ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇನು? ವಿದ್ಯಾರ್ಥಿಗಳ ಮುಂದಿದೆ ಬಹು ಆಯ್ಕೆ: ಈ ಪೈಕಿ ನಿಮ್ಮ ಆಪ್ಶನ್‌ ಯಾವುದು?

What After SSLC? ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಬರೋಬ್ಬರಿ ಶೇಕಡಾ 94.10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾರೆ ಅವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಮಗ್ರ ವಿವರ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮುಂದಿದೆ ಬಹು ಆಯ್ಕೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Apr 23, 2026 4:39 PM

ಬೆಂಗಳೂರು, ಏ. 23: ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರ ಬಿದ್ದಿದೆ (Karnataka SSLC Result). ಈ ಬಾರಿ ದಾಖಲೆ ಪ್ರಮಾಣದ ಫಲಿತಾಂಶ ಹೊರಬಿದ್ದಿದೆ. ಬರೋಬ್ಬರಿ ಶೇಕಡಾ 94.10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ಬರೆದ 7,70,209 ವಿದ್ಯಾರ್ಥಿಗಳು ಪೈಕಿ 7,24,794 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಬಾರಿ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿ ಸಲದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದೆ. ಇದೀಗ ಎಸ್‌ಎಸ್‌ಎಲ್‌ಸಿ (Best Courses After SSLC) ಬಳಿಕ ಮುಂದೇನು ಎಂಬ ಚಿಂತೆಯಲ್ಲಿದ್ದೀರಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.

ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳ ಮುಂದೆ ಅನೇಕ ಆಯ್ಕೆಗಳಿವೆ. ವಿಜ್ಞಾನ, ವಾಣಿಜ್ಯ ಅಥವಾ ಕಲೆ ಈ ಮೂರು ವಿಷಯಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಇದನ್ನು ಹೊರತುಪಡಿಸಿ ಯಾವ ಕೋರ್ಸ್‌ ಆಯ್ಕೆ ಮಾಡಿದರೆ ಉತ್ತಮ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎನ್ನುವುದನ್ನು ನೋಡಿಕೊಂಡು ಬರೋಣ.

623 ಅಂಕ ಗಳಿಸಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿವೇದಿತಾ

ವಿಜ್ಞಾನ

ಒಂದು ವೇಳೆ ನೀವು ವಿಜ್ಞಾನವನ್ನು ಆಯ್ಕೆಕೊಂಡರೆ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ವೃತ್ತಿ ನಿರ್ವಹಿಸಬಹುದು. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸದ್ಯ ಇದು ಅತ್ಯಂತ ನೆಚ್ಚಿನ ವೃತ್ತಿ ಆಪ್ಶನ್‌ ಎನಿಸಿಕೊಂಡಿದೆ. ವಿಜ್ಞಾನ ಆಯ್ಕೆ ಮಾಡುುದರಿಂದ ದೊರೆಯುವ ಪ್ರಮುಖ ಪ್ರಯೋಜನವೆಂದರೆ 12ನೇ ತರಗತಿಯ ಅನಂತರ ವಿಜ್ಞಾನದಿಂದ ವಾಣಿಜ್ಯಕ್ಕೆ ಅಥವಾ ಕಲೆಗೆ ನಿಮ್ಮ ಆಯ್ಕೆಯನ್ನು ಬದಲಾಯಿಸಬಹುದು. ಇನ್ನು 12ನೇ ತರಗತಿಯ ಅನಂತರ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಹಲವು ವೃತ್ತಿ ಆಯ್ಕೆಗಳು ಲಭ್ಯ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ಎಐ ಮುಖ್ಯ ವಿಷಯಗಳು. ನೀವು ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಬಯಸಿದರೆ ಗಣಿತವನ್ನು ಬಿಟ್ಟು ಇತರ ವಿಷಯಗಳನ್ನು ಆರಿಸಿಕೊಳ್ಳಬಹುದು.

ವೃತ್ತಿಪರ ಆಯ್ಕೆಗಳು: ಬಿಟೆಕ್/ಬಿಇ, ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (MBBS), ಬ್ಯಾಚುಲರ್ ಆಫ್ ಫಾರ್ಮಸಿ, ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬಿಎಸ್‌ಸಿ ಹೋಮ್ ಸೈನ್ಸ್ / ಫೊರೆನ್ಸಿಕ್ ಸೈನ್ಸ್.

ವಾಣಿಜ್ಯ

ವಿಜ್ಞಾನದ ಅನಂತರ ವಾಣಿಜ್ಯ 2ನೇ ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆ. ಸಂಖ್ಯೆ, ಹಣಕಾಸು ಮತ್ತು ಅರ್ಥಶಾಸ್ತ್ರ ಇಷ್ಟದ ವಿಷಯವಾಗಿದ್ದರೆ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಚಾರ್ಟರ್ಡ್ ಅಕೌಂಟೆಂಟ್, ಎಂಬಿಎ, ಬ್ಯಾಂಕಿಂಗ್, ಹೂಡಿಕೆ ಕ್ಷೇತ್ರಗಳಂತಹ ವ್ಯಾಪಕವಾದ ಆಯ್ಕೆಗಳನ್ನು ಇದು ನೀಡುತ್ತದೆ. ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರದೊಂದಿಗೆ ಪರಿಚಿತರಾಗಿರುವ ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು ಹಲವು.

ವೃತ್ತಿಪರ ಆಯ್ಕೆಗಳು: ಚಾರ್ಟರ್ಡ್ ಅಕೌಂಟೆಂಟ್, ವ್ಯಾಪಾರ ನಿರ್ವಹಣೆ, ಜಾಹೀರಾತು ಮತ್ತು ಮಾರಾಟ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಅಭಿವೃದ್ಧಿ.

ಕಲೆ

ಕಲೆ ಅಥವಾ ಮಾನವೀಯ ವಿಷಯಗಳ ಬಗ್ಗೆ ಶೈಕ್ಷಣಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರು ನೀವಾಗಿದ್ದರೆ ಕಲೆ ಅತ್ಯುತ್ತಮ ಆಯ್ಕೆ. ಕಲಾ ವಿದ್ಯಾರ್ಥಿಗಳಿಗೆ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ಮುಖ್ಯ ವಿಷಯಗಳು.

ವೃತ್ತಿಪರ ಆಯ್ಕೆಗಳು: ಕಲಾ ವಿದ್ಯಾರ್ಥಿಗಳು ವಿನ್ಯಾಸ, ಮಾಧ್ಯಮ / ಪತ್ರಿಕೋದ್ಯಮ, ಫ್ಯಾಷನ್ ತಂತ್ರಜ್ಞಾನ, ವಿಡಿಯೊ ರಚನೆ ಮತ್ತು ಎಡಿಟ್‌, ಮಾನವ ಸಂಪನ್ಮೂಲ ತರಬೇತಿ, ಶಾಲಾ ಬೋಧನೆ ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿ ನಿರ್ವಹಿಸಬಹುದು.

ಐಟಿಐ

ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ಅನಂತರ ಸುಲಭವಾಗಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಐಟಿಐ ಉತ್ತಮ ಆಯ್ಕೆ. ಈ ಮೂಲಕ ಯಾವುದೇ ತಾಂತ್ರಿಕ ಕೋರ್ಸ್ ಅನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದು. ಐಟಿಐಯಲ್ಲಿ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿಯು ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ಪಡೆಯಬಹುದು.

ವೃತ್ತಿಪರ ಆಯ್ಕೆಗಳು: ಪಿಡಬ್ಲ್ಯುಡಿ ಮತ್ತು ಇತರ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶ, ಖಾಸಗಿ ವಲಯಗಳಲ್ಲಿ ಉದ್ಯೋಗ, ಸ್ವಯಂ ಉದ್ಯೋಗ, ವಿದೇಶಗಳಲ್ಲಿ ಉದ್ಯೋಗ ದೊರೆಯುತ್ತದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರೂ ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

ಪಾಲಿಟೆಕ್ನಿಕ್ ಕೋರ್ಸ್‌

10ನೇ ತರಗತಿಯ ಅನಂತರ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್ ಸೈನ್ಸ್‌, ಆಟೋಮೊಬೈಲ್‌ನಂತಹ ಪಾಲಿಟೆಕ್ನಿಕ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. 3 ವರ್ಷ, 2 ವರ್ಷ ಮತ್ತು 1 ವರ್ಷದ ಡಿಪ್ಲೊಮಾ ಕೋರ್ಸ್‌ಗಳಿವೆ.
ವೃತ್ತಿಪರ ಆಯ್ಕೆಗಳು: ಖಾಸಗಿ ವಲಯದ ಉದ್ಯೋಗಗಳು, ಸರ್ಕಾರಿ ವಲಯದ ಉದ್ಯೋಗಗಳು, ಉನ್ನತ ಅಧ್ಯಯನ, ಸ್ವಯಂ ಉದ್ಯೋಗ, ಸ್ವಂತ ವ್ಯಾಪಾರವನ್ನು ನಡೆಸಲು ಅವಕಾಶವಿದೆ. ವಿದೇಶ ಉದ್ಯೋಗಕ್ಕೂ ತೆರಳಬಹುದು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.