S.N.Subbareddy: ಎಸ್.ಎನ್.ಸುಬ್ಬಾರೆಡ್ಡಿ ಅವರ ಬಗ್ಗೆ ಹಗುರ ಮಾತು ಅಪಪ್ರಚಾರ ನಿಲ್ಲಿಸಿ; ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ : ಕಾಂಗ್ರೆಸ್ ಮುಖಂಡರ ಪಂಥಾಹ್ವಾನ
ಚುನಾವಣೆಯಲ್ಲಿ ಸ್ಪರ್ಧಿಸಿ 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಪಡೆದು ಶಾಸಕರಾಗಿದ್ದರೂ ಅಸಿಂಧು ಪ್ರಕರಣ ಮುಂದು ಮಾಡಿ ತಾವೇ ಶಾಸಕರಾದಂತೆ ದುರ್ವರ್ತನೆ ತೋರುತ್ತಾ ಕೇವಲವಾಗಿ ಮಾತನಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ಹಿರಿಯ ರಾಜಕಾರಣಿಯ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಯಿಂದ ಮಾತನಾಡಿ, ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ
ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮುಖಂಡರು ಮಾತನಾಡಿದರು. -
ಚಿಕ್ಕಬಳ್ಳಾಪುರ: ಜನಪರ ಕಳಕಳಿ ಕಾಳಜಿಯುಳ್ಳ ನಮ್ಮ ನಾಯಕರಾದ ಎಸ್.ಎನ್. ಸುಬ್ಬಾರೆಡ್ಡಿ(S.N. Subbareddy) ವಿರುದ್ಧ ಮಾತನಾಡುವ ಯೋಗ್ಯತೆ ಬಿಜೆಪಿ ಮತ್ತು ಸಿಪಿಎಂ ಮುಖಂಡರಿಗಿಲ್ಲ.ಸುಖಾಸುಮ್ಮನೆ ಆರೋಪ ಮಾಡಿ ವಿಕೃತ ಆನಂದ ಪಡುವ ಬದಲು ನಿಮ್ಮ ಆರೋಪಗಳಿಗೆ ತಕ್ಕ ದಾಖಲೆಗಳೊಂದಿಗೆ ಮುಕ್ತ ಚರ್ಚೆಗೆ ಬನ್ನಿ. ಇಲ್ಲದಿ ದ್ದಲ್ಲಿ ಹಗುರ ಮಾತು ಮತ್ತು ಅಪ ಪ್ರಚಾರವನ್ನು ಕೂಡಲೇ ನಿಲ್ಲಿಸಿ ಎನ್ನುವ ಮೂಲಕ ಟೀಕಾಕಾರಿಗೆ ಕಾಂಗ್ರೆಸ್ ಮುಖಂಡರು ಬಹಿರಂಗ ಪಂಥಾಹ್ವಾನ ನೀಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಾಗೇಪಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ನಮ್ಮ ನಾಯಕ ಸುಬ್ಬಾರೆಡ್ಡಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಷ್ಟೇ ಅಲ್ಲದೆ ಕೋರ್ಟಿಗೆ ಹೋಗಿ ಶಾಸಕತ್ವ ಅಸಿಂಧುಗೊಳಿಸಿ ವಿಕೃತಾನಂದ ಪಡುತ್ತಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿ 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಪಡೆದು ಶಾಸಕರಾಗಿದ್ದರೂ ಅಸಿಂಧು ಪ್ರಕರಣ ಮುಂದು ಮಾಡಿ ತಾವೇ ಶಾಸಕರಾದಂತೆ ದುರ್ವರ್ತನೆ ತೋರುತ್ತಾ ಕೇವಲವಾಗಿ ಮಾತನಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ಹಿರಿಯ ರಾಜಕಾರಣಿಯ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಯಿಂದ ಮಾತನಾಡಿ, ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Chintamani News: ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ನಾಮ ಸಂಕೀರ್ತನೆಯ ಸಂಗೀತೋತ್ಸವ : ವಾನರಾಶಿ ಭಾಗವತರ್
ನಮ್ಮ ನಾಯಕ ಎಸ್.ಎನ್.ಸುಬ್ಬಾರೆಡ್ಡಿ ಕೇವಲ ಉದ್ಯಮಿಯಲ್ಲ, ಜನಪರ ಕಾಳಜಿಯುಳ್ಳ ಸ್ನೇಹಜೀವಿ. 15 ವರ್ಷಗಳಿಗೂ ಹೆಚ್ಚುಕಾಲ ಅವರಿವರೆನ್ನದೆ ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತಾ ಜನತೆಯ ಕಷ್ಟಕ್ಕೆ ಸುಖಗಳಲ್ಲಿ ಜತೆಗಿದ್ದವರು. ಜನರ ಪ್ರೀತಿ ವಿಶ್ವಾಸದ ಕಾರಣವಾಗಿಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಇಂತಹ ವ್ಯಕ್ತಿ ಜನ ಮತ್ತು ವ್ಯವಸ್ಥೆಗೆ ಮೋಸ ಮಾಡುತ್ತಾರೆಂದರೆ ದೇವರು ಕೂಡ ಮೆಚ್ಚುವುದಿಲ್ಲ ಎಂದು ತಿಳಿಸಿದರು.
ಉಚ್ಚ ನ್ಯಾಯಾಲಯದ ತೀರ್ಪಿಗೆ ನಾವು ನಮ್ಮ ನಾಯಕರು ತಲೆಬಾಗುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ಮುಂದೆಯೂ ಕೂಡ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು ನ್ಯಾಯಾಲಯ ನೀಡುವ ಯಾವುದೇ ತೀರ್ಪನ್ನು ಒಪ್ಪಿ ನಡೆಯುತ್ತೇವೆ. ಚುನಾವಣೆ ಘೋಷಣೆಯಾದರೂ ಅದನ್ನು ಸ್ವಾಗತಿಸುತ್ತೇವೆ.ಇಷ್ಟೆಲ್ಲಾ ಹೇಳುತ್ತಿದ್ದರೂ ಕೂಡ ಗಾಳಿ ಯಲ್ಲಿ ಗುಂಡು ಹೊಡೆದಂತೆ ಬಾಯಿಗೆ ಬಂದಂತೆ ಮಾತನಾಡುವುದು ಯಾವುದೇ ಪಕ್ಷದ ನಾಯಕರಿಗೆ ಶೋಭೆಯಲ್ಲ ಎಂದು ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿ, ಫೆ.14 ರಂದು ಉಚ್ಛನ್ಯಾಯಾಲಯ 2023ರ ಚುನಾವಣೆಯಲ್ಲಿ ಶಾಸಕರಾಗಿದ್ದ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಗೌರವಿಸುತ್ತೇವೆ.ಈ ತೀರ್ಪು ಬಂದ ನಂತರ ಪರಾಜಿತ ಅಭ್ಯರ್ಥಿ ಮುನಿರಾಜು ಬಾಗೇಪಲ್ಲಿ ಹೊರವಲಯದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಅಲ್ಲಿ ಸುಬ್ಬಾರೆಡ್ಡಿ ಭ್ರಷ್ಟಶಾಸಕ ಎನ್ನುತ್ತಾ ಉದ್ದಟತನದ ಹೇಳಿಕೆ ನೀಡುತ್ತಾರೆ. ಮುಂದು ವರೆದು ತಮ್ಮ ಬೆಂಬಲಿಗರ ಮೂಲಕ ಬಡವರ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ದೂರಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದರು.
ಬಾಗೇಪಲ್ಲಿ ಕ್ಷೇತ್ರದಲ್ಲಿ ಕಳೆದ 25 ವರ್ಷದಿಂದ ಜಾತಿ ಧರ್ಮ ನೋಡದೆ, ಅವರು ಇವರೆನ್ನದೆ ಶಿಕ್ಷಣ, ಆರೋಗ್ಯ ಜತೆಗೆ ಸಾಮೂಹಿಕ ವಿವಾಹಗಳನ್ನು 2002ರಿಂದ ಮಾಡಿ ಕೊಂಡು ಬಂದಿದ್ದಾರೆ. 2008ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗುವ ಅವಕಾಶ ಇದ್ದರೂ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ.
2013ರಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರೆದಾಗ ಪಕ್ಷೇತರವಾಗಿ ನಿಂತು 30 ಸಾವಿರ ಮತಗಳ ಅಂತರದಿಂದ ಗೆದ್ದರು. 2018ರಲ್ಲಿ, 2023ರಲ್ಲಿ ಕೂಡ ಶ್ರೀರಾಮರೆಡ್ಡಿ ಸಂಪಂಗಿ ಮನೋಹರ್ ಮೊದಲಾದವರ ವಿರುದ್ಧ ಸೆಣಸಿ ಗೆಲುವು ಕಂಡಿದ್ದಾರೆ. ಆಗೆಲ್ಲಾ ಕ್ಷೇತ್ರದಲ್ಲಿ ಶಾಂತಿಯ ವಾತಾವರಣ ಇತ್ತು. 2023ರಿಂದ ಕ್ಷೇತ್ರದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವುದು, ಅಸಡ್ಡೆ ಹೇಳಿಕೆ ಕೊಡುವ ಮೂಲಕ ಅಶಾಂತಿಯ ವಾತಾವರಣ ಪ್ರಾರಂಭವಾಗಿದೆ. ಇದಕ್ಕೆ ಜನತೆ ಕಡಿವಾಣ ಹಾಕಲು ಪ್ರಾರಂಭಿಸಿದ್ದಾರೆ ಎಂದರು.
ಜಾತ್ಯಾತೀತ ನಿಲುವು ಹೊಂದಿರುವ ಸುಬ್ಬಾರೆಡ್ಡಿ ಶಾಸಕ ಆಗಲೇಬೇಕು ಎಂದು ಬಂದವ ರಲ್ಲ. ಪಕ್ಷ ನಿಷ್ಟೆಗೆ ಹೆಸರಾದ ನಮ್ಮ ನಾಯಕರು ಕೆಐಎಡಿಬಿಯಲ್ಲಿ ಭ್ರಷ್ಟಾಚಾರ ಮಾಡಿ ದ್ದಾರೆ ಎಂದು ಮುನಿರಾಜು ದೂರುತ್ತಾರೆ. ಕೊಂಡರೆಡ್ಡಿಪಲ್ಲಿ ಹೊಸಹುಡ್ಯ ಭಾಗದ ಭೂಮಿಯ ರೈತರು ಕಂಗಾಲಾಗಿದ್ದ ಸಂದರ್ಭದಲ್ಲಿ ಬಾಗೇಪಲ್ಲಿಯಲ್ಲಿ ಸಭೆ ನಡೆಸಿ ಅವರಿಗೆ ಧೈರ್ಯ ತುಂಬಿದ ಅವರು ಎಕೆರೆಗೆ 70 ಲಕ್ಷದಿಂದ 1 ಕೋಟಿ ಬೆಲೆ ನಿಗದಿಪಡಿಸಿದ್ದಾರೆ. ಸುಬ್ಬಾರೆಡ್ಡಿ ಅವರ ಭೂಮಿ ಒಂದು ಇಂಚೂ ಈ ಭಾಗದಲ್ಲಿ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುತ್ತಾರೆ ಎಂದು ದೂರಿದರು.
ರೈತರನ್ನು ಬೆದರಿಸಿ ಹೆದರಿಸಿ ಭೂಮಿ ಪಡೆಯುವ ದರ್ದು ಸುಬ್ಬಾರೆಡ್ಡಿಗೆ ಇಲ್ಲ. ಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ, ಕೈಗಾರಿಕಾ ಕ್ರಾಂತಿ ಆಗುತ್ತಿದ್ದು ಇದನ್ನು ಸಹಿಸಲಾಗದೆ ಬಾಯಿಯಿದೆ ಎಂದು ಅಪಪ್ರಚಾರ ಮಾಡುವುದು, ಆರೋಪ ಮಾಡುವುದು ಬಿಡಬೇಕು. ತಮ್ಮ ಮಾತಿ ನಲ್ಲಿ ವಾಸ್ತವಾಂಶ ಇರಬೇಕು.೨೦೨೮ಕ್ಕೆ ಕೂಡ ಸುಬ್ಬಾರೆಡ್ಡಿ ಅವರೇ ಶಾಸಕರಾಗುವುದು ಖಚಿತ ಜನ ನಮಗೆ ಆಶೀರ್ವಾದ ಇಲ್ಲ ಎಂದು ಹತಾಷೆಗೊಳಗಾಗಿ ಹೀಗೆ ಶಾಸಕರ ಬಗ್ಗೆ ದೂರುತ್ತಿದ್ದಾರೆ ಎಂದರು.
ಕೆಡಿಪಿ ಸದಸ್ಯ ಜೆಸಿಬಿ ಮಂಜುನಾಥರೆಡ್ಡಿ ಮಾತನಾಡಿ, ಬಿಜೆಪಿ ಮುಖಂಡರು ಸುಬ್ಬಾರೆಡ್ಡಿ ಅವರನ್ನು ಸಮಾಜಸೇವೆ, ಅಭಿವೃದ್ದಿಯನ್ನು ಸಹಿಸಲಾಗದೆ, ಚುನಾವಣೆಯಲ್ಲಿ ನಿಂತು ನ್ಯಾಯಮಾರ್ಗದಲ್ಲಿ ಸೋಲಿಸಲಾಗದೆ ಹೀಗೆ ಅಪಪ್ರಚಾರ ಮತ್ತು ಸುಳ್ಳು ಆರೋಪ ವಿಷಪೂರಿತ ಹೇಳಿಕೆಗಳಿಂದ ಮತದಾರರನ್ನು ಮರಳು ಮಾಡಿ ರಾಜಕೀಯವಾಗಿ ಮುಗಿಸುವ ಕನಸು ಕಾಣುತ್ತಿದ್ದಾರೆ.ಹೀಗಾಗಿ ಸುಳ್ಳು ಆರೋಪ ಮತ್ತು ತಪ್ಪು ಮಾಹಿತಿ ಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಬೇಕು.
ಏಕೆಂದರೆ ನಮ್ಮ ನಾಯಕರು ಅತ್ಯಾಚಾರಿಯಲ್ಲ, ದರೋಡೆಕೋರನಲ್ಲ, ಕೊಲೆ ಮಾಡಿಲ್ಲ, ಘೋರಾಪರಾಧದ ಹಿನ್ನೆಲೆಯಲ್ಲಿ ಅವರನ್ನು ಅಸಿಂಧು ಮಾಡಿಲ್ಲ. 1951ರ ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಚುನವಣಾ ಆಯೋಗಕ್ಕೆ ಪೂರ್ಣ ಮಾಹಿತಿ ಕೊಟ್ಟಿಲ್ಲ ಎಂದು ಅಸಿಂಧುಗೊಳಿಸಿದೆ. ಮುನಿರಾಜು ಮಾಡಿದ್ದ 15 ಆರೋಪಗಳಲ್ಲಿ ಬಹುಪಾಲನ್ನು ತಳ್ಳಿ ಹಾಕಿದೆ.ಇದನ್ನು ಅವರು ಅರಿತರೆ ಒಳಿತು ಎಂದರು.
ಏನೋ ಮಾಡಿ ಅರ್ಜೆಂಟಾಗಿ ಸಿ.ಮುನಿರಾಜು ಶಾಸಕರಾಗಲು ಬಯಸುತ್ತಿದ್ದಾರೆ. ಅವರಿಗೆ ಬಹಿರಂಗ ಸವಾಲು ಹಾಕುತ್ತಿದ್ದೇನೆ,ಸುಬ್ಬಾರೆಡ್ಡಿ ನೂರಾರು ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ? ನೂರಾರು ಎಕರೆ ಸರಕಾರಿ ಭೂಮಿ ಲಪಟಾಯಿಸಿದ್ದಾರೆ? ದಲಿತರ ಭೂಮಿ ದೌರ್ಜನ್ಯದಿಂದ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ? ಕೆಐಎಡಿಬಿ ಮೂಲಕ ಹಣ ಮಾಡಲು ಹೊರಟಿದ್ದಾರೆ ಎಂದು ದೂರುವ ಬದಲು ಸ್ಥಳ ನೀವೇ ನಿಗದಿ ಮಾಡಿ ಬೆಂಗಳೂರೋ, ಬಾಗೇಪಲ್ಲಿಯೋ ಬಹಿರಂಗ ಚರ್ಚೆಗೆ ಬನ್ನಿ, ಅವರ ಬೆಂಬಲಿಗರಾಗಿ ನಾವು ಬರುತ್ತೇವೆ. ನಿಮ್ಮ ಆರೋಪ ಸಾಬೀತಾದಲ್ಲಿ ನಮ್ಮ ಮುಖಂಡರು ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದು ಪಂಥಾಹ್ವಾನ ನೀಡಿದರು.
ಜೆಸಿಬಿ ಮಂಜುಣಾಥರೆಡ್ಡಿ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಟಿಪಿಎಸ್ ಮಾಜಿ ಅಧ್ಯಕ್ಷ ನರೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಸುಪ್ರಿತ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬೂರಮಡುಗು ನರಸಿಂಹಪ್ಪ ಮತ್ತಿತರರು ಇದ್ದರು.