ಪನೀರ್‌ನಿಂದಾಗಿ ಅಮೆರಿಕದಲ್ಲಿ 1.8 ಕೋಟಿ ರುಪಾಯಿ ಗಳಿಸಿದ ಭಾರತೀಯ ವಿದ್ಯಾರ್ಥಿಗಳು; ಏನಿದು ಸ್ಟೋರಿ? ಇಲ್ಲಿದೆ ವಿವರ
Food discrimination: ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯನಲ್ಲಿ ಭಾರತೀಯ ಆಹಾರ ಪಾಲಕ್ ಪನೀರ್ ಖಾದ್ಯವನ್ನು ವಾಸನೆ ಎಂದು ಕರೆದು, ತಾರತಮ್ಯ ತೋರಿದ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಿದೆ. ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಊರ್ಮಿ ಭಟ್ಟಾಚಾರ್ಯರು ಕೋರ್ಟ್‌ನಲ್ಲಿ ಜಯಗಳಿಸಿದ್ದು ಅವರಿಗೆ 1.8 ಕೋಟಿ ರುಪಾಯಿ ಪರಿಹಾರ ಸಿಕ್ಕಿದೆ.
ಆದಿತ್ಯ ಪ್ರಕಾಶ್ ಮತ್ತು ಊರ್ಮಿ ಭಟ್ಟಾಚಾರ್ಯ ಮತ್ತು ಪನೀರ್ ಖಾದ್ಯ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಜ. 14: ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ (University of Colorado Boulder case) ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಉರ್ಮಿ ಭಟ್ಟಾಚಾರ್ಯ ಪಾಲಕ್ ಪನೀರ್‌ನ ತಾರತಮ್ಯ ಘಟನೆಗೆ (Food discrimination) ಸಂಬಂಧಿಸಿದಂತೆ 1.8 ಕೋಟಿ ರುಪಾಯಿ (USD 200,000) ಪರಿಹಾರ ಗಳಿಸಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ವಿವಿಯ ಮೈಕ್ರೊವೇವ್‌ನಲ್ಲಿ ಮಧ್ಯಾಹ್ನದ ಊಟವನ್ನು ಬಿಸಿ ಮಾಡಬಾರದು ಎಂದು ಸಿಬ್ಬಂದಿಯೊಬ್ಬರು ಆದಿತ್ಯ ಪ್ರಕಾಶ್ ಅವರಿಗೆ ಹೇಳಿದ್ದರು. ಪನೀರ್ ವಾಸನೆ ಬರುತ್ತದೆ ಎಂದು ಇದಕ್ಕೆ ಕಾರಣ ನೀಡಿದ್ದರು. ಈ ಘಟನೆ ತಾರತಮ್ಯದ ಆರೋಪಕ್ಕೆ ಕಾರಣವಾಗಿದ್ದು, ಬಳಿಕ ನಾಗರಿಕ ಹಕ್ಕುಗಳ ಪ್ರಕರಣವಾಗಿ ಅಂತ್ಯ ಕಂಡಿದೆ.
ವರದಿ ಪ್ರಕಾರ, ಆದಿತ್ಯ ಪ್ರಕಾಶ್ ಅವರ ಮಧ್ಯಾಹ್ನದ ಊಟದ ತೀವ್ರ ವಾಸನೆ ಬಗ್ಗೆ ಸಿಬ್ಬಂದಿಯೊಬ್ಬರು ಆರೋಪಿಸಿದ ಬಳಿಕ ಈ ಘಟನೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆದಿತ್ಯ ಪ್ರಕಾಶ್, ಇದು ಕೇವಲ ಆಹಾರ. ನಾನು ಬಿಸಿ ಮಾಡಿ ಹೋಗುತ್ತಿದ್ದೇನೆ ಎಂದು ಹೇಳಿದ್ದರು.
ಅಮೆರಿಕದ ಕಾನೂನು ಸಮರದಲ್ಲಿ ಗೆದ್ದ ಭಾರತೀಯ ವಿದ್ಯಾರ್ಥಿಗಳು:
Shocking! Two Indian PhD students Aditya Prakash and Urmi Bhattacharyya filed a civil suit against the University of Colorado Boulder when Aditya was told not to not use the microwave to heat food (palak paneer) with pungent smell. When he refused, the university escalated the…
— Sahana Singh (@singhsahana) January 14, 2026
ಈ ಘಟನೆ ಗಂಭೀರ ಸ್ವರೂಪ ಪಡೆದುಕೊಂಡ ಬಳಿಕ, 34 ವರ್ಷದ ಆದಿತ್ಯ ಪ್ರಕಾಶ್ ಮತ್ತು 35 ವರ್ಷದ ಊರ್ಮಿ ಭಟ್ಟಾಚಾರ್ಯ ದಂಪತಿ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದರು. ದೂರಿನಲ್ಲಿ ತಾರತಮ್ಯದ ವರ್ತನೆ ಬಗ್ಗೆ ಆದಿತ್ಯ ಪ್ರಕಾಶ್ ಆತಂಕ ವ್ಯಕ್ತಪಡಿಸಿದ ನಂತರ, ಅದಕ್ಕೆ ಪ್ರತಿಕ್ರಿಯೆಯಾಗಿ ವಿಶ್ವವಿದ್ಯಾಲಯವು ಪ್ರತೀಕಾರಾತ್ಮಕ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ ಸುಂಕ; ಭಾರತದ ಮೇಲೆ ಪರಿಣಾಮವೇನು?
ಸಿಬ್ಬಂದಿಗೆ ಅಸುರಕ್ಷಿತ ಭಾವನೆ ಮೂಡಿಸಿದ ಆರೋಪದ ಮೇಲೆ ಹಿರಿಯ ಅಧ್ಯಾಪಕರೊಂದಿಗೆ ಸಭೆಗಳಿಗೆ ಪದೇ ಪದೇ ಕರೆಯಲಾಗುತ್ತಿತ್ತು ಎಂದು ಪ್ರಕಾಶ್ ಹೇಳಿದ್ದಾರೆ. ಯಾವುದೇ ವಿವರಣೆಗಳನ್ನು ನೀಡದೆ ತನ್ನನ್ನು ಬೋಧನಾ ಸಹಾಯಕ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. ಪಾಲಕ್ ಪನೀರ್ ಘಟನೆಯ ನಂತರ ಎರಡು ದಿನಗಳ ಕಾಲ ಭಾರತೀಯ ಆಹಾರವನ್ನು ಸೇವಿಸಿದ ನಂತರ ಗಲಭೆಗೆ ಪ್ರಚೋದನೆ ನೀಡಿದ ಆರೋಪವನ್ನು ತನ್ನ ಮೇಲೆ ಹೊರಿಸಲಾಗಿದೆ ಎಂದೂ ಅವರು ಹೇಳಿದರು.
ಎರಡು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, ವಿಶ್ವವಿದ್ಯಾನಿಲಯವು ಅಂತಿಮವಾಗಿ ಇಬ್ಬರಿಗೂ 2025ರ ಸೆಪ್ಟೆಂಬರ್‌ನಲ್ಲಿ 1.8 ಕೋಟಿ ರೂ. (USD 200,000) ಪಾವತಿಸಲು ಮತ್ತು ಅವರ ಸ್ನಾತಕೋತ್ತರ ಪದವಿಗಳನ್ನು ನೀಡಲು ಒಪ್ಪಿಕೊಂಡಿತು. ಆದರೆ ಅವರು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಅಥವಾ ಉದ್ಯೋಗವನ್ನು ಪಡೆಯುವುದನ್ನು ನಿಷೇಧಿಸಲಾಯಿತು. ದಂಪತಿ ಈ ತಿಂಗಳು ಭಾರತಕ್ಕೆ ಮರಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಭಟ್ಟಾಚಾರ್ಯ ತಮ್ಮ ಅನುಭವವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ- ʼʼಈ ವರ್ಷ, ನಾನು ಒಂದು ಹೋರಾಟವನ್ನು ನಡೆಸಿದೆ. ನಾನು ಇಚ್ಛಿಸುವ ಆಹಾರವನ್ನು ಸೇವಿಸುವ ಸ್ವಾತಂತ್ರ್ಯಕ್ಕಾಗಿ ಮತ್ತು ನನ್ನ ಚರ್ಮದ ಬಣ್ಣ, ಜಾತಿ ಹಿನ್ನೆಲೆ ಅಥವಾ ಭಾರತೀಯ ಉಚ್ಚಾರಣೆಯನ್ನು ಲೆಕ್ಕಿಸದೆ, ನನಗೆ ಬೇಕಾದುದನ್ನು ತಿನ್ನುವ ಮತ್ತು ನನ್ನ ಇಚ್ಛೆಯಂತೆ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯಕ್ಕಾಗಿ ಹೋರಾಟʼʼ ಎಂದು ಅವರು ಹೇಳಿದ್ದಾರೆ.
ಘಟನೆಯ ಸುದ್ದಿ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಮೊಕದ್ದಮೆಯನ್ನು ಗೆದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಮತ್ತು ತಾರತಮ್ಯದ ವಿರುದ್ಧದ ಹೋರಾಟಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.