ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನಲ್ಲಿ ‘ದೇವರ ವಿರುದ್ಧ ಯುದ್ಧ ನಡೆಸಿದ’ ಆರೋಪದಡಿ ಮರಣದಂಡನೆಗೆ ಗುರಿಯಾದ ಎರ್ಫಾನ್ ಸೊಲ್ತಾನಿ; ಯಾರಿವರು? ಇವರು ಸಿಡಿದೆದ್ದಿದ್ದು ಏಕೆ?

ಇರಾನ್‌ನಲ್ಲಿ ಆರ್ಥಿಕ ಕುಸಿತದಿಂದ ಉದ್ಭವಿಸಿದ ಪ್ರತಿಭಟನೆಗಳು ಈಗ ಗಂಭೀರ ರಾಜಕೀಯ ಹೋರಾಟವಾಗಿ ಬದಲಾಗಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ ವಿರುದ್ಧ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ. ಖಮೇನಿ ವಿರುದ್ಧ ಪ್ರತಿಭಟನೆ ನಡೆಸಿದ 26 ವರ್ಷದ ಎರ್ಫಾನ್ ಸೊಲ್ತಾನಿ ಎಂಬ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದೀಗ ಎರ್ಫಾನ್ ಸೊಲ್ತಾನಿ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಇರಾನ್‌ನಲ್ಲಿ ಮರಣದಂಡನೆಗೆ ಒಳಗಾಗದ ಎರ್ಫಾನ್ ಸೊಲ್ತಾನಿ ಯಾರು?

ಎರ್ಫಾನ್ ಸೊಲ್ತಾನಿ -

Profile
Sushmitha Jain Jan 14, 2026 3:47 PM

ಟೆಹರಾನ್‌, ಜ. 14: ಇರಾನ್‌ನಲ್ಲಿ(Iran) ಆರ್ಥಿಕ ಕುಸಿತದಿಂದ (Economic Downfall) ಉದ್ಭವಿಸಿದ ಪ್ರತಿಭಟನೆ ಇದೀಗ ಗಂಭೀರ ರಾಜಕೀಯ ಹೋರಾಟವಾಗಿ ರೂಪುಗೊಂಡಿದೆ. ಖಮೇನಿ ಸರ್ಕಾರದ (Khamenei Government) ವಿರುದ್ಧ ಜನರ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪರಿಸ್ಥಿತಿ ‘ಇರಾನ್ ಜನತೆ ವಿರುದ್ಧ ಖಮೇನಿ ಆಡಳಿತ’ ಎನ್ನುವ ಹಂತಕ್ಕೆ ತಲುಪಿದೆ. ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳ ಕುರಿತ ಚರ್ಚೆಯೂ ಜೋರಾಗುತ್ತಿದೆ.

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇದುವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಖಮೇನಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ 26 ವರ್ಷದ ಎರ್ಫಾನ್ ಸೊಲ್ತಾನಿ ಎಂಬ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ (Social Media) ಎರ್ಫಾನ್ ಸೊಲ್ತಾನಿ (Erfan Soltani) ಯಾರು ಎಂಬ ಚರ್ಚೆಗಳು ಜೋರಾಗಿದ್ದು, ಆತನ ಕುರಿತಾಗಿ ಮಾಹಿತಿಯನ್ನು ಜಾಲಾಡಲಾಗುತ್ತಿದೆ.

ಎರ್ಫಾನ್ ಸೊಲ್ತಾನಿ ಕುರಿತಾದ ಮಾಹಿತಿ:



ಮಾನವ ಹಕ್ಕು ಸಂಘಟನೆಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಎರ್ಫಾನ್ ಸೊಲ್ತಾನಿಯನ್ನು ಕರಾಜ್ ನಗರದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಬಂಧಿಸಲಾಗಿದ್ದು, ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ದೇಶವ್ಯಾಪಿ ಸಂವಹನ ನಿರ್ಬಂಧ (ಕಮ್ಯುನಿಕೇಷನ್ ಬ್ಲ್ಯಾಕೌಟ್) ಇರುವ ಕಾರಣದಿಂದ ಈ ಮಾಹಿತಿಯನ್ನು ಸ್ವತಂತ್ರವಾಗಿ ದೃಢೀಕರಿಸುವುದು ಕಷ್ಟವಾಗಿದೆ.

ಎರ್ಫಾನ್ ಸೊಲ್ತಾನಿ ಯಾರು?

  • ಇರಾನ್‌ನ ಯುವ ಪ್ರತಿಭಟಕನಾಗಿರುವ 26 ವರ್ಷದ ಎರ್ಫಾನ್ ಸೊಲ್ತಾನಿ ಟೆಹರಾನ್‌ ಸಮೀಪದ ಕರಾಜ್‌ನ ಫರ್ಡಿಸ್ ಪ್ರದೇಶದ ನಿವಾಸಿ. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 2025ರ ಜನವರಿ 8ರಂದು ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.
  • ಮಾನವ ಹಕ್ಕು ಸಂಘಟನೆಗಳ ಪ್ರಕಾರ, ಸೊಲ್ತಾನಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅವರ ಕುಟುಂಬಕ್ಕೆ ತಿಳಿಸಲಾಗಿದೆ ಮತ್ತು ಜನವರಿ 14ರಂದು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿರುವುದೇ ಅವರ ವಿರುದ್ಧವಿರುವ ಏಕೈಕ ಅಪರಾಧವಾಗಿದ್ದು, ಮರಣದಂಡನೆ ತಡೆಯಲು ಅಂತಾರಾಷ್ಟ್ರೀಯ ಹಸ್ತಕ್ಷೇಪಕ್ಕೆ ಮನವಿ ಮಾಡಲಾಗಿದೆ ಎಂದು ನ್ಯಾಷನಲ್ ಯೂನಿಯನ್ ಫಾರ್ ಡೆಮಾಕ್ರಸಿ ಇನ್ ಇರಾನ್ (NUFD) ಸಂಸ್ಥೆ ತಿಳಿಸಿದೆ.
  • ವರದಿಗಳ ಪ್ರಕಾರ ಸೊಲ್ತಾನಿಗೆ ಕಾನೂನು ಸಲಹೆಗಾರರ ನೆರವು ನಿರಾಕರಿಸಲ್ಪಟ್ಟಿದ್ದು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವುದೇ ಅವಕಾಶ ದೊರಕಿಲ್ಲ ಎನ್ನಲಾಗಿದೆ. ಇರಾನ್‌ನ ಕಾನೂನಿನಡಿ ಮರಣದಂಡನೆಗೆ ಒಳಪಡುವ “ದೇವರ ವಿರುದ್ಧ ಯುದ್ಧ ನಡೆಸುವುದು” ಎಂಬ ಗಂಭೀರ ಆರೋಪವನ್ನು ಸೊಲ್ತಾನಿ ಮೇಲೆ ಹೊರಿಸಲಾಗಿದೆ. ಅಲ್ಲದೇ ಶಿಕ್ಷೆ ಅಂತಿಮವಾಗಿದೆ ಎಂದು ಕುಟುಂಬಕ್ಕೆ ತಿಳಿಸಲಾಗಿದ್ದು, ಮರಣದಂಡನೆಯ ಮಾಹಿತಿ ನೀಡಿದ ನಂತರ ಸ್ವಲ್ಪ ಸಮಯ ಮಾತ್ರ ಸೊಲ್ತಾನಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇರಾನ್‌ನಲ್ಲಿ ವ್ಯಾಪಕ ದಂಗೆ, ಹೆಣಗಳ ರಾಶಿಯಿಂದ ತುಂಬಿಹೋದ ಆಸ್ಪತ್ರೆಗಳು

ಇರಾನ್‌ನಲ್ಲಿ ಏನಾಗುತ್ತಿದೆ?

ಸೊಲ್ತಾನಿಯ ಬಂಧನಕ್ಕೆ ಕಾರಣವಾಗಿರುವ ಪ್ರತಿಭಟನೆಗಳು ಡಿಸೆಂಬರ್ ಕೊನೆಯಲ್ಲಿ ಮತ್ತು ಜನವರಿ ಆರಂಭದಲ್ಲಿ ಇರಾನ್‌ನಾದ್ಯಂತ ಭುಗಿಲೆದ್ದವು. ತೀವ್ರ ಆರ್ಥಿಕ ಸಂಕಷ್ಟ, ಕರೆನ್ಸಿ ಮೌಲ್ಯ ಕುಸಿತ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಈ ಆಕ್ರೋಶಕ್ಕೆ ಪ್ರಮುಖ ಕಾರಣ. ಆರ್ಥಿಕ ಸಮಸ್ಯೆಗಳ ವಿರುದ್ಧ ಆರಂಭವಾದ ಈ ಪ್ರತಿಭಟನೆಗಳು ಕ್ರಮೇಣ ಧಾರ್ಮಿಕ ಆಡಳಿತಕ್ಕೆ ಅಂತ್ಯ ಹಾಗೂ ರಾಜಕೀಯ ಬದಲಾವಣೆಯ ಬೇಡಿಕೆಯೊಂದಿಗೆ ದೇಶವ್ಯಾಪಿ ಚಳವಳಿಯಾಗಿ ವಿಸ್ತರಿಸಿವೆ. ಇರಾನ್ ಅಧಿಕಾರಿಗಳು ಪ್ರತಿಭಟನೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ 1,847 ಮಂದಿ ಪ್ರತಿಭಟನಾಕಾರರು ಮತ್ತು 135 ಜನರು ಸರ್ಕಾರಕ್ಕೆ ಸಂಬಂಧಿಸಿದವರು ಎಂದು ಮೂಲಗಳು ತಿಳಿಸಿವೆ.

ಇಂಟರ್ನೆಟ್‌ ಸಂಪರ್ಕ ಕಡಿತ

ಇರಾನ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದ್ದು, ಅಲ್ಲಿ ಆಗುತ್ತಿರುವ ಪ್ರತಿಭಟನೆಗಳು ಹಾಗೂ ಸಾವು-ನೋವುಗಳ ಬಗ್ಗೆ ನೈಜ ಮಾಹಿತಿಯನ್ನು ನೀಡಲು ಮಾಧ್ಯಮಗಳಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸರ್ಕಾರ ಕೂಡ ಸಾವು-ನೋವುಗಳ ಅಂಕಿಅಂಶಗಳನ್ನು ನೀಡುತ್ತಿಲ್ಲ ಎನ್ನಲಾಗಿದೆ.

ಮಾಧ್ಯಮಗಳ ಮೇಲೂ ನಿರ್ಬಂಧ

ಇನ್ನು ಇರಾನ್‌ನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇರಾನಿ ಸರ್ಕಾರಿ ಮಾಧ್ಯಮಗಳು ಸೀಮಿತ ಪ್ರಸಾರವನ್ನು ನೀಡುತ್ತಿವೆ. ಅಲ್ಲದೇ ದೇಶಿಯ ಹಾಗೂ ವಿದೇಶಿ ಪತ್ರಕರ್ತರು ನಿರ್ಬಂಧ ಮತ್ತು ಬಂಧನದ ಭೀತಿ ಎದರಿಸುವಂತಾಗಿದೆ.

ಪ್ರತಿಭಟನಾಕಾರರ ರಕ್ಷಣೆಗೆ ನಿಂತ ಅಮೆರಿಕ!

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಗುಂಡಿನ ದಾಳಿ ನಡೆಸಿದರೆ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.