Fund for Badami Development: ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?
ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ನಡೆದ ಚಾಲುಕ್ಯ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅಭಿವೃದ್ಧಿಗೆ ಬದ್ಧ ಎಂಬ ಮಾತು ಗಳನ್ನು ಹೇಳಿರುವುದು ಜನರು ಸಂತಸಗೊಂಡಿದ್ದಾರೆ.
-
ಅಭಿಷೇಕ ಪಾಟೀಲ
ಮೂರು ದಿನಗಳ ಚಾಲುಕ್ಯ ಉತ್ಸವದಲ್ಲಿ ಅನುದಾನ ಘೋಷಣೆ ಮಾಡಿದ ಸಿಎಂ, ಸಂಸದ
ಆಡಿದ ಮಾತು ಕಾರ್ಯಗತಗೊಳ್ಳಬೇಕಿದೆ
ಬಾಗಲಕೋಟೆ: ದಶಕದ ನಂತರ ನಡೆದ ಮೂರು ದಿನಗಳ ಚಾಲುಕ್ಯ ಉತ್ಸವದಲ್ಲಿ ವಿವಿಧ ಜನಪ್ರತಿನಿಧಿಗಳು ಮಾತನಾಡುತ್ತಾ ಬಾದಾಮಿ ಅಭಿವೃದ್ಧಿಗೆ ಶ್ರಮವಹಿಸುವ ಹಾಗೂ ಕೇಂದ್ರದಿಂದ ಅನುದಾನ ತರುವ ಬಗ್ಗೆ ಹೇಳಿದ್ದಾರೆ. ಕೊಟ್ಟ ಮಾತುಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿವೆ ಎಂದು ನೋಡಬೇಕಿದೆ.
ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ನಡೆದ ಚಾಲುಕ್ಯ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅಭಿವೃದ್ಧಿಗೆ ಬದ್ಧ ಎಂಬ ಮಾತು ಗಳನ್ನು ಹೇಳಿರುವುದು ಜನರು ಸಂತಸಗೊಂಡಿದ್ದಾರೆ.
ರಾಜಕೀಯ ಮರುಜನ್ಮ ನೀಡಿದ್ದ ಬಾದಾಮಿಗೆ ಎರಡನೇ ಬಾರಿ ಸಿಎಂ ಆಗ ಬಳಿಕ ಮೊದಲ ಬಾರಿ ಆಗಮಿಸಿದ್ದ ಅವರು, ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಾಲುಕ್ಯ ಉತ್ಸವಕ್ಕೆ ಹೆಚ್ಚುವರಿಯಾಗಿ 1 ಕೋಟಿ ರು. ನೀಡಲಾಗುತ್ತದೆ ಎಂದು ಹೇಳುವ ಜತೆಗೆ ಸ್ಮಾರಕಗಳ ಸಂರಕ್ಷಣೆ, ಪುನರ್ವಸತಿ, ಇಮ್ಮಡಿ ಪುಲಕೇಶಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದರು. ಈ ಮೂಲಕ ರಾಜಕೀಯ ಪುನರ್ವಜನ್ಮ ನೀಡಿದ್ದರಿಂದ ವಿಶೇಷ ಕಾಳಜಿಯನ್ನು ತೋರಿದ್ದಾರೆ.
ಇದನ್ನೂ ಓದಿ: Bagalkot News: ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಪೈಪ್‌ನಿಂದ ಹೊಡೆದ ಶಿಕ್ಷಕ ದಂಪತಿ!
ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಇದ್ದ ಸಂದರ್ಭದಲ್ಲಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ ಅವರು, ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಒಳಗೊಂಡ ಸರ್ಕ್ಯೂಟ್ ಅಭಿವೃದ್ಧಿಗೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ 900 ಕೋಟಿ ರು. ಅನುದಾನ ತರಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ನಮ್ಮ ಮನವಿಗಳನ್ನು ಪುರಸ್ಕರಿಸು ತ್ತಿಲ್ಲ. ಆದರೂ ಸಂಸದರು ಹೇಳುತ್ತಿದ್ದಾರೆಂಬ ಕಾರಣಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಲಾಗು ವುದು. ಅನುದಾನ ತರುವ ಜವಾಬ್ದಾರಿ ಸಂಸದರದು ಎಂದು ಹೇಳಿದರು.
ಪಟ್ಟದಕಲ್ಲಿನ ದೇವಸ್ಥಾನಗಳ ದೀಪಾಲಂಕರ ವ್ಯವಸ್ಥೆಗಾಗಿ ಕೇಂದ್ರದಿಂದ 1.70 ಕೋಟಿ ರು.ಗಳ ಅನುದಾನ ಒದಗಿಸಲಾಗಿದೆ. ಕೇಂದ್ರದಿಂದ ಹೃದಯ್ ಯೋಜನೆಯಡಿ ಬಾದಾಮಿ ಅಭಿವೃದ್ಧಿಪಡಿಸಲಾಗಿದ್ದು, ಬಾದಾಮಿ ಸ್ಮಾರಕಗಳ ಸುತ್ತಲಿನ ಮನೆಗಳ ಸ್ಥಳಾಂತರಕ್ಕೂ ೮ ಕೋಟಿ ರು.ಗಳನ್ನು ಒದಗಿಸಲಾಗಿತ್ತು. ಪ್ರವಾಸೋದ್ಯಮವನ್ನೇ ಗಮನದಲ್ಲಿರಿಸಿಕೊಂಡು ಬಾಣಾಪುರ-ಗದ್ದನಕೇರಿ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಇನ್ನೂ ಹಲವು ಯೋಜನೆಗಳು ಕೇಂದ್ರ ಸರಕಾರದಿಂದ ರೂಪುಗೊಳ್ಳುತ್ತಿವೆ. ಇದಕ್ಕೆ ರಾಜ್ಯ ಸರಕಾರದ ಸಹಕಾರ ಕೂಡ ಅಗತ್ಯ ಎಂದು ಹೇಳಿದರು.
ಬಾದಾಮಿಯಲ್ಲಿ ಪ್ರತಿಷ್ಠಾಪನೆಗೆ ಈಗಾಗಲೇ ಇಮ್ಮಡಿ ಪುಲಕೇಶಿಯ ಒಂದು ಮೂರ್ತಿ ಯನ್ನು ಕೇಂದ್ರದ ಹೃದಯ್ ಯೋಜನೆಯಡಿ ಕೆತ್ತಿಸಲಾಗಿದ್ದು, ಉತ್ತರ ಭಾರತದ ಕಲಾ ವಿದರು ಅದನ್ನು ಕೆತ್ತನೆ ಮಾಡಿರುವುದರಿಂದ ಆ ಮೂರ್ತಿ ಅಷ್ಟು ತೃಪ್ತಿಕರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೀಗಾಗಿ ಸರಕಾರ ಮತ್ತೊಂದು ಹೊಸ ಮೂರ್ತಿ ಕೆತ್ತನೆಗೆ ಮುಂದಾಗುವುದು ಕಾದು ನೋಡ ಬೇಕಿದೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಮೂರ್ತಿ ಪ್ರತಿಷ್ಠಾಪನೆಯ ಶಪಥ ಮಾಡಿದ್ದು, ಅದಕ್ಕಾಗಿ ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ 1.52 ಕೋಟಿ ರು. ಸಹ ಮೀಸಲಿರಿಸಿದ್ದಾರೆ.
ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಚಾಲುಕ್ಯ ಉತ್ಸವದಲ್ಲಿ ಜನಪ್ರತಿನಿಧಿಗಳು ಆಡಿರುವ ಮಾತುಗಳು ಕಾರ್ಯರೂಪಕ್ಕೆ ಬಂದು ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳಿ ಸಮಗ್ರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಂದು ಕೆಲಸಗಳು ಪ್ರಾರಂಭ ವಾದಾಗಲೇ ಘೋಷಣೆಗೆ ಬೆಲೆ ಸಿಕ್ಕಂತಾಗುತ್ತದೆ ಎನ್ನುವುದು ಜನರ ಅಭಿಪ್ರಾಯ.
*
ಪಾರಂಪರಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ರಾಜ್ಯ ಸರಕಾರ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಅಭಿವೃದ್ಧಿಗೆ ಅನುದಾನ ಕಲ್ಪಿಸು ವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತದೆ. ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಅವರು ಘೋಷಿಸಿರುವ 200 ಕೋಟಿ ರು. ಅನುದಾನ ತರಬೇಕು.
-ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ