47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶರಣು; ರಾಯ್‌ಪುರ ಪೊಲೀಸ್ ವಲಯ ಈಗ ನಕ್ಸಲ್ ಮುಕ್ತ
47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶರಣಾಗಿದ್ದು, ಈ ಮೂಲಕ ಛತ್ತೀಸ್‌ಗಢದ ರಾಯ್‌ಪುರ ಪೊಲೀಸ್ ವಲಯ ನಕ್ಸಲ್ ಮುಕ್ತವಾಗಿದೆ. ಇವರಿಂದ ಇನ್ಸಾಸ್ ರೈಫಲ್‌ಗಳು, ಎರಡು ಎಸ್ ಎಲ್ ಆರ್ ಗಳು, ಒಂದು ಕಾರ್ಬೈನ್, ಮಜಲ್ ಲೋಡಿಂಗ್ ಗನ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಸಂಗ್ರಹ ಚಿತ್ರ -
ಛತ್ತೀಸ್‌ಗಢ: ಮಾವೋವಾದಿ (Maoists) ಸಿದ್ಧಾಂತ, ಕಾಡುಗಳಲ್ಲಿನ ಕಷ್ಟದ ಜೀವನ, ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಕಾರಣದಿಂದ 47 ಲಕ್ಷ ರೂ. ಬಹುಮಾನ ಹೊಂದಿದ್ದ ಒಂಬತ್ತು ಮಾವೋವಾದಿಗಳು ಶುಕ್ರವಾರ ಪೋಲೀಸರ ಮುಂದೆ ಶರಣಾಗಿದ್ದಾರೆ. ಇವರಿಂದ ಇನ್ಸಾಸ್ ರೈಫಲ್‌ಗಳು, ಎರಡು ಎಸ್ ಎಲ್ ಆರ್ ಗಳು, ಒಂದು ಕಾರ್ಬೈನ್, ಮಜಲ್ ಲೋಡಿಂಗ್ ಗನ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಛತ್ತೀಸ್‌ಗಢದ (Chhattisgarh) ಧಮ್ತಾರಿ ಜಿಲ್ಲೆಯ ರಾಯ್‌ಪುರ (Naxal free) ಪೊಲೀಸ್ ವಲಯ ನಕ್ಸಲ್ ಮುಕ್ತವಾಗಿದೆ.
ಈ ಕುರಿತು ಮಾಹಿತಿ ನೀಡಿದ ರಾಯ್‌ಪುರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅಮರೇಶ್ ಮಿಶ್ರಾ, ಪೊಲೀಸರ ಮುಂದೆ ಶುಕ್ರವಾರ ಶರಣಾಗಿರುವ ಮಾವೋವಾದಿ ಕಾರ್ಯಕರ್ತರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಇನ್ನು ಬಸ್ತಾರ್ ವಲಯ ಮತ್ತು ರಾಜನಂದಗಾಂವ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಲವು ಮಾವೋವಾದಿ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು.
ಶರಣಾಗಿರುವ ಮಾವೋವಾದಿಗಳಲ್ಲಿ ನಾಗ್ರಿ ಮತ್ತು ಸೀತಾನದಿ ಪ್ರದೇಶ ಸಮಿತಿ, ಒಡಿಶಾ ರಾಜ್ಯ ಮಾವೋವಾದಿಗಳ ಸಮಿತಿ, ಧಮ್ತಾರಿ, ಗರಿಯಾಬಂದ್, ನುವಾಪಾದ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈನ್‌ಪುರ್ ಸ್ಥಳೀಯ ಗೆರಿಲ್ಲಾ ಸ್ಕ್ವಾಡ್ (ಎಲ್‌ಜಿಎಸ್) ಗೆ ಸೇರಿದವರು, ಏಳು ಮಹಿಳೆಯರು ಇದ್ದಾರೆ.
ಶರಣಾದವರನ್ನು ಸೀತಾನದಿ ಪ್ರದೇಶ ಸಮಿತಿಯ ಕಾರ್ಯದರ್ಶಿ ಜ್ಯೋತಿ ಅಲಿಯಾಸ್ ಜೈನಿ (28), ವಿಭಾಗೀಯ ಸಮಿತಿ ಸದಸ್ಯೆ ಉಷಾ ಅಲಿಯಾಸ್ ಬಾಲಮ್ಮ (45), ರಾಮದಾಸ್ ಮಾರ್ಕಮ್ (30), ರೋನಿ ಅಲಿಯಾಸ್ ಉಮಾ (25), ನಿರಂಜನ್ ಅಲಿಯಾಸ್ ಪೊಡಿಯಾ (25), ಸಿಂಧು ಅಲಿಯಾಸ್ ಸೋಮದಿ (25), ರೀನಾ ಅಲಿಯಾಸ್ ಚಿರೋ (25), ಅಮಿಲಾ ಅಲಿಯಾಸ್ ಸನ್ನಿ (25), ಲಕ್ಷ್ಮಿ ಪುಣೆಂ (18) ಸೇರಿದ್ದಾರೆ. ಇವರಲ್ಲಿ ಬಾಲಮ್ಮ ತೆಲಂಗಾಣದವರಾಗಿದ್ದು, ಇತರರು ಛತ್ತೀಸ್‌ಗಢದ ವಿವಿಧ ಜಿಲ್ಲೆಯವರಾಗಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಮೆಡಿಕಲ್ ಸೀಟ್‌ಗಾಗಿ ಕಾಲನ್ನೇ ಕತ್ತರಿಸಿಕೊಂಡ ಭೂಪ; ಅಂಗವೈಕಲ್ಯ ಸರ್ಟಿಫಿಕೇಟ್ ಪಡೆಯಲು ಇದೆಂಥಾ ಹುಚ್ಚಾಟ!?
ಇವರ ಶರಣಾಗತಿಯೊಂದಿಗೆ ರಾಯ್‌ಪುರ ಶ್ರೇಣಿಯ ಧಮ್ತಾರಿ ಮತ್ತು ಗರಿಯಾಬಂದ್ ಜಿಲ್ಲೆಗಳಲ್ಲಿ ಮತ್ತು ಪಕ್ಕದ ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾವೋವಾದಿಗಳು ಒಂದೋ ಸಾವನ್ನಪ್ಪಿದ್ದಾರೆ, ಇಲ್ಲವೇ ಶರಣಾಗಿದ್ದಾರೆ. ಹೀಗಾಗಿ ಇಲ್ಲಿ ಇನ್ನು ಮುಂದೆ ನಕ್ಸಲ್ ಚಟುವಟಿಕೆ ಸಕ್ರಿಯವಾಗಿಲ್ಲ ಎಂದು ತಿಳಿಸಿದರು.
ಧಮ್ತಾರಿ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ಸಿಂಗ್ ಪರಿಹಾರ್ ಮಾತನಾಡಿ, ಈ ಒಂಬತ್ತು ಮಾವೋವಾದಿಗಳ ಶರಣಾಗತಿಯು ದೀರ್ಘಾವಧಿಯ ನಿರಂತರ ಪ್ರಯತ್ನಗಳ ಫಲಿತಾಂಶವಾಗಿದೆ. ಛತ್ತೀಸ್‌ಗಢದಲ್ಲಿ ಈ ವರ್ಷ 189 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಹೇಳಿದರು.