಸುತ್ತಾರೆ.

ನೆನಪಿಡಿ, ಶೋರೂಮ್‌ನಿಂದ ಹೊರಬರುತ್ತಿದ್ದಂತೆ ಕಾರಿನ ಮೌಲ್ಯ ಶೇ.20ರಷ್ಟು ಕಡಿಮೆ ಯಾಗುತ್ತದೆ. ಗ್ಯಾಜೆಟ್‌ಗಳ ಕಥೆಯೂ ಅಷ್ಟೇ, ಕೆಲವು ತಿಂಗಳುಗಳಲ್ಲಿ ಹೊಸ ಮಾದರಿ ಬಂದಾಗ ಹಳೆಯದರ ಬೆಲೆ ಕುಸಿಯುತ್ತದೆ. ಇಂಥ ಸವಕಳಿಯಾಗುವ ವಸ್ತುಗಳಿಗಾಗಿ ಸಾಲ ಮಾಡಿ, ಅದಕ್ಕೆ ಬಡ್ಡಿ ಕಟ್ಟುವುದು ಆರ್ಥಿಕವಾಗಿ ಅತ್ಯಂತ ಮೂರ್ಖತನದ ನಿರ್ಧಾರ. ನಗದು ನೀಡಿ ಖರೀದಿಸಲು ಸಾಧ್ಯವಾಗುವ ಸಣ್ಣ ಅಥವಾ ಸಾಧಾರಣ ವಸ್ತುವೇ ಸಾಲದ ಮೇಲಿನ ಐಷಾರಾಮಿ ವಸ್ತುವಿಗಿಂತ ನೂರು ಪಟ್ಟು ಉತ್ತಮ.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಪ್ರವಾಸ ಕೈಗೊಳ್ಳಲು ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಟ್ರೆಂಡ್ ಹೆಚ್ಚಾಗಿದೆ. ಕೇವಲ ನಾಲ್ಕು ದಿನಗಳ ನೆಮ್ಮದಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಲು ಸಾಲ ಮಾಡುವುದು ಸ್ವಯಂಕೃತ ಅಪರಾಧ ಎನ್ನಬಹುದು.

ಪ್ರವಾಸ ಮುಗಿದು ಬಂದ ಮೇಲೂ ಮುಂದಿನ ಹನ್ನೆರಡು ತಿಂಗಳು ಅದರ ಇಎಂಐ ಕಟ್ಟುತ್ತಾ ಕೂರುವುದು ಮಾನಸಿಕ ನೆಮ್ಮದಿಯನ್ನು ಕದಡುತ್ತದೆ. ನಿಮ್ಮ ಹತ್ತಿರ ಹಣವಿದ್ದಾಗ ಮಾತ್ರ ಪ್ರವಾಸದ ಯೋಜನೆ ಮಾಡಿ, ಇಲ್ಲದಿದ್ದರೆ ಹಣ ಉಳಿತಾಯ ಮಾಡುವವರೆಗೆ ಕಾಯಿರಿ. ಸಾಲ ರಹಿತ ಪ್ರವಾಸ ಮಾತ್ರ ನಿಜವಾದ ಆನಂದವನ್ನು ನೀಡಬಲ್ಲದು.

‘ನಿಮಗೆ ಅದನ್ನು ಭರಿಸಲು ಸಾಧ್ಯವಿಲ್ಲ ಎಂದಾದರೆ, ನೀವು ಅದನ್ನು ಖರೀದಿಸಬಾರದು’ ಎಂಬ ನಿಯಮವು ನಮ್ಮ ಆಸೆ ಮತ್ತು ಅಗತ್ಯಗಳ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ. ನಮ್ಮ ಆದಾಯಕ್ಕೆ ತಕ್ಕಂತೆ ಬದುಕುವುದು ಕೀಳರಿಮೆಯಲ್ಲ, ಬದಲಿಗೆ ಅದು ಜಾಣ್ಮೆ. ಶ್ರೀಮಂತರಂತೆ ತೋರ್ಪಡಿಸಿಕೊಳ್ಳಲು ಹೋಗಿ ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ.

ನಮ್ಮ ಮಾಸಿಕ ಆದಾಯ, ಉಳಿತಾಯ ಮತ್ತು ತುರ್ತು ನಿಧಿಯನ್ನು ಕಾಯ್ದುಕೊಂಡ ನಂತರವೂ ಹಣ ಉಳಿದರೆ ಮಾತ್ರ ಐಷಾರಾಮಿ ವಸ್ತುಗಳ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಆ ವಸ್ತು ನಮಗೆ ಹೊರೆಯಾಗುತ್ತದೆ. ಸಾಲ ಎನ್ನುವುದು ಮನುಷ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಒಂದು ಬೇಡಿ. ಇಎಂಐಗಳ ಹೊರೆ ಹೆಚ್ಚಾದಾಗ ಉದ್ಯೋಗದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ ವಾಗುವುದಿಲ್ಲ,

ನೆಮ್ಮದಿಯ ನಿದ್ದೆ‌ ಇರುವುದಿಲ್ಲ ಮತ್ತು ಕುಟುಂಬದಲ್ಲಿ ಸದಾ ಹಣದ ತಾಪತ್ರಯ ಇರುತ್ತದೆ. ಯಾವುದೇ ಸಣ್ಣ ಸಾಲ ಇರಲಿ, ಅದು ನಿಮ್ಮ ಭವಿಷ್ಯದ ಉಳಿತಾಯದ ಅವಕಾಶಗಳನ್ನು ನುಂಗಿ ಹಾಕುತ್ತದೆ. ಕ್ರೆಡಿಟ್ ಕಾಡ್ ಗಳ ಕನಿಷ್ಠ ಬಾಕಿ ಪಾವತಿಸುವ ಚಟಕ್ಕೆ ಬಿದ್ದರೆ, ಅಧಿಕ ಬಡ್ಡಿಯ ಸುಳಿಗೆ ಸಿಲುಕಬೇಕಾಗುತ್ತದೆ.

ಈ ನಿಯಮಗಳಲ್ಲಿ ಮನೆ ಖರೀದಿಸಲು ಮಾತ್ರ ಸಾಲ ಮಾಡಲು ವಿನಾಯಿತಿ ನೀಡಲಾಗಿದೆ. ಇದಕ್ಕೆ ಕಾರಣವೆಂದರೆ, ಮನೆ ಅಥವಾ ನಿವೇಶನ ಎನ್ನುವುದು ಸವಕಳಿಯಾಗುವ ವಸ್ತುವಲ್ಲ, ಅದು ದಿನಕಳೆದಂತೆ ಮೌಲ್ಯ ಹೆಚ್ಚಾಗುವ ಆಸ್ತಿ. ಬಾಡಿಗೆ ಕಟ್ಟುವ ಬದಲು ಇಎಂಐ ಕಟ್ಟಿ ಸ್ವಂತ ಮನೆ ಹೊಂದುವುದು ದೀರ್ಘಾವಧಿಯಲ್ಲಿ ಲಾಭದಾಯಕ. ಅಲ್ಲದೆ, ಗೃಹ ಸಾಲದ ಮೇಲಿನ ಬಡ್ಡಿ ದರವು ವೈಯಕ್ತಿಕ ಸಾಲಗಳಿಗಿಂತ ಕಡಿಮೆ ಇರುತ್ತದೆ ಮತ್ತು ಇದಕ್ಕೆ ತೆರಿಗೆ ವಿನಾಯಿತಿಯೂ ಸಿಗುತ್ತದೆ.

ಆದರೂ, ಗೃಹ ಸಾಲದ ಇಎಂಐ ಕೂಡ ನಿಮ್ಮ ಒಟ್ಟು ಆದಾಯದ ಶೇ.30 ರಿಂದ ಶೇ.10ಕ್ಕಿಂತ ಹೆಚ್ಚಿರಬಾರದು. ಹಣಕಾಸಿನ ಯಶಸ್ಸು ಎನ್ನುವುದು ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದರ ಮೇಲಲ್ಲ, ಬದಲಿಗೆ ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ಮೂರು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರ್ಥಿಕ ಬಿಕ್ಕಟ್ಟುಗಳಿಂದ ದೂರ ವಿರಬಹುದು. ತಾಳ್ಮೆ ಮತ್ತು ಶಿಸ್ತಿನಿಂದ ಹಣ ಉಳಿಸಿ, ನಗದು ರೂಪದ ವ್ಯವಹಾರ ಮಾಡುವು ದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಲ ಮುಕ್ತ ಜೀವನವೇ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತಿಕೆ.

ವ್ಯಕ್ತಿಯನ್ನು ಪತ್ತೆ ಹಚ್ಚೋದು ಹೇಗೆ ?

ಇತ್ತೀಚೆಗೆ ನಾನು, ‘ವಾಟ್ಸಾಪ್ ಯುನಿವರ್ಸಿಟಿ’ಯಲ್ಲಿ ಕೇಳಿದ ಒಂದು ಕಾಲ್ಪನಿಕ, ತಮಾಷೆ ಪ್ರಸಂಗ. ಪಾಕಿಸ್ತಾನದ ಇಬ್ಬರು ರಾಜಕಾರಣಿಗಳಾದ ಷರೀಫ್ ಮತ್ತು ಮುನೀರ್ ಲಂಡನ್‌ಗೆ ತೆರಳಿದರು. ಅಲ್ಲಿ ಅವರಿಗೆ ಪಾಲ್ ಎಂಬ‌ ಬ್ರಿಟಿಷ್ ವ್ಯಕ್ತಿ ಭೇಟಿಯಾದ. ಮೂವರೂ ಗೆಳೆಯರಾದರು. ಅವರು ಲಂಡನ್‌ನಲ್ಲಿ ಪಾಲ್ ಜತೆ ಸುತ್ತಾಡಿದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಪಾಲ್ ನಾಪತ್ತೆ ಯಾಗಿಬಿಟ್ಟ. ತಕ್ಷಣವೇ ಅವರಿಬ್ಬರೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಪೊಲೀಸರು ಪಾಲ್‌ನನ್ನು ಹುಡುಕಲು ಸಹಾಯವಾಗುವ ಯಾವುದಾದರೂ ಪ್ರಮುಖ ಕುರುಹು ಅಥವಾ ವಿಶೇಷ ಗುರುತುಗಳನ್ನು ನೀಡುವಂತೆ ಕೇಳಿದರು.

ಮುನೀರ್ ಹೇಳಿದ-‘ಪಾಲ್ ತುಂಬಾ ಸುಂದರವಾಗಿದ್ದ ಮತ್ತು ಎತ್ತರವಾಗಿದ್ದ’ ಅದಕ್ಕೆ ಪೊಲೀಸರು, ಹೆಚ್ಚಿನ ಇಂಗ್ಲಿಷ್ ಪುರುಷರು ಹಾಗೆಯೇ ಇರುತ್ತಾರೆ. ‘ಏನಾದರೂ ವಿಶೇಷ ಗುರುತು ತಿಳಿಸಿ’ ಎಂದರು. ಷರೀಫ್ ಹೇಳಿದ-‘ಪಾಲ್ ನೀಲಿ ಕಣ್ಣುಗಳನ್ನು ಹೊಂದಿದ್ದ ಮತ್ತು ತುಂಬಾ ಬಿಳಿಯಾಗಿದ್ದ.’ ಪೊಲೀಸರು ಬೇಸರದಿಂದ, ನೋಡಿ, ‘ಬಹಳಷ್ಟು ಇಂಗ್ಲಿಷ್ ಪುರುಷರು ಬಿಳಿಯರು ಮತ್ತು ನೀಲಿ ಕಣ್ಣಿನವರೇ. ನಮಗೆ ಏನಾದರೂ ನಿರ್ದಿಷ್ಟವಾದ ಗುರುತು ಕೊಡಿ’ ಎಂದು ಹೇಳಿದರು.

ಆಗ ಷರೀಫ್ ಮತ್ತು ಮುನೀರ್ ಯೋಚಿಸಿ‌ ಹೀಗೆಂದರು- ‘ಓ ಹೌದು... ಈಗ ನಮಗೆ ನೆನಪಾಯಿತು... ಪಾಲ್‌ನ ಪೃಷ್ಠದ (ass) ಭಾಗದಲ್ಲಿ ಎರಡು ತೂತುಗಳಿದ್ದವು.’ ಪೊಲೀಸರಿಗೆ ಇದು ತುಂಬಾ ವಿಚಿತ್ರ ಎನಿಸಿ ಆಸಕ್ತಿ ಮೂಡಿತು. ಅವರು ಕೇಳಿದರು- ‘ಇದು ನಿಜಕ್ಕೂ ತುಂಬಾ ಕುತೂಹಲವಾದ ಸಂಗತಿ. ಆದರೆ ನಿಮಗೆ ಇದು ಹೇಗೆ ಗೊತ್ತು? ನೀವೇನಾದರೂ ಆ ಎರಡು ತೂತುಗಳನ್ನು ನೋಡಿದ್ದೀರಾ?’ ಅದಕ್ಕೆ ಷರೀಫ್ ಮತ್ತು ಮುನೀರ್ ಹೇಳಿದರು- ‘ಇಲ್ಲ, ನಾವು ಆ ತೂತುಗಳನ್ನು ಕಣ್ಣಾರೆ ನೋಡಿಲ್ಲ. ಆದರೆ ನಾವು ಪಾಲ್ ಜತೆ‌ ಎಲ್ಲಿಗೆ ಹೋದರೂ, ಅಲ್ಲಿದ್ದವರೆಲ್ಲ ನಮ್ಮನ್ನು ಕಂಡು, ನೋಡಿ, ಎರಡು asshole ಗಳ ಜತೆ ಪಾಲ್ ಬರುತ್ತಿದ್ದಾನೆ’ ಎಂದು ಹೇಳಿ ನಗುತ್ತಿದ್ದರು.

ದ್ವಿಮುಖ ಅಗ್ನಿಶಾಮಕ ವಾಹನ

ಇದು ತೀರಾ ಸಣ್ಣ ಸಂಗತಿ. ಆದರೆ ಪರಿಣಾಮ ಮಾತ್ರ ಅಗಾಧ. ಚೀನಾದಲ್ಲಿ ಹೊಸ ಅಗ್ನಿಶಾಮಕ ವಾಹನವನ್ನು ನಿರ್ಮಿಸಲಾಗಿದೆ. ಇದು ಎರಡು ಮುಖಗಳನ್ನು ಹೊಂದಿದ್ದು, ಹಿಂದಕ್ಕೆ ತಿರುಗಿಸುವ ಅವಶ್ಯಕತೆ ಇಲ್ಲದೆ ಎರಡೂ ದಿಕ್ಕುಗಳಲ್ಲಿ ಸುಲಭವಾಗಿ ಚಲಿಸಬಲ್ಲದು. ಅಂದರೆ ಎರಡೂ ಕಡೆಗಳಲ್ಲೂ ಸ್ಟಿಯರಿಂಗ್ ವ್ಯವಸ್ಥೆಯನ್ನು ಹೊಂದಿದೆ. ವಿಶೇಷವಾಗಿ ಸುರಂಗಗಳು ಅಥವಾ ಕಿರಿದಾದ ರಸ್ತೆಗಳಲ್ಲಿ ರಕ್ಷಣಾ ಕಾರ್ಯಗಳಿಗೆ ಇದು ಬಹಳ ಉಪಯುಕ್ತ.

ಇದಕ್ಕೆ ಮ್ಯಾನ್ ಬೈ ಜೇನಸ್ 4000 ( MAN BAI Janus 4000 ) ಎಂದು ಹೆಸರಿಡಲಾಗಿದೆ. ಇದು ಸುಮಾರು ಸುಮಾರು 12 ಕೋಟಿ ರುಪಾಯಿ ವೆಚ್ಚದ್ದು. ಇದು 4000 ಲೀಟರ್ ನೀರು ಮತ್ತು 500 ಗ್ಯಾಲನ್ ಫೋಮ್ ಅನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇದರ ಎರಡೂ ಬದಿಗಳಲ್ಲಿಯೂ ಚಾಲಕನ ಕ್ಯಾಬಿನ್ ಇರುವುದರಿಂದ, ಇದು ತಾಸಿಗೆ 120 ಮೈಲಿ ವೇಗದಲ್ಲಿ ಎರಡೂ ದಿಕ್ಕಿನಲ್ಲಿ ಚಲಿಸಬಲ್ಲದು. ಇವುಗಳು ರಕ್ಷಣಾ ಕಾರ್ಯಗಳಿಗೆ ಜೀವ ರಕ್ಷಕವೆಂದು ಹೇಳಬಹುದು.

1999ರಲ್ಲಿ ಫ್ರಾನ್ಸ್‌ನ ಮಾಂಟ್ ಬ್ಲಾಂಕ್ ಸುರಂಗದಲ್ಲಿ ಸಂಭವಿಸಿದ ದೊಡ್ಡ ಅಗ್ನಿ ಅನಾಹುತದಲ್ಲಿ 38 ಜನರು ಸಾವನ್ನಪ್ಪಿದ್ದರು. ಅಂದು ಈ ವಾಹನವೇನಾದರೂ ಇದ್ದಿದ್ದರೆ, ಆ 38 ಜನರನ್ನು ಜೀವ ಸಹಿತ ಬಚಾವ್ ಮಾಡಬಹುದಿತ್ತು. ಅಗ್ನಿಶಾಮಕ ವಾಹನವನ್ನು ಸುರಂಗದೊಳಗೆ ತಿರುಗಿಸಲು ಆಗದಿದ್ದುದೇ ಆ ದುರ್ಘಟನೆಗೆ ಕಾರಣವಾಗಿತ್ತು.