ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಎಳೆದೊಯ್ದ ಚಾಲಕ
Viral Video: ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದ ವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ -
ಬೆಂಗಳೂರು, ಡಿ. 26: ವಾಹನ ಸುರಕ್ಷತಾ ನಿಯಮಗಳನ್ನು ಸಾರಿಗೆ ಇಲಾಖೆ ಕಟ್ಟು ನಿಟ್ಟಾಗಿ ಜಾರಿ ತಂದರೂ ಕೆಲವೊಂದು ವಾಹನ ಸವಾರರು ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅದರಲ್ಲೂ ವೇಗದ ಪ್ರಯಾಣ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಪ್ರಯಾಣದ ಮಧ್ಯೆ ಮೊಬೈಲ್ ಫೋನ್ ಬಳಕೆ ಇತ್ಯಾದಿ ನಿಯಮವನ್ನು ಉಲ್ಲಂಘನೆಯಾಗುತ್ತಲೇ ಇರುತ್ತದೆ. ಅಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಈ ದುರ್ಘಟನೆ ಸಂಭವಿಸಿದೆ. ಕುಡಿತದ ಅಮಲಿನಲ್ಲಿದ್ದ ಚಾಲಕನು ವೇಗವಾಗಿ ಬಂದಿದ್ದು ಬುಲೆಟ್ ಬೈಕ್‌ಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಯ ಪಕ್ಕಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಅಪಘಾತದ ನಂತರ ಬೈಕ್ ಕಾರಿನ ಮುಂಭಾಗದ ಅಡಿಯಲ್ಲಿ ಸಿಲುಕಿಕೊಂಡಿದೆ. ಇದನ್ನು ಗಮನಿಸದ ಚಾಲಕ ಕಾರನ್ನು ನಿಲ್ಲಿಸದೆ ಹಾಗೆಯೇ ಎಳೆದೊಯ್ದಿದ್ದಾನೆ.
ವಿಡಿಯೊ ನೋಡಿ:
Drunk SUV driver drags motorcycle on Summanahalli flyover in Bengaluru, triggers panic
— Karnataka Portfolio (@karnatakaportf) December 26, 2025
Commuters were left shocked after witnessing a rashly driven SUV on Summanahalli flyover in Kamakshipalya, west Bengaluru, Wednesday night, with sparks flying from beneath its wheels. Several… pic.twitter.com/K3YoyqgVms
ಬೈಕ್ ಕಾರಿನ ಅಡಿಯಲ್ಲಿ ಸಿಲುಕಿದ ಕಾರಣ ಫ್ಲೈಓವರ್ ಉದ್ದಕ್ಕೂ ಬೆಂಕಿಯ ಕಿಡಿಗಳು ಹರಡಿದ್ದವು. ಆದರೂ ಚಾಲಕ ಯಾವುದಕ್ಕೂ ಕ್ಯಾರೆ ಅನ್ನದೇ ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಬೈಕನ್ನು ಎಳೆದೊಯ್ದಿದ್ದಾನೆ. ಸದ್ಯ ನಾಯಂಡಹಳ್ಳಿ ಬಳಿ ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ತನಿಖೆಗೆ ಆದೇಶ
ಅಲ್ಲಿದ್ದ ಸಾರ್ವಜನಿಕರು ಕೂಡ ಚಾಲಕನ ವರ್ತನೆ ಕಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಚಾಲಕ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ಕುಡಿತದ ಪ್ರಭಾವ ಜೋರಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ವರ್ತನೆಯಿಂದ ಬೇರೆಯವರ ಪ್ರಾಣದ ಜೊತೆ ಆಟವಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಈತನಿಗೆ ಸರಿಯಾಗಿಯೇ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನ ಫ್ಲೈಓವರ್‌ಗಳಲ್ಲಿ ಇಂತ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.