ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ಸದಸ್ಯ ಅಮೀರ್ ಹಮ್ಜಾ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಮ್ಜಾ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇತ್ತೀಚಿನ ಉಗ್ರರ ಮೇಲೆ ನಡೆಯುತ್ತಿರುವ ನಿಗೂಢ ದಾಳಿಗಳ ಸರಣಿಯ ಭಾಗವೆಂದು ಕಾಣಲಾಗುತ್ತಿದೆ.

ಲಷ್ಕರ್-ಎ-ತೈಬಾ ಉಗ್ರನ ಮೇಲೆ ಲಾಹೋರ್‌ನಲ್ಲಿ ಗುಂಡಿನ ದಾಳಿ

ಲಷ್ಕರ್-ಎ-ತೈಬಾ ಸಂಸ್ಥಾಪಕ ಅಮೀರ್ ಹಮ್ಜಾ (ಸಂಗ್ರಹ ಚಿತ್ರ) -

Profile
Sushmitha Jain Apr 16, 2026 3:02 PM

ಇಸ್ಲಾಮಾಬಾದ್‌, ಏ. 16: ಪಾಕಿಸ್ತಾನ (Pakistan) ಮೂಲದ ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (Lashkar-e-Taiba) ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಅಮೀರ್ ಹಮ್ಜಾ (Amir Hamza) ಮೇಲೆ ಲಾಹೋರ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪ್ರಸ್ತುತ ಹಮ್ಜಾ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

1980ರ ದಶಕದ ಮಧ್ಯಭಾಗದಲ್ಲಿ ಹಫೀಜ್ ಸಯೀದ್ (Hafiz Saeed) ಜತೆಗೂಡಿ ಲಷ್ಕರ್-ಎ-ತೈಬಾ (Lashkar-e-Taiba) ಸಂಘಟನೆಯನ್ನು ಸ್ಥಾಪಿಸುವಲ್ಲಿ ಹಮ್ಜಾ ಪ್ರಮುಖ ಪಾತ್ರ ವಹಿಸಿದ್ದ. ಈತ ಭಾರತ ಮತ್ತು ವಿಶ್ವದ ಇತರೆಡೆ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎಂದು ನಂಬಲಾಗಿದೆ. ವರದಿಗಳ ಪ್ರಕಾರ, ಲಾಹೋರ್‌ನ ಸುದ್ದಿವಾಹಿನಿಯೊಂದರ ಕಚೇರಿಯ ಹೊರಗೆ ಈ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಹಮ್ಜಾ ಮೇಲೆ ಗುಂಡಿನ ಮಳೆಗೆರೆದು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ಲವ್‌ ಜಿಹಾದ್!‌ ಮತಾಂತರ ಆಗದಿದ್ದುದಕ್ಕೆ ಯುವತಿಗೆ ದಾರುಣ ಹಲ್ಲೆ

ಯಾರು ಈ ಅಮೀರ್ ಹಮ್ಜಾ?

ಅಮೀರ್ ಹಮ್ಜಾ ಲಷ್ಕರ್-ಎ-ತೈಬಾದ ಆರಂಭಿಕ ದಿನಗಳಿಂದಲೂ ಹಫೀಜ್ ಸಯೀದ್‌ನ ಬಲಗೈ ಬಂಟನಾಗಿದ್ದನು. ಈತ ಕೇವಲ ಭಯೋತ್ಪಾದಕನಷ್ಟೇ ಅಲ್ಲದೆ, ಸಂಘಟನೆಯ ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿಯೂ ಪ್ರಮುಖನಾಗಿದ್ದನು. ಈತ ಆಫ್ಘನ್ ಜಿಹಾದ್‌ನಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದು, ಸಂಘಟನೆಯ ಒಳಗೆ ತನ್ನ ಪ್ರಚೋದನಕಾರಿ ಭಾಷಣಗಳು ಮತ್ತು ಬರಹಗಳ ಮೂಲಕ ಪರಿಚಿತನಾಗಿದ್ದನು. ಈತ ಸಂಘಟನೆಯ ಪ್ರಕಟಣೆಯಾದ 'ಮಜಲ್ಲಾ ಅಲ್-ದಾವಾ'ದ ಸ್ಥಾಪಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದನು ಮತ್ತು 2002ರಲ್ಲಿ 'ಖಾಫಿಲಾ ದಾವತ್ ಔರ್ ಶಹಾದತ್' ಎಂಬ ಪುಸ್ತಕವನ್ನೂ ಬರೆದಿದ್ದನು.

ಅಮೆರಿಕ ಸಂಯುಕ್ತ ಸಂಸ್ಥಾನವು ಲಷ್ಕರ್-ಎ-ತೈಬಾವನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಹಮ್ಜಾನನ್ನು ತನ್ನ ನಿರ್ಬಂಧಗಳ ಪಟ್ಟಿಯಲ್ಲಿ ಸೇರಿಸಿದೆ. ಸಂಘಟನೆಯ ಕೇಂದ್ರ ನಾಯಕತ್ವದ ಭಾಗವಾಗಿದ್ದ ಈತ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುವುದು, ಹೊಸ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸಿಕೊಳ್ಳುವುದು ಮತ್ತು ಸೆರೆಮನೆಯಲ್ಲಿರುವ ಭಯೋತ್ಪಾದಕರನ್ನು ಮುಕ್ತಗೊಳಿಸಲು ಸಂಚು ರೂಪಿಸುವ ಜವಾಬ್ದಾರಿಗಳನ್ನು ಹೊಂದಿದ್ದನು. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ವಿರೋಧಿ ಭಯೋತ್ಪಾದಕರ ಮೇಲೆ ನಡೆಯುತ್ತಿರುವ ನಿಗೂಢ ದಾಳಿಗಳ ಸರಣಿಯಲ್ಲಿ ಇದೂ ಒಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ಮತ್ತು ಅಲ್ಲಿನ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ದಾಳಿಕೋರರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.